Corona virus: ಪ್ರವಾಸಿಗರೆ ಎಚ್ಚರ; ಕೊಡಗಿನ ಪ್ರವಾಸಿ ತಾಣಗಳ ಭೇಟಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

ಕೇರಳದಿಂದ ಸಿಂಕೋನ, ಕುಟ್ಟ ಇಲ್ಲಿಗೆಲ್ಲಾ ಕೇವಲ ಒಂದು ಕಿಲೋಮೀಟರ್ ಇದ್ದು, ಅಲ್ಲಿನ ಜನರು ಕಾಫಿ ತೋಟಗಳ ಒಳಗಿನಿಂದಲೇ ಕೊಡಗಿಗೆ ಜನರು ಬಂದು ಹೋಗುತ್ತಿದ್ದಾರೆ. ಇದನ್ನು ನಿಯಂತ್ರಿಸುವುದು ಕಷ್ಟಕರವಾಗಿದೆ ಎನ್ನುವುದು ಪಂಚಾಯಿತಿ ಸದಸ್ಯೆ ತೀರ್ಥ ಅವರ ಆತಂಕ.

ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ತಪಾಸಣೆ ನಡೆಸುತ್ತಿರುವ ವೈದ್ಯಕೀಯ ಸಿಬ್ಬಂದಿ

ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ತಪಾಸಣೆ ನಡೆಸುತ್ತಿರುವ ವೈದ್ಯಕೀಯ ಸಿಬ್ಬಂದಿ

  • Share this:
ಕೊಡಗು : ಪ್ರವಾಸಿಗರಿಂದ ಕೊಡಗಿಗೆ ಕೋವಿಡ್ ಸೋಂಕು ಹರಡದಂತೆ ಕೊಡಗು ಜಿಲ್ಲಾಡಳಿತ ಮತ್ತಷ್ಟು ನಿಯಮ ಬಿಗಿಗೊಳಿಸಿದೆ. ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋವಿಡ್ ಸೋಂಕು ಮಿತಿ ಮೀರುತ್ತಿವುದರಿಂದ ಕೇರಳಕ್ಕೆ ಹೊಂದಿಕೊಂಡಂತೆ ಇರುವ ಕರ್ನಾಟಕದ ಗಡಿ ಜಿಲ್ಲೆ ಕೊಡಗಿನ ಎಲ್ಲಾ ಅಂತರ್ ರಾಜ್ಯ ಚೆಕ್‍ಪೋಸ್ಟ್ ಗಳಲ್ಲಿ 72 ಗಂಟೆ ಒಳಗಾಗಿ ಪಡೆದ ಕೋವಿಡ್ ನೆಗೆಟಿವ್ ವರದಿಯನ್ನು ಹೊಂದಿರುವುದನ್ನು ಕಡ್ಡಾಯ ಮಾಡಲಾಗಿದೆ.

ಅಷ್ಟೇ ಅಲ್ಲ ಇದು ಸಾಲದೆಂಬಂತೆ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರಿಗೂ
ಆರ್​ಟಿಪಿಸಿಆರ್ ನೆಗೆಟಿವ್ ವರದಿ ಇದ್ದರೆ ಮಾತ್ರ ಜಿಲ್ಲೆಯ ಒಳಗೆ ಪ್ರವೇಶ ಎಂಬುದನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ. ಆರ್​ಟಿಪಿಸಿಆರ್​ ವರದಿಯನ್ನು ಎಲ್ಲಾ ಪ್ರವಾಸಿ ತಾಣಗಳಲ್ಲಿ ಕಟ್ಟು ನಿಟ್ಟಾಗಿ ಪರಿಶೀಲನೆ ಮಾಡಿಯೇ ಒಳಗೆ ಬಿಡಲಾಗುತ್ತಿದೆ. ಒಂದು ವೇಳೆ ನೆಗೆಟಿವ್ ವರದಿ ಇಲ್ಲದಿದ್ದರೆ ಅಂತಹ ಪ್ರವಾಸಿಗರಿಗೆ ಸ್ಥಳದಲ್ಲಿಯೇ ರ್ಯಾಪಿಡ್​ ಆ್ಯಂಟಿಜನ್ ಟೆಸ್ಟ್ ಮಾಡಲಾಗುತ್ತಿದೆ. ಒಂದು ವೇಳೆ ಸ್ಥಳದಲ್ಲಿ ಕೋವಿಡ್ ದೃಢಪಟ್ಟರೆ ಅಂತಹ ಪ್ರವಾಸಿಗರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಲಾಗಿದೆ. ಕೋವಿಡ್ ನೆಗೆಟಿವ್ ವರದಿ ಇದ್ದರೆ ಮಾತ್ರವೇ ಪ್ರವಾಸಿ ತಾಣಗಳಿಗೆ ಪ್ರವೇಶ ಕೊಡುತ್ತಿರುವುದು ಒಂದು ರೀತಿಯಲ್ಲಿ ಒಳ್ಳೆಯದೇ ಎಂದಿದ್ದಾರೆ ಪ್ರವಾಸಿಗ ರವಿ.

ಇನ್ನು ರೆಸಾರ್ಟ್ ಗಳಲ್ಲೂ ಕೂಡ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಇದರಿಂದ ನಾವು ಉಳಿಯುವ ಸ್ಥಳದಲ್ಲೂ ಮತ್ತು ಪ್ರವಾಸಿ ತಾಣಗಳಲ್ಲೂ ನಿರಾತಂಕವಾಗಿ ಓಡಾಡಬಹುದು ಎಂದು ಪ್ರವಾಸಿಗರಾದ ಲಕ್ಷ್ಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಪಕ್ಕದ ರಾಜ್ಯ ಕೇರಳದಲ್ಲಿ ಕೋವಿಡ್ ಸೋಂಕು ಅಬ್ಬರಿಸುತ್ತಿರುವಾಗಲೇ ಕರ್ನಾಟಕದ ಗಡಿಭಾಗದ ಜಿಲ್ಲೆ ಕೊಡಗಿಗೆ ಕಾರ್ಮಿಕರ ಆತಂಕ ಶುರುವಾಗಿದೆ. ಕೇರಳದಿಂದ ಕೊಡಗಿಗೆ ಪ್ರವೇಶವಾಗ ಬೇಕಾದರೆ 72 ಗಂಟೆಯೊಳಗೆ ಪಡೆದ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಅದನ್ನು ಜಿಲ್ಲೆಯ ಎಲ್ಲಾ ಚೆಕ್‍ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತಿದೆ. ಆದರೆ ಆರೋಗ್ಯ ಇಲಾಖೆ ಸಿಬ್ಬಂದಿಯ ಕಣ್ಣು ತಪ್ಪಿಸಿ ಕಾರ್ಮಿಕರು ಕಳ್ಳದಾರಿಯಲ್ಲಿ ಕೊಡಗಿನ ಒಳಗೆ ಬರುತ್ತಿದ್ದಾರೆ ಎಂದು ಕುಟ್ಟ ಗ್ರಾಮ ಪಂಚಾಯಿತಿಯ ಪಿಡಿಓ ಅನಿಲ್ ಅವರು ಹೇಳುವ ಮಾಹಿತಿ.

ಕೇರಳದಿಂದ ಸಿಂಕೋನ, ಕುಟ್ಟ ಇಲ್ಲಿಗೆಲ್ಲಾ ಕೇವಲ ಒಂದು ಕಿಲೋಮೀಟರ್ ಇದ್ದು, ಅಲ್ಲಿನ ಜನರು ಕಾಫಿ ತೋಟಗಳ ಒಳಗಿನಿಂದಲೇ ಕೊಡಗಿಗೆ ಜನರು ಬಂದು ಹೋಗುತ್ತಿದ್ದಾರೆ. ಇದನ್ನು ನಿಯಂತ್ರಿಸುವುದು ಕಷ್ಟಕರವಾಗಿದೆ ಎನ್ನುವುದು ಪಂಚಾಯಿತಿ ಸದಸ್ಯೆ ತೀರ್ಥ ಅವರ ಆತಂಕ.

ಇದನ್ನೂ ಓದಿ: Kpcc Working President: ಮಾದಿಗರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡುವಂತೆ ಒತ್ತಾಯ

ಹೀಗಾಗಿ ಕೊಡಗಿನ ಗಡಿ ಭಾಗವಾದ ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಕೋನ ಒಂದೇ ಏರಿಯಾದಲ್ಲಿ 15 ಪ್ರಕರಣಗಳು ಪತ್ತೆಯಾಗಿವೆ. ಸದ್ಯ ಆ ಪ್ರದೇಶವನ್ನು ಅತಿ ಸೂಕ್ಷ್ಮ  ಪ್ರದೇಶ ಎಂದು ಲಾಕ್​ ಮಾಡಲಾಗಿದೆ. ಜೊತೆಗೆ ಟಾಸ್ಕ್ ಫೋರ್ಸ್ ಸಮಿತಿಗಳನ್ನು ಮಾಡಿ ಹಾಗೆ ಬರುವವರನ್ನು ಪತ್ತೆಹಚ್ಚಲು ನಿರ್ಧರಿಸಲಾಗಿದೆ. ಒಟ್ಟಿನಲ್ಲಿ ಕೇರಳ ರಾಜ್ಯದ ಕಾರ್ಮಿಕರು ಮತ್ತು ಪ್ರವಾಸಿಗರಿಂದಾಗಿ ಕೊಡಗಿಗೆ ಆತಂಕ ಬಂದೊದಗಿರುವ ಕಾರಣ ಕೊಡಗಿನಲ್ಲಿ ಮತ್ತಷ್ಟು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಜೊತೆ ಚರ್ಚಿಸಿ ಜಿಲ್ಲೆಯನ್ನೇ ಲಾಕ್​ ಮಾಡಬಹುದು ಎಂದು ಹೇಳಲಾಗುತ್ತಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: