ಲಾಕ್​ಡೌನ್​ ಪರಿಣಾಮ ವಿದೇಶಗಳಿಂದ ಆಮದು ಸ್ಥಗಿತ; ದೇಶೀಯ ಅಡಿಕೆಗೆ ಭಾರೀ ಬೇಡಿಕೆ!

ಪ್ರತೀ ವರ್ಷವೂ ಅಡಿಕೆಗೆ ತಗಲುವ ವಿವಿಧ ರೀತಿಯ ರೋಗಬಾಧೆ ಹಾಗೂ ವಿದೇಶಗಳ ಅಡಿಕೆಯಿಂದ ಸಂಕಷ್ಟ ಅನುಭವಿಸುತ್ತಿದ್ದ ಅಡಿಕೆ ಬೆಳೆಗಾರರು ಈ ಬಾರಿ ಮಾತ್ರ ಫುಲ್ ಖುಷ್ ಆಗಿದ್ದಾರೆ. ಕೊರೋನಾ ಬಹುತೇಕ ಎಲ್ಲಾ ಮಾರುಕಟ್ಟೆಯನ್ನು ಬಾಧಿಸಿದ್ದರೆ, ಅಡಿಕೆ ಮಾರುಕಟ್ಟೆ ಮಾತ್ರ ಕೊರೋನಾ ಲಾಕ್ ಡೌನ್ ಕಾರಣದಿಂದಾಗಿಯೇ ಚೇತರಿಸಿಕೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪುತ್ತೂರು; ಕೊರೋನಾ ಲಾಕ್​ಡೌನ್​ನಿಂದಾಗಿ ಇಡೀ ಮಾರುಕಟ್ಟೆಯೇ ಅಲ್ಲೋಲ ಕಲ್ಲೋಲವಾಗಿರುವಾಗ ದಕ್ಷಿಣಕನ್ನಡದ ಅಡಿಕೆ ಬೆಳೆಯ ಬೆಲೆ ಏರುತ್ತಲೇ ಇದೆ.

ಹೌದು, ಪ್ರತೀ ಬಾರಿಯೂ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಭೀತಿಯಲ್ಲೇ ಈ ಬೆಳೆಗೆ ಕೊರೋನಾ ಲಾಕ್​ಡೌನ್ ಒಂದು ರೀತಿಯಲ್ಲಿ ವರದಾನವಾಗಿಯೂ ಪರಿಣಮಿಸಿದೆ. ಇದು ಅಡಿಕೆ ಮಾರುಕಟ್ಟೆಯ ಸದ್ಯದ ಪರಿಸ್ಥಿತಿಯಾಗಿದ್ದು, ಈ ಬೆಲೆ ಏರಿಕೆ ಇನ್ನೂ ಕೆಲವು ತಿಂಗಳು ಹೀಗೇ ಮುಂದುವರಿಯವ ಸೂಚನೆಯನ್ನು ತಜ್ಞರು ನೀಡುತ್ತಾರೆ.

ಕೊಳೆರೋಗ, ಹಳದಿರೋಗ ಹೀಗೆ ಹಲವು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದ ದಕ್ಷಿಣಕನ್ನಡದ ಅಡಿಕೆ ಬೆಳೆಗಾರರಿಗೆ ಈ ಬಾರಿ ಬಂಪರ್ ಹೊಡೆದಂತಾಗಿದೆ. ದೇಶದೆಲ್ಲೆಡೆ ಕೊರೋನಾ ಹಿನ್ನೆಲೆಯಲ್ಲಿ ಲಾಕ್​ಡೌನ್ ಜಾರಿಗೆ ಬಂದ ಸಂದರ್ಭದಲ್ಲಿ ಇಡೀ ಮಾರುಕಟ್ಟೆ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಗಿತ್ತು. ಹಲವು ವ್ಯವಹಾರಗಳು ನಷ್ಟದಿಂದ ತಲೆ ಎತ್ತದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಕೃಷಿಕರು ಬೆಳೆಯುವ ವಾಣಿಜ್ಯ ಬೆಳೆಯಾದ ಅಡಿಕೆ ಮಾರುಕಟ್ಟೆ ಮಾತ್ರ ದಿನದಿಂದ ದಿನಕ್ಕೆ ಚೇತರಿಕೆಯಾಗುತ್ತಲೇ ಇತ್ತು.

ಕೊರೋನಾ ಲಾಕ್ ಡೌನ್ ಜಾರಿಯಾಗುವುದಕ್ಕೆ ಮೊದಲು ಕೆ.ಜಿ.ಗೆ 250 ರ ಆಸುಪಾಸಿನಲ್ಲಿದ್ದ ಅಡಿಕೆ ಬೆಲೆಯೀಗ 330ಕ್ಕೆ ತಲುಪಿದೆ. ಭಾರತೀಯ ಅಡಿಕೆ ಮಾರುಕಟ್ಟೆಗೆ ಹೆಚ್ಚಾಗಿ ಶ್ರೀಲಂಕಾ, ಬರ್ಮಾ ಮತ್ತು ನೇಪಾಳದಿಂದ ಶೇ. 60 ಅಡಿಕೆ ಆಮದಾಗುತ್ತಿತ್ತು. ಆ ದೇಶಗಳಲ್ಲಿ ಕಾಡುತ್ಪತ್ತಿಯಾಗಿರುವ ಅಡಿಕೆ ಹಾಗೂ ಕಾಳುಮೆಣಸು ಭಾರತದ ಮಾರುಕಟ್ಟೆಗೆ ಅತೀ ಕಡಿಮೆ ಬೆಲೆಗೆ ಬರುತ್ತಿದ್ದ ಸಂದರ್ಭದಲ್ಲಿ ದೇಶದಲ್ಲಿ ಬೆಳೆಯುತ್ತಿದ್ದ ಅಡಿಕೆಯ ಬೆಲೆಯ ಮೇಲೆ ಇದು ವ್ಯತಿರಿಕ್ತ ಪರಿಣಾಮವನ್ನೂ ಬೀರುತ್ತಿತ್ತು. ಆದರೆ ಲಾಕ್ ಡೌನ್ ಘೋಷಣೆಯಾದ ಬಳಿಕ ಭಾರತಕ್ಕೆ ವಿದೇಶಗಳಿಂದ ಬರುತ್ತಿದ್ದ ಅಡಿಕೆ ಆಮದು ನಿಂತ ಪರಿಣಾಮ ದೇಶೀಯವಾಗಿ ಬೆಳೆದ ಅಡಿಕೆಗೆ ಹೆಚ್ಚಿನ ಬೇಡಿಕೆ ಬರಲಾರಂಭಿಸಿದೆ. ಈ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಈ ಬೆಳವಣಿಗೆ ಅಡಿಕೆ ಬೆಳೆಗಾರನಲ್ಲಿ ಸಂತಸಕ್ಕೂ ಕಾರಣವಾಗಿದೆ.

ಅಡಿಕೆ ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಅಡಿಕೆಯೂ ಕಡಿಮೆಯಾಗಲಾರಂಭಿಸಿದೆ. ಬೆಳೆಗಾರ ಅಡಿಕೆಗೆ ಇನ್ನಷ್ಟು ಬೆಲೆ ಹೆಚ್ಚಾಗಲಿದೆ ಎನ್ನುವ ನಿರೀಕ್ಷೆಯಲ್ಲಿ ಅಡಿಕೆಯನ್ನು ಮಾರುಕಟ್ಟೆಗೆ ನೀಡಲು ಹಿಂದೇಟೂ ಹಾಕುತ್ತಿದ್ದಾನೆ. ಕೇವಲ ದೇಶೀಯ ಅಡಿಕೆಗಳೇ ಇದೀಗ ಮಾರುಕಟ್ಟೆಯಲ್ಲಿ ಜಾಲ್ತಿಯಲ್ಲಿರುವುದರಿಂದ ಇನ್ನಷ್ಟು ತಿಂಗಳು ಬೆಲೆ ಇದೇ ರೀತಿಯ ಏರಿಕೆಯಾಗಲಿದೆ ಎನ್ನುವ ಲೆಕ್ಕಾಚಾರವೂ ಅಡಿಕೆ ಬೆಳೆಗಾರರದ್ದಾಗಿದೆ.

ಇದನ್ನು ಓದಿ: ಕೊರೋನಾ ಭೀತಿ: ಚಂಡೀಗರ್​ನಿಂದ ಬೆಂಗಳೂರಿಗೆ ಬಂದ ಹೆಂಡತಿಯನ್ನು ಮನೆಗೆ ಸೇರಿಸದ ಗಂಡ

ಕೇವಲ ತಮ್ಮ ಅವಶ್ಯಕತೆಗೆ ಅನುಗುಣವಾಗಿ ಅಡಿಕೆಗಳನ್ನು ಬಿಡುಗಡೆ ಮಾಡುತ್ತಿದ್ದು, ಇದರಿಂದಾಗಿ ಮಾರುಕಟ್ಟೆಯಲ್ಲಿ ಅಡಿಕೆ ವ್ಯತ್ಯಯವೂ ಆಗುವ ಲಕ್ಷಣ ಕಂಡು ಬರುತ್ತಿದೆ. ಪ್ರತೀ ವರ್ಷವೂ ಅಡಿಕೆಗೆ ತಗಲುವ ವಿವಿಧ ರೀತಿಯ ರೋಗಬಾಧೆ ಹಾಗೂ ವಿದೇಶಗಳ ಅಡಿಕೆಯಿಂದ ಸಂಕಷ್ಟ ಅನುಭವಿಸುತ್ತಿದ್ದ ಅಡಿಕೆ ಬೆಳೆಗಾರರು ಈ ಬಾರಿ ಮಾತ್ರ ಫುಲ್ ಖುಷ್ ಆಗಿದ್ದಾರೆ. ಕೊರೋನಾ ಬಹುತೇಕ ಎಲ್ಲಾ ಮಾರುಕಟ್ಟೆಯನ್ನು ಬಾಧಿಸಿದ್ದರೆ, ಅಡಿಕೆ ಮಾರುಕಟ್ಟೆ ಮಾತ್ರ ಕೊರೋನಾ ಲಾಕ್ ಡೌನ್ ಕಾರಣದಿಂದಾಗಿಯೇ ಚೇತರಿಸಿಕೊಂಡಿದೆ.
Published by:HR Ramesh
First published: