ಕೊರೋನಾ ಭೀತಿಯಲ್ಲಿ ಶಾಲಾ-ಕಾಲೇಜು ಬಂದ್ ; ಓಕಳಿಯಲ್ಲಿ ಮಕ್ಕಳಿದ್ದಲ್ಲಿಗೇ ಹೋಗಿ ಪಾಠ ಮಾಡುತ್ತಿರುವ ಶಿಕ್ಷಕರು

ದೇಶದೆಲ್ಲೆಡೆ ಕೊರೋನಾ ಭೀತಿಯಿದೆ. ಕೊರೋನಾ ಕಾರಣದಿಂದಾಗಿ ದೇಶದೆಲ್ಲೆಡೆ ಶಾಲಾ-ಕಾಲೇಜು ಮುಚ್ಚಲ್ಪಟ್ಟಿವೆ. ಆದರೆ, ಈ ಗ್ರಾಮದಲ್ಲಿ ಮಾತ್ರ ತರಗತಿಗಳು ನಡೆಯುತ್ತಿವೆ

news18-kannada
Updated:July 17, 2020, 5:34 PM IST
ಕೊರೋನಾ ಭೀತಿಯಲ್ಲಿ ಶಾಲಾ-ಕಾಲೇಜು ಬಂದ್ ; ಓಕಳಿಯಲ್ಲಿ ಮಕ್ಕಳಿದ್ದಲ್ಲಿಗೇ ಹೋಗಿ ಪಾಠ ಮಾಡುತ್ತಿರುವ ಶಿಕ್ಷಕರು
ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವ ಶಿಕ್ಷಕ
  • Share this:
ಕಲಬುರ್ಗಿ(ಜುಲೈ.17): ದೇಶದೆಲ್ಲೆಡೆ ಕೊರೋನಾ ಭೀತಿಯಿದೆ. ಕೊರೋನಾ ಕಾರಣದಿಂದಾಗಿ ದೇಶದೆಲ್ಲೆಡೆ ಶಾಲಾ-ಕಾಲೇಜು ಮುಚ್ಚಲ್ಪಟ್ಟಿವೆ. ಆದರೆ, ಈ ಗ್ರಾಮದಲ್ಲಿ ಮಾತ್ರ ತರಗತಿಗಳು ನಡೆಯುತ್ತಿವೆ. ಲಾಕ್ ಡೌನ್ ನಡುವೆಯೂ ಕಮಲಾಪುರ ತಾಲೂಕಿನ ಓಕಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತರಗತಿಗಳು ಮುಂದುವರೆದಿವೆ. ಕೊರೋನಾ ಇರುವುದರಿಂದ ಶಾಲೆಯಲ್ಲಿ ಪಾಠ ಮಾಡುವಂತಿಲ್ಲ. ಹೀಗಾಗಿ ಇಲ್ಲಿ ಶಿಕ್ಷಕರು ಹೊಸ ಪ್ಲಾನ್ ಮಾಡಿ ವಿದ್ಯಾರ್ಥಿಗಳಿಗೆ ಬೋಧನೆ ಮುಂದುವರೆಸಿದ್ದಾರೆ. 

ಗ್ರಾಮದ ಸಮುದಾಯ ಭವನ, ದೇವಸ್ಥಾನ, ಮರದ ಕೆಳಗೆ, ಮನೆ ಅಂಗಳ ಹೀಗೆ ಸ್ಥಳಾವಕಾಶ ಎಲ್ಲೆಲ್ಲಿದೆಯೋ ಅಲ್ಲಿ ಮಕ್ಕಳನ್ನು ಕೂಡಿಸಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಕೊರೋನಾ ಸೋಂಕು ವ್ಯಾಪಕಗೊಳ್ಳುತ್ತಿರುವುದರಿಂದಾಗಿ ಶಾಲೆಗಳು ಯಾವಾಗ ಪ್ರಾರಂಭವಾಗುತ್ತವೋ ಎನ್ನುವುದು ಅನಿಶ್ಚಿತವಾಗಿದೆ. ಪಟ್ಟಣದಲ್ಲಿಯೇ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ಮೂಲಕ ಒಂದಷ್ಟು ನಿರಂತರ ಕಲಿಕೆ ಮುಂದುವರಿಸಲಾಗಿದೆ. ಆದರೆ ಹಳ್ಳಿಗಳಲ್ಲಿ ಆನ್ ಲೈನ್ ಪ್ರಶ್ನೆಯೇ ಇಲ್ಲ. ಹೀಗಾಗಿ ಇಲ್ಲಿನ ಶಾಲಾ ಶಿಕ್ಷಕರು ಗ್ರಾಮಸ್ಥರೊಂದಿಗೆ ಸಮಾಲೋಚನೆ ಮಾಡಿ, ಸಾಮಾಜಿಕ ಅಂತರ ಕಾಪಾಡುವ ಮೂಲಕ ಪಾಠ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.

ಸದ್ಯಕ್ಕೆ ಗ್ರಾಮದ ಎಂಟು ಕಡೆ ವಿದ್ಯಾರ್ಥಿಗಳು ಪಾಠ ಕಲಿಯುತ್ತಿದ್ದಾರೆ. ಶಿಕ್ಷಕರ ಕಾರ್ಯಕ್ಕೆ ಗ್ರಾಮದ ಮುಖಂಡ ಸಿ.ಬಿ.ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿಕ್ಷಕರಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಶಿಕ್ಷಣ ಇಲಾಖೆ ಅಪರ ಆಯುಕ್ತ ನಳಿನ್ ಅತುಲ್ ಅವರ ಅಭಿಪ್ರಾಯ ಮನ್ನಿಸಿ ಶಿಕ್ಷಕರು ಹೀಗೆ ಪಾಠ ಮಾಡಲು ಮುಂದಾಗಿದ್ದಾರೆ. ಪಾಠ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ಮೊದಲು ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ವಿಷಯಗಳ ಬೋಧನೆ ಮಾಡಲಾಗುತ್ತದೆ. ಸೋಂಕಿನಿಂದ ದೂರವಿರಲು ಏನೆಲ್ಲಾ ಮುನ್ನೆಚ್ಚರಿಕೆ ಕೈಗೊಳ್ಳಬೇಕೆಂಬ ಮಾಹಿತಿ ನೀಡಲಾಗುತ್ತದೆ. ನಂತರ ಪಾಠ ಬೋಧನೆ ಮಾಡಲಾಗುತ್ತದೆ. ಹೀಗಾಗಿ ಈ ಗ್ರಾಮದ ವಿದ್ಯಾರ್ಥಿಗಳಿಗೆ ಕೊರೋನಾ ಭಯವಿಲ್ಲ. ಶಾಲೆ ಇಲ್ಲದೇ ಇದ್ದುದರಿಂದ ಮೊಬೈಲ್, ಟಿವಿಗಳನ್ನೇ ಲೋಕ ಮಾಡಿಕೊಂಡಿದ್ದ ವಿದ್ಯಾರ್ಥಿಗಳಿಗೆ ನಿತ್ಯ ಪಾಠ ಹೇಳುತ್ತಿರುವುದರಿಂದ ಒಂದಷ್ಟು ಕಲಿಕೆಯೂ ಆಗುತ್ತಿದ್ದು, ಪೋಷಕರ ಆತಂಕ ದೂರ ಮಾಡಿದೆ.

ಓದಿನ ಕೊಂಡಿಯನ್ನು ಕಳಚಬಾರದೆಂದು ಈ ಪ್ರಯತ್ನ ಮಾಡಲಾಗಿದೆ. ಇಂತಹ ಶಿಕ್ಷಕರ ಪ್ರಯತ್ನ ಶ್ಲಾಘನೀಯ ಎಂದು ಶಿಕ್ಷಣ ಇಲಾಖೆ ಅಪರ ಆಯುಕ್ತರ ಕಛೇರಿಯ ಹಿರಿಯ ಸಹಾಯಕ ನಿರ್ದೇಶಕ ಚೆನ್ನಬಸಪ್ಪ ಮುಧೋಳ ಅಭಿನಂದಿಸಿದ್ದಾರೆ.

ಇದನ್ನೂ ಓದಿ : ಪಶ್ಚಿಮಘಟ್ಟ ಕಾಡುಗಳಲ್ಲಿವೆ ರಕ್ತ‌ಹೀರುವ ಅತಿಥಿಗಳು ; ಮಳೆಗಾಲದಲ್ಲಿ ಹೆಚ್ಚಾಗುತ್ತೆ ಜಿಗಣೆಗಳ ಭೀತಿ..!

ಓಕಳಿ ಪ್ರಾಥಮಿಕ ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಿಕ್ಷಕರ ಕಾಳಜಿಯಿಂದಾಗಿ ಗ್ರಾಮದ ವಿವಿಧೆಡೆ ಕುಳಿತು ಪಾಠಗಳನ್ನು ಆಲಿಸುತ್ತಿದ್ದಾರೆ. ಪಾಠ ಕಲಿಯಬೇಕೆಂಬ ಮನಸ್ಸಿದ್ದರೂ ಬೋಧನೆ ಮಾಡುವವರಿಲ್ಲ. ಬಹುತೇಕ ಶಿಕ್ಷಕರು ಈಗಲೂ ಶಾಲೆಗಳಿಗೆ ಹೋಗಿ ಕುಳಿತು ಬರುತ್ತಿದ್ದು, ಅವರ ಸೇವೆ ಕೇವಲ ಹಾಜರಾತಿಗೆ ಸೀಮಿತ ಎನ್ನುವಂತಾಗಿದೆ. ಹೀಗಿರಬೇಕಾದರೆ ಓಕಳಿ ಸರ್ಕಾರಿ ಶಾಲೆಯ ಶಿಕ್ಷಕರು ವೈಯಕ್ತಿಕ ಕಾಳಜಿ ವಹಿಸಿ ಬೋಧನೆ ಮಾಡುತ್ತಿದ್ದಾರೆ. ಅಮೂಲ್ಯ ಸಮಯ ಹೋದರೆ ಮತ್ತೆ ಬರುವುದಿಲ್ಲ ಎಂಬುದನ್ನು ಮಕ್ಕಳಿಗೆ ತೋರಿಸಿಕೊಡುತ್ತಿದ್ದಾರೆ.

ವಿದ್ಯಾರ್ಥಿಗಳ ಬಗ್ಗೆ ಕಾಳಜಿ ತೋರುತ್ತಿರುವ ಶಿಕ್ಷಕರಿಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ. ಓಕಳಿ ಶಿಕ್ಷಕರನ್ನೇ ಅನುಸರಿಸಿ, ಇನ್ನೂ ಕೆಲ ಶಾಲೆಯ ಶಿಕ್ಷಕರು ಕಲಿಕೆ ಪ್ರಾರಂಭಿಸಿದ್ದಾರೆ. ಶಿಕ್ಷಕರಿಗೆ ನಮ್ಮದೂ ಒಂದು ಸಲಾಂ.
Published by: G Hareeshkumar
First published: July 17, 2020, 5:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading