HOME » NEWS » District » CORONA POSITIVE CURING PATIENTS INCREASING IN COVID HOTSPOT AREAS 66 PEASANT CORONA POSITIVE PATIENTS RECOVERED HK

ಕೊರೋನಾ ಹಾಟ್ ಸ್ಪಾಟ್ ನಲ್ಲಿ ಸೋಂಕಿತರ ತೀವ್ರಗತಿ ಚೇತರಿಕೆ ; ಶೇ.66 ರಷ್ಟು ರೋಗಿಗಳು ಗುಣಮುಖ

ಜಿಲ್ಲೆಯಲ್ಲಿ ಗುಣಮುಖರಾದವರ ಪ್ರಮಾಣ ಶೇ.66 ರಷ್ಟಿದೆ. ಪ್ರಸ್ತುತ 412 ರೋಗಿಗಳು ಸಕ್ರಿಯರಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಪ್ರಮಾಣ ಶೇ.33 ಮಾತ್ರವಿದೆ.

news18-kannada
Updated:June 25, 2020, 3:09 PM IST
ಕೊರೋನಾ ಹಾಟ್ ಸ್ಪಾಟ್ ನಲ್ಲಿ ಸೋಂಕಿತರ ತೀವ್ರಗತಿ ಚೇತರಿಕೆ ; ಶೇ.66 ರಷ್ಟು ರೋಗಿಗಳು ಗುಣಮುಖ
ಸಾಂದರ್ಭಿಕ ಚಿತ್ರ
  • Share this:
ಕಲಬುರ್ಗಿ(ಜೂ.25): ದೇಶದಲ್ಲಿ ಮೊದಲ ಕೊರೋನಾ ಸಾವಿಗೆ ಸಾಕ್ಷಿಯಾಗಿದ್ದ ಕಲಬುರ್ಗಿ ಜಿಲ್ಲೆಯಲ್ಲಿ ರೋಗಿಗಳ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1254ಕ್ಕೆ ಏರಿಕೆಯಾಗಿದೆ. ಕೇವಲ ಸೋಂಕಿತರ ಸಂಖ್ಯೆ ಏರಿಕೆಯಿಂದಲೇ ಸುದ್ದಿಯಾಗುತ್ತಿದ್ದ ಕಲಬುರ್ಗಿ ಜಿಲ್ಲೆಯಲ್ಲಿ ಇದೀಗ ಕೊರೋನಾ ಪೀಡಿತರು ತೀವ್ರಗತಿಯಲ್ಲಿ ಚೇತರಿಕೆ ಕಾಣುತ್ತಿರುವುದು ಕಂಡುಬಂದಿದೆ.

ಸೋಂಕಿತರ ಪೈಕಿ ಶೇ.66ರಷ್ಟು ಜನ ಗುಣಮುಖರಾಗಿ ಮನೆಗೆ ಮರಳಿರುವುದು ವಿಶೇಷ. ಕಲಬುರ್ಗಿ ಜಿಲ್ಲೆಯಲ್ಲಿ ಆರಂಭದಿಂದಲೂ ಕೊರೋನಾ ಪೀಡಿತರ ಸಂಖ್ಯೆ ಏರುಗತಿಯಲ್ಲಿಯೇ ಇದೆ. ವಿದೇಶದಿಂದ ವಾಪಸ್ಸಾದವರಿಂದ ಕಾಣಿಸಿಕೊಂಡ ಸೋಂಕು, ನಂತರದಲ್ಲಿ ತಬ್ಲಿಘಿ ಧಾರ್ಮಿಕ ಸಭೆಯಿಂದ ವಾಪಸ್ಸಾದವರಿಂದ ಹೆಚ್ಚಳವಾಯಿತು. ಆದರೆ ಮಹಾರಾಷ್ಟ್ರದಿಂದ ವಲಸಿಗರು ವಾಪಸ್ಸಾದ ನಂತರ ಸೋಂಕಿತರ ಸಂಖ್ಯೆಯಲ್ಲಿ ಏಕಾಏಕಿ ಏರಿಕೆಯಾಗಿದೆ. ಇದುವರೆಗೆ ಜಿಲ್ಲೆಯಲ್ಲಿ 1254 ಜನರಿಗೆ ಸೋಂಕಿರೋದು ದೃಢಪಟ್ಟಿದೆ. ಈ ಪೈಕಿ 829 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಜಿಲ್ಲೆಯಲ್ಲಿ ಗುಣಮುಖರಾದವರ ಪ್ರಮಾಣ ಶೇ.66 ರಷ್ಟಿದೆ. ಪ್ರಸ್ತುತ 412 ರೋಗಿಗಳು ಸಕ್ರಿಯರಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಪ್ರಮಾಣ ಶೇ.33 ಮಾತ್ರವಿದೆ. ಉಳಿದಂತೆ ಕೋವಿಡ್-19 ಸೋಂಕಿಗೆ ಗುರಿಯಾದವರ ಪೈಕಿ 13 ಜನ ನಿಧನ ಹೊಂದಿದ್ದು, ಮರಣ ಪ್ರಮಾಣ ಶೇ.1 ರಷ್ಟು ಮಾತ್ರವಿದೆ. ಸೋಂಕಿನಿಂದ ಸಾವನ್ನಪ್ಪಿದ 13 ಜನರಲ್ಲಿ 60 ಮತ್ತು ಮೇಲ್ಪಟ್ಟ ಹಾಗೂ 55 ಮತ್ತು ಮೇಲ್ಪಟ್ಟ ವಯಸ್ಸಿನ ತಲಾ 5 ಜನರಿದ್ದಾರೆ. ಮರಣ ಹೊಂದಿದ 13 ಜನರ ಪೈಕಿ ಬಹುತೇಕರು ಮಾರಣಾಂತಿಕ, ದೀರ್ಘಕಾಲದ ಮತ್ತು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.

ಕೊರೋನಾ ಪೀಡಿತ 1254 ಜನರ ಹಿನ್ನೆಲೆ ನೋಡಿದಾಗ 1033 ಸೋಂಕಿತರು (ಶೇ.82) ಮಹಾರಾಷ್ಟ್ರ ಪ್ರವಾಸ ಹಿನ್ನೆಲೆ ಹೊಂದಿದ್ದಾರೆ. 160 ಸೋಂಕಿತರು (ಶೇ.12.75) ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರಾಗಿದ್ದಾರೆ. 20 ಸೋಂಕಿತರು (ಶೇ.1.59) ಮಹಾರಾಷ್ಟ್ರ ಹೊರತುಪಡಿಸಿ ಇತರೆ ರಾಜ್ಯ ಪ್ರವಾಸ ಹಿನ್ನೆಲೆ ಹೊಂದಿದವರಾಗಿದ್ದಾರೆ. 17 ಸೋಂಕಿತರು (ಶೇ.1.37) ಐ.ಎಲ್.ಐ ಹಿನ್ನೆಲೆ ಹೊಂದಿದ್ದರೆ,  17 ಸೋಂಕಿತರು (ಶೇ.1.35) ತೀವ್ರ ಉಸಿರಾಟ ತೊಂದರೆ ಹಿನ್ನೆಲೆ ಹೊಂದಿದ್ದಾರೆ. 7 ಸೋಂಕಿತರು (ಶೇ.0.56) ಹೊರ ದೇಶ ಪ್ರವಾಸ ಮುಗಿಸಿ ವಾಪಸ್ಸಾದವರಾಗಿದ್ದಾರೆ. ಐ.ಸಿ.ಯೂ.ನಲ್ಲಿ 9 ಜನ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಜಿಲ್ಲೆಯಲ್ಲಿ ವೆಂಟಿಲೇಟರ್ ಮೇಲೆ ಯಾರೂ ಇಲ್ಲ: ಜಿಲ್ಲೆಯಲ್ಲಿ ಸಕ್ರಿಯ ಕೊರೋನಾ ಪೀಡಿತ 412 ರೋಗಿಗಳ ಪೈಕಿ ಇಂದಿನ ಸ್ಥಿತಿಯಲ್ಲಿ ಕೇವಲ 9 ಜನ ಮಾತ್ರ ಐ.ಸಿ.ಯೂ.ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಿಗೆ ಸೋಂಕಿನ ತೀವ್ರತೆ ಇಲ್ಲದಿರುವುದರಿಂದ ಸಾಮಾನ್ಯ ವಾರ್ಡ್‍ನಲ್ಲಿಯೆ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೂ ಅಚ್ಚರಿಯ ಸಂಗತಿ ಅಂದರೆ ಪ್ರಸ್ತುತ ಜಿಲ್ಲೆಯಲ್ಲಿ ಯಾರೊಬ್ಬ ಕೋವಿಡ್-19 ರೋಗಿಯೂ ವೆಂಟಿಲೇಟರ್ ಮೇಲೆ ಚಿಕಿತ್ಸೆ ಪಡೆಯದಿರುವುದು. ಮಾರ್ಚ್ 10 ರಂದು ಕಲಬುರ್ಗಿ ನಗರದ 76 ವರ್ಷದ ವಯೋವೃದ್ಧ ಸೌದಿ ಅರೇಬಿಯಾ ಪ್ರವಾಸ ಹಿನ್ನೆಲೆ ಮತ್ತು ವಯೋಸಹಜ ಕಾಯಿಲೆಯಿಂದ ಕೊರೋನಾ ಸೋಂಕಿಗೆ ತುತ್ತಾಗಿ ನಿಧನಗೊಂಡ ನಂತರ ಜಿಲ್ಲೆಯಲ್ಲಿ ಸೋಂಕು ಕಂಡುಬಂದಿತ್ತು. ಅಂದಿನಿಂದಲೆ ಜಿಲ್ಲೆಯಲ್ಲಿ ಒಂದು ರೀತಿಯ ಅಘೋಷಿತ ಬಂದ್ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಂದು ರೀತಿಯಲ್ಲಿ ದೇಶದಲ್ಲಿ ಮೊದಲ ಸ್ವಯಂಘೋಷಿತ ಲಾಕ್ ಡೌನ್ ಇದಾಗಿತ್ತು.

ಇದನ್ನೂ ಓದಿ :  ರಾಜ್ಯದ ಪ್ರಯಾಣಿಕರ‌ ಗಮನಕ್ಕೆ ; ಇಂದಿನಿಂದ ಕೆಎಸ್​ಆರ್​ಟಿಸಿ ಎಸಿ ಬಸ್ ಆರಂಭ

ಲಾಕ್ ಡೌನ್ 3.0., 4.0 ಮತ್ತು ತದನಂತರ ದೇಶದಾದ್ಯಂತ ಲಾಕ್ ಡೌನ್‍ನಿಂದ ಸಿಲುಕಿಕೊಂಡ ವ್ಯಕ್ತಿಗಳು, ವಲಸೆ ಕಾರ್ಮಿಕರು, ಹಾಗೂ ಪ್ರವಾಸಿಗರು ತವರು ರಾಜ್ಯಕ್ಕೆ ಮರಳಲು ಅವಕಾಶ ಕಲ್ಪಿಸಿದ ಪರಿಣಾಮ ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ವಲಸೆ ಕಾರ್ಮಿಕರು ವಾಪಸ್ಸಾಗಿದ್ದರು. ಇದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಯಿತು. ಪ್ರಸ್ತುತ ಮಹಾರಾಷ್ಟ್ರದಿಂದ ಬರುವವರ ಸಂಖ್ಯೆ ಇಳಿಮುಖವಾಗಿದೆ.

ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಚೇತರಿಕೆ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮರಣ ಪ್ರಮಾಣ ಕೇವಲ ಶೇ.1 ರಷ್ಟಿದೆ. ಹೀಗಾಗಿ ಕೊರೋನಾ ಸೋಂಕಿಗೆ ಯಾರು ಆತಂಕಕ್ಕೊಳಗಾಗದೆ ಎಚ್ಚರಿಕೆಯ ಜೀವನ ನಡೆಸಬೇಕಾಗಿದೆ. ಲಾಕ್ ಡೌನ್ ಸಡಿಲಿಕೆ ನೀಡಿದ ಕಾರಣ ಯಾರು ಅನಗತ್ಯ ತಿರುಗಾಡಬಾರದು ಎಂದು ಜಿಲ್ಲಾಧಿಕಾರಿ ಶರತ್ ಬಿ. ಮನವಿ ಮಾಡಿದ್ದಾರೆ.
First published: June 25, 2020, 3:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories