CoronaVirus: ಚಾಮರಾಜನಗರ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚಾಗಿ ಹರಡುತ್ತಿದೆ ಕೊರೋನಾ ವೈರಸ್​

ಜಿಲ್ಲಾ ಆಸ್ಪತ್ರೆ  ಆವರಣದಲ್ಲಿ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪ್ಲಾಂಟ್  ನಿರ್ಮಾಣವಾಗಿದ್ದು ಒಂದೆರಡು ದಿನದಲ್ಲೇ ಕಾರ್ಯಾರಂಭ ಮಾಡಲಿದೆ. ಇದಲ್ಲದೆ ಸಂತೇಮರಹಳ್ಳಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಕ್ಸಿಜನ್ ಜನರೇಟರ್ ಘಟಕ ಸ್ಥಾಪಿಸಲಾಗುವುದು ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಕೊರೋನಾ ಸಾಂದರ್ಭಿಕ ಚಿತ್ರ

ಕೊರೋನಾ ಸಾಂದರ್ಭಿಕ ಚಿತ್ರ

  • Share this:
ಚಾಮರಾಜನಗರ: ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲೇ ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕು ಹರಡಿರುವುದು ಕಂಡು ಬಂದಿದೆ. ಕಳೆದ 25 ದಿನಗಳ ಅವಧಿಯಲ್ಲಿ ದಾಖಲಾದ 2255 ಪ್ರಕರಣಗಳ ಪೈಕಿ ಗ್ರಾಮೀಣ ಭಾಗದಲ್ಲೇ 1697 ಮಂದಿಗೆ ಕೊರೋನಾ  ಸೋಂಕು ತಗುಲಿದೆ, ನಗರ ಪ್ರದೇಶಗಳಲ್ಲಿ 558 ಪ್ರಕರಣ ಕಂಡುಬಂದಿವೆ. ಚಾಮರಾಜನಗರದಲ್ಲಿ ಈ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ,  ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮದುವೆ, ಜಾತ್ರೆ, ಹಬ್ಬಗಳ ಪರಿಣಾಮ  ಜನರು ಗುಂಪುಗೂಡಿದ್ದರಿಂದ ಹಳ್ಳಿಗಳಲ್ಲಿ ಕೊರೋನಾ ಸೋಂಕು ಬಹಳ ವೇಗವಾಗಿ ಹರಡಿರುವ ಸಾಧ್ಯತೆಗಳಿವೆ ಎಂದು ತಿಳಿಸಿದರು. 

ಇದಲ್ಲದೆ ಹೆಚ್ಚಿನ ಸಂಖ್ಯೆಯ ಯುವಕರಿಗು  ಕೊರೋನಾ ಸೋಂಕು ತಗುಲಿರುವುದು ಕಂಡುಬಂದಿದ್ದು ಇದು ಆತಂಕ ಹುಟ್ಟಿಸುವ ಸಂಗತಿಯಾಗಿದೆ ಎಂದು ತಿಳಿಸಿದ ಅವರು 21 ರಿಂದ 40 ರ ವಯೋಮಿತಿ ಯ 1036 ಮಂದಿಗೆ ಸೋಂಕು ತಗುಲಿದೆ.  60 ವರ್ಷ ಮೇಲ್ಪಟ್ಟ ಕೇವಲ 216 ಮಂದಿಗೆ ಕೊರೋನಾ ತಗುಲಿದೆ,  ಕೋವಿಡ್ ಲಸಿಕೆ ತೆಗೆದುಕೊಂಡಿರುವ ಕಾರಣ 60 ವರ್ಷ ಮೇಲ್ಪಟ್ಟವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ತಗುಲದೆ ಇರಬಹುದು ಎಂದು ತಿಳಿಸಿದರು.

ಇದಲ್ಲದೆ ಕಳೆದ 25 ದಿನಗಳ ಅವಧಿಯಲ್ಲಿ 13 ಮಂದಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದು ಇವರಲ್ಲಿ ಯಾರೂ ಸಹ  ಕೋವಿಡ್  ಲಸಿಕೆ ತೆಗೆದುಕೊಂಡಿರಲಿಲ್ಲ, ಹಾಗಾಗಿ ಕೋವಿಡ್ ಲಸಿಕೆ ಜನರ ಜೀವ ರಕ್ಷಣೆ ಮಾಡುತ್ತದೆ ಎಂಬುದು ಇದರಿಂದ ದೃಢಪಟ್ಟಿದೆ. ಜನರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಅಸಡ್ಡೆ ಮಾಡಬಾರದು, ಯಾವುದೇ ವದಂತಿಗಳಿಗೆ ಕಿವಿಗೊಡದೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು.

ಇದನ್ನೂ ಓದಿ : HD Devegowda: ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಹೆಚ್​.ಡಿ. ದೇವೇಗೌಡ

ಬೆಡ್ ಹಾಗೂ ಆಮ್ಲಜನಕ ಕೊರತೆ ಇಲ್ಲ:

ಚಾಮರಾಜನಗರ ಜಿಲ್ಲೆಯಲ್ಲಿ ಬೆಡ್ ಹಾಗೂ ಆಮ್ಲಜನಕ ದ ಕೊರತೆ ಇಲ್ಲ,  ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದು ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ವಿವಿಧ ಆಸ್ಪತ್ರೆ ಗಳಲ್ಲಿ ಹಾಲಿ 400 ಬೆಡ್ ಗಳಿವೆ. ಸದ್ಯದಲ್ಲೇ ಚಾಮರಾಜನಗರದ ಮೆಡಿಕಲ್ ಕಾಲೇಜು, ಮಾದಾಪುರದ ಬಳಿ ಇರುವ ಕಾಲೇಜು ಹಾಸ್ಟೆಲ್, ಗುಂಡ್ಲುಪೇಟೆ ಯ ವೀರನಪುರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೊಳ್ಳೇಗಾಲ ತಾಲೂಕು ತಿಮ್ಮರಾಜಿಪುರದ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆ ಹಾಗು ಹನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ  ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆದು  ಜಿಲ್ಲೆಯಲ್ಲಿ ಬೆಡ್ ಗಳ ಸಂಖ್ಯೆಯನ್ನು 970 ಕ್ಕೆ ವೃದ್ಧಿಸಲಾಗುತ್ತಿದೆ. ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಮಾಹಿತಿ ನೀಡಿದರು.

ಜಿಲ್ಲಾ ಆಸ್ಪತ್ರೆ  ಆವರಣದಲ್ಲಿ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪ್ಲಾಂಟ್  ನಿರ್ಮಾಣವಾಗಿದ್ದು ಒಂದೆರಡು ದಿನದಲ್ಲೇ ಕಾರ್ಯಾರಂಭ ಮಾಡಲಿದೆ. ಇದಲ್ಲದೆ ಸಂತೇಮರಹಳ್ಳಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಕ್ಸಿಜನ್ ಜನರೇಟರ್ ಘಟಕ ಸ್ಥಾಪಿಸಲಾಗುವುದು. ವಾತಾವರಣದಲ್ಲಿರುವ ಆಮ್ಲಜನಕ ಬಳಸಿಕೊಂಡು  ಅದನ್ನು ಸೋಸಿ, ಶುದ್ದೀಕರಿಸಿ 40 ರಿಂದ 50 ಜಂಬೋ ಸಿಲಿಂಡರ್ ನಷ್ಟು  ಆಮ್ಲಜನಕ ಉತ್ಪಾದನೆ ಮಾಡುವ ಸಾಮರ್ಥ್ಯದ ಘಟಕ ಇದಾಗಿರಲಿದೆ ಎಂದು ಅವರು ತಿಳಿಸಿದರು. ಇದಲ್ಲದೆ ವಾತವರಣದಲ್ಲಿರುವ ಆಕ್ಸಿಜನ್ ಬಳಸಿಕೊಂಡು ರೋಗಿಗಳಿಗೆ  ಆಕ್ಸಿಜನ್  ಪೂರೈಸುವ ಬೆಡ್ ಗಳ ಪಕ್ಕದಲ್ಲೇ ಇಡುವ  300 ಆಕ್ಸಿಜನ್ ಕಾನ್ಸನ್ ಟ್ರೇಟರ್ ಗಳನ್ನು ಖರೀದಿಸಲಾಗುವುದು ಎಂದು ಅವರು ತಿಳಿಸಿದರು

(ಎಸ್.ಎಂ.ನಂದೀಶ್, ಚಾಮರಾಜನಗರ)
Published by:MAshok Kumar
First published: