ಕೊರೋನಾ ಎಫೆಕ್ಟ್‌; ಬೆಳಗಾವಿಗೆ ಬ್ರ್ಯಾಂಡ್ ತಂದುಕೊಟ್ಟಿದ್ದ ಕುಂದಾ ಉದ್ಯಮಕ್ಕೆ ತೀವ್ರ ಸಂಕಷ್ಟ..!

ಬೆಳಗಾವಿಯ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ಗೋವಾಗೆ ಬೆಳಗಾವಿಯ ಕುಂದಾ ಅಧಿಕ ಪ್ರಮಾಣದಲ್ಲಿ ರಫ್ತಾಗುತ್ತದೆ. ಬೆಳಗಾವಿ ಮಹಾನಗರ ಒಂದರಲ್ಲೇ 127 ಮಳಿಗೆಗಳಲ್ಲಿ ಕುಂದಾ ಮಾರಾಟ ಮಾಡಲಾಗುತ್ತಿತ್ತು. ಜಿಲ್ಲೆಯಲ್ಲಿ ಪ್ರತಿಯೊಬ್ಬರೂ ಕುಂದಾ ತಯಾರಿಕಾ ಘಟಕ ಹಾಕಿಕೊಂಡಿದ್ದಾರೆ.

news18-kannada
Updated:May 27, 2020, 6:55 PM IST
ಕೊರೋನಾ ಎಫೆಕ್ಟ್‌; ಬೆಳಗಾವಿಗೆ ಬ್ರ್ಯಾಂಡ್ ತಂದುಕೊಟ್ಟಿದ್ದ ಕುಂದಾ ಉದ್ಯಮಕ್ಕೆ ತೀವ್ರ ಸಂಕಷ್ಟ..!
ಬೆಳಗಾವಿಯ ಕುಂದಾ.
  • Share this:
ಬೆಳಗಾವಿ: ’ಕುಂದಾ’ ತಿನ್ನಲಷ್ಟೇ ಸಿಹಿಯಲ್ಲ... ಬೆಳಗಾವಿ ಎಂಬ ಜಿಲ್ಲೆಗೆ ತನ್ನದೇಯಾದ ಬ್ಯ್ರಾಂಡ್‌ ತಂದು ಕೊಟ್ಟ ಸಿಹಿ ತಿನಿಸು ಅದು. ಇದರಿಂದಾಗಿಯೇ ಬೆಳಗಾವಿ ಹೆಸರಿನ ಜೊತೆ ಜೊತೆಗೆ ಕುಂದಾ ನಗರಿ ಎಂಬ ಹೆಸರು ಸಹ ಸೇರ್ಪಡೆಯಾಗಿತ್ತು. ಆದರೇ ಲಾಕ್‌ಡೌನ್ ನಿಂದ ಇದೀಗ ಇಡೀ ’ಕುಂದಾ’ ಉದ್ಯಮವೇ ಸಂಕಷ್ಟದಕ್ಕೆ ಸಿಲುಕಿದೆ. ಈ ಉದ್ಯಮವನ್ನು ನಂಬಿಕೊಂಡಿದ್ದು ನೂರಾರು ಜನ ಇದೀಗ ಆರ್ಥಿಕವಾಗಿ ಸಂಕಷ್ಟ ಎದುರಿಸುವಂತಾಗಿದೆ.

ಜಗತ್ತನ್ನು ಕೊರೊನಾ ವೈರಸ್ ಎಂಬ ಮಹಾಮಾರಿ ತಲ್ಲಣಗೊಳಿಸಿದೆ. ಇದರ ಹೊಡೆತಕ್ಕೆ ಸಿಕ್ಕ ಅದೆಷ್ಟೋ ಉದ್ಯಮಗಳು ಇಂದು ನಷ್ಟ ಅನುಭವಿಸುತ್ತಿವೆ. ಇದರ ಸಾಲಿಗೆ ಬೆಳಗಾವಿಯ ಫೇಮಸ್ ಕುಂದಾ ಉದ್ಯಮ ಸಹ ಸೇರ್ಪಡೆಯಾಗಿರುವುದು ದುರಾದೃಷ್ಟಕರ.

ಬೆಳಗಾವಿಯಲ್ಲಿ ಈ ಮೊದಲು ನಿತ್ಯ 1 ಸಾವಿರ ಕೆ.ಜಿ. ಕುಂದಾ ಮಾರಾಟವಾಗುತ್ತಿತ್ತು. ಇದೀಗ ಮಾರಾಟ ಸಂಪೂರ್ಣವಾಗಿ ಕುಸಿದಿದೆ. ಕುಂದಾಗೆ ರಾಜ್ಯ ಅಷ್ಟೇ ಅಲ್ಲದೇ ದೇಶ-ವಿದೇಶಗಳಲ್ಲೂ ಬಹುಬೇಡಿಕೆ ಇದೆ. ಬೆಳಗಾವಿಯಲ್ಲೇ ತಯಾರಾಗುವ ಕುಂದಾ ಅಮೇರಿಕ, ದುಬೈಗೂ ರಫ್ತಾಗುತ್ತದೆ. ಅಲ್ಲದೇ ಬೆಳಗಾವಿಗೆ ಭೇಟಿ ನೀಡುವ ದೇಶದ ವಿವಿಧ ಭಾಗಗಳ ಜನರು ಮಿಸ್ ಮಾಡದೇ ಕೈಯಲ್ಲಿ ಕುಂದಾ ಬಾಕ್ಸ್ ಹಿಡಿದುಕೊಂಡು ತಮ್ಮೂರಿಗೆ ತೆರಳುವುದು ವಾಡಿಕೆ.

ಬೆಳಗಾವಿಯ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ಗೋವಾಗೆ ಬೆಳಗಾವಿಯ ಕುಂದಾ ಅಧಿಕ ಪ್ರಮಾಣದಲ್ಲಿ ರಫ್ತಾಗುತ್ತದೆ. ಬೆಳಗಾವಿ ಮಹಾನಗರ ಒಂದರಲ್ಲೇ 127 ಮಳಿಗೆಗಳಲ್ಲಿ ಕುಂದಾ ಮಾರಾಟ ಮಾಡಲಾಗುತ್ತಿತ್ತು. ಜಿಲ್ಲೆಯಲ್ಲಿ ಪ್ರತಿಯೊಬ್ಬರೂ ಕುಂದಾ ತಯಾರಿಕಾ ಘಟಕ ಹಾಕಿಕೊಂಡಿದ್ದಾರೆ.

ಬೆಳಗಾವಿಯ ಕಾಲೇಜು ರಸ್ತೆಯಲ್ಲಿರುವ ಅತುಲ್‍ಪುರೋಹಿತ್, ಕ್ಯಾಂಪ್ ಪ್ರದೇಶದಲ್ಲಿರುವ ಕ್ಯಾಂಪ್ ಪುರೋಹಿತ್, ಕಲ್ಯಾಣಿ, ಶಹಾಪುರದಲ್ಲಿರುವ ಗಜಾನನ ಸ್ವೀಟ್ ಮಾರ್ಟ್, ಬಸ್ ನಿಲ್ದಾಣದ ಸಮೀಪದ ಪುರೋಹಿತ್ ಮಳಿಗೆಗಳಲ್ಲಿ ಲಾಕ್‌ಡೌನ್‌ಗೆ ಮುಂಚೆ ಒಂದೊಂದು ಅಂಗಡಿಗಳಲ್ಲಿ ನಿತ್ಯ ಕನಿಷ್ಠ ನೂರು ಕೆ.ಜಿ. ಕುಂದಾ ಮಾರಾಟವಾಗುತ್ತಿತ್ತು. ಆದರೀಗ ಒಂದೊಂದು ಮಳಿಗೆಗಳಲ್ಲಿ ಕೇವಲ 5 ರಿಂದ 10 ಕೆ.ಜಿ. ಸಹ ಸೇಲ್ ಆಗುತ್ತಿಲ್ಲ.

ಲಾಕ್‍ಡೌನ್ ಕಾರಣಕ್ಕೆ ಎರಡು ತಿಂಗಳು ಅಂಗಡಿಗಳನ್ನು ಬಂದ್ ಮಾಡಿದಕ್ಕೆ ಕುಂದಾ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದರು. ಲಾಕ್‌ಡೌನ್ ಸಡಿಲಿಕೆ ಆದ ಕಾರಣ ಕಳೆದೊಂದು ವಾರದಿಂದ ಕುಂದಾ ಮಳಿಗೆಗಳನ್ನು ತೆರೆಯಲಾಗಿದೆ. ಆದರೆ, ಇದನ್ನು ಖರೀದಿಸುವವರೇ ಇಲ್ಲದಂತಾಗಿರುವುದು ವಿಪರ್ಯಾಸ. ಹೀಗಾಗಿ  ಮಳಿಗೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೂ ಸಂಬಳ ನೀಡುವುದು ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ವ್ಯಾಪಾರಸ್ಥರು.

ಲಾಕ್ ಡೌನ್ ಸಡಿಲಿಕೆ ಆದರೂ ಕೊರೊನಾ ಅಟ್ಟಹಾಸ ಮಾತ್ರ ಮುಂದುವರೆದಿದೆ. ತಕ್ಷಣವೇ ಅಂತರಾಜ್ಯ ಸಂಪರ್ಕ ಅಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಂತಾರಾಜ್ಯ ಸಂಪರ್ಕ ಆರಂಭವಾಗುವವರೆಗೆ ಕುಂದಾ ವ್ಯಾಪಾರದಲ್ಲಿ ಚೇತರಿಕೆ ಕಾಣುವುದಿಲ್ಲ. ಸ್ಥಳೀಯರಿಗಿಂತ ಹೊರ ಜಿಲ್ಲೆ, ರಾಜ್ಯದವರೇ ಹೆಚ್ಚಾಗಿ ಕುಂದಾವನ್ನು ಖರೀದಿಸುತ್ತಾರೆ. ಕೊರೊನಾ ನಿಯಂತ್ರಣಕ್ಕೆ ಬಂದು, ದೇಶಾದ್ಯಂತ ಸಂಚಾರ ಆರಂಭವಾದರೆ ಮಾತ್ರ ಕುಂದಾಗೆ ಬೇಡಿಕೆ ಬರಬಹುದು.ಪರಿಸ್ಥಿತಿ ಹೀಗೆ ಮುಂದುವರೆದರೆ ಕುಂದಾ ವ್ಯಾಪಾರಸ್ಥರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಕುಂದಾ ತಯಾರಿಕೆ ಉದ್ಯಮವನ್ನು ನಂಬಿಕೊಂಡು 5 ಸಾವಿರಕ್ಕೂ ಹೆಚ್ಚು ಜನ ಬೆಳಗಾವಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕುಂದಾ ತಯಾರಿಕೆಗೆ ಬೇಕಾಗುವ ಹಾಲನ್ನು ತಾಲೂಕಿನ ವಿವಿಧ ಕಡೆಗಳಿಂದ ರೈತರು ಪೂರೈಕೆ ಮಾಡುತ್ತಾರೆ.

ಕುಂದಾಗೆ ಇದೀಗ ಜಿಲ್ಲೆಯಲ್ಲಿ ಡಿಮ್ಯಾಂಡ್‌ ಕಡಿಮೆಯಾಗಿರುವ ಪರಿಣಾಮ ರೈತರೂ ಸಹ ದೊಡ್ಡ ಮಟ್ಟದಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗಾಗಲೇ ಲಾಕ್‌ಡೌನ್‌ನಿಂದ ಸಮಸ್ಯೆ ಎದುರಿಸುತ್ತಿರುವ ರೈತರ ಪಾಲಿಗೆ ಇದು ಗಾಯದ ಮೇಲೆಬರೆ ಎಳೆದಂತಹ ಪರಿಸ್ಥಿತಿ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : HAL Tejas: ಎರಡನೇ ಸ್ಕ್ವಾಡ್ರನ್ ಅಭಿವೃದ್ಧಿಪಡಿಸಿದ ಭಾರತೀಯ ಸೇನೆ; ನೀವು ತಿಳಿದುಕೊಳ್ಳಲೇಬೇಕಾದ ಕೆಲವು ಮಹತ್ವದ ಅಂಶಗಳು
First published: May 27, 2020, 6:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading