ಕೋಲಾರದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ; ಪೊಲೀಸ್ ಠಾಣೆ, ನಗರಸಭೆ, ಅಬಕಾರಿ, ನಾಡಕಚೇರಿ ಸೀಲ್ಡೌನ್

ಕೋಲಾರ ಜಿಲ್ಲೆಯಲ್ಲಿ ಒಂದೇ ಗ್ರಾಮದ 22 ಮಂದಿಗೆ ಸೋಂಕು ದೃಢವಾಗಿದ್ದು, ಗ್ರಾಮಸ್ತರು ಬೆಚ್ಚಿ ಬೀಳುವಂತಾಗಿದೆ. ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೊಡ್ಡಪೊನ್ನಾಂಡಹಳ್ಳಿ ಗ್ರಾಮದಲ್ಲಿ ಕಳೆದ ವಾರ ಮಹಿಳೆಯೊಬ್ಬರು ಕಿಡ್ನಿ ಸಮಸ್ಯೆಯಿಂದ ಬಳಲಿ ಸಾವನ್ನಪ್ಪಿದ್ದರು. ಶವಸಂಸ್ಕಾರದಲ್ಲಿ 50ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದು ಎಲ್ಲರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೋಲಾರ; ಬಯಲುಸೀಮೆ ಜಿಲ್ಲೆ ಕೋಲಾರದಲ್ಲಿ ಮಾರಕ ಕೊರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು, ಜುಲೈ 28 ರವರೆಗೆ 1223 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 839  ಸಕ್ರಿಯ ಪ್ರಕರಣಗಳಿದ್ದು, 361 ಮಂದಿ ಗುಣಮುಖರಾಗಿದ್ದಾರೆ. ಇನ್ನು 23 ಮಂದಿ ಇದುವರೆಗೂ ಕೋವಿಡ್- 19 ಮಾರಿಯಿಂದ ಸಾವನ್ನಪ್ಪಿರುವುದಾಗಿ ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇನ್ನು ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲೂ ಸೋಂಕು ಹೆಚ್ಚಾಗುತ್ತಿದ್ದು, ಇದೀಗ ಸರ್ಕಾರಿ ಕಚೇರಿಗಳ ಸಿಬ್ಬಂದಿಗೂ ಸೋಂಕು ನಿರಂತರವಾಗಿ ಹರಡುತ್ತಿರುವುದು, ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಕೋಲಾರ ನಗರಸಭೆ ಪೌರಾಯುಕ್ತರು ಕೊರೋನಾ ಸಮಯದಲ್ಲೂ, ನಗರಸಭೆ ಕಚೇರಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ಎಲ್ಲರ ಟೀಕೆಗೆ ಗುರಿಯಾಗಿದ್ದರು. ಕಳೆದ ನಾಲ್ಕು ದಿನದ ಹಿಂದೆ ಅವರು ಹುಟ್ಟುಹಬ್ಬ ಆಚರಿಸಿದ್ದು, ಕಾರ್ಯಕ್ರಮದಲ್ಲಿ ನಗರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್, ನಗರಸಭೆ ಸದಸ್ಯರು, ಅಧಿಕಾರಿಗಳು, ಪೌರಕಾರ್ಮಿಕರು ಭಾಗಿಯಾಗಿದ್ದರು. ಇದೀಗ ಪೌರಾಯುಕ್ತ ಹಾಗೂ ಅವರ ಪತ್ನಿಗೂ ಸೋಂಕು ತಗುಲಿದ್ದು, ನಗರಸಭೆ ಕಚೇರಿಯನ್ನು ಎರಡನೇ ಬಾರಿಗೆ ಸೀಲ್‍ಡೌನ್ ಮಾಡಲಾಗಿದೆ. ಹೀಗಾಗಿ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾದವರಿಗೂ ಸೋಂಕಿನ ಭೀತಿ ಎದುರಾಗಿದ್ದು, ಎಲ್ಲರನ್ನು ಹೋಮ್ ಕ್ವಾರೆಂಟೈನ್ ಮಾಡಲಾಗಿದೆ.

ಇನ್ನು ಕೆಜಿಎಫ್ ನಗರಸಭೆ ಕಚೇರಿಯ ಚಾಲಕನಿಗೆ ಸೋಂಕು ದೃಢವಾಗಿದ್ದು, ಕೆಜಿಎಫ್ ನಗರಸಭೆ ಕಛೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ. ಕೋಲಾರ ಹಳೇ ಡಿಸಿ ಕಚೇರಿ ಆವರಣದಲ್ಲಿನ ಅಬಕಾರಿ ಭವನಕ್ಕೂ ಕೊರೋನಾ ಸೋಂಕು ವಕ್ಕರಿಸಿದೆ. ಕಚೇರಿಯ ಇನ್ಸ್​ಪೆಕ್ಟರ್, ಗಾರ್ಡ್, ಇಬ್ಬರು ಕಂಪ್ಯೂಟರ್ ಆಪರೇಟರ್ ಗೆ ಸೋಂಕು ದೃಢವಾಗಿದೆ. ಹೀಗಾಗಿ ಅಬಕಾರಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ. ಇನ್ನು ಕೋಲಾರದ ಗಲ್‍ಪೇಟೆ ಪೊಲೀಸ್ ಠಾಣೆಯ ಮುಖ್ಯಪೇದೆಗೆ ಸೋಂಕು ತಗುಲಿದ್ದು, ಎರಡನೇ ಬಾರಿಗೆ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ. ಕಳೆದ ವಾರವಷ್ಟೇ ತಾಲೂಕು ಕಚೇರಿ, ನಾಡಕಚೇರಿ, ಹಲವು ಪೊಲೀಸ್ ಠಾಣೆಯಲ್ಲಿ ಸೋಂಕು ಪತ್ತೆಯಾದ್ದರಿಂದ ಕಚೇರಿಗಳನ್ನು ಸೀಲ್‍ಡೌನ್ ಮಾಡಲಾಗಿತ್ತು, ಹೀಗಾಗಿ ಸರ್ಕಾರಿ ಅಧಿಕಾರಿಗಳಿಗೂ ಕೊರೋನಾ ಕಾಟ ಹೆಚ್ಚುತ್ತಲೇ ಇದೆ.

ಒಂದೇ ಗ್ರಾಮದಲ್ಲಿ 22 ಮಂದಿಗೆ ಸೋಂಕು

ಕೋಲಾರ ಜಿಲ್ಲೆಯಲ್ಲಿ ಒಂದೇ ಗ್ರಾಮದ 22 ಮಂದಿಗೆ ಸೋಂಕು ದೃಢವಾಗಿದ್ದು, ಗ್ರಾಮಸ್ತರು ಬೆಚ್ಚಿ ಬೀಳುವಂತಾಗಿದೆ. ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೊಡ್ಡಪೊನ್ನಾಂಡಹಳ್ಳಿ ಗ್ರಾಮದಲ್ಲಿ ಕಳೆದ ವಾರ ಮಹಿಳೆಯೊಬ್ಬರು ಕಿಡ್ನಿ ಸಮಸ್ಯೆಯಿಂದ ಬಳಲಿ ಸಾವನ್ನಪ್ಪಿದ್ದರು. ಶವಸಂಸ್ಕಾರದಲ್ಲಿ 50ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದು ಎಲ್ಲರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ 22 ಮಂದಿಯಲ್ಲಿ ಸೋಂಕು ದೃಢವಾಗಿದ್ದು, ಉಳಿದವರಿಗೂ ಆತಂಕ ಹೆಚ್ಚಿದೆ. ಗ್ರಾಮದಲ್ಲಿ ರ್ಯಾಪಿಡ್ ಟೆಸ್ಟ್ ನಡೆಸಲು ಆರೋಗ್ಯ ಇಲಾಖೆ ಸಜ್ಜಾಗಿದ್ದು, ಗ್ರಾಮದಲ್ಲಿ ಸ್ಯಾನಿಟೈಸರ್ ಸಿಂಪಡಿಸಿ ಸೀಲ್​ಡೌನ್ ಜಾರಿ ಮಾಡಲಾಗಿದೆ.

ಇದನ್ನು ಓದಿ: ಯಡಿಯೂರಪ್ಪ ಅವರೇ‌ ಮುಂದಿನ ಮೂರು ವರ್ಷಕ್ಕೂ ಮುಖ್ಯಮಂತ್ರಿ: ಲಕ್ಷ್ಮಣ ಸವದಿ ಸ್ಪಷ್ಟನೆ

ಕೋಲಾರ ಜಿಲ್ಲೆಯಲ್ಲಿ ಸೋಂಕು ಹೆಚ್ಚುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಸಿ ಸತ್ಯಭಾಮ, ಜಿಲ್ಲೆಯಲ್ಲಿ ಮೊದಲು ಪತ್ತೆಯಾಗುತ್ತಿದ್ದ ಪ್ರಕರಣಗಳಿಗೂ ಈಗ ದಾಖಲಾಗುತ್ತಿರುವ ಪ್ರಕರಣಗಳಿಗೂ ವ್ಯತ್ಯಾಸವಿದೆ. ಈ ಮೊದಲು ಅಂತರರಾಜ್ಯ ಪ್ರಯಾಣ, ಇತರರ ಸಂಪರ್ಕದಿಂದ ಸೋಂಕು ಪತ್ತೆಯಾಗುತ್ತಿತ್ತು, ಆದರೀಗ ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರಲ್ಲೇ ಸೋಂಕು ಹೆಚ್ಚಾಗಿ ಕಂಡುಬರುತ್ತಿದೆ ಎಂದು ತಿಳಿಸಿದ್ದಾರೆ.
Published by:HR Ramesh
First published: