ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ‌ ಆರಾಧನೆಗೆ ಕೊರೋನಾ ಕರಿನೆರಳು; ಮಠದ ಅರ್ಚಕರಿಗೆ ಸೋಂಕು ದೃಢ

ನಿನ್ನೆ ಮಠದ ಅರ್ಚಕರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 64 ವರ್ಷದ ಅರ್ಚಕರಿಗೆ ಸೋಂಕು ದೃಢಪಟ್ಟ ಹಿನ್ನೆಲೆ ಅವರನ್ನು ರಾಯಚೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

news18-kannada
Updated:July 16, 2020, 5:08 PM IST
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ‌ ಆರಾಧನೆಗೆ ಕೊರೋನಾ ಕರಿನೆರಳು; ಮಠದ ಅರ್ಚಕರಿಗೆ ಸೋಂಕು ದೃಢ
ಮಂತ್ರಾಲಯ ರಾಘವೇಂದ್ರ ಸ್ವಾಮಿ ದೇವಸ್ಥಾನ
  • Share this:
ರಾಯಚೂರು(ಜು.16): ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳಿಗೆ ವಿಶ್ವದಾದ್ಯಂತ ಭಕ್ತರಿದ್ದಾರೆ. ರಾಘವೇಂದ್ರ ಮಠಕ್ಕೆ ನಿತ್ಯ ಸಾವಿರಾರು ಭಕ್ತರ ಬರುತ್ತಾರೆ.  ರಾಯರ ಆರಾಧನೆಗೆ ಲಕ್ಷಾಂತರ ಜನ ಸೇರುತ್ತಾರೆ. ಈ ಬಾರಿ ರಾಯರ ಆರಾಧನೆಗೆ ಕೊರೋನಾ ಕರಿನೆರಳು ಆವರಿಸಿದೆ.

349 ವರ್ಷಗಳ‌ ಹಿಂದೆ‌ ವೃಂದಾವನಸ್ಥರಾದ ಗುರುಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳು ವರ್ಷವಿಡಿ ವೃಂದಾವನದಲ್ಲಿದ್ದು,ಆರಾಧನೆಯ ಸಂದರ್ಭದಲ್ಲಿ ಬಾಹ್ಯವಾಗಿ  ಭಕ್ತರ ಮಧ್ಯೆ ಇರುತ್ತಾರೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ಪ್ರತಿ ವರ್ಷ ರಾಯರ ಆರಾಧನೆಯು ವಿಜೃಂಭಣೆಯಿಂದ ನಡೆಯುತ್ತದೆ..  ಈ ಬಾರಿ ರಾಯರ 349 ನೆಯ ಆರಾಧನೆಗೆ ಸಿದ್ದತೆ ನಡೆದಿದೆ. ಈಗಾಗಲೇ ಮಠದಿಂದ ಆಹ್ವಾನ ಪತ್ರಿಕೆಯೂ ಬಿಡುಗಡೆಯಾಗಿದೆ.

ಆಗಸ್ಟ್​​ 2 ರಿಂದ ಆ. 8 ರವರೆಗೆ ಸಪ್ತರಾತ್ರೋತ್ಸವ ನಡೆಯಲಿದೆ. ಇದರಲ್ಲಿ ಆಗಸ್ಟ್​​ 3 ರಂದು ಪೂರ್ವಾರಾಧನೆ, ಆಗಸ್ಟ್​​ 4 ರಂದು ಮಧ್ಯಾರಾಧನೆ ಹಾಗೂ ಆಗಸ್ಟ್​​ 5 ರಂದು ಉತ್ತರಾರಾಧನೆ, ಅಂದು ಮಹಾರಥೋತ್ಸವ ನಡೆಯಲಿದೆ. ಆದರೆ ಈ ಬಾರಿಯ ಆರಾಧನೆಯು ಮಠದ ಅರ್ಚಕರು, ಸ್ವಾಮಿಜಿಗಳು ಹಾಗು ಕೆಲವೇ ಕೆಲವು ಭಕ್ತರ ಮಧ್ಯೆ ನಡೆಯುವ ಸಾಧ್ಯತೆ ಇದೆ.

ಈ ಬಾರಿ ಅದ್ದೂರಿ ಆರಾಧನೆಗೆ ಕರ್ನೂಲ‌ ಜಿಲ್ಲಾಡಳಿತ ಅನುಮತಿ ನೀಡುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ. ಕಾರಣ ಈಗ ಕರ್ನೂಲ ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಕೊರೋನಾ ಸೋಂಕು. ಈ‌ ಮಧ್ಯೆ ನಿನ್ನೆ ಮಠದ ಅರ್ಚಕರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 64 ವರ್ಷದ ಅರ್ಚಕರಿಗೆ ಸೋಂಕು ದೃಢಪಟ್ಟ ಹಿನ್ನೆಲೆ ಅವರನ್ನು ರಾಯಚೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ‌ ಮಧ್ಯೆ ಮಂತ್ರಾಲಯದಲ್ಲಿ ಒಟ್ಟು 6 ಜನರಿಗೆ ಸೋಂಕು ದೃಢಪಟ್ಟಿದೆ. ಅವರಲ್ಲಿ ಒಬ್ಬರೂ ಸಹ ಸಕಾಲಕ್ಕೆ ಚಿಕಿತ್ಸೆ ಪಡೆಯದೆ ಇರುವುದರಿಂದ ಅವರ ಮನೆಯಲ್ಲಿ ಮೂವರಿಗೆ ಸೋಂಕು ತಗುಲಿದೆ. ಮಠದ ಮುಂದೆ ಇರುವ ವ್ಯಾಪಾರ ಮಳಿಗೆಯಲ್ಲಿ ಇರುವವರಿಗೂ ಸೋಂಕು ದೃಢಪಟ್ಟಿದೆ. ಸೋಂಕಿತರು ಸ್ಥಳೀಯ ಆರ್ ಎಂಪಿ ವೈದ್ಯರಲ್ಲಿ ಚಿಕಿತ್ಸೆಗಾಗಿ ಅಲೆದಿದ್ದು ಇದರಿಂದಾಗಿ ಮಂತ್ರಾಲಯದಲ್ಲಿ ಸೋಂಕು ಹರಡುವ ಸಾಧ್ಯತೆ ಇದೆ ಎನ್ನಲಾಗಿದೆ.

‌ಮಂತ್ರಾಲಯದ ಸುತ್ತಲಿನ ಗ್ರಾಮಗಳಲ್ಲಿಯೂ ಸೋಂಕು ಅಧಿಕವಾಗಿರುವುದರಿಂದ ಕರ್ನೂಲ ಜಿಲ್ಲಾಡಳಿತ ಅದ್ದೂರಿ ಆರಾಧನೆಗೆ ಅನುಮತಿ ನೀಡುವುದು ಅನುಮಾನ ಎನ್ನಲಾಗಿದೆ. ಪುರಿ ಜಗನ್ನಾಥ ರಥೋತ್ಸವಕ್ಕೆ ಕಡಿಮೆ ಸಂಖ್ಯೆಯಲ್ಲಿ ಭಕ್ತರಿಗೆ ಅವಕಾಶ ನೀಡಿ ರಥೋತ್ಸವ ಆಚರಿಸಿದಂತೆ ಈ ಬಾರಿ ಮಂತ್ರಾಲಯದಲ್ಲಿ ರಾಯರ ಆರಾಧನೆಯನ್ನು ಸೀಮಿತ ಜನರ ಮಧ್ಯೆ ಧಾರ್ಮಿಕ ಆಚರಣೆ ನಡೆಸುವ ಸಾಧ್ಯತೆ ಇದೆ.
ಈ ಕುರಿತು ಶ್ರೀಮಠದಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಭಕ್ತರಿಗೆ ಆರಾಧನೆಯಲ್ಲಿ ಪಾಲ್ಗೊಳ್ಳುವಂತೆ ಗುರು ರಾಯರೇ ಕೃಪೆ ತೋರಬೇಕಾಗಿದೆ.
Published by: Latha CG
First published: July 16, 2020, 5:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading