ಗದಗ: ಕೊರೋನಾ ವೈರಸ್ ಇಡೀ ಮಾನವ ಕುಲವನ್ನೇ ಅಲುಗಾಡಿಸುತ್ತಿದೆ. ಈವರಿಗೆ ಮದ್ದು ಸಿಗದೆ ಅದೆಷ್ಟೋ ಜನರು ಕೊರೋನಾ ವೈರಸ್ಗೆ ಬಲಿಯಾಗುತ್ತಿದ್ದಾರೆ. ಆದರೆ ಇಡೀ ರಾಜ್ಯವೇ ಹುಬ್ಬೇರಿಸುವಂತೆ ಗದಗ ಜಿಲ್ಲೆಯ ಆರೋಗ್ಯ ಇಲಾಖೆ ಕೆಲಸ ಮಾಡಿದೆ. ಹೌದು, ರಾತ್ರಿ-ಹಗಲು ಎನ್ನದೆ ಕೊರೋನಾ ನಿಯಂತ್ರಣ ಮಾಡುವಲ್ಲಿ ವೈದ್ಯರು, ನರ್ಸ್ ಜಿಲ್ಲಾಡಳಿತ ಸೇರಿದಂತೆ ಕೊರೋನಾ ವಾರಿಯರ್ಸ್ ಸಾಕಷ್ಟು ಕೆಲಸ ಮಾಡಿದ ಪರಿಣಾಮ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದೆ.
ಈವರೆಗೆ ಜಿಲ್ಲೆಯಲ್ಲಿ 141 ಜನರು, ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ 45 ದಿನಗಳಿಂದ ಕೊರೋನಾದಿಂದ ಯಾರು ಸಾವನ್ನಪ್ಪಿಲ್ಲ. ಇದು ಜಿಲ್ಲೆಯ ಜನರಿಗೆ ಸಮಾಧಾನ ತಂದಿದೆ. ಇನ್ನೂ ಜಿಲ್ಲೆಯಾದ್ಯಂತ ಪ್ರತಿನಿತ್ಯ 1700 ಟೆಸ್ಟ್ ಮಾಡ್ತಾಯಿದ್ದು, ಒಂದು, ಎರಡು ಕೊರೋನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಜಿಲ್ಲೆಯ ಏಳು ತಾಲೂಕಿನಲ್ಲಿ ತೆರಯಲಾಗಿದ್ದ, ಕೋವಿಡ್ ಕೇಂದ್ರಗಳಲ್ಲಿ ಕೊರೋನಾ ಸೋಂಕಿತರು ಯಾರೊಬ್ಬರು ಇಲ್ಲ. ಗದಗ ಜಿಮ್ಸ್ ಆಸ್ಪತ್ರೆಯ ಕೋವಿಡ್ ಕೇಂದ್ರದಲ್ಲಿ 16 ಜನರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ಸಾಕಷ್ಟು ನಿಯಂತ್ರಣಕ್ಕೆ ಬಂದಿದ್ದು, ಸಮಾಧಾನ ತಂದಿದೆ ಅಂತಾರೆ ಜಿಮ್ಸ್ ನಿರ್ದೇಶಕ ಡಾ. ಪಿ ಎಸ್ ಭೂಸರಡ್ಡಿ.
ಇತ್ತೀಚೆಗೆ ಗದಗ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದರಿಂದ ಜಿಲ್ಲಾ ಆಸ್ಪತ್ರೆ ಸೇರಿದಂತೆ, ತಾಲೂಕುಗಳಲ್ಲಿ ತೆರಯಲಾಗಿದ್ದ ಕೋವಿಡ್ ಕೇಂದ್ರಗಳು ಭರ್ತಿಯಾಗಿದ್ದವು. ಇಡೀ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಕೊರೋನಾ ವಾರಿಯರ್ಸ್ ಸಾಕಷ್ಟು ಕೆಲಸ ಮಾಡಿದರೂ ಸೋಂಕು ನಿಯಂತ್ರಣದಲ್ಲಿ ಇರಲಿಲ್ಲ. ಹೀಗಾಗಿ ಆರೋಗ್ಯ ಇಲಾಖೆಯ ವಿರೋಧ ಜಿಲ್ಲೆಯ ಜನರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಇತ್ತೀಚೆಗೆ ಜಿಲ್ಲೆಯಲ್ಲಿ ಕೊರೋನಾ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ. ಜಿಲ್ಲೆಯಾದ್ಯಂತ ಪಲ್ಸ್ ಆಕ್ಸಿಮೀಟರ್ ಮೂಲಕ ಆಮ್ಲಜನಕ ಪ್ರಮಾಣ ಗುರುತಿಸುವುದು, ಆಮ್ಲಜನಕ ಪ್ರಮಾಣ ಕಡಿಮೆಯಿದ್ದರೆ ಕೂಡಲೇ ಅಂತಹವರನ್ನು ಚಿಕಿತ್ಸೆ ಒಳಪಡೆಸಲಾಗುತ್ತಿತ್ತು. ಪ್ರತಿ ಗ್ರಾಮದಲ್ಲಿ ಕೊರೋನಾ ಜನ ಜಾಗೃತಿ ಮೂಡಿಸುವುದು, ಅತೀ ಹೆಚ್ವು ಕೋವಿಡ್- ಟೆಸ್ಟ್ ಮಾಡಿರೋದರಿಂದ ಸೋಂಕಿತರನ್ನು ಗುರುತಿಸಲು ಅನುಕೂಲವಾಗಿದೆ, ಹೀಗಾಗಿ ಕೊರೋನಾ ನಿಯಂತ್ರಣಕ್ಕೆ ಬಂದಿದೆ.
ಇದನ್ನು ಓದಿ: ರಾಜ್ಯ ಹಾಗೂ ಕೇಂದ್ರ ಸರ್ಕಾರ ಕುಸ್ತಿ ಕ್ರೀಡೆಗೂ ಪ್ರಾಧಿಕಾರ ರಚನೆ ಮಾಡಲಿ: ಕನಕಪುರ ಪೈಲ್ವಾನರ ಆಗ್ರಹ
ಈಗ ಚಳಿಗಾಲ ಆರಂಭವಾಗುತ್ತಿರುವುದರಿಂದ ಎರಡನೇಯ ಅಲೆ ಏಳುತ್ತೇ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಜಿಲ್ಲೆಯ ಜನರು ಎಚ್ಚರ ತಪ್ಪಬಾರದು ಎಂದು ಆರೋಗ್ಯ ಇಲಾಖೆ ಮನವಿ ಮಾಡಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಮಾಡುವಲ್ಲಿ ಶ್ರಮಿಸಿದ ಕೊರೋನಾ ವಾರಿಯರ್ಸ್ ಗಳಿಗೆ ಜಿಲ್ಲೆಯ ಜನರು ಕೃತಜ್ಞತೆ ಅರ್ಪಿಸುತ್ತಿದ್ದಾರೆ.
ವರದಿ; ಸಂತೋಷ ಕೊಣ್ಣೂರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ