ಚಿಕ್ಕಮಗಳೂರಿನಲ್ಲಿ ಪತ್ತೆಯಾಗುತ್ತಿರುವ ಕೊರೋನಾ ಪ್ರಕರಣಗಳಿಗೆ ಬೆಂಗಳೂರು ನಂಟೇ ಅಧಿಕ

ಕಳೆದೊಂದು ವಾರದಲ್ಲಿ ಚಿಕ್ಕಮಗಳೂರಿನಲ್ಲಿ 7 ಕೇಸ್​ಗಳು ಪತ್ತೆಯಾಗಿದ್ದು, ಕೊರೋನಾ ಹೆಮ್ಮಾರಿ ನಗರವಾಸಿಗಳ ನೆಮ್ಮದಿ ಕೆಡಿಸಿದೆ. ಈ ಎಲ್ಲದಕ್ಕೂ ರಾಜಧಾನಿ ಬೆಂಗಳೂರೇ ಲಿಂಕ್ ಅನ್ನೋದು ಬೆಚ್ಚಿ ಬೀಳಿಸೋ ಸಂಗತಿ.

news18-kannada
Updated:June 30, 2020, 3:51 PM IST
ಚಿಕ್ಕಮಗಳೂರಿನಲ್ಲಿ ಪತ್ತೆಯಾಗುತ್ತಿರುವ ಕೊರೋನಾ ಪ್ರಕರಣಗಳಿಗೆ ಬೆಂಗಳೂರು ನಂಟೇ ಅಧಿಕ
ಚಿಕ್ಕಮಗಳೂರಿನಲ್ಲಿ ಕೊರೋನಾ
  • Share this:
ಚಿಕ್ಕಮಗಳೂರು: ಕಾಫಿನಾಡಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಸದ್ಯ ಹೀಗೆ ಏರಿಕೆಯಾಗುತ್ತಿರುವ ಪ್ರಕರಣಗಳಿಗೆ ರಾಜಧಾನಿ ಬೆಂಗಳೂರೇ ಕಂಟಕವಾಗ್ತಿರೋದು ನುಂಗಲಾರದ ತುತ್ತಾಗಿದೆ. ಮೊದಲಿಗೆ ತಬ್ಲಿಘಿಗಳು, ಆ ಬಳಿಕ ಮುಂಬೈ ರಿಟರ್ನ್ಸ್​ಗಳಿಂದ ಸೋಂಕು ಹೆಚ್ಚಾಗ್ತಿದೆ ಎಂದು ಬೊಟ್ಟು ಮಾಡಿ ತೋರಿಸುತ್ತಿದ್ವು, ಇದೀಗ ಕಾಫಿನಾಡಿನಿಂದ ರಾಜಧಾನಿಗೆ ಹೋಗಿ ಬರುತ್ತಿದ್ದವರಿಂದಲೇ ಪ್ರಕರಣಗಳು ಹೆಚ್ಚಾಗ್ತಿದೆ. ಪ್ರತಿನಿತ್ಯ ಬೆಂಗಳೂರಿಗೆ ಕರ್ತವ್ಯಕ್ಕೆ ಹೋಗಿಬರುತ್ತಿದ್ದ ಕೆಸ್ಸಾರ್ಟಿಸಿ ಬಸ್ ಡ್ರೈವರ್ಸ್​ಗೂ ಕೊರೋನಾ ಹೆಮ್ಮಾರಿ ತಗುಲಿದ್ದು ಚಿಕ್ಕಮಗಳೂರು ನಗರದಲ್ಲಿ ಕೊರೋನಾ ಆತಂಕ ಉಂಟಾಗಿದೆ. 

ಕಳೆದೊಂದು ವಾರದಲ್ಲಿ ನಗರದಲ್ಲಿ 7 ಕೇಸ್​ಗಳು ಪತ್ತೆಯಾಗಿದ್ದು, ಕೊರೋನಾ ಹೆಮ್ಮಾರಿ ನಗರವಾಸಿಗಳ ನೆಮ್ಮದಿ ಕೆಡಿಸಿದೆ. ಈ ಎಲ್ಲದಕ್ಕೂ ರಾಜಧಾನಿ ಬೆಂಗಳೂರೇ ಲಿಂಕ್ ಅನ್ನೋದು ಬೆಚ್ಚಿ ಬೀಳಿಸೋ ಸಂಗತಿ. ಇಬ್ಬರು ಉದ್ಯೋಗಿಗಳು, ಇಬ್ಬರು ತರಕಾರಿ ವ್ಯಾಪಾರಿಗಳು, ಓರ್ವ ರಾಜಕೀಯ ಮುಖಂಡ, ಇದೀಗ ಕೆಸ್ಸಾರ್ಟಿಸಿ ಬಸ್ ಡ್ರೈವರ್​ಗಳಲ್ಲೂ ಕೊರೊನಾ ಸೋಂಕು ಪತ್ತೆಯಾಗಿದೆ. ಚಿಕ್ಕಮಗಳೂರು ನಗರದ ದೋಣಿಕಣ ಏರಿಯಾದಲ್ಲಿ ವಾಸವಾಗಿದ್ದ ಕೆಎಸ್​ಆರ್​ಟಿಸಿ ಚಾಲಕನಿಗೆ ಸೋಂಕು ಪತ್ತೆಯಾಗಿದ್ದರೂ ಕೂಡ ಆ ಏರಿಯಾವನ್ನ ಸೀಲ್ ಡೌನ್ ಮಾಡೋದಾಗಲಿ, ಜನರು ಓಡಾಟವನ್ನ ನಡೆಸದಂತೆ ಕ್ರಮ ಕೈಗೊಳ್ಳುವುದಾಗಲಿ ಜಿಲ್ಲಾಡಳಿತ ಮಾಡಿಲ್ಲ. ಅದಲ್ಲದೇ ಮನೆಯಲ್ಲಿರುವ ಜನರನ್ನ ಕೂಡ ಕ್ವಾರಂಟೈನ್ ಮಾಡಿಲ್ಲವಂತೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದು, ಜಿಲ್ಲಾಡಳಿತ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: CoronaVirus: ಕೊರೋನಾ ಭೀತಿ; ಗಾಂಧಿ ಬಜಾರ್‌ ಸೇರಿದಂತೆ ನಗರದ ಹಲವೆಡೆ ಸ್ವಯಂ ಪ್ರೇರಿತ ಲಾಕ್‌ಡೌನ್

ಸದ್ಯ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. ಹೀಗೆ ಪತ್ತೆಯಾಗುತ್ತಿರುವ ಪ್ರಕರಣಗಳಲ್ಲಿ ಕಳ್ಳ, ಪೊಲೀಸ್, ಲಾಯರ್, ಗರ್ಭಿಣಿ, ಎಂಜಿನಿಯರ್, ಸಾಫ್ಟ್ ವೇರ್ ಉದ್ಯೋಗಿ, 5 ತಿಂಗಳ ಕಂದಮ್ಮ ಸೇರಿದಂತೆ ಅನೇಕ ವಿಭಿನ್ನ ಕೇಸ್​ಗಳು ಇರೋದು ಅಚ್ಚರಿಯ ಸಂಗತಿ. ಇನ್ನು ಎರಡು ದಿನದ ಹಿಂದೆ ಕೊರೊನಾ ರಾಜಕೀಯ ಮುಖಂಡನನ್ನ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಸದ್ಯ ಕೆಎಸ್​ಆರ್​ಟಿಸಿ ಚಾಲಕನಿಗೊ ಕೊರೋನಾ ಸೋಂಕು ಪತ್ತೆಯಾಗಿರೋದು ಸ್ಥಳೀಯರಲ್ಲಿ ಕೊರೊನಾ ಭಯ ಶುರುವಾಗಿದೆ.



ಸದ್ಯ ಜಿಲ್ಲೆಯಲ್ಲಿ 53 ಪ್ರಕರಣಗಳು ಪತ್ತೆಯಾಗಿದ್ದು, ದಿನೇ ದಿನೇ ಬೆಂಗಳೂರು ನಂಟಿನ ಕೇಸ್​ಗಳೇ ಜಾಸ್ತಿಯಾಗಿರೋದು ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ. ಚಿಕ್ಕಮಗಳೂರು ನಗರದಲ್ಲಿ ಪ್ರತಿ ನಿತ್ಯ ಎರಡು-ಮೂರು ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದು ಸಮುದಾಯಕ್ಕೆ ಕೊರೋನಾ ಹಬ್ಬುತ್ತಿದೆಯಾ ಅನ್ನೋ ಅನುಮಾನ ಜನಸಾಮಾನ್ಯರನ್ನ ಕಾಡುತ್ತಿದೆ.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading