ಶಿವಮೊಗ್ಗ(ಅಕ್ಟೋಬರ್. 08): ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹರಡದಂತೆ ತಡೆಯಲು ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗನ ಕಾಯಿಲೆ ನಿಯಂತ್ರಣಕ್ಕಾಗಿ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ನಡೆಸಿದರು. ಮಂಗನ ಕಾಯಿಲೆ ಹರಡುವ ಸಾಧ್ಯತೆ ಇರುವ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಎಲ್ಲರಿಗೂ ಲಸಿಕೆ ಹಾಕಬೇಕು. ಒಟ್ಟು ಮೂರು ಡೋಸ್ ಲಸಿಕೆ ಹಾಕಲಾಗುತ್ತಿದ್ದು, ಎಲ್ಲಾ ಮೂರು ಡೋಸ್‍ಗಳನ್ನು ಸಹ ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕು. ಕಳೆದ ವರ್ಷ ಮೂರು ಡೋಸ್ ತೆಗೆದುಕೊಂಡ ಯಾವುದೇ ಪ್ರಕರಣಗಳಲ್ಲಿ ಸಾವು ಸಂಭವಿಸಿರುವುದಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು. ಪ್ರಸ್ತುತ 32500 ಲಸಿಕೆ ಹಾಗೂ 35ಸಾವಿರ ಡಿಎಂಪಿ ತೈಲ ಲಭ್ಯವಿದ್ದು, ಅಗತ್ಯವಿರುವಷ್ಟು ಲಸಿಕೆ ಹಾಗೂ ತೈಲವನ್ನು ತರಿಸಿಕೊಳ್ಳಬೇಕು. ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ಮನೆ ಮನೆ ಸಮೀಕ್ಷೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮಂಗನ ಕಾಯಿಲೆ ಹರಡುವ ಸಾಧ್ಯತೆಗಳಿರುವ ವ್ಯಾಪ್ತಿಯ ಎಲ್ಲಾ ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ ಹಾಕಬೇಕು. ಈಗಾಗಲೇ ಒಂದು ಹಂತ ಲಸಿಕೆ ಹಾಕಲಾಗಿದ್ದು, ನವೆಂಬರ್ ತಿಂಗಳಿನಲ್ಲಿ ಎರಡನೇ ಹಂತದ ಲಸಿಕೆ ಹಾಕಬೇಕು. ಜಾನುವಾರುಗಳನ್ನು ಮೇಯಲು ಕಾಡಿಗೆ ಬಿಡಬಾರದು. ಜಾನುವಾರುಗಳನ್ನು ಪ್ರತಿದಿನ ತೊಳೆಯಬೇಕು ಎಂದು ಹೇಳಿದರು.
ಕಳೆದ ವರ್ಷ ಕೆಲವು ನಿಗದಿತ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ನವೆಂಬರ್ನಿಂದ ಮೇ ಅವಧಿಯಲ್ಲಿ ಅರಣ್ಯದೊಳಗೆ ಪ್ರವೇಶವನ್ನು ನಿರ್ಬಂಧಗೊಳಿಸಲಾಗಿತ್ತು. ಮಂಗನ ಕಾಯಿಲೆ ಮೂರು ಲಸಿಕೆ ಪಡೆದಿರುವ ಬಗ್ಗೆ ದೃಢೀಕರಣ ಪಡೆದಿರುವವರನ್ನು ಮಾತ್ರ ಈ ಬಾರಿಯೂ ಅರಣ್ಯ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಅರಣ್ಯ ಪ್ರದೇಶದಲ್ಲಿ ಮಂಗ ಸತ್ತಿರುವುದು ಕಂಡು ಬಂದ ತಕ್ಷಣ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಹಾಗೂ ಪಿಡಿಒಗೆ ಮಾಹಿತಿಯನ್ನು ನೀಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕು ಮಟ್ಟದಲ್ಲಿ ಸಹ ಅಂತರ್ ಇಲಾಖಾ ಸಮನ್ವಯ ಸಮಿತಿ ರಚಿಸಿ ಸಭೆ ನಡೆಸಬೇಕು. ಮಂಗನ ಕಾಯಿಲೆ ಕಾಣಿಸಿಕೊಳ್ಳುವ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಟ ಸೌಲಭ್ಯ ಸಜ್ಜುಗೊಳಿಸಬೇಕು. ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೆಎಫ್‍ಡಿ ವಾರ್ಡ್ ಸಜ್ಜುಗೊಳಿಸಬೇಕು ಎಂದರು.
ಇದನ್ನೂ ಓದಿ : Amazon: ಸ್ವಸಹಾಯ ಗುಂಪುಗಳ ಉತ್ಪನ್ನಗಳ ಇ-ಮಾರಾಟಕ್ಕೆ ಅಮೆಜಾನ್ ಭರವಸೆ
ಕಳೆದ ಸಾಲಿನಲ್ಲಿ 5128 ಶಂಕಿತ ಮಂಗನ ಕಾಯಿಲೆ ಪ್ರಕರಣಗಳ ಪೈಕಿ 185 ಪ್ರಕರಣಗಳಲ್ಲಿ ಕೆಎಫ್‍ಡಿ ದೃಢಪಟ್ಟಿದೆ. ಇದರಲ್ಲಿ ತೀರ್ಥಹಳ್ಳಿ ತಾಲೂಕು 147, ಸಾಗರ 37 ಮತ್ತು ಶಿವಮೊಗ್ಗ ತಾಲೂಕಿನಲ್ಲಿ ಒಂದು ಪ್ರಕರಣ ದೃಢಪಟ್ಟಿದ್ದು, ಮೃತಪಟ್ಟ ಎರಡು ಮಂಗಳಲ್ಲಿ ಪಾಸಿಟಿವ್ ದೃಡಪಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ