ಗದಗ(ಜೂ.06): ಎಲ್ಲೆಡೆ ಕೊರೋನಾ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಸಹ ಕೆಲವು ಊಹಾಪೋಹಗಳು, ವದಂತಿ, ಆತಂಕಗಳಿಂದ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಂದಾಗುತ್ತಿಲ್ಲ. ಕೆಲವೆಡೆ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲಿ ಎಂಬ ಕಾರಣಕ್ಕೆ ಆಫರ್ಗಳನ್ನು ನೀಡುತ್ತಿದ್ದಾರೆ. ಇನ್ನು ಅಮೆರಿಕಾದಲ್ಲಿ ವ್ಯಾಕ್ಸಿನ್ ಹಾಕಿಸಿಕೊಂಡರೆ ಉಚಿತವಾಗಿ ಬಿಯರ್ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ. ಆದರೂ ಸಹ ಜನರು ಲಸಿಕೆ ಹಾಕಿಸಿಕೊಳ್ಳಲು ಮುಂದಾದಂತೆ ಕಾಣುತ್ತಿಲ್ಲ. ಇನ್ನೂ ಕೆಲವೆಡೆ ಹಣ ನೀಡುವುದಾಗಿ, ಲಾಟರಿ ಕೊಡುವುದಾಗಿ, ಬಂಪರ್ ಆಫರ್ ಇದೆ ಎಂದು ಹೇಳುತ್ತಿದ್ದಾರೆ. ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನರನ್ನು ಎಷ್ಟೇ ಸೆಳೆದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಇದು ಒಂದು ರೀತಿಯ ಪ್ರಯತ್ನವಾದರೆ, ಮತ್ತೊಂದೆಡೆ ಅಂದರೆ ಕರ್ನಾಟಕದ ಈ ಗ್ರಾಮದಲ್ಲಿ ಲಸಿಕೆ ಹಾಕಿಸಿಕೊಂಡಿಲ್ಲ ಎಂದರೆ ರೇಷನ್ ನೀಡುವುದಿಲ್ಲ ಎಂಬ ಆದೇಶ ಹೊರಡಿಸಲಾಗಿದೆ. ಗ್ರಾ.ಪಂ.ನಿರ್ಧಾರಕ್ಕೆ ಜನರು ಬೇಸ್ತುಬಿದ್ದು, ಲಸಿಕೆ ಹಾಕಿಸಿಕೊಳ್ಳಲು ಮುಗಿಬಿದಿದ್ದಾರೆ.
ಹೌದು, ಇದೇನಪ್ಪಾ ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಳ್ಳೋಕೆ ಆಫರ್ಗಳ ಸುರಿಮಳೆ ಸುರಿಸಿದರೆ, ಇವರು ರೇಷನ್ ಕೊಡಲ್ಲ ಅಂತಿದ್ದಾರೆ ಅನ್ಕೊತಿದಿರಾ..! ಇದು ಸಹ ಜನರ ಒಳಿತಿಗಾಗಿಯೇ. ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆಯ ಪೆಟ್ಟು ಎಂಬ ಗಾದೆ ಮಾತೇ ಇಲ್ಲವೇ. ಮೊದಲು ಸಮಾಧಾನದಿಂದ, ನಯವಾಗಿ ಹೇಳಿದಾಗ ಜನರು ಕೇಳಲಿಲ್ಲವೆಂದರೆ ದೊಣ್ಣೆಯ ಪೆಟ್ಟನ್ನೇ ನೀಡಬೇಕಾಗುತ್ತೆ. ಹೀಗೆ ಹೇಳಿದಾಗ ಜನರು ಭಯದಿಂದಾದರೂ ವ್ಯಾಕ್ಸಿನ್ ಹಾಕಿಸಿಕೊಳ್ಳಬಹುದೆಂಬ ಒಂದು ಸಣ್ಣ ವಿಶ್ವಾಸ ಅಷ್ಟೆ.
ಇದನ್ನೂ ಓದಿ:Black Fungus in Karnataka: ರಾಜ್ಯದಲ್ಲಿ ಈವರೆಗೆ 1,784 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆ; 111 ಮಂದಿ ಸಾವು
ಈ ನಿರ್ಧಾರ ತೆಗೆದುಕೊಂಡಿರುವುದು ಗದಗ ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಮ ಪಂಚಾಯಿತಿ. ಹೌದು, ಇವರ ನಿರ್ಧಾರಕ್ಕೆ ಶಹಬ್ಬಾಸ್ ಹೇಳಲೇಬೇಕಿದೆ. ಇಷ್ಟು ದಿನ ಜನರಿಗೆ ಒತ್ತಾಯ ಮಾಡಿ, ಬಗೆ-ಬಗೆಯ ಆಸೆಗಳನ್ನು ತೋರಿಸಿ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಒತ್ತಡ ಹೇರಲಾಗುತ್ತಿತ್ತು. ಆದರೆ ಈ ಗ್ರಾಮ ಪಂಚಾಯಿತಿಯವರು ಒಂದು ಒಂದು ಸರಳ ಉಪಾಯ ಮಾಡಿದ್ದಾರೆ. ಅಫರ್ಗಳನ್ನು ಕೊಟ್ಟರೆ ಜನರು ಮುಂದೆ ಬರುವುದಿಲ್ಲ ಎಂದು ಗೊತ್ತಾಗಿ , ರೇಷನ್ ಕೊಡುವುದನ್ನೇ ನಿಲ್ಲಿಸುತ್ತೇವೆ ಎಂದಿದ್ದಾರೆ.
ಹೀಗಾಗಿ ಜನ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲವೆಂದರೆ ನಮಗೆ ರೇಷನ್ ಸಿಗುವುದಿಲ್ಲ, ಮುಂದೆ ಊಟಕ್ಕೆ ಗತಿಯೇನು ಎಂಬ ಭಯದಿಂದ ಈಗ ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಕೊತಬಾಳ ಗ್ರಾಮ ಪಂಚಾಯಿತಿ ನಿರ್ಧಾರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಜನರ ಒಳಿತಿಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಯಾರು ವ್ಯಾಕ್ಸಿನ್ ಹಾಕಿಸಿಕೊಳ್ಳುವದಿಲ್ಲವೋ ಅಂತಹ ಕುಟುಂಬಗಳಿಗೆ ಪಡಿತರ ಇಲ್ಲ ಎಂಬ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ:Karnataka Weather Today: ಕರ್ನಾಟಕದಲ್ಲಿ ಬಿರುಸುಗೊಂಡ ಮುಂಗಾರು; ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆ
ಕೊರೋನಾ ಹಿನ್ನೆಲೆ ನಡೆದ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಈ ಕುರಿತು ಎಲ್ಲಾ ಸದಸ್ಯರು ಸರ್ವಾನುಮತದಿಂದ ನಿರ್ಣಯ ಕೈಗೊಂಡಿದ್ದಾರೆ. ವ್ಯಾಕ್ಸಿನೇಶನ್ ಹಾಕಿಸಿಕೊಂಡವರಿಗೆ ಆರೋಗ್ಯ ಇಲಾಖೆಯಿಂದ ಪತ್ರವೊಂದನ್ನ ನೀಡಲಾಗುತ್ತದೆ ಪಡಿತರ ಚೀಟಿದಾರರು ತಮ್ಮ ಪಡಿತರ ಕಾರ್ಡ್ನೊಂದಿಗೆ ಆರೋಗ್ಯ ಇಲಾಖೆ ಪತ್ರ ತರಬೇಕು. ವ್ಯಾಕ್ಸಿನ್ ಹಾಕಿಸಿಕೊಂಡ ಬಗ್ಗೆ ಪತ್ರ ನೀಡಿದರೆ ಮಾತ್ರ ಅಂತವರಿಗೆ ರೇಷನ್ ಹಂಚಿಕೆ ಮಾಡಲಾಗುತ್ತದೆ.
ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಈ ಕಟ್ಟುನಿಟ್ಟಿನ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಧಾರ ಜನರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎನ್ನುವ ಹಿನ್ನೆಲೆಯಲ್ಲಿ ತೆಗೆದುಕೊಳ್ಳಲಾಗಿದೆ. ಇನ್ನೊಂದು ಗಮನಿಸಬೇಕಾದ ವಿಚಾರವೆಂದರೆ, ಈ ರೀತಿ ನಿರ್ಧಾರ ಮಾಡಿದ ದಿನದಂದೇ ನೂರಕ್ಕೂ ಹೆಚ್ಚು ಗ್ರಾಮಸ್ಥರು ವ್ಯಾಕ್ಸಿನ್ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ