ಪ್ರವಾಸೋದ್ಯಮದ ಮೇಲೆ ಬರೆ ಎಳೆದ ಕೊರೋನಾ; ನಲುಗಿ ಹೋದ ಬೀದಿ ವ್ಯಾಪಾರಿಗಳು

ಕೊರೋನಾ ಆತಂಕದಿಂದ ಒಬ್ಬರೂ ಪ್ರವಾಸಿಗರು ಕೊಡಗಿನತ್ತ ಸುಳಿಯುತ್ತಿಲ್ಲ. ಹೀಗಾಗಿ ಮಸಾಲ ಮತ್ತು ಚಾಕೊಲೇಟ್ ಅಂಗಡಿಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ

news18-kannada
Updated:July 4, 2020, 7:37 AM IST
ಪ್ರವಾಸೋದ್ಯಮದ ಮೇಲೆ ಬರೆ ಎಳೆದ ಕೊರೋನಾ; ನಲುಗಿ ಹೋದ ಬೀದಿ ವ್ಯಾಪಾರಿಗಳು
ಬೀದಿ ಬದಿ ಹಣ್ಣು ಮಾರುತ್ತಿರುವ ವ್ಯಾಪಾರಿ
  • Share this:
ಕೊಡಗು(ಜು.04): ಕೊರೋನಾ ಮಹಾಮಾರಿ ಜನರ ಜೀವವಷ್ಟೇ ಅಲ್ಲ, ಇಡೀ ಬದುಕನ್ನೇ ಕಿತ್ತುಕೊಳ್ಳುತ್ತಿದೆ. ಒಂದೆಡೆ ಕೊರೋನಾಕ್ಕೆ ತುತ್ತಾಗಿರುವವರು ಚಿಕಿತ್ಸೆಗೆ ಪರದಾಡುತ್ತಿದ್ದರೆ, ಮತ್ತೊಂದೆಡೆ ಬಡವರ ಬದುಕಿನ ಮೇಲೆ ಕೊರೋನಾ ಬರೆ ಎಳೆದಿದೆ. ಹೀಗಾಗಿ ಬೀದಿ ಬದಿಗಳಲ್ಲಿ ವ್ಯಾಪಾರ ಮಾಡುತ್ತಿದ್ದ ಜನರ ಬದುಕು ಬೀದಿಗೆ ಬಿದ್ದಿದೆ.

ಭೂಲೋಕದ ಸ್ವರ್ಗ ಎನ್ನುವಂತಿದ್ದ ಕೊಡಗಿನ ಆರ್ಥಿಕತೆ ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿದ್ದ ಜಿಲ್ಲೆ. ಇದನ್ನೇ ನಂಬಿ ನೂರಾರು ಕುಟುಂಬಗಳು ಬೀದಿ ಬದಿಯಲ್ಲಿ ಗೊಂಬೆಗಳನ್ನು ಆಟಿಕೆಗಳನ್ನೋ ಇಲ್ಲ ಕೊಡಗಿನ ಪ್ರಸಿದ್ಧ ಹೋಂ ಮೇಡ್ ಚಾಕೊಲೇಟ್ ಗಳನ್ನು ಅಥವಾ ಮಸಾಲೆ ಪದಾರ್ಥಗಳನ್ನು ಮಾರಿಕೊಂಡು ಬದುಕು ಕಂಡುಕೊಂಡಿದ್ದವು. ಕೊರೋನಾ ಬಂದಿದ್ದೇ ತಡ ಇಡೀ ಪ್ರವಾಸೋದ್ಯಮವೇ ಸಂಪೂರ್ಣ ಬಂದ್ ಆಗಿದೆ.

ಪ್ರವಾಸಿ ತಾಣಗಳ ಮುಂದೆ, ತಳ್ಳುಗಾಡಿಯಲ್ಲಿ ಚಿಕ್ಕಪುಟ್ಟ ವ್ಯಾಪಾರ ಮಾಡಿ ಜೀವನ ಕಂಡುಕೊಂಡಿದ್ದವು. ಆದರೀಗ ಅವೆಲ್ಲವೂ ಗುಜರಿಗೆ ಹಾಕಿದ ವಸ್ತುಗಳಂತೆ, ಯಾರು ಮಾತನಾಡಿಸದೆ ಅನಾಥವಾಗಿ ಬಿದ್ದಿವೆ. ಗೊಂಬೆಗಳನ್ನು, ಚಾಕೋಲೇಟ್ ಗಳನ್ನು ಮಾರುತ್ತಿದ್ದವರು, ತರಕಾರಿ ಮಾರಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

ಕೊಡಗಿನ ಪ್ರವಾಸಿ ತಾಣಗಳನ್ನು ನೋಡಿ ಎಂಜಾಯ್ ಮಾಡಲು ಬರುತ್ತಿದ್ದ ಸಾವಿರಾರು ಪ್ರವಾಸಿಗರು ಇಲ್ಲಿನ ಮಸಾಲೆ ಪದಾರ್ಥಗಳನ್ನು ಕೊಳ್ಳುತ್ತಿದ್ದರು. ಹೀಗಾಗಿಯೇ ಸಾವಿರಾರು ಮಸಾಲ ಅಂಗಡಿಗಳ ಮೂಲಕ ಅದರದ್ದೇ ದೊಡ್ಡ ವ್ಯಾಪಾರ, ವಹಿವಾಟು ನಡೆಯುತ್ತಿತ್ತು. ಆದರೆ, ಈಗ ಪ್ರವಾಸಿ ತಾಣಗಳೇ ಬಂದ್ ಆಗಿದ್ದು, ಕೊಡಗಿನ ಇಡೀ ಆರ್ಥಿಕತೆ ಸ್ಥಬ್ಧವಾಗಿದೆ.

ಇದನ್ನೂ ಓದಿ : ಕೋವಿಡ್ ಉಪಕರಣ ಖರೀದಿಯಲ್ಲಿ ಅಕ್ರಮ ನಡೆದಿಲ್ಲ ; ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್

ಇನ್ನು ಕೊರೋನಾ ಆತಂಕದಿಂದ ಒಬ್ಬರೂ ಪ್ರವಾಸಿಗರು ಕೊಡಗಿನತ್ತ ಸುಳಿಯುತ್ತಿಲ್ಲ. ಹೀಗಾಗಿ ಮಸಾಲ ಮತ್ತು ಚಾಕೊಲೇಟ್ ಅಂಗಡಿಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ. ಇದನ್ನೇ ನಂಬಿದ್ದ ವ್ಯಾಪಾಸ್ಥರು ಬೇರೆ ದಾರಿ ಇಲ್ಲದೆ ಅದೇ ಮಸಾಲ ಅಂಗಡಿಗಳ ಮುಂದೆ ಹಣ್ಣು ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದನ್ನಾದರೂ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವ ಎಂದರೆ ಹಣ್ಣುಗಳನ್ನು ಕೊಳ್ಳುವವರಿಲ್ಲ. ಇನ್ನು ಮುಂದೆ ಬದುಕನ್ನು ಹೇಗೆ ನಡೆಸಬೇಕು ಎನ್ನುವ ಆತಂಕವಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಎಲ್ಲೋ ಹುಟ್ಟಿ, ದೇಶಕ್ಕೆ ಎಂಟ್ರಿಕೊಟ್ಟು ಕೊಡಗಿನ ಆರ್ಥಿಕತೆ ಮೇಲೆ ಬರೆ ಎಳೆದಿರುವ ಕೊರೋನಾ ವೈರಸ್, ಇಲ್ಲಿನ ಜನಜೀವನದ ಮೇಲೂ ಆಘಾತ ನೀಡಿದೆ.
Published by: G Hareeshkumar
First published: July 4, 2020, 7:37 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading