ನಿತ್ಯವೂ ತ್ಯಾಜ್ಯ ತೆಗೆದು ಕಾವೇರಿ ನದಿ ಸ್ವಚ್ಚಗೊಳಿಸುತ್ತಿರುವ ಕಾಫಿ ಬೆಳೆಗಾರ ಹಸೈನರ್

ಕೊಡಗಿನ 62 ವರ್ಷದ ಕಾಫಿ ಬೆಳೆಗಾರ ಹಸೈನರ್ ಅವರು ನಿತ್ಯವೂ ಕೂಡ ಕಾವೇರಿ ನದಿಗೆ ಇಳಿದು ಅಲ್ಲಿ ಕಾಣಸಿಗುವ ಎಲ್ಲಾ ರೀತಿಯ ತ್ಯಾಜ್ಯಗಳನ್ನ ತೆಗೆದು ನದಿ ಸ್ವಚ್ಛತೆಯಲ್ಲಿ ತಮ್ಮದೇ ಕೊಡುಗೆ ನೀಡುತ್ತಾರೆ.

ಕೊಡಗಿನ ಹಸೈನರ್

ಕೊಡಗಿನ ಹಸೈನರ್

  • Share this:
ಕೊಡಗು: ಕೊಡಗಿನ ಕಾವೇರಿ ನದಿ ನಾಡಿನ ಲಕ್ಷಾಂತರ ಜನರ ಜೀವನಾಡಿ. ಆದರೆ ಇತ್ತೀಚಿನ ದಿನಗಳಲ್ಲಿ ಈ ನದಿ ಸಾಕಷ್ಟು ಕಲುಷಿತಗೊಳ್ಳುತ್ತಿದ್ದು, ಕುಡಿಯಲು ಯೋಗ್ಯವಲ್ಲ ಎನ್ನೋ ಸ್ಥಿತಿ ತಲುಪಿದೆ. ಅದರಲ್ಲೂ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸುತ್ತಮುತ್ತಲಿನ ಕುರಿ ಕೋಳಿ ಅಂಗಡಿಗಳ ಬುದ್ದಿಗೇಡಿ ಮಾಲೀಕರು ಅವುಗಳ ತ್ಯಾಜ್ಯವನ್ನು ಕಾವೇರಿ ಒಡಲಿಗೆ ಸುರಿಯುತ್ತಿದ್ದಾರೆ. ಆದರೆ ಇಲ್ಲೊಬ್ಬ ಕಾಫಿ ಬೆಳೆಗಾರರಿಗೆ ನದಿ ಮೇಲೆ ಅದೇನು ಪ್ರೀತಿಯೋ ಏನೋ, ಕಾವೇರಿ ನದಿಯನ್ನು ನಿತ್ಯ ಸ್ವಚ್ಚಗೊಳಿಸುವ ಕಾರ್ಯದಲ್ಲಿ ಕಳೆದ ಹಲವು ತಿಂಗಳುಗಳಿಂದ ಸದ್ದಿಲ್ಲದೆ ನಿರತರಾಗಿದ್ದಾರೆ.

ಹೌದು ಎರಡು ಎಕರೆ ಕಾಫಿ ತೋಟವಿದ್ದರೆ ಸಾಕು ಅದರಲ್ಲಿ ಬರುವ ಆದಾಯದಲ್ಲಿ ಶೋಕಿ ಮಾಡಿಕೊಂಡು ಕಾಲ ಕಳೆಯುವವರು ಇರುವ ಈ ಕಾಲದಲ್ಲಿ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಕೊಟ್ಟಮುಡಿಯ 62 ವಯಸ್ಸಿನ ಹಸೈನರ್ ನಿತ್ಯ ಮಧ್ಯಾಹ್ನದ ಬಳಿಕ ಕಾವೇರಿ ನದಿ ಸ್ವಚ್ಛತೆಗೆ ಇಳಿದು ಬಿಡುತ್ತಾರೆ. ತಮ್ಮ ಮನೆ ಬಳಿಯೇ ಇರುವ 6 ಎಕರೆ ಕಾಫಿ ತೋಟ ಹೊದಿರುವ ಕೊಟ್ಟಮುಡಿಯ ಈ ಕಾಫಿ ಬೆಳೆಗಾರ ಹಸೈನರ್ ಕಾವೇರಿ ನದಿ ಬಳಿಗೆ ಬರುತ್ತಿದ್ದಂತೆ ತುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಇಳಿದು, ನದಿ ಒಡಲಿನಲ್ಲಿ ಮುಳುಗಿರುವ ವಿವಿಧ ತ್ಯಾಜ್ಯಗಳನ್ನು ತಾವು ಮುಳುಗಿಯಾದರೂ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಮುಖ್ಯವಾಗಿ ನಾಪೋಕ್ಲು ಪಟ್ಟಣದ ಹಲವು ಕೋಳಿ ಮತ್ತು ಕುರಿ ಮಾಂಸದ ಅಂಗಡಿಗಳ ಮಾಲೀಕರು ಕುರಿ, ಕೋಳಿ ತ್ಯಾಜ್ಯವನ್ನು ಚೀಲಗಳಲ್ಲಿ ತುಂಬಿಸಿ ನದಿಗೆ ಎಸೆಯುತ್ತಿದ್ದಾರೆ.

ಎಷ್ಟೋ ಜನರು ಯಾವುದೊ ಮಾಟ ಮಂತ್ರಗಳನ್ನು ಮಾಡಿದ ತ್ಯಾಜ್ಯವನ್ನು ಇದೇ ಹೊಳೆಗೆ ಸುರಿಯುತ್ತಿದ್ದಾರೆ. ಯಾವುದೇ ವಸ್ತು ಬೇಡ ಎನಿಸಿದರು ಜನರು ತಮ್ಮ ವಾಹನಗಳಲ್ಲಿ ತಂದು ನಾಪೋಕ್ಲು ಸೇತುವೆ ಮೇಲೆ ನಿಂತು ಕಾವೇರಿ ನದಿಗೆ ಸುರಿಯುತ್ತಿದ್ದಾರೆ. ಎಷ್ಟೋ ಬಾರಿ ನದಿಗೆ ಕಸ ಸುರಿಯಲು ಬಂದವರು ರೆಡ್ ಹ್ಯಾಂಡ್ ಆಗಿ ಹಸೈನರ್ ಅವರಿಗೆ ಸಿಕ್ಕಿ ಅವರು ಬೈದು ಕಳುಹಿಸಿದ್ದಾರೆ.

ಆದರೆ ಕೊಡಗು ಸೇರಿದಂತೆ ಮೈಸೂರು ಬೆಂಗಳೂರು ಮಹಾನಗರಗಳ ಜನರಿಗೆ ಕುಡಿಯುವುದಕ್ಕೆ ಇದೇ ನೀರು ಪೂರೈಕೆ ಆಗುತ್ತಿರುವುದರಿಂದ ಜನರಿಗೆ ತೊಂದರೆ ಆಗಬಾರದು ಎಂದು ಹಸೈನರ್ ಯೋಚಿಸಿದ್ದರಂತೆ. ನಾಪೋಕ್ಲು ಪಟ್ಟಣದಿಂದ ಆರಂಭಿಸಿ ಹೊದ್ದೂರು ಗ್ರಾಮದವರೆಗೆ, ಅಂದರೆ ನದಿಯ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ನದಿ ಸ್ವಚ್ಚಗೊಳಿಸುತ್ತಿದ್ದಾರೆ.

ಇದನ್ನೂ ಓದಿ: ಕೋವಾಕ್ಸಿನ್ ಲಸಿಕೆಯ 3ನೇ ಹಂತದ ಪ್ರಯೋಗದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಡಬ್ಲ್ಯೂಎಚ್ಒ ಮುಖ್ಯವಿಜ್ಞಾನಿ

ಕಳೆದ ವರ್ಷ ಲಾಕ್ ಡೌನ್ ಆಗಿದ್ದರಿಂದ ಏನೂ ಕೆಲಸವಿಲ್ಲದೆ ಸುಮ್ಮನಿದ್ದಿದ್ದರಿಂದ ಏನಾದರೂ ಮಾಡಬೇಕೆಂದೆನಿಸಿತು. ಹೊಳೆ ಬಳಿ ಸುತ್ತಾಡುವಾಗ ಹೊಳೆಯನ್ನೇ ಕ್ಲೀನ್ ಮಾಡಬೇಕು ಎಂದೆನಿಸಿತು. ಹೀಗಾಗಿ ಈ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ ಹಸೈನರ್.

ಇವರು ಹೊಳೆ ಸ್ವಚ್ಛತೆ ಮಾಡುವುದು ಅಷ್ಟೇ ಅಲ್ಲ, ಹಲವು ವರ್ಷಗಳಿಂದ ನದಿಗೆ ಬಿದ್ದು ಸತ್ತವರನ್ನು ಮೇಲೆತ್ತುವ ಕಾಯಕ ಮಾಡುತ್ತಿದ್ದಾರೆ. ಇವರ ಈ ಕೆಲಸಕ್ಕೆ ನಾವು ಇನ್ನಷ್ಟು ಒತ್ತಾಸೆಯಾಗಿ ನಿಲ್ಲುತ್ತೇವೆ ಎಂದು ನಾಪೋಕ್ಲು ಪಂಚಾಯಿತಿ ಸದಸ್ಯ ಹಂಸ ಅವರು ಹೇಳುತ್ತಾರೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ರವಿ ಎಸ್ ಹಳ್ಳಿ
Published by:Vijayasarthy SN
First published: