ಮನೆ ಶಾಂತಿಗೆಂದು ಹೋದವರಿಗೆ ಕೊರೋನಾ ಅಶಾಂತಿ; ಗೃಹಪ್ರವೇಶಕ್ಕೆ ಹೋದ 12 ಜನರಿಗೆ ಸೋಂಕು

ಕಲಬುರಗಿ ಜಿಲ್ಲೆಯಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಮತ್ತೆ 49 ಜನರಿಗೆ ಸೋಂಕು ದೃಢಗೊಂಡಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1646ಗೆ ಏರಿಕೆಯಾಗಿದ್ದು, 1241 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

news18-kannada
Updated:July 6, 2020, 3:00 PM IST
ಮನೆ ಶಾಂತಿಗೆಂದು ಹೋದವರಿಗೆ ಕೊರೋನಾ ಅಶಾಂತಿ; ಗೃಹಪ್ರವೇಶಕ್ಕೆ ಹೋದ 12 ಜನರಿಗೆ ಸೋಂಕು
ಸಾಂದರ್ಭಿಕ ಚಿತ್ರ
  • Share this:
ಕಲಬುರ್ಗಿ; ಕಲಬುರ್ಗಿ ಜಿಲ್ಲೆಯಾದ್ಯಂತ ಕೊರೋನಾ ಕಬಂಧಬಾಹುಗಳು ಚಾಚಿಕೊಳ್ಳಲಾರಂಭಿಸಿವೆ. ಜಿಲ್ಲೆಯ ಎಲ್ಲ ಪ್ರದೇಶಗಳಲ್ಲಿಯೂ ಸೋಂಕಿತರು ಕಂಡುಬಂದಿದ್ದು, ನಿಯಂತ್ರಣ ತಪ್ಪಲಾರಂಭಿಸಿದೆ. ಸಭೆ, ಸಮಾರಂಭಗಳಿಗೆ ಹೋದವರಿಗೆ ಸೋಂಕು ಬರುತ್ತಿರೋದು ಒಂದೆಡೆಯಾದ್ರೆ, ಮನೆಯಲ್ಲಿದ್ದವರಿಗೂ ಸೋಂಕು ವಕ್ಕರಿಸಿದೆ. ಗೃಹ ಪ್ರವೇಶಕ್ಕೆಂದು ಹೋದ 12 ಜನರಿಗೆ ಕೊರೋನಾ ಸೋಂಕು ದೃಢಪಟ್ಟ ಘಟನೆ ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಆಂದೋಲ ಗ್ರಾಮದಲ್ಲಿ ನಡೆದಿದೆ.

ಮಹಾರಾಷ್ಟ್ರದ ಮುಂಬೈಯಿಂದ ಆಂದೋಲ ಗ್ರಾಮಕ್ಕೆ ವಾಪಸ್ಸಾಗಿದ್ದ ವ್ಯಕ್ತಿ, ಹೊಸ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಗೃಹ ಪ್ರವೇಶ ಕಾರ್ಯಕ್ರಮವಾದ ಎರಡು ದಿನಗಳ ನಂತರ ಆತನಿಗೆ ಸೋಂಕಿರೋದು ದೃಢಪಟ್ಟಿತ್ತು. ಇದೀಗ ಮನೆ ಶಾಂತಿ ಕಾರ್ಯಕ್ರಮಕ್ಕೆಂದು ಹೋದವರ ಪೈಕಿ 12 ಜನರಿಗೂ ಕೊರೋನಾ ಸೋಂಕಿರೋದು ದೃಢಪಟ್ಟಿದೆ. ಈ ಪೈಕಿ ಇಬ್ಬರು ಮಕ್ಕಳು, ನಾಲ್ವರು ಜನ ಪುರುಷರು ಮತ್ತು ಆರು ಜನ ಮಹಿಳೆಯರಿದ್ದಾರೆ. ಮನೆ ಶಾಂತಿಗೆಂದು ಹೋದವರಿಗೆ ಕೊರೋನಾ ವಕ್ಕರಿಸಿದ್ದು, ಅವರ ಕುಟುಂಬಗಳಲ್ಲಿ ಅಶಾಂತಿ ವಾತಾವರಣ ನಿರ್ಮಿಸಿದೆ. ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಹೋದ ಇತರರಲ್ಲಿಯೂ ಸೋಂಕಿನ ಆತಂಕ ಸೃಷ್ಟಿಯಾಗಿದ್ದು, ಅವರೆಲ್ಲರನ್ನೂ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಇಡೀ ಆಂದೋಲ ಗ್ರಾಮವನ್ನು ಲಾಕ್ ಡೌನ್ ಮಾಡಲಾಗಿದೆ.

ಬ್ಯಾಂಕ್ ಮ್ಯಾನೇಜರ್​ಗೂ ವಕ್ಕರಿಸಿದ ಕೊರೋನಾ

ಕಲಬುರ್ಗಿಯಲ್ಲಿ ಬ್ಯಾಂಕ್ ಸಿಬ್ಬಂದಿಗೂ ಕೊರೋನಾ ವಕ್ಕರಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ. ಕಲಬುರ್ಗಿಯ ಸಂಗಮೇಶ್ವರ ಕಾಲೋನಿಯ ಶಾಖೆ ಸಿಬ್ಬಂದಿಗೆ ಸೋಂಕು ತಗುಲಿದ್ದು, ಬ್ಯಾಂಕ್ ನ ಮ್ಯಾನೇಜರ್ ಗೇ ಸೋಂಕು ಬಂದಿದೆ ಎನ್ನಲಾಗಿದ್ದು, ಇಡೀ ಶಾಖೆ ಬಂದ್ ಮಾಡಲಾಗಿದೆ. ಸಂಗಮೇಶ್ವರ ಕಾಲೋನಿ ಗ್ರಾಹಕರಿಗೆ ಬೇರೆ ಶಾಖೆಗಳಲ್ಲಿ ವ್ಯವಹರಿಸುವಂತೆ ಮನವಿ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಶಾಖೆ ರೀ ಓಪನ್ ಇರುವುದಿಲ್ಲ. ಅಲ್ಲಿಯವರೆಗೂ ಇಲ್ಲಿನ ಗ್ರಾಹಕರಿಗೆ ಬೇರೆ ಶಾಖೆಯಲ್ಲಿ ವ್ಯವಹಾರಕ್ಕೆ ಅವಕಾಶ ನೀಡಲಾಗಿದೆ. ಕೊರೋನಾ ವಾರಿಯರ್ಸ್ ನಂತರ ಬ್ಯಾಂಕ್ ಸಿಬ್ಬಂದಿಗೂ ಸೋಂಕು ವಕ್ಕರಿಸಿದೆ. ಏನೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಸಿಬ್ಬಂದಿಗೆ ಸೋಂಕು ಹರಡಿದ್ದು, ಬ್ಯಾಂಕ್ ನೌಕರರಲ್ಲಿಯೂ ಭೀತಿ ಸೃಷ್ಟಿಸಿದೆ.

ಇದನ್ನು ಓದಿ: ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿಗೂ ಕೊರೋನಾ ಸೋಂಕು

ಕಲಬುರ್ಗಿಯಲ್ಲಿ ಮತ್ತಿಬ್ಬರ ಬಲಿಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾಗೆ ಮತ್ತಿಬ್ಬರ ಬಲಿಯಾಗಿದ್ದಾರೆ. 69 ವರ್ಷದ ಪುರುಷ ಹಾಗೂ 66 ವರ್ಷದ ಪುರುಷ ಸಾವನ್ನಪ್ಪಿದ್ದಾರೆ. ಕೆಮ್ಮು ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಲಬುರ್ಗಿ ಅನ್ನಪೂರ್ಣ ಕ್ರಾಸ್ ನಿವಾಸಿ 69 ವರ್ಷದ ವ್ಯಕ್ತಿ ಜುಲೈ 3ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 04 ರಂದು ನಿಧನರಾಗಿದ್ದರು.ಅವರಿಗೆ ಸೋಂಕು ತಗುಲಿರುವುದು ಇಂದು ದೃಢಪಟ್ಟಿದೆ. ಹಾಗೆಯೇ ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದ ಶಹಾಬಾದ್​ನ 66 ವರ್ಷದ ಪುರುಷ ಆಸ್ಪತ್ರೆಗೆ ಬರುವ ಮುಂಚೆಯೇ ಸಾವನ್ನಪ್ಪಿದ್ದರು. ಅವರಿಗೂ ಸೋಂಕಿರೋದು ಇಂದು ದೃಢಗೊಂಡಿದೆ. ಜಿಲ್ಲೆಯಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಮತ್ತೆ 49 ಜನರಿಗೆ ಸೋಂಕು ದೃಢಗೊಂಡಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1646ಗೆ ಏರಿಕೆಯಾಗಿದ್ದು, 1241 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
Published by: HR Ramesh
First published: July 6, 2020, 3:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading