news18-kannada Updated:July 7, 2020, 5:23 PM IST
ಸೋಂಕಿತನ ಶವಸಂಸ್ಕಾರ ಮಾಡಿರುವುದು
ಕಾರವಾರ(ಜುಲೈ.07): ಕೊರೋನಾ ಸೋಂಕಿತನ ಶವ ಸಂಸ್ಕಾರದಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ ಎಡವಟ್ಟು ಮಾಡಿದೆ ಎಂಬ ಆರೋಪ ಈಗ ಬಲವಾಗಿ ಕೇಳಿ ಬರುತ್ತಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಯನ್ನ ಆತುರದಲ್ಲಿ ಮಾಡಿರುವುದು ತಾಲೂಕಾಡಳಿತ ಈಗ ಜನರ ಕೆಂಗೆಣ್ಣಿಗೆ ಗುರಿಯಾಗಿದೆ. ಅಲ್ಲದೇ ದಾರಿಯ ಪಕ್ಕದಲ್ಲಿ ಶವ ಸಂಸ್ಕಾರ ಮಾಡಿರುವುದು ಜನರ ಆತಂಕವನ್ನ ಹೆಚ್ಚು ಮಾಡಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಹೆಚ್ಚುತ್ತಿರುವ ಸೋಂಕಿನಿಂದಾಗಿ ಜನತೆ ಕೂಡ ಗಾಬರಿಯಾಗಿದ್ದಾರೆ. ಈ ನಡುವೆ ನಿನ್ನೆ ಶಿರಸಿ ಮೂಲದ 42 ವರ್ಷದ ವ್ಯಕ್ತಿಯೋರ್ವ ಕಾರವಾರದಲ್ಲಿ ಸಾವನ್ನಪ್ಪಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿತ್ತು. ಮೃತ ಸೋಂಕಿತ ಅಂತ್ಯಕ್ರಿಯೆ ಮಾಡುವ ವಿಚಾರದಲ್ಲಿ ಇಲ್ಲಿನ ತಾಲೂಕಾಡಳಿತ ಗೊಂದಲದಲ್ಲಿತ್ತು. ಕಾರವಾರ ನಗರದ ಸರ್ವೋದಯ ನಗರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲು ಮುಂದಾದಾಗ ಸ್ಥಳೀಯರು ತೀವೃ ವಿರೋಧ ವ್ಯಕ್ತಪಡಿಸಿದ್ದರು.
ಅಲ್ಲದೇ ಅಕ್ಕಪಕ್ಕದ ಗ್ರಾಮಗಳ ಜನರು ಕೂಡ ತಮ್ಮ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರಕ್ಕೆ ಶವವನ್ನ ತರುತ್ತಾರೆಂದು ರಾತ್ರಿಯೀಡಿ ಜಾಗರಣೆ ಮಾಡಿದ್ದರು. ಅಂತೂ ಮಧ್ಯರಾತ್ರಿ ಒಂದು ಗಂಟೆ ಬಳಿಕ ಕಾರವಾರ ಸಂಕ್ರುಭಾಗದ ಅರಣ್ಯ ಜಾಗವನ್ನ ಆಯ್ಕೆಮಾಡಿಕೊಂಡ ಅಧಿಕಾರಿಗಳು ಅಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಆದರೆ, ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಕೊರೋನಾ ಸೋಂಕಿತನ ಶವಸಂಸ್ಕಾರ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ದಿನದಿಂದ ದಿನಕ್ಕೆ ಕೋವಿಡ್ ಗಂಭೀರ ಸ್ಥಿತಿಗೆ ಬರುತ್ತಿರುವುದರಿಂದ ಜನತೆ ಆತಂಕದಲ್ಲಿದ್ದಾರೆ. ಆದರೆ, ಸಂಬಂಧಪಟ್ಟ ತಾಲೂಕು ಆಡಳಿತ ಸಾರ್ವಜನಿಕರು ಓಡಾಡುವ ರಸ್ತೆ ಪಕ್ಕದಲ್ಲಿ ಶವಸಂಸ್ಕಾರ ಮಾಡಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ :
ರೋಗಿ ಮಾಡಿದ ಎಡವಟ್ಟು - ಜಯದೇವ ಹೃದ್ರೋಗ ಕೇಂದ್ರಕ್ಕೆ ಆಪತ್ತು - 31 ಸಿಬ್ಬಂದಿ ಕ್ವಾರಂಟೈನ್
ಅಲ್ಲದೇ ಬೆಳಗ್ಗಿನ ವೇಳೆಯೆ ಸ್ಥಳದಲ್ಲಿ ಶ್ವಾನಗಳು ಕೂಡ ಅರೆಬರೆ ಬೆಂದ ಮೃತ ದೇಹದ ಮಾಂಸವನ್ನ ಎಳೆದಾಡಿದ ಬಗ್ಗೆ ಸ್ಥಳೀಯರು ಕಣ್ಣಾರೆ ಕಂಡಿದ್ದಾರೆ, ಆದರೆ, ಸರ್ಕಾರದ ಮಾರ್ಗಸೂಚಿಯ ಪ್ರಕಾರವೇ ಸೋಂಕಿತರ ಅಂತ್ಯ ಸಂಸ್ಕಾರ ಮಾಡಿದ್ದೆವೆ, ಜನತೆ ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಈಗಾಗಲೇ ಕೋವಿಡ್ 19 ನಿಂದಾಗಿ ಭಯಗೊಂಡಿರುವ ಜನತೆ ಮೃತಪಟ್ಟ ಸೋಂಕಿತನ ಸಾವಿನಿಂದಾಗಿ ಗಾಬರಿಗೊಂಡಿದ್ದರು. ಆದರೆ, ಸಾರ್ವಜನಿಕ ಪ್ರದೇಶದಲ್ಲಿ ಈ ರೀತಿಯಾಗಿ ಶವಸಂಸ್ಕಾರ ಮಾಡಿರುವುದಕ್ಕೆ ಇನ್ನಷ್ಟು ಭಯಗೊಳ್ಳುವಂತಾಗಿದೆ.
Published by:
G Hareeshkumar
First published:
July 7, 2020, 5:14 PM IST