ಕೊರೋನಾ ಎಫೆಕ್ಟ್ನಿಂದ ಗಾರ್ಮೆಂಟ್ಸ್ ಕಾರ್ಮಿಕರ ಬದುಕು ದುಸ್ತರ : ವೇತನ ವಿಲ್ಲದೇ ಪರದಾಡುತ್ತಿರುವ ಕಾರ್ಮಿಕರು...!
ನಿತ್ಯ ದೂರದ ಹಳ್ಳಿಗಳಿಂದ ಕೈಗಾರಿಕಾ ಪ್ರದೇಶಗಳಿಗೆ ಬರುತ್ತಿದ್ದ ಮಹಿಳಾ ಕಾರ್ಮಿಕರು ಸದ್ಯ ಆರ್ಥಿಕ ಸಮಸ್ಯೆ ಅನುಭವಿಸುತ್ತಿದ್ದಾರೆ. ದಿನಸಿ ಪದಾರ್ಥ ಖರೀದಿಗೂ ಹಣವಿಲ್ಲದ ಸಮಸ್ಯೆ ಅನುಭವಿಸುವಂತಾಗಿದೆ.
ದೊಡ್ಡಬಳ್ಳಾಪುರ(ಸೆಪ್ಟೆಂಬರ್. 24): ಏಷ್ಯಾದ ಎರಡನೆ ಬೃಹತ್ ಕೈಗಾರಿಕಾ ಪ್ರದೇಶವಾದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶಗಳ ಗಾರ್ಮೆಂಟ್ಸ್ ಕಾರ್ಮಿಕರ ಬದುಕು ದುಸ್ತರವಾಗಿದೆ. ಕಳೆದ ಮಾರ್ಚ್ ನಲ್ಲಿ ಘೋಷಣೆಯಾದ ಲಾಕ್ಡೌನ್ ಹಿನ್ನೆಲೆ ಗಾರ್ಮೆಂಟ್ಸ್ ಗಳನ್ನೇ ನಂಬಿ ಬದುಕು ನಡೆಸುತ್ತಿದ್ದ ಅನೇಕ ಕಾರ್ಮಿಕರ ಬದುಕು ಬೀದಿಗೆ ಬರುವಂತಾಗಿತ್ತು. ಇದೀಗ ಗಾರ್ಮೆಂಟ್ಸ್ ಗಳು ಕಾರ್ಯಾರಂಭ ಮಾಡಿದ್ದರೂ ಕಾರ್ಮಿಕರಿಗೆ ವೇತನವನ್ನು ನೀಡಲು ಗಾರ್ಮೆಂಟ್ಸ್ ಗಳು ಕುಂಟುನೆಪ ಹೇಳುತ್ತಿವೆ. ಗಾರ್ಮೆಂಟ್ಸ್ ಗಳಲ್ಲಿ ಬಹುತೇಕ ಕಡೆ 2, 3 ತಿಂಗಳ ವೇತನಗಳು ಬಾಕಿ ಉಳಿದಿದ್ದು, ಸದ್ಯ ಕಾರ್ಮಿಕರು ದಿನನಿತ್ಯದ ಅಗತ್ಯ ವಸ್ತುಗಳನ್ನು ಕೊಳ್ಳಲು ಪರದಾಡುವಂತಾಗಿದೆ. ವೇತನ ಸಿಗುವುದು ಯಾವಾಗ ಎನ್ನುವ ನಿರೀಕ್ಷೆಯಲ್ಲಿ ಕಾರ್ಮಿಕರು ದಿನ ದೂಡುತ್ತಿದ್ದಾರೆ. 2020ರ ಜನವರಿಯಿಂದ ಕೆಲವೆಡೆ ವೇತನಗಳು ಬಾಕಿ ಉಳಿದಿವೆ. ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ, ಓಬದೇನಹಳ್ಳಿ ಕೈಗಾರಿಕಾ ಪ್ರದೇಶದ ಗಾರ್ಮೆಂಟ್ಸ್ ಗಳಲ್ಲಿನ ಸಾವಿರಾರು ಕಾರ್ಮಿಕರಿಗೆ ಕಳೆದ ನಾಲ್ಕು ತಿಂಗಳಿಂದ ವೇತನಗಳಿಲ್ಲ. ಕೆಲವೊಂದು ಗಾರ್ಮೆಂಟ್ಸ್ ಗಳಲ್ಲಿ ಅರ್ಧ ತಿಂಗಳ ವೇತನ ನೀಡಿದ್ದಾರೆ.
ಲಾಕ್ ಡೌನ್ ಬಿಸಿಗೆ ತತ್ತರಿಸಿರುವ ಕಾರ್ಮಿಕರಿಗೆ ಅನ್ ಲಾಕ್ ಬಳಿಕವೂ ಜೀವನ ಅತಂತ್ರವಾಗಿದೆ. ಶೀಘ್ರವೇ ವೇತನ ಪಾವತಿಸಿ ಎಂದು ಕಾರ್ಮಿಕರು ಮೊರೆಯಿಡುತ್ತಿದ್ದಾರೆ. ನಿತ್ಯ ದೂರದ ಹಳ್ಳಿಗಳಿಂದ ಕೈಗಾರಿಕಾ ಪ್ರದೇಶಗಳಿಗೆ ಬರುತ್ತಿದ್ದ ಮಹಿಳಾ ಕಾರ್ಮಿಕರು ಸದ್ಯ ಆರ್ಥಿಕ ಸಮಸ್ಯೆ ಅನುಭವಿಸುತ್ತಿದ್ದಾರೆ. ದಿನಸಿ ಪದಾರ್ಥ ಖರೀದಿಗೂ ಹಣವಿಲ್ಲದ ಸಮಸ್ಯೆ ಅನುಭವಿಸುವಂತಾಗಿದೆ. ಸರ್ಕಾರ ನೀಡುತ್ತಿರುವ ಪಡಿತರದಿಂದ ಅನ್ನ-ಗೊಜ್ಜು ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ
ದೊಡ್ಡಬಳ್ಳಾಪುರದ ಗಾರ್ಮೆಂಟ್ಸ್ಗಳು ಕಾರ್ಮಿಕರ ವೇತನಗಳನ್ನು ಬಾಕಿ ಉಳಿಸಿಕೊಳ್ಳುವುದು ಸಾಮಾನ್ಯವೆಂಬಂತಾಗಿದೆ. ಕಾರ್ಮಿಕ ಇಲಾಖೆ ಕಣ್ಮುಚ್ಚಿ ಕುಳಿತಿದ್ದು, ಲಾಕ್ಡೌನ್ ನಿಂದ ಅನೇಕ ಕಾರ್ಮಿಕರು, ಕೆಲಸ ಕಳೆದುಕೊಂಡಿದ್ದಾರೆ. ಮಹಿಳೆಯರು ಕೆಲಸ ಉಳಿಸಿಕೊಳ್ಳಲು ವೇತನವಿಲ್ಲದಿದ್ದರೂ ಅನಿವಾರ್ಯವಾಗಿ ಕೆಲಸ ಮಾಡುತ್ತಿದ್ದಾರೆ.
ತನ್ನ ಉದ್ಯೋಗಿಗಳಿಗೆ ಕಂಪನಿಗಳು ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಿದೆ. ಅದೆಷ್ಟೋ ಕಾರ್ಮಿಕರು ಬಂದ್ ಆದ ಕಾರ್ಖಾನೆಗಳ ಬಾಗಿಲಿಗೆ ಬಂದು ಮುಚ್ಚಿದ ಬಾಗಿಲು ನೋಡುತ್ತಾ ಹಿಂದಿರುಗುವ ಸ್ಥಿತಿ ಎಂಥವರ ಮನಸ್ಸು ಕರಗುವ ಹಾಗಿದೆ.
ಕಾರ್ಮಿಕರು ಎದುರಿಸುತ್ತಿರುವ ಕಷ್ಟಗಳು ನಮಗೂ ಅರಿವಿದೆ. ಸದ್ಯ ಮೇ ತಿಂಗಳ ಸಂಬಳ ನೀಡಿದ್ದೇವೆ. ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳ ಸಂಬಳವನ್ನು ಶೀಘ್ರವಾಗಿ ನಮ್ಮ ಕಾರ್ಮಿಕರಿಗೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಕಾರ್ಮಿಕರ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುತ್ತಿದೆ ಎಂದು ಖಾಸಗಿ ಸಂಸ್ಥೆ ಮುಖ್ಯಸ್ಥ ರೊಬ್ಬರು ನ್ಯೂಸ್18 ಗೆ ಮಾಹಿತಿ ನೀಡಿದ್ದಾರೆ.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ