ಸೋಂಕಿತ ವೃದ್ಧೆ ಮನೆಯಿಂದ ನಾಪತ್ತೆ : ಆಕೆಯನ್ನು ಹುಡುಕುವ ಗೋಜಿಗೂ ಹೋಗದೆ ಆರೋಗ್ಯ ಇಲಾಖೆ ನಿರ್ಲಕ್ಷ್ಯ

ವೃದ್ದೆಯನ್ನು ಸಂಬಂಧಿಗಳು ಎಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಅನ್ನುವುದು ಯಕ್ಷಪ್ರಶ್ನೆಯಾಗಿದೆ.

news18-kannada
Updated:July 8, 2020, 5:29 PM IST
ಸೋಂಕಿತ ವೃದ್ಧೆ ಮನೆಯಿಂದ ನಾಪತ್ತೆ : ಆಕೆಯನ್ನು ಹುಡುಕುವ ಗೋಜಿಗೂ ಹೋಗದೆ ಆರೋಗ್ಯ ಇಲಾಖೆ ನಿರ್ಲಕ್ಷ್ಯ
ಸಾಂದರ್ಭಿಕ ಚಿತ್ರ.
  • Share this:
ಕಲಬುರ್ಗಿ(ಜುಲೈ. 08): ಕಲಬುರ್ಗಿ ಆರೋಗ್ಯ ಇಲಾಖೆಯ ಸಿಬ್ಬಂದಿ ಎಡವಟ್ಟಿನ ಮೇಲೆ ಎಡವಟ್ಟು ಮಾಡುತ್ತಲೇ ಇದೆ. ಕೊರೋನಾ ಸೋಂಕಿತ ವೃದ್ದೆಯನ್ನು ಆಸ್ಪತ್ರೆಗೆ ಶಿಫ್ಟ್ ಮಾಡದೆ ಇರುವ ಪರಿಣಾಮ ಸಂಬಂಧಿಗಳೇ ಆಕೆಯನ್ನು ಕರೆದೊಯ್ದಿದ್ದು, ವೃದ್ಧೆಗಾಗಿ ಹುಡುಕಾಟ ನಡೆಸುವಂತಾಗಿದೆ.

ಕಾಲು ಮುರಿದುಕೊಂಡಿದ್ದ 75 ವರ್ಷದ ವೃದ್ಧೆಗೆ ಕೊರೋನಾ ಪಾಸಿಟಿವ್ ಬಂದಿತ್ತು. ಕಳೆದ ರಾತ್ರಿ ಆಕೆಯನ್ನು ಕರೆತರಲು ಹೋದ ಆ್ಯಂಬುಲೆನ್ಸ್ ಹಾಗೆಯೇ ವಾಪಸ್ಸಾಗಿತ್ತು. ವೃದ್ಧೆ ಮಹಡಿಯ ಮೇಲೆ ವಾಸವಿದ್ದು, ಆಕೆಯನ್ನು ಕರೆತಂದು ಆ್ಯಂಬುಲೆನ್ಸ್ ನಲ್ಲಿ ಕೂಡಿಸುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಹೇಳಿತ್ತು. ಆದರೆ, ವೃದ್ಧೆಯ ಜೊತೆ ಇದ್ದ ಇಬ್ಬರು ಹೆಣ್ಣು ಮಕ್ಕಳಿಂದ ವೃದ್ಧೆಯನ್ನು ಎತ್ತಿಕೊಂಡು ಹೋಗಿ ಆ್ಯಂಬುಲೆನ್ಸ್ ನಲ್ಲಿ ಕೂಡಿಸಲಾಗಿರಲಿಲ್ಲ. ಕಾಲು ಮುರಿದುಕೊಂಡಿರುವ ವೃದ್ಧೆ ಕೆಳಗೆ ಬರುವುದಾದರು ಹೇಗೆ ಎಂದು ಆಲೋಚಿಸದ ಆರೋಗ್ಯ ಇಲಾಖೆ ಸಿಬ್ಬಂದಿ, ವಾಹನದಲ್ಲಿ ತಂದು ಕೂಡಿಸಿದರೆ ಮಾತ್ರ ಕರೆದುಕೊಂಡು ಹೋಗುದಾಗಿ ಕಂಡೀಷನ್ ಹಾಕಿತ್ತು. ಕರೆತರದೇ ಇದ್ದಾಗ ಆ್ಯಂಬುಲೆನ್ಸ್ ವಾಪಸ್ ಹೋಗಿತ್ತು.

ಇಂದೂ ಸಹ ವೃದ್ಧೆಯನ್ನು ಕರೆದುಕೊಂಡು ಹೋಗುವ ಪ್ರಯತ್ನ ಮಾಡಿಲ್ಲ. ಮತ್ತೊಂದೆಡೆ ಸ್ಥಳೀಯರು ಆಸ್ಪತ್ರೆಗೆ ದಾಖಲಾಗಿ, ಇಲ್ಲದಿದ್ದರೆ ಎಲ್ಲರಿಗೂ ತೊಂದರೆಯಾಗಲಿದೆ ಎಂದು ವೃದ್ಧೆಯ ಮನೆಯವರಿಗೆ ಒತ್ತಡ ತಂದಿದ್ದಾರೆ ಎನ್ನಲಾಗಿದೆ. ಕೊನೆಗೆ ಅನಿವಾರ್ಯವಾಗಿ ಸಂಬಂಧಿಕರು ಬಂದು ವೃದ್ಧೆಯನ್ನು ಆಟೋದಲ್ಲಿ ಕರೆದೊಯ್ದಿದ್ದಾರೆ.

ವೃದ್ಧೆಯನ್ನು ಎಲ್ಲಿಗೆ ಕರೆದೊಯ್ದಿದ್ದಾರೆ ಎಂಬಿತ್ಯಾದಿ ಯಾವುದೇ ಮಾಹಿತಿ ಸಿಕ್ಕಿಲ್ಲ. ವೃದ್ದೆಯನ್ನು ಸಂಬಂಧಿಗಳು ಎಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಅನ್ನುವುದು ಯಕ್ಷಪ್ರಶ್ನೆಯಾಗಿದೆ.

ಈ ಬಗ್ಗೆ ಆರೋಗ್ಯ ಇಲಾಖೆಯೂ ಯಾವುದೇ ಮಾಹಿತಿ ನೀಡುತ್ತಿಲ್ಲ. ಜಿಲ್ಲಾ ಆರೋಗ್ಯಾಧಿಕಾರಿಗಳು ಫೋನ್ ರಿಸೀವ್ ಮಾಡುತ್ತಿಲ್ಲ. ಜಿಲ್ಲಾಧಿಕಾರಿಗಳೂ ಪ್ರತಿಕ್ರಿಯೆ ನೀಡಿಲ್ಲ. ಮತ್ತೊಂದೆಡೆ ವೃದ್ದೆಯ ಸಂಬಂಧಿಗಳ ಪೋನ್ ಕೂಡಾ ಸ್ವಿಚ್ ಆಫ್ ಆಗಿದೆ. ಕಲಬುರ್ಗಿ ನಗರದ ಅತ್ತರ್ ಕಂಪೌಡ್ ನಿವಾಸಿಯಾಗಿದ್ದ ವೃದ್ದೆಗೆ ನಿನ್ನೆ ಕೊರೋನಾ ಸೋಂಕು ದೃಢವಾಗಿತ್ತು. 75ರ ಇಳಿ ವಯಸ್ಸಿನಲ್ಲಿ ವೃದ್ಧೆ ಚಿಕಿತ್ಸೆಗಾಗಿ ಪರದಾಡುವಂತಾಗಿದೆ.

ಇದನ್ನೂ ಓದಿ :  ಶಾಲೆಯಲ್ಲಿ ಎಣ್ಣೆ ಪಾರ್ಟಿ ಮಾಡಿದ ಶಿಕ್ಷಕ ; ಮದ್ಯದ ನಶೆಯಲ್ಲಿ ತೇಲಾಡಿದ ಶಿಕ್ಷಕನನ್ನು‌ ಅಮಾನತು ಮಾಡಿದ ಡಿಡಿಪಿಐ

ಆರೋಗ್ಯ ಇಲಾಖೆ ಸಿಬ್ಬಂದಿ ಮಾನವೀಯತೆ ಮರೆತು ಬೇಜವಾಬ್ದಾರಿಯಿಂದ ವರ್ತಿಸಿದ್ದರ ಪರಿಣಾಮ ಬೇಸತ್ತು, ವೃದ್ಧೆಯನ್ನು ಕರೆದೊಯ್ಯಲಾಗಿದೆ. ಈ ವಯಸ್ಸಿನಲ್ಲಿ ಪಾಸಿಟಿವ್ ಬಂದಿರುವುದರಿಂದ ಸಕಾಲಕ್ಕೆ ಸೂಕ್ತ ಚಿಕಿತ್ಸೆ ದೊರಕಿಸಿಕೊಡಬೇಕಿತ್ತು. ಅಲ್ಲದೆ ಆ ವೃದ್ಧೆಯಿಂದ ಬೇರೆಯವರಿಗೆ ಸೋಂಕು ಹರಡಿರುವುದನ್ನು ತಪ್ಪಿಸಬೇಕಿತ್ತು. ಆರೋಗ್ಯ ಇಲಾಖೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿತ್ತು ಎಂಬ ಮಾತು ಕೇಳಿ ಬಂದಿದೆ.

ಒಟ್ಟಾರೆ ಆರೋಗ್ಯ ಇಲಾಖೆ ಯಡವಟ್ಟಿನಿಂದಾಗಿ ಎಲ್ಲರೂ ತೊಂದರೆ ಅನುಭವಿಸುವಂತಾಗಿದೆ. ವೃದ್ಧೆಗಾಗಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದ್ದು, ಸೋಂಕಿತ ವೃದ್ಧೆಗೆ ಚಿಕಿತ್ಸೆ ಹೇಗೆಂಬ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ.
Published by: G Hareeshkumar
First published: July 8, 2020, 5:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading