HOME » NEWS » District » CORONA EFFECT INSIST ON RELIEF FOR CROPS THAT HAVE BEEN DESTROYED HK

ತೋಟಗಾರಿಕೆ ಬೆಳೆಗಳಿಗೆ ಪರಿಹಾರ ಘೋಷಣೆ ; ಕನ್ನಡಿಯೊಳಗಿನ ಗಂಟಾದ ಪರಿಹಾರ

ಕಲಬುರ್ಗಿ ಜಿಲ್ಲೆಯಲ್ಲಿ ಹಣ್ಣು, ತರಕಾರಿ ಮತ್ತು ಹೂವು ಬೆಳೆದ ರೈತರಿದ್ದಾರೆ. ಸಾವಿರಾರು ಎಕರೆ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಹಾಕಿ ಕೈಸುಟ್ಟುಕೊಂಡಿದ್ದಾರೆ. ಆದರೆ ಸರ್ಕಾರ ಘೋಷಿಸಿರೋ ಪರಿಹಾರ ಇದುವರೆಗೂ ರೈತರನ್ನು ತಲುಪಿಲ್ಲ.

news18-kannada
Updated:June 8, 2020, 11:21 AM IST
ತೋಟಗಾರಿಕೆ ಬೆಳೆಗಳಿಗೆ ಪರಿಹಾರ ಘೋಷಣೆ ; ಕನ್ನಡಿಯೊಳಗಿನ ಗಂಟಾದ ಪರಿಹಾರ
ಪಪ್ಪಾಯಿ
  • Share this:
ಕಲಬುರ್ಗಿ(ಜೂ. 08): ಕೊರೋನಾದಿಂದಾಗಿ ತೋಟಗಾರಿಕಾ ಬೆಳೆಗಾರರು ತತ್ತರಿಸುವಂತಾಗಿದೆ. ಅದರಲ್ಲಿಯೂ ಹೂವು, ಹಣ್ಣು ಬೆಳೆದ ರೈತರು ಹಚ್ಚಿನ ಪ್ರಮಾಣಲ್ಲಿ ಕೈಸುಟ್ಟು ಕೊಂಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಒಂದಷ್ಟು ಪರಿಹಾರ ಘೋಷಿಸಿದೆ. ಆದರೆ, ಇದುವರೆಗೂ ರೈತರ ಖಾತೆಗಳಿಗೆ ನೆರವಿನ ಹಣ ಜಮಾ ಆಗಿಲ್ಲ. ಪರಿಹಾರದ ಮೊತ್ತದಲ್ಲಿಯೂ ತಾರತಮ್ಯವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಕೊರೋನಾ ಸೋಂಕು ಎಲ್ಲರನ್ನೂ ತತ್ತರಿಸುವಂತೆ ಮಾಡಿದೆ. ಅದರಲ್ಲಿಯೂ ತೋಟಗಾರಿಕೆ ಬೆಳೆ ಬೆಳೆಯೋ ರೈತರ ಬದುಕನ್ನೇ ಕೊರೋನಾ ಕಿತ್ತುಕೊಂಡಿದೆ. ತೀವ್ರ ಸಂಕಷ್ಟಕ್ಕೆ ಗುರಿಯಾಗಿರೋ ರೈತರ ನೆರವಿಗೆ ಮುಂದಾಗಿರುವ ರಾಜ್ಯ ಸರ್ಕಾರ ತೋಟಗಾರಿಕೆ ಬೆಳೆಗಳಿಗೆ ಪರಿಹಾರ ಘೋಷಿಸಿದೆ. ಹೂವಿನ ಬೆಳೆಗೆ ಪ್ರತಿ ಹೆಕ್ಟೇರ್ ಗೆ 25 ಸಾವಿರ ರೂಪಾಯಿ ಹಾಗೂ ಹಣ್ಣು ಮತ್ತು ತರಕಾರಿ ಬೆಳೆಗೆ ಪ್ರತಿ ಹೆಕ್ಟೇರ್ ಗೆ 15 ಸಾವಿರ ರೂಪಾಯಿ ಪರಿಹಾರ ಘೋಷಿಸಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಹಣ್ಣು, ತರಕಾರಿ ಮತ್ತು ಹೂವು ಬೆಳೆದ ರೈತರಿದ್ದಾರೆ. ಸಾವಿರಾರು ಎಕರೆ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಹಾಕಿ ಕೈಸುಟ್ಟುಕೊಂಡಿದ್ದಾರೆ. ಆದರೆ, ಸರ್ಕಾರ ಘೋಷಿಸಿರೋ ಪರಿಹಾರ ಇದುವರೆಗೂ ರೈತರನ್ನು ತಲುಪಿಲ್ಲ.

ಕೇವಲ ಪರಿಹಾರ ಘೋಷಿಸಿ ಕುಳಿತರೆ ಯಾವುದೇ ಪ್ರಯೋಜನವಿಲ್ಲ. ಸಕಾಲಕ್ಕೆ ಬ್ಯಾಂಕ್ ಖಾತೆಗಳಿಗೆ ಹಾಕಿದರೆ ಮಾತ್ರ ರೈತರ ನೆಗವಿಗೆ ಬರಲಿದೆ. ಪರಿಹಾರ ಮೊತ್ತವನ್ನು ಹೆಚ್ಚಿಸುವ ಜೊತೆಗೆ ಸಕಾಲಕ್ಕೆ ರೈತರ ಖಾತೆಗಳಿಗೆ ಹಾಕಬೇಕೆಂಬ ಎಂದು ಪಪ್ಪಾಯ ಬೆಳೆದ ರಾಜಾಪುರ ಗ್ರಾಮದ ರೈತ ಜಗದೀಶ್ ಪಾಟೀಲ ಆಗ್ರಹಿಸಿದ್ದಾರೆ.

ಕಲಬುರ್ಗಿ ಜಿಲ್ಲೆಯಲ್ಲಿ ಕಲ್ಲಂಗಡಿ, ಪಪ್ಪಾಯ, ದ್ರಾಕ್ಷಿ, ಬಾಳೆ ಮತ್ತಿತರ ಹಣ್ಣಿನ ಬೆಳೆ ಜೊತೆಗೆ, ಗುಲಾಬಿ, ಸೇವಂತಿ, ಸುಗಂಧರಾಜ್ ಮೊದಲಾದ ಹೂವಿನ ಬೆಳೆಗಳನ್ನೂ ಹಾಕಿದ್ದಾರೆ. ಹಣ್ಣಿನ ಬೆಳೆಗಾರರಿಗೆ ಹೋಲಿಕೆ ಮಾಡಿದಲ್ಲಿ ಹೂವಿನ ಬೆಳೆಗಾರರ ಸಂಖ್ಯೆ ಕಡಿಮೆ. ಆದರೆ, ರಾಜ್ಯ ಸರ್ಕಾರ ಹೂವಿನ ಬೆಳೆಗೆ ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರ ಘೋಷಿಸಿದೆ. ಹಣ್ಣು ಮತ್ತು ತರಕಾರಿ ಬೆಳೆಗೆ ಪರಿಹಾರ ಕಡಿಮೆ ಘೋಷಿಸಿದೆ.

ಹಣ್ಣಿನ ಬೆಳೆ ಬೆಳೆಯಲು ಪ್ರತಿ ಎಕರೆಗೆ ಕನಿಷ್ಟ ಒಂದು ಲಕ್ಷ ರೂಪಾಯಿ ಖರ್ಚಾಗುತ್ತದೆ. ಆದರೆ ಸರ್ಕಾರ ಪ್ರತಿ ಹೆಕ್ಟೇರ್ ಗೆ ಕೇವಲ 15 ಸಾವಿರ ರೂಪಾಯಿ ಘೋಷಿಸಿದೆ. ಸರ್ಕಾರವೇ ಪರಿಹಾರದಲ್ಲಿ ತಾರತಮ್ಯ ಮಾಡುತ್ತಿದೆ. ಈ ತಾರತಮ್ಯ ಸರಿಪಡಿಸಬೇಕು. ಸಮರ್ಪಕ ಸರ್ವೆ ಮಾಡಿ ಕೂಡಲೇ ರೈತರ ಖಾತೆಗೆ ಹಣ ನೀಡಬೇಕೆಂದು ರೈತ ಮುಖಂಡ ಮಾರುತಿ ಮಾನ್ಪಡೆ ಆಗ್ರಹಿಸಿದ್ದಾರೆ.

ಇದುವರೆಗೂ ಪ್ರೋತ್ಸಾಹ ಧನ ರೈತರ ಖಾತೆಗೆ ಜಮಾ ಆಗಿಲ್ಲವೆಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಸಂತೋಷ್ ಸಪ್ಪಂಡಿ ಒಪ್ಪಿಕೊಂಡಿದ್ದಾರೆ. ಸದ್ಯ ಜಿಲ್ಲೆಯಲ್ಲಿ 278 ಹೆಕ್ಟೇರ್ ಪ್ರದೇಶದಲ್ಲಿ ಹೂವಿನ ಬೆಳೆ ಬೆಳೆಯಲಾಗಿದೆ. ಅದಕ್ಕಾಗಿ ಪರಿಹಾರ ನೀಡಲು ಸರ್ಕಾರದಿಂದ 46 ಲಕ್ಷ ರೂಪಾಯಿ ಬಿಡುಗಡೆಗೊಂಡಿದೆ.

1566 ಹೆಕ್ಟೇರ್ ಪ್ರದೇಶದಲ್ಲಿ ಹಣ್ಣಿನ ಬೆಳೆ ಬೆಳೆಯಲಾಗಿದ್ದು, ಅದರ ಪರಿಹಾರವಾಗಿ 2.35 ಕೋಟಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 679 ಹೆಕ್ಟೇರ್ ಪ್ರದೇಶದಲ್ಲಿ ತರಕಾರಿ ಬೆಳೆಯಲಾಗಿದ್ದು, ಈಗಾಗಲೇ ಪರಿಹಾರಕ್ಕಾಗಿ 1 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. ಜೂನ್ 10 ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಲು ರೈತರಿಗೆ ಸೂಚಿಸಲಾಗಿದೆ. ಸರ್ವೆ ಪೂರ್ಣಗೊಳ್ಳುತ್ತಿದ್ದಂತೆಯೇ ರೈತರ ಖಾತೆಗೆ ಹಣ ಜಮಾ ಮಾಡುವುದಾಗಿ ಸಪ್ಪಂಡಿ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ : ನಾಯಿ ಬೇಟೆಯಾಡಲು ಬಂದು ಮನೆಯೊಳಗೆ ಸೇರಿಕೊಂಡ ಚಿರತೆ

ಸರ್ಕಾರವೇನು ರೈತರಿಗೆ ಪರಿಹಾರ ಘೋಷಿಸಿ, ಹಣವನ್ನೂ ಬಿಡುಗಡೆ ಮಾಡಿರುವುದಾಗಿ ಹೇಳಿದೆ. ಆದರೆ, ಇದುವರೆಗೂ ಜಿಲ್ಲೆಯಲ್ಲಿ ಒಬ್ಬ ರೈತನ ಖಾತೆಗೂ ಹಣ ಜಮಾ ಆಗಿಲ್ಲ. ಹೀಗಾಗಿ ಆದಷ್ಟು ಬೇಗ ಹಣ ಜಮಾ ಮಾಡುವಂತೆ ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.
Youtube Video
First published: June 8, 2020, 11:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories