Corona Spread by Students: ಇಬ್ಬರು ಕಾಲೇಜು ವಿದ್ಯಾರ್ಥಿಗಳಿಂದ ಗ್ರಾಮದ 51 ಜನರಿಗೆ ಕೊರೊನಾ!

ವಿದ್ಯಾರ್ಥಿಗಳಿಗೆ ಮೊದಲು ಪಾಸಿಟಿವ್ ಬಂದಿದ್ದು ದೃಢಪಟ್ಟಿದ್ದರಿಂದ ಅನುಮಾನಗೊಂಡು ಅಂಜನಗೇರಿಯ 300 ಕ್ಕೂ ಹೆಚ್ಚು ಜನರಿಗೂ ಕೋವಿಡ್ ತಪಾಸಣೆ ಮಾಡಿದ್ದಾರೆ. ಈ ವೇಳೆ 51 ಜನರಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಗ್ರಾಮವನ್ನೇ ಸೀಲ್ ಡೌನ್ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಡಗು : ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಕೇಸುಗಳ ಸಂಖ್ಯೆ ಕೊಂಚ ಮಟ್ಟಿಗೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿತ್ತು. ಆದರೆ ಇದರ ನಡುವೆ ಇಲ್ಲೊಂದು ಗ್ರಾಮದಲ್ಲಿ 51 ಜನರಿಗೆ ಕೋವಿಡ್ ಸೋಂಕು ವಕ್ಕರಿಸಿದೆ. ಆ ಮೂಲಕ ಇಡೀ ಗ್ರಾಮ ಸೀಲ್ ಡೌನ್ ಆಗಿದೆ. ಸೋಮವಾರಪೇಟೆ ತಾಲೂಕಿನ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಜನಗೇರಿಯಲ್ಲಿ 25 ಕ್ಕೂ ಹೆಚ್ಚು ಕುಟುಂಬಗಳ 51 ಜನರಿಗೆ ಕೋವಿಡ್ ಸೋಂಕು ವಕ್ಕರಿಸಿದೆ. ಆ ಮೂಲಕ ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಸ್ಫೋಟಗೊಳ್ಳಲು ಕಾರಣವಾಗಿದೆ.

ಮೊದಲು ಇಬ್ಬರು ವಿದ್ಯಾರ್ಥಿಗಳಲ್ಲಿ ಸೋಂಕು

ಅಷ್ಟಕ್ಕೂ ಕಾಫಿತೋಟ ಬಿಟ್ಟು ಎಲ್ಲೂ ಹೊರ ಹೋಗದೆ, ಎಸ್ಟೇಟ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಜನರಿಗೆ ಸೋಂಕು ಹರಡಿರುವುದೇ ಅಚ್ಚರಿಯ ವಿಷಯ. ಆದರೆ ಜನರಿಗೆ ಕೋವಿಡ್ ಸೋಂಕು ತಗಲುವುದಕ್ಕೆ ಇಬ್ಬರು ವಿದ್ಯಾರ್ಥಿಗಳು ಕಾರಣವಾಗಿದ್ದಾರೆ ಎನ್ನೋ ವಿಷಯ ಬೆಳಕಿಗೆ ಬಂದಿದೆ. ಬೆಟ್ಟಗೇರಿ ಕಾಫಿ ಎಸ್ಟೇಟ್ ನ ಬಿಜನಮೊಟ್ಟೆ ಬ್ರಾಂಚಿನ ಎಸ್ಟೇಟ್ ನಲ್ಲಿರುವ ಇಬ್ಬರು ವಿದ್ಯಾರ್ಥಿಗಳಿಗೆ ಮೊದಲು ಸೋಂಕು ಹರಡಿತ್ತು. ಮಡಿಕೇರಿಯ ಕಾಲೇಜಿಗೆ ಹೋಗುತ್ತಿದ್ದ ಈ ವಿದ್ಯಾರ್ಥಿಗಳಿಗೆ ಮೊದಲು ಸೋಂಕು ಹರಡಿತ್ತು. ಹೀಗಾಗಿ ಬಿಜನಮೊಟ್ಟೆ ಎಸ್ಟೇಟ್ ಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ 15 ಮಂದಿ ಕಾರ್ಮಿಕರಿಗೆ ಮೊದಲು ಸೋಂಕು ಹರಡಿದೆ ಎಂದು ಎಸ್ಟೇಟ್ ನ ಮ್ಯಾನೇಜರ್ ಚಂದ್ರಯ್ಯ ಹೇಳಿದ್ದಾರೆ.

ಅಂತ್ಯ ಸಂಸ್ಕಾರಕ್ಕೆ ಭಾಗವಹಿಸಿದ್ದ 36 ಜನರಿಗೆ ಸೋಂಕು

ಆದರೆ ಇವರೆಲ್ಲರಿಗೂ ಸೋಂಕಿನ ಲಕ್ಷಣಗಳಿದ್ದರೂ ತೀವ್ರ ಮಳೆ ಇರುವುದರಿಂದ ಶೀತ ಜ್ವರ ಬಂದಿರಬಹುದೆಂದು ಅಷ್ಟು ಕಾರ್ಮಿಕರು ಅದನ್ನು ಕಡೆಗಣಿಸಿದ್ದಾರೆ. ಜೊತೆಗೆ ಇತ್ತೀಚೆಗೆ ಗ್ರಾಮದಲ್ಲಿ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದ ವೃದ್ದರೊಬ್ಬರ ಅಂತ್ಯ ಸಂಸ್ಕಾರದಲ್ಲಿ  15 ಜನ ಸೋಂಕಿತರು ಭಾಗವಹಿಸಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರಕ್ಕೆ ಭಾಗವಹಿಸಿದ್ದವರಲ್ಲಿ 36 ಜನರಿಗೆ ಸೋಂಕು ವಕ್ಕಕರಿಸಿಬಿಟ್ಟಿದೆ ಎಂದು ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಅವರು ಹೇಳಿದ್ದಾರೆ.

ಅಂಜನಗೇರಿ ಗ್ರಾಮ ಸೀಲ್​​ಡೌನ್​

ಗ್ರಾಮದ ಒಟ್ಟು 51 ಜನರಿಗೆ ಸೋಂಕು ವ್ಯಾಪಿಸಿದೆ. ಆದರೆ ವಿದ್ಯಾರ್ಥಿಗಳಿಗೆ ಮೊದಲು ಪಾಸಿಟಿವ್ ಬಂದಿದ್ದು ದೃಢಪಟ್ಟಿದ್ದರಿಂದ ಅನುಮಾನಗೊಂಡು ಅಂಜನಗೇರಿಯ 300 ಕ್ಕೂ ಹೆಚ್ಚು ಜನರಿಗೂ ಕೋವಿಡ್ ತಪಾಸಣೆ ಮಾಡಿದ್ದಾರೆ. ಈ ವೇಳೆ 51 ಜನರಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಗ್ರಾಮವನ್ನೇ ಸೀಲ್ ಡೌನ್ ಮಾಡಲಾಗಿದೆ. ಆರೋಗ್ಯದಲ್ಲಿ ಏರುಪೇರಿದ್ದ ಎಲ್ಲಾ ಸೋಂಕಿತರನ್ನು ಕುಶಾಲನಗರ ಮತ್ತು ಆಲೂರು ಸಿದ್ದಾಪುರಗಳಲ್ಲಿ ಇರುವ ಕೋವಿಡ್  ಕೇರ್ ಕೇಂದ್ರಗಳಿಗೆ ಕಳುಹಿಸಲಾಗಿದೆ.

ಇದನ್ನೂ ಓದಿ: Vaccine Vials Chandelier: ಲಸಿಕೆಯ ಖಾಲಿ ಬಾಟಲಿಗಳಿಂದ ವಿಶಿಷ್ಟ ದೀಪಾಂಲಕಾರ ಸೃಷ್ಟಿಸಿದ ನರ್ಸ್.. ನೆಟ್ಟಿಗರಿಂದ ಪ್ರಶಂಸೆ

ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ 

ಅಷ್ಟು ಜನರಿಗೆ ಕೋವಿಡ್ ಸೋಂಕು ಪತ್ತೆಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಗ್ರಾಮದ ಸೋಂಕಿತರೆಲ್ಲರೂ  ಆರೋಗ್ಯವಾಗಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು ಸೋಂಕಿತರ ಆರೋಗ್ಯದ ಬಗ್ಗೆ ನಿಗಾವಹಿಸಿದ್ದಾರೆ. ಒಟ್ಟಿನಲ್ಲಿ ವಿದ್ಯಾರ್ಥಿಗಳು ಮಾತ್ರ ಅಂಜನಗೇರಿಯಲ್ಲಿ ಸೋಂಕು ಹರಡುವ ಸ್ಪೈಡರ್ ಮೆನ್ ಗಳಾಗಿದ್ದಾರೆ ಎನ್ನೋದು ಸತ್ಯ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: