Corona Fear: ಕೋವಿಡ್ ಹರಡುವ ಆತಂಕ; ಪ್ರವಾಸಿಗರಿಗೆ ಮುಕ್ತವಾಗದ ದುಬಾರೆ ಸಾಕಾನೆ ಶಿಬಿರ

ದುಬಾರೆ ಆನೆ ಶಿಬಿರದಲ್ಲಿ 31 ಆನೆಗಳಿದ್ದು ಅವುಗಳನ್ನು ನೋಡಿಕೊಳ್ಳಲು 62 ಜನ ಮಾವುತರು ಮತ್ತು ಕಾವಾಡಿಗರು ಇದ್ದಾರೆ. ಅಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಅಚ್ಚರಿ ಎಂದರೆ ಅಷ್ಟು ಕುಟುಂಬಗಳ ನೂರಾರು ಮಂದಿ ಅಲ್ಲಿ ವಾಸಿಸುತ್ತಿದ್ದರೂ ಅವರ್ಯಾರಿಗೂ ಇದುವರೆಗೆ ಕೋವಿಡ್ ಸೋಂಕು ಬಂದಿಲ್ಲ.

ದುಬಾರೆ ಸಾಕಾನೆ ಶಿಬಿರ

ದುಬಾರೆ ಸಾಕಾನೆ ಶಿಬಿರ

  • Share this:
ಕೊಡಗು(ಜು.20): ರಾಜ್ಯದಲ್ಲಿ ಕೋವಿಡ್ ಸೋಂಕು ಕೊಂಚ ಕಡಿಮೆ ಆಗಿರುವುದರಿಂದ ಎಲ್ಲೆಡೆ ಅನ್​ಲಾಕ್ ಮಾಡಲಾಗಿದೆ. ಪ್ರವಾಸೋದ್ಯಮವನ್ನೂ ಪ್ರವಾಸಿಗರಿಗೆ ಮುಕ್ತ ಮಾಡಲಾಗಿದೆ. ಆದರೆ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ವಿಶ್ವ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರವನ್ನು ಮಾತ್ರ ಪ್ರವಾಸಿಗರಿಗೆ ಇನ್ನೂ ಮುಕ್ತವಾಗಿಸಿಲ್ಲ. ಅಷ್ಟಕ್ಕೂ ಯಾಕೆ ತೆರೆದಿಲ್ಲ ಅನ್ನೋದು ಗೊತ್ತಾ.?

ದುಬಾರೆ ಆನೆ ಶಿಬಿರದಲ್ಲಿ 31 ಆನೆಗಳಿದ್ದು ಅವುಗಳನ್ನು ನೋಡಿಕೊಳ್ಳಲು 62 ಜನ ಮಾವುತರು ಮತ್ತು ಕಾವಾಡಿಗರು ಇದ್ದಾರೆ. ಅಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಅಚ್ಚರಿ ಎಂದರೆ ಅಷ್ಟು ಕುಟುಂಬಗಳ ನೂರಾರು ಮಂದಿ ಅಲ್ಲಿ ವಾಸಿಸುತ್ತಿದ್ದರೂ ಅವರ್ಯಾರಿಗೂ ಇದುವರೆಗೆ ಕೋವಿಡ್ ಸೋಂಕು ಬಂದಿಲ್ಲ. ಅವರೆಲ್ಲರೂ ತಮ್ಮ ಕ್ಯಾಂಪ್ ಬಿಟ್ಟು ಇದುವರೆಗೆ ಹೊರಗೆ ಹೋಗಿಲ್ಲ, ಹೊರಗಿನವರು ಯಾರು ಈ ಕ್ಯಾಂಪಿಗೆ ಬಂದಿಲ್ಲ. ಹೀಗಾಗಿ ದೇಶದಲ್ಲಿ ಕೋವಿಡ್ ಎರಡು ಅಲೆ ಅಪ್ಪಳಿಸಿದ್ದರೂ ದುಬಾರೆ ಸಾಕಾನೆ ಶಿಬಿರ ಕೋವಿಡ್ ಮುಕ್ತವಾಗಿದೆ.

ಈಗ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ತೆರೆದಿದೆ ಎಂದು ದುಬಾರೆಯನ್ನು ಪ್ರವಾಸಿಗರಿಗೆ ಮುಕ್ತಗೊಳಿಸಿದರೆ ತಮಗೂ ಕೋವಿಡ್ ಹರಡಬಹುದು ಎನ್ನೋದು ಮಾವುತರು ಮತ್ತು ಕಾವಾಡಿಗರ ಆತಂಕ. ಹೀಗಾಗಿ ದುಬಾರೆ ಸಾಕಾನೆ ಕ್ಯಾಂಪ್ ಇನ್ನೂ ಕೂಡ ಪ್ರವಾಸಿಗರಿಗೆ ಮುಕ್ತವಾಗದೆ ಬಂದ್ ಆಗಿಯೆ ಇದ್ದು, ಅದನ್ನು ಸದ್ಯಕ್ಕೆ ತೆರೆಯದಂತೆ ಒತ್ತಾಯಿಸಲಾಗುತ್ತಿದೆ.

ಇದನ್ನೂ ಓದಿ:Ekadashi: ಇಂದು ಪ್ರಥಮ ಏಕಾದಶಿ, ಇದರ ಆಚರಣೆ ಹೇಗೆ? ಈ ದಿನ ಯಾಕೆ ಉಪವಾಸ ಇರಬೇಕು? ಪೂರ್ಣ ವಿವರ ಇಲ್ಲಿದೆ

ಹಾಗೇನಾದರೂ ಶಿಬಿರವನ್ನು ಪ್ರವಾಸಿಗರಿಗೆ ಮುಕ್ತಗೊಳಿಸಿದರೆ ನಮಗೆ ಸೋಂಕು ಹರಡುವ ಭೀತಿ ಇದೆ. ನಮಗೆ ಸೋಂಕು ಹರಡಿದರೆ ಆನೆಗಳಿಗೂ ಸೋಂಕು ಹರಡುವ ಆತಂಕವಿದೆ. ಹೀಗಾಗಿ ಸದ್ಯಕ್ಕೆ ಆನೆ ಶಿಬಿರವನ್ನು ಪ್ರವಾಸಿಗರಿಗೆ ಮುಕ್ತ ಮಾಡೋದು ಬೇಡ ಎನ್ನೋದು ಮಾವುತರ ಆಗ್ರಹ.

ಒಂದು ವೇಳೆ ಮಾವುತರಿಗೆ ಸೋಂಕು ಹರಡಿದಲ್ಲಿ ಅವರು ಚಿಕಿತ್ಸೆಗೆ ಹೋಗುತ್ತಾರೆ. ಆಗ ಆನೆ ಪೋಷಣೆ ಕಷ್ಟವಾಗುತ್ತದೆ. ಬೇರೆ ಮಾವುತರಿಂದ ಆನೆಗಳು ಆಹಾರ ತಿನ್ನೋದಿಲ್ಲ. ಜೊತೆಗೆ ಆನೆಗೆ ಏನಾದರೂ ಕೋವಿಡ್ ಹರಡಿದಲ್ಲಿ ತುಂಬಾ ಕಷ್ಟವಾಗಲಿದೆ ಎನ್ನೋದು ಮಾವುತ ಮೇಘರಾಜ್ ಅವರ ಆತಂಕ.

ಇದಲ್ಲದೆ ಪ್ರವಾಸಿಗರು ಆನೆ ಕ್ಯಾಂಪ್ ಗೆ ಬರಬೇಕಾದರೆ ಕಾವೇರಿ ಹೊಳೆಯನ್ನು ಬೋಟ್ ಮೂಲಕ ದಾಟಿ ಬರಬೇಕು. ಸದ್ಯ ಕಾವೇರಿ ಹೊಳೆಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಬೋಟ್ ಮೂಲಕ ದಾಟುವುದು ಕಷ್ಟವಾಗಿದೆ. ಹೀಗಾಗಿ ಸದ್ಯಕ್ಕೆ ಆನೆ ಕ್ಯಾಂಪ್ ತೆರೆಯುವುದಿಲ್ಲ ಎಂದು ದುಬಾರೆ ಸಾಕಾನೆ ಶಿಬಿರದ ಡಿಆರ್ ಎಫ್ ಓ ಕೆ. ಪಿ. ರಂಜನ್ ಹೇಳುತ್ತಿದ್ದಾರೆ.

ಆದರೆ ಆನೆ ಕ್ಯಾಂಪ್ ತೆರೆದಿದೆ ಎಂದು ಆನ್‌ಲೈನ್ ನಲ್ಲಿ ಇರುವುದರಿಂದ ನೂರಾರು ಕಿಲೋ ಮೀಟರ್ ದೂರದಿಂದ ಬರುತ್ತಿರುವ ಪ್ರವಾಸಿಗರು ದುಬಾರೆಗೆ ಬಂದು ನಿರಾಸೆಯಿಂದ ವಾಪಾಸಾಗುತ್ತಿದ್ದೇವೆ ಎಂದು ಪ್ರವಾಸಿ ಮೋಹನ್ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:Karnataka Weather Today: ರಾಜ್ಯದಲ್ಲಿ ಮುಂದುವರೆದ ಮಳೆಯ ಅಬ್ಬರ; ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಣೆ

ಮತ್ತೊಂದೆಡೆ ಪ್ರವಾಸೋದ್ಯಮವನ್ನೇ ನಂಬಿರುವ ಅಲ್ಲಿನ ನೂರಾರು ಕುಟುಂಬಗಳು ರ್ಯಾಪ್ಟಿಂಗ್ ಇಟ್ಟುಕೊಂಡು ಪ್ರವಾಸಿಗರಿಗಾಗಿ ಕಾಯುತ್ತಿದ್ದೇವೆ. ಇನ್ನಾದರೂ ಆನೆ ಕ್ಯಾಂಪ್ ತೆರೆಯಲಿ ಎನ್ನೋದು ಪ್ರವಾಸೋದ್ಯಮಿ ರತೀಶ್ ಮತ್ತು ಉದ್ಯೋಗಿ ಗೌಸ್ ಅವರ ಆಗ್ರಹ.

ಒಟ್ಟಿನಲ್ಲಿ ಕೊಡಗಿನ ಎಲ್ಲಾ ಪ್ರವಾಸಿ ತಾಣಗಳು ಓಪನ್ ಆಗಿದ್ದರೂ, ಕೋವಿಡ್ ಆತಂಕದಿಂದಾಗಿ ದುಬಾರೆ ಆನೆಕ್ಯಾಂಪ್ ಮಾತ್ರ ಇನ್ನೂ ಬಂದ್ ಆಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by:Latha CG
First published: