ಕೊಪ್ಪಳ(ಜೂ.03): ಕೊರೋನಾ ಮಹಾಮಾರಿ ಈಗ ನಗರ ಪ್ರದೇಶಕ್ಕಿಂತ ಅಧಿಕವಾಗಿ ಗ್ರಾಮೀಣ ಪ್ರದೇಶದಲ್ಲಿ ಹರಡುತ್ತಿದೆ. ಆದರೆ ಕೊಪ್ಪಳ ಜಿಲ್ಲೆಯ 152 ಗ್ರಾಮಗಳು ಕೊರೋನಾ ಮುಕ್ತವಾಗಿವೆ. ಈ ಗ್ರಾಮಗಳಲ್ಲಿಯ ಜನರ ಕಾಳಜಿ, ಸ್ವಯಂ ನಿರ್ಬಂಧದಿಂದಾಗಿ ಈ ಕಡೆ ಕೊರೋನಾ ಸುಳಿದಿಲ್ಲ. ಇದರಿಂದಾಗಿ ಗ್ರಾಮಸ್ಥರು ಕೊರೋನಾ ಭಯದಿಂದ ದೂರವಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 654 ಗ್ರಾಮಗಳ ಪೈಕಿ ಇಲ್ಲಿಯವರೆಗೂ ಕೊರೋನಾ ಸೋಂಕು ಇಲ್ಲದ ಗ್ರಾಮಗಳು 82 ಗ್ರಾಮ ಪಂಚಾಯತಿ ವ್ಯಾಪ್ತಿಯ 152 ಗ್ರಾಮಗಳು. ಉಳಿದ ಗ್ರಾಮಗಳಲ್ಲಿ ಸೋಂಕು ಅಧಿಕವಾಗಿದೆ. ಅದರಲ್ಲಿಯೂ ದೊಡ್ಡ ಗ್ರಾಮಗಳಾದ ಶ್ರೀರಾಮನಗರ, ಹನುಮಸಾಗರ, ಕಿನ್ನಾಳ ಸೇರಿದಂತೆ ಅತ್ತ ಪಟ್ಟಣವೂ ಅಲ್ಲ, ಇತ್ತ ಗ್ರಾಮವೂ ಅಲ್ಲದ ಗ್ರಾಮಗಳಲ್ಲಿ ಕೊರೋನಾ ಸೋಂಕು ಅಬ್ಬರಿಸಿದೆ.
ಕೊಪ್ಪಳ ತಾಲೂಕಿನಲ್ಲಿ 29 ಗ್ರಾಮಗಳು, ಕುಷ್ಟಗಿ ತಾಲೂಕಿನಲ್ಲಿ 22 ಗ್ರಾಮಗಳು, ಯಲಬುರ್ಗಾ ದಲ್ಲಿ 22, ಕಾರಟಗಿ 17, ಕನಕಗಿರಿ 29, ಕುಕನೂರು 6, ಗಂಗಾವತಿ ತಾಲೂಕಿನಲ್ಲಿ 27 ಗ್ರಾಮಗಳು ಕೊರೋನಾ ಮುಕ್ತವಾಗಿವೆ. ಇನ್ನೂ ಜಿಲ್ಲೆಯಲ್ಲಿ ಕೊರೋನಾ ಸೋಂಕು ಇಳಿಮುಖವಾಗುತ್ತಿದ್ದು, ತಾಲೂಕುವಾರು ಸೋಂಕಿತರ ದರ ನೋಡುವುದಾದರೆ ಕೊಪ್ಪಳ ತಾಲೂಕಿನಲ್ಲಿ ಪಾಸಿಟಿವಿಟಿ ದರ 26.91, ಕುಷ್ಟಗಿಯಲ್ಲಿ 14.89, ಯಲಬುರ್ಗಾದಲ್ಲಿ 12.32 ಹಾಗು ಗಂಗಾವತಿಯಲ್ಲಿ 14.97 ರಷ್ಟು ಸೋಂಕಿತರು ಪತ್ತೆಯಾಗುತ್ತಿದ್ದಾರೆ.
ಇದನ್ನೂ ಓದಿ:Horoscope Today: ಕುಂಭ ರಾಶಿಯವರಿಗೆ ಈ ದಿನ ಹೇಗಿರಲಿದೆ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ
ಈ ಮಧ್ಯೆ ಕಳೆದ ವಾರ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 39 ರಷ್ಟಿದ್ದ ಸೋಂಕಿನ ಪ್ರಮಾಣ ಈಗ 15 ಕ್ಕಿಂತ ಕಡಿಮೆಯಾಗಿದೆ. ಇದು ಜಿಲ್ಲೆಯ ಮಟ್ಟಿಗೆ ಆಶಾಭಾವನೆ ಮೂಡಿಸಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎನ್ನಲಾಗುತ್ತಿದೆ. ಎರಡನೆಯ ಅಲೆ ಆರಂಭವಾಗುತ್ತಿದ್ದಂತೆ ಕೊರೋನಾ ಮುಕ್ತವಾಗಿರುವ ಗ್ರಾಮಗಳು ಮುಂಜಾಗ್ರತಾ ಕ್ರಮ ಕೈಗೊಂಡಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಗ್ರಾಮಗಳಲ್ಲಿ ಮದುವೆ ಸೇರಿದಂತೆ ದೊಡ್ಡ-ದೊಡ್ಡ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ. ಬೇರೆ ಊರಿನಿಂದ ಬಂದವರಿಂದ ಅಂತರ ಕಾಯ್ದುಕೊಂಡು ಬಂದಿದ್ದಾರೆ. ದುಡಿಯಲು ಹೋದವರು ವಾಪಸ್ಸು ಬಂದಾಗ ಅವರಿಗೆ ನಾಲ್ಕೈದು ದಿನ ಮನೆಯಲ್ಲಿಯೇ ಇರುವಂತೆ ಸೂಚಿಸಿದ್ದಾರೆ. ಗ್ರಾಮ ಪಂಚಾಯತಿಗಳಿಂದ ಗ್ರಾಮದಲ್ಲಿಸ್ಯಾನಿಟೈಜರ್ ಮಾಡಿಸಿದ್ದಾರೆ. ರಸ್ತೆ ಹಾಗೂ ಚರಂಡಿಗಳನ್ನು ಸ್ವಚ್ಛವಾಗಿ ಇಟ್ಟಿದ್ದಾರೆ. ಗ್ರಾಮಗಳಲ್ಲಿ ಯಾರೂ ಸಹ ಗುಂಪುಗೂಡಿ ಕುಳಿತುಕೊಳ್ಳುತ್ತಿಲ್ಲ. ಮಾಸ್ಕ್ ಹಾಕಿಕೊಂಡು ಕೊರೋನಾ ನಿಯಮ ಪಾಲನೆ ಮಾಡಿದ್ದೇ ಗ್ರಾಮಗಳಿಗೆ ಸೋಂಕು ಬಾರದಂತೆ ಮಾಡಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಇದನ್ನೂ ಓದಿ:ಡಿಕೆಶಿ ಭೇಟಿ ವೇಳೆ ಕೋವಿಡ್ ನಿಯಮ ಉಲ್ಲಂಘನೆ: 10 ಸಾವಿರ ರೂಪಾಯಿ ದಂಡ ವಿಧಿಸಿದ ಹುಬ್ಬಳ್ಳಿ ಪಾಲಿಕೆ
ಇದಕ್ಕೆ ಉದಾಹರಣೆಗಾಗಿ ಯಲಬುರ್ಗಾ ತಾಲೂಕಿನ ಬಳೂಟಗಿ ತಾಂಡವೂ ಒಂದು. ಈ ಗ್ರಾಮದಲ್ಲಿಯವರೆಗೂ ಒಂದೂ ಪಾಸಿಟಿವ್ ಕೇಸ್ ವರದಿಯಾಗಿಲ್ಲ, ಇದೇ ರೀತಿ ಕೊಪ್ಪಳ ತಾಲೂಕಿನ ಮೆಳ್ಳಿಕೆರಿ ಗ್ರಾಮಸ್ಥರನ್ನು ಕೇಳಿದರೆ ಅವರು ಸಹ ಹೇಳಿದ್ದು ಇದೇ ಮಾತನ್ನ. ನಮ್ಮ ಗ್ರಾಮದಲ್ಲಿ ಸ್ಯಾನಿಟೈಸ್ ಮಾಡಿಸಿದ್ದೇವೆ, ಬೇರೆ ಊರಿನಿಂದ ಯಾರೇ ಬರಲಿ ಅವರ ಮೇಲೆ ನಿಗಾ ವಹಿಸುತ್ತೇವೆ, ಇಡೀ ಗ್ರಾಮಸ್ಥರು ಜಾಗೃತರಾಗಿದ್ದು ನಮ್ಮಲ್ಲಿ ಕೊರೋನಾ ದೂರವಿದೆ. ಮುಂದೆಯೂ ಬಾರದಂತೆ ಗ್ರಾಮಸ್ಥರು ಒಗ್ಗಟ್ಟಿನಿಂದ ಕೊರೋನಾದಿಂದ ದೂರವಿರುತ್ತೇವೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ