ಕಾಫಿನಾಡಿಗೆ ಕಂಟಕವಾಗಿರುವ ಕೊರೋನಾ ಲ್ಯಾಬ್; ಕಡೂರಿನ ವಿದ್ಯಾರ್ಥಿಯ ವರದಿ ಕೂಡ ತಪ್ಪು!

ಮೊದಲಿಗೆ ಸೋಂಕು ತಗುಲಿದೆ ಅಂತಾ ಸರ್ಟಿಫೀಕೆಟ್ ನೀಡಿ, ಆ ಬಳಿಕ ಸೋಂಕು ತಗುಲಿಲ್ಲ ಅಂತಾ ಸಮಾಜಾಯಿಷಿ ನೀಡೋದು ಎಷ್ಟು ಸರಿ. ಸೋಂಕು ತಗುಲಿದೆ ಅಂತಾ ಆರೋಗ್ಯವಂತ ಜನರನ್ನು ಕೋವಿಡ್ ಆಸ್ಪತ್ರೆಗೆ ದೂಡಿ, ಕ್ವಾರಂಟೈನ್ ಹೆಸರಲ್ಲಿ ನೂರಾರು ಜನರಿಗೆ ಕಿರಿ ಕಿರಿ ನೀಡೋದು ಎಷ್ಟು ಸರಿ ಎಂದು ಜಿಲ್ಲೆಯ ಜನರು ಪ್ರಶ್ನೆ ಮಾಡುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಲ್ಲಿಯವರೆಗೂ 19 ಕೊರೋನಾ ಪಾಸಿಟಿವ್ ಕೇಸ್​ಗಳು ಪತ್ತೆಯಾಗಿವೆ. ಹೀಗೆ ಪತ್ತೆಯಾದ 19ರಲ್ಲಿ 16 ಪ್ರಕರಣಗಳು ಮುಂಬೈ, ಡೆಲ್ಲಿಯಿಂದ ಬಂದವರು. ಇನ್ನುಳಿದ ಮೂರು ಪ್ರಕರಣಗಳಲ್ಲಿ ಎರಡು ಪ್ರಕರಣಗಳು ಲ್ಯಾಬ್ ನ ಎಡವಟ್ಟಿನಿಂದ ಬಂದು ಜನರಲ್ಲಿ ಆತಂಕ ಮೂಡಿಸಿದ್ವು. ಇದೀಗ ಎಸ್ಎಸ್ಎಲ್ಸಿ ವಿದ್ಯಾರ್ಥಿಯ ಪ್ರಕರಣವೂ ಕೂಡ ಅದೇ ಹಾದಿಯಲ್ಲಿ ಸಾಗಿದ್ದು, ಕಾಫಿನಾಡಿಗೆ ಕೊರೋನಾ ಪರೀಕ್ಷೆ ಮಾಡುವ ಲ್ಯಾಬ್​ಗಳೇ ಕಂಟವಾಗಿದ್ಯಾ ಅನ್ನೋ ಅನುಮಾನ ಮೂಡತೊಡಗಿದೆ.

ಕೊರೋನಾ ವಿಚಾರವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪದೇ ಪದೇ ಎಡವಟ್ಟುಗಳು ಆಗುತ್ತಿದ್ದು ಜನರಂತೂ ರೋಸಿ ಹೋಗಿದ್ದಾರೆ. ಒಂದು ಎಡವಟ್ಟು ಆದರೆ ಹೋಗಲಿ ಬಿಡಿ ಅನ್ನಬಹುದು. ಎರಡಾದರೂ ಸುಮ್ಮನಾಗಬಹುದು. ಆದರೆ ಪದೇ ಪದೇ ಅದೇ ಎಡವಟ್ಟುಗಳು ಕೊರೋನಾದಂತಹ ಗಂಭೀರ ವಿಚಾರದಲ್ಲಿ ಪುನಾರವರ್ತನೆಯಾದರೆ ಜನರಿಗೆ ಹೇಗಾಗಬೇಡ.

ಕಾಫಿನಾಡಲ್ಲಿ ಕಳೆದ 25 ದಿನಗಳಿಂದ ಇದೇ ಆಗುತ್ತಿದೆ. ಮೊದಲಿಗೆ ಮೇ 19ರಂದು ಮೂಡಿಗೆರೆಯ ವೈದ್ಯ ಹಾಗೂ ತರೀಕೆರೆಯ ಗರ್ಭಿಣಿಗೆ ಕೊರೊನಾ ಸೋಂಕು ತಗುಲಿದೆ ಅಂತಾ ಸರ್ಕಾರ ಸರ್ಟಿಫಿಕೆಟ್ ಕೊಟ್ಟಿತು. ಹೀಗಾಗಿ ವೈದ್ಯರ ಪ್ರಕರಣದಲ್ಲಿ 700ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಬೇಕಾದ ಅನಿವಾರ್ಯತೆ ಜಿಲ್ಲಾಡಳಿತಕ್ಕೆ ಎದುರಾಯ್ತು. ಗರ್ಭೀಣಿ ಪ್ರಕರಣದಲ್ಲೂ 30 ಜನರು ಕ್ವಾರಂಟೈನ್ ಆದ್ರು. ಇದಿಷ್ಟೇ ಅಲ್ಲದೇ ಎರಡು ಪ್ರಕರಣದಲ್ಲಿ ಕ್ವಾರಂಟೈನ್ ಗೆ ಹೋದ ಜನರ ಜೊತೆ ಸಂಪರ್ಕ ಮಾಡಿದ ಸಾವಿರಾರು ಜನರಿಗೆ ದಿಗಿಲು ಶುರುವಾಯಿತು. ಆದರೆ ವೈದ್ಯರಿಗೆ ಹಾಗೂ ಗರ್ಭಿಣಿಗೆ ಸೋಂಕು ತಗುಲಿಲ್ಲ ಅಂತಾ ಮೂರು ದಿನಗಳ ಬಳಿಕ ಜಿಲ್ಲಾಡಳಿತ ಸ್ಪಷ್ಟಪಡಿಸಿತು. ಲ್ಯಾಬ್ ಪರೀಕ್ಷೆಯ ಎಡವಟ್ಟಿನಿಂದ ಹೀಗೆಲ್ಲಾ ಆಯ್ತು ಅಂತಾ ಜಿಲ್ಲಾಡಳಿತ ಕಾರಣ ನೀಡಿತ್ತು. ಇದೀಗ ಕಡೂರಿನ ಎಸ್​ಎಸ್​ಎಲ್​ಸಿ ಓದುತ್ತಿರುವ ವಿದ್ಯಾರ್ಥಿಗೂ ಕೊರೋನಾ ಇದೆ ಅಂತಾ ಕಳೆದ ನಾಲ್ಕು ದಿನಗಳ ಹಿಂದೆ ಹೆಲ್ತ್ ಬುಲೆಟಿನ್​ನಲ್ಲಿ ಆರೋಗ್ಯ ಇಲಾಖೆ ವರದಿ ನೀಡಿತ್ತು. ವಿಪರ್ಯಾಸ ಅಂದರೆ ವಿದ್ಯಾರ್ಥಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಲ್ಯಾಬ್​ಗೆ ಕಳಿಸಿದ ಮೂರು ವರದಿಗಳಲ್ಲೂ ನೆಗೆಟಿವ್ ಇರೋದು ಬೆಳಕಿಗೆ ಬಂದಿದೆ.

ಹೀಗೆ ಆರೋಗ್ಯ ಇಲಾಖೆ ಎಡವಟ್ಟಿನ ಮೇಲೆ ಎಡವಟ್ಟು ಮಾಡುತ್ತಿರುವುದು ಜನಸಾಮಾನ್ಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಆರೋಗ್ಯವಾಗಿರುವ ವ್ಯಕ್ತಿಗೆ ಕೊರೋನಾ ಬಂದಿದೆ ಅಂದ್ರೆ ಆತ ಮಾನಸಿಕವಾಗಿ ಅರ್ಧ ಕುಗ್ಗಿ ಹೋಗ್ತಾನೆ. ಅಂತಹದರಲ್ಲಿ ಸುಖಾಸುಮ್ಮನೇ ಹೀಗೆ ಸೋಂಕು ತಗುಲಿದೆ ಅಂತಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿದರೆ ಹೇಗಾಗಬೇಡ. ಅಲ್ಲದೇ ಅವರ ಜೊತೆ ಸಂಪರ್ಕಕ್ಕೆ ಬಂದಿದ್ದಾರೆ ಅಂತಾ ಪುಟ್ಟ ಪುಟ್ಟ ಮಕ್ಕಳು, ವೃದ್ಧರು ಅನ್ನೋದನ್ನು ನೋಡದೇ ನೂರಾರು ಜನರನ್ನು ಕ್ವಾರಂಟೈನ್​ಗೆ ಒಳಪಡಿಸಿ ಸೂಕ್ತ ವ್ಯವಸ್ಥೆ ಕಲ್ಪಿಸದೇ ಇರೋದು ಎಷ್ಟು ಸರಿ. ಆರೋಗ್ಯ ಇಲಾಖೆಯ ಎಡವಟ್ಟಿನಿಂದ ಅದೆಷ್ಟೋ ಜನರು ಮಾನಸಿಕ ಸ್ಥಿಮಿತ ಕಳೆದುಕೊಳ್ಳುವಂತಾಗಿದೆ. ಈಗಾಗಲೇ ಜನರು ಸರ್ಕಾರ, ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಈ ಮಧ್ಯೆ 2-3 ಸಾವಿರ ಕೇಸ್ ಗಳಲ್ಲಿ ಒಂದೊಂದು ಪ್ರಕರಣಗಳು ಹೀಗೆ ಬರುತ್ತೆ ಅಂತಾ ಸಂಸದೆ ಶೋಭಾ ಕರಂದ್ಲಾಜೆ ಅವರು ಆರೋಗ್ಯ ಇಲಾಖೆ ಪರ ಬ್ಯಾಟಿಂಗ್ ಮಾಡಿದ್ದಾರೆ.

ಇದನ್ನು ಓದಿ: ಹಿರಿತೆರೆ, ಕಿರಿತೆರೆ ತಂತ್ರಜ್ಞರು, ಕಲಾವಿದರಿಗೆ ಸಿಹಿಸುದ್ದಿ; ಧಾರಾವಾಹಿ, ಸಿನಿಮಾ ಚಿತ್ರೀಕರಣಕ್ಕೆ ಅವಕಾಶ

ಸದ್ಯ ವಿದ್ಯಾರ್ಥಿ ಆಸ್ಪತ್ರೆ ಸೇರಿದ ನಂತರ ಮೂರು ಬಾರಿಯೂ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಕ್ವಾರಂಟೈನ್​ಲ್ಲಿದ್ದ 55 ಜನರನ್ನು ಬಿಡುಗಡೆ ಮಾಡಲಾಗಿದೆ. ಆದರೆ ವಿದ್ಯಾರ್ಥಿಯನ್ನು ಮಾತ್ರ ಆಸ್ಪತ್ರೆಯಿಂದ ಬಿಡುಗಡೆ ಮಾಡಿಲ್ಲ. ಮೊದಲ ಬಾರಿ ತೆಗೆದ ಗಂಟಲು ದ್ರವದ ಸ್ಯಾಂಪಲನ್ನು ಪುನಃ ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಲಾಗಿದೆ. ಕಳೆದ ಒಂದು ತಿಂಗಳವರೆಗೂ ಕಾಫಿನಾಡಿನಲ್ಲಿ ಒಂದೇ ಒಂದು ಪ್ರಕರಣಗಳು ಇರಲಿಲ್ಲ. ಆ ಬಳಿಕ ಮುಂಬೈನಿಂದ ಬಂದವರಿಂದ ಜಿಲ್ಲೆಯಲ್ಲಿ ಕಾಣಿಸಿಕೊಂಡ ಮೂರು ಪ್ರಕರಣಗಳು ಫಾಲ್ಸ್ ಪ್ರಕರಣಗಳು ಅಂತಾ ಸಾಬೀತಾದಂತೆ ಆಗಿದೆ. ಮೊದಲಿಗೆ ಸೋಂಕು ತಗುಲಿದೆ ಅಂತಾ ಸರ್ಟಿಫೀಕೆಟ್ ನೀಡಿ, ಆ ಬಳಿಕ ಸೋಂಕು ತಗುಲಿಲ್ಲ ಅಂತಾ ಸಮಾಜಾಯಿಷಿ ನೀಡೋದು ಎಷ್ಟು ಸರಿ. ಸೋಂಕು ತಗುಲಿದೆ ಅಂತಾ ಆರೋಗ್ಯವಂತ ಜನರನ್ನು ಕೋವಿಡ್ ಆಸ್ಪತ್ರೆಗೆ ದೂಡಿ, ಕ್ವಾರಂಟೈನ್ ಹೆಸರಲ್ಲಿ ನೂರಾರು ಜನರಿಗೆ ಕಿರಿ ಕಿರಿ ನೀಡೋದು ಎಷ್ಟು ಸರಿ ಎಂದು ಜಿಲ್ಲೆಯ ಜನರು ಪ್ರಶ್ನೆ ಮಾಡುತ್ತಿದ್ದಾರೆ.
First published: