ಕೋಲಾರದಲ್ಲಿ ಕೊರೋನಾ ಸ್ಪೋಟ; ಅನಾಥಾಶ್ರಮದ 27 ಮಕ್ಕಳಿಗೆ, ಗಾರ್ಮೆಂಟ್ಸ್ ನ 33 ಮಂದಿಗೆ ಒಂದೇ ದಿನ ಸೋಂಕು!

ಕೋಲಾರದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರ ಜೋರಾಗಿದೆ. ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತಿದ್ದು, ಸಾರ್ವಜನಿಕರು ಎಚ್ಚೆತ್ತುಕೊಂಡು ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್ ಮತ್ತು ಮಾಸ್ಕ್ ಧರಿಸುವ ಕುರಿತು ಗಮನ ಹರಿಸಬೇಕಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೋಲಾರ: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಆರಂಭವಾಗಿದ್ದು, ಗಡಿ ಜಿಲ್ಲೆ ಕೋಲಾರದಲ್ಲೂ ಕೊರೋನಾ ಕೇಕೆ ಮತ್ತೊಮ್ಮೆ ಆರಂಭವಾಗಿದೆ. ಜಿಲ್ಲೆಯಲ್ಲಿ ಒಂದೇ ದಿನ 83 ಕೇಸ್ ದಾಖಲಾಗಿದೆ. ಇದೀಗ  ಅನಾಥಾಶ್ರಮದ 27 ಜನ‌ ಶಾಲಾ ಮಕ್ಕಳಲ್ಲಿ ಕೊರೋನಾ  ಪಾಸಿಟಿವ್ ಪತ್ತೆಯಾಗಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಅತ್ತಿಗಿರಿಕೊಪ್ಪ ಬಳಿಯಿರುವ, ಬಸೇರಾ ಎನ್ನುವ ವಸತಿ ನಿಲಯ ಹಾಗೂ ಅನಾಥಾಶ್ರಮದಲ್ಲಿ 18 ವರ್ಷದೊಳಗಿನ 60  ಜನ ಮಕ್ಕಳಿದ್ದಾರೆ. ಏಪ್ರಿಲ್ 3 ರಂದು ಇಲ್ಲಿನ 17 ವರ್ಷದ  ಬಾಲಕಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ಕೊರೋನಾ ಪರೀಕ್ಷೆ ಮಾಡಲಾಗಿತ್ತು. ಬಾಲಕಿಗೆ ಪಾಸಿಟಿವ್‌ ಬಂದ ಹಿನ್ನಲೆ, ಉಳಿದವರನ್ನು ಆರ್​ಟಿ ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಯಿತು. ನೆನ್ನೆ ಸಂಜೆ ಬಂದಿರುವ ವರದಿಯಲ್ಲಿ,  26 ಜನ ಮಕ್ಕಳಿಗೆ ಕೋವಿಡ್ 19 ಪಾಸಿಟಿವ್ ದೃಢವಾಗಿದೆ.

ಬಸೇರಾ ಸಂಸ್ಥೆಗೆ ಡಿಎಚ್ಒ ಡಾಕ್ಟರ್ ವಿಜಯ್ ಕುಮಾರ್ ಹಾಗು ಟಿಎಚ್ಒ ಡಾಕ್ಟರ್ ಸರಸ್ವತಿ ಭೇಟಿ ನೀಡಿದ್ದು, ಸೋಂಕಿತ 27 ಮಂದಿ ಮಕ್ಕಳನ್ನು ಸಂಸ್ಥೆಯಲ್ಲಿನ ಕಟ್ಟಡದಲ್ಲಿ ಬೇರ್ಪಡಿಸಿ ಐಸೋಲೇಷನ್  ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಮಕ್ಕಳನ್ನು ಕ್ವಾರೆಂಟೈನ್ ಮಾಡಿದ್ದು, ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಸದ್ಯ  ಬಸೇರಾ ಅನಾಥಾಶ್ರಮವನ್ನು ಕಂಟೈನ್ಮೆಂಟ್ ಝೋನ್ ಎಂದು  ಆರೋಗ್ಯ ಇಲಾಖೆ ಘೋಷಿಸಿದ್ದು, ಸ್ಥಳೀಯ ಪಂಚಾಯಿತಿಯ ಸಿಬ್ಬಂದಿ ಸ್ಯಾನಿಟೈಸರ್ ಸಿಂಪಡಣೆ ಮಾಡಿದ್ದು, ಉಳಿದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇನ್ನು ಅನಾಥಾಶ್ರಮದ ಮಕ್ಕಳಲ್ಲಿ ಬಹುತೇಕರು,  ಬಂಗಾರಪೇಟೆ ಹಾಗೂ ಕೋಲಾರದ ಶಾಲೆಗಳಿಗೆ ಹೋಗಿ ಬರುತ್ತಿದ್ದರು ಎಂದು ತಿಳಿದುಬಂದಿದ್ದು, ಅಲ್ಲಿನ ಶಾಲೆಗಳಲ್ಲಿನ ಮಕ್ಕಳಿಗೂ ಕೊರೋನಾ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಜಿಲ್ಲಾ ವೈದ್ಯಾದಿಕಾರಿ ಡಾ ವಿಜಯ್ ಕುಮಾರ್, ಮಕ್ಕಳ ಆರೋಗ್ಯ ಸ್ಥಿರವಾಗಿದ್ದು, ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಕೊರೋನಾದಿಂದ ಗುಣಮುಖರಾದ ದೇವೇಗೌಡ ದಂಪತಿ; ಎಲ್ಲರಿಗೂ ಧನ್ಯವಾದ ಅರ್ಪಿಸಿದ ಮಾಜಿ ಪ್ರಧಾನಿ

ಗಾರ್ಮೆಂಟ್ಸ್ ನ 33 ಸಿಬ್ಬಂದಿಗೆ ಸೋಂಕು

ಕೋಲಾರ ತಾಲೂಕಿನಲ್ಲಿ ಮಾತ್ರ ಏಪ್ರಿಲ್ 5 ರಂದು 34 ಕೊರೋನಾ ಕೇಸ್ ದಾಖಲಾಗಿದ್ದು, ಇದರಲ್ಲಿ  ಕೋಲಾರ ನಗರದ ಹೊರವಲಯದ ಶಾಹಿ ಗಾರ್ಮೆಂಟ್ಸ್​ನಲ್ಲಿನ  33  ಸಿಬ್ಬಂದಿಗೆ ಕೊರೋನಾ  ಪಾಸಿಟಿವ್ ಪತ್ತೆಯಾಗಿದೆ. ಗಾರ್ಮೆಂಟ್ಸ್ ನಲ್ಲಿ 1 ಸಾವಿರ ಸಿಬ್ಬಂದಿಗೆ ಕೊರೋನಾ  ಪರೀಕ್ಷೆಯನ್ನು ಆರೋಗ್ಯ ಇಲಾಖೆ ಮಾಡಿತ್ತು. ಅದರಲ್ಲಿ ನೆನ್ನೆ ಸಂಜೆ 33 ಜನರಿಗೆ  ಕೊರೋನಾ ಸೋಂಕು ದೃಢವಾಗಿದೆ. ಈಗಾಗಲೇ ಪ್ರಾಥಮಿಕ ಸಂಪರ್ಕ ಇರುವವರನ್ನು ಗುರುತಿಸಿ, ಹೋಂ ಕ್ವಾರಂಟೈನ್ ಮಾಡಿದ್ದು, ಸೋಂಕಿತರನ್ನು ಹೋಮ್ ಐಸೋಲೇಷನ್ ಮಾಡಲಾಗಿದೆ. ಈಗಾಗಲೇ ಪ್ಯಾಕ್ಟರಿಯಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದ್ದು, 2  ದಿನಗಳ ಕಾಲ ಗಾರ್ಮೆಂಟ್ಸ್ ಅನ್ನು ಸೀಲ್ ಡೌನ್ ಮಾಡಲಾಗುವುದು ಎಂದು ಬೆಳಗ್ಗೆ, ಜಿಲ್ಲಾ ಅರೋಗ್ಯ ಇಲಾಖೆ ಅಧಿಕಾರಿ ಡಾ ವಿಜಯ್ ಕುಮಾರ್ ತಿಳಿಸಿದ್ದರು. ಆದರೆ ಮಧ್ಯಾಹ್ನವು ಎಂದಿನಂತೆ ಗಾರ್ಮೆಂಟ್ಸ್ ಕಾರ್ಯನಿರ್ವಹಣೆ ಮಾಡುತ್ತಿತ್ತು. ಈ ಬಗ್ಗೆ ನ್ಯೂಸ್ 18 ಕನ್ನಡ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಾಗ ಕೂಡಲೇ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ‌ ಗಾರ್ಮೆಂಟ್ಸ್ ಗೆ ಭೇಟಿ ನೀಡಿ, ತಕ್ಷಣ 2 ದಿನ ಸೀಲ್ ಡೌನ್ ಮಾಡುವಂತೆ ತಾಕೀತು ಮಾಡಿದರು. ಈ ಬಗ್ಗೆ ಮಾತನಾಡಿದ ಜಿಲ್ಲಾ ವೈದ್ಯಾಧಿಕಾರಿ ವಿಜಯ್ ಕುಮಾರ್,  ಕೋಲಾರದಲ್ಲಿ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಕೋಲಾರದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರ ಜೋರಾಗಿದೆ. ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತಿದ್ದು, ಸಾರ್ವಜನಿಕರು ಎಚ್ಚೆತ್ತುಕೊಂಡು ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್ ಮತ್ತು ಮಾಸ್ಕ್ ಧರಿಸುವ ಕುರಿತು ಗಮನ ಹರಿಸಬೇಕಿದೆ.
Published by:HR Ramesh
First published: