ಮೈಸೂರು(ಸೆಪ್ಟೆಂಬರ್. 28): ದಿನೇ ದಿನೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೊರೋನಾ ಹೆಚ್ಚಾಗುತ್ತಿರುವುದರಿಂದ ಶಾಲೆಗಳು ಪ್ರಾರಂಭ ಮಾಡಬೇಕಾ ಬೇಡವಾ ಎನ್ನುವ ನಿರ್ಧಾರ ಇನ್ನು ಆಗಿಲ್ಲ. ಈ ನಡುವೆ ಶಾಲೆಗಳ ಪ್ರಾರಂಭಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಸದ್ದಿಲ್ಲದೆ ತಯಾರಿ ಮಾಡಿಕೊಳ್ಳುತ್ತಿದ್ದು, ಮೈಸೂರು ಜಿಲ್ಲೆಯ ಎಲ್ಲ ಶಿಕ್ಷಕರಿಗೆ ಕೊರೋನಾ ಟೆಸ್ಟ್ ಮಾಡಿಸಲಾಗುತ್ತಿದೆ. ಜಿಲ್ಲೆಯ 15 ಸಾವಿರ ಶಿಕ್ಷಕರಿಗೆ ಕೊರೋನಾ ಟೆಸ್ಟ್ ಮಾಡಿಸುತ್ತಿದ್ದು, ನೆಗೆಟಿವ್ ಬಂದ ಶಿಕ್ಷಕರಿಗಷ್ಟೆ ಶಾಲೆಗೆ ಎಂಟ್ರಿ ಸಿಗಲಿದೆ. ಶಾಲೆ ಆರಂಭಕ್ಕು ಮುನ್ನ ನಡೆಯುತ್ತಿರುವ ಈ ಕೊರೋನಾ ಪರೀಕ್ಷೆಯಿಂದ ಶಿಕ್ಷಕರಲ್ಲೆ ಕೊರೋನಾ ಭಯ ಉಂಟಾಗಿದೆ. ಪರೀಕ್ಷೆ ಕೊಟ್ಟು ಮಕ್ಕಳಲ್ಲಿ ಪರೀಕ್ಷೆ ಭಯ ಹುಟ್ಟಿಸುತ್ತಿದ್ದ ಶಾಲಾ ಶಿಕ್ಷಕರಲ್ಲಿ ಈ ವರ್ಷ ಕೊರೋನಾ ಭಯ ಶುರುವಾಗಿದೆ. ಇದಕ್ಕಾಗಿ ಮೈಸೂರಿನ ಎಲ್ಲ 15 ಸಾವಿರಕ್ಕು ಹೆಚ್ಚು ಶಿಕ್ಷಕರು ಕೊರೋನಾ ಪರೀಕ್ಷೆ ಎದುರಿಸುತ್ತಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಿನ ಸೆಪ್ಟೆಂಬರ್ ತಿಂಗಳಿನಿಂದ ಶಾಲೆ ಆರಂಭಿಸುವ ಉದ್ದೇಶ ಹೊಂದಿರುವುದರಿಂದ, ಶಾಲೆ ಆರಂಭಕ್ಕು ಮುನ್ನ ಶಿಕ್ಷಕರು ಕೊರೋನಾ ಪರೀಕ್ಷೆಯಲ್ಲಿ ಪಾಸಾಗಿಬೇಕಾಗಿದೆ.
ಪ್ರತಿ ಶಿಕ್ಷಕರಿಗು ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿ ಮೈಸೂರು ಜಿಲ್ಲಾಧಿಕಾರಿ ಬಿ.ಶರತ್ ಆದೇಶ ಮಾಡಿದ್ದಾರೆ. ಅದಕ್ಕಾಗಿ ಇಂದಿನಿಂದ ಮೈಸೂರಿನಲ್ಲಿ ಎಲ್ಲ ವಲಯಗಳ ಶಿಕ್ಷಕರಿಗೆ ಕೋವಿಡ್ ಟೆಸ್ಟ್ ಮಾಡುತ್ತಿದ್ದು. ಆಂಟಿಜನ್ ಕಿಟ್ ಮೂಲಕ ಟೆಸ್ಟ್ ಮಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ಪ್ರತಿ ಶಿಕ್ಷಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಮತ್ತಷ್ಟು ಹೆಚ್ಚಿನ ಟೆಸ್ಟಿಂಗ್ ಮಾಡಲು ಇದು ಸಹಕಾರಿಯಾಗಿದೆ ಅಂತಾರೆ ಜಿಲ್ಲಾ ಆರೋಗ್ಯಾಧಿಕಾರಿ.
ಇನ್ನು ಮೈಸೂರು ಜಿಲ್ಲೆಯಾದ್ಯಂತ ಒಟ್ಟು 3 ಸಾವಿರಕ್ಕು ಹೆಚ್ಚು ಶಾಲೆಗಳಿದ್ದು, ಖಾಸಗಿ ಶಾಲೆಗಳು ಸೇರಿದಂತೆ ಎಲ್ಲ ಶಿಕ್ಷಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯವಾಗಿದೆ. ತಾಲೂಕು ಕೇಂದ್ರಗಳಲ್ಲಿ ಹಾಗೂ ಮೈಸೂರು ನಗರ ವ್ಯಾಪ್ತಿಯ ಶಿಕ್ಷಕರ ಭವನಗಳಲ್ಲಿ ವಿಶೇಷ ಕೋವಿಡ್ ಪರೀಕ್ಷಾ ಕೇಂದ್ರಗಳನ್ನ ತೆರೆದಿದ್ದು, ಎಲ್ಲ ಶಿಕ್ಷಕರಿಗೆ ಟೆಸ್ಟ್ ಮಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಶಿಕ್ಷಕರ ಕುಟುಂಬಸ್ಥರಿಗು ಅಗತ್ಯ ಬಿದ್ದರೆ ಟೆಸ್ಟ್ ಮಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ : ಮೆಜೆಸ್ಟಿಕ್ನಿಂದ ಏರ್ಪೋರ್ಟ್ಗೆ ಕೇವಲ 10 ನಿಮಿಷದಲ್ಲಿ ಪ್ರಯಾಣ; BIALನಿಂದ ಹೈಪರ್ಲೂಪ್ ಯೋಜನೆ
ಪೋಷಕರಲ್ಲಿ ಕೊರೋನಾ ಆತಂಕ ಇನ್ನು ದೂರವಾಗಿಲ್ಲ. ಅಂತೇಯೆ ಶಿಕ್ಷಕರಲ್ಲು ಮತ್ತು ಶಿಕ್ಷಕರ ಕುಟುಂಬಸ್ಥರಲ್ಲು ಕೊರೋನಾ ಭಯ ಇದೆ. ಎಲ್ಲದಕ್ಕು ಟೆಸ್ಟ್ ಮಾಡಿಸಿಕೊಳ್ಳುವುದು ಪರಿಹಾರವಾಗಿದ್ದು, ಕೋವಿಡ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದರೆಷ್ಟೆ ಶಿಕ್ಷಕರನ್ನ ಶಾಲೆಯಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡುತ್ತೇವೆ. ಆಗ ಶಾಲೆಗೆ ಬರುವಂತ ಮಕ್ಕಳು ಹಾಗೂ ಅವರ ಪೋಷಕರಲ್ಲು ಕೊರೋನಾ ಬಗ್ಗೆ ಭಯ ಇರುವುದಿಲ್ಲ ಎನ್ನುವ ಅಭಿಪ್ರಾಯವನ್ನ ನಗರ ಉತ್ತರ ವಲಯ ಬಿಇಓ ವ್ಯಕ್ತಪಡಿಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ