ಬೆಂಗಳೂರು: ಮೈಸೂರಿನಲ್ಲಿ ಮೇಯರ್ ಚುನಾವಣೆಯಲ್ಲಿ ನಡೆದ ಬೆಳವಣಿಗೆಗಳಿಂದ ಬೇಸರಗೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮನವೊಲಿಸುವ ಕಾರ್ಯಕ್ಕೆ ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್ ತನ್ವೀರ್ ಸೇಠ್ ವಿರುದ್ಧ ಕ್ರಮ ಕೈಗೊಳ್ಳುವುದು ಬಹುತೇಕ ನಿಶ್ಚಿತವಾಗಿದೆ. ದೇವರಾಜ ಅರಸು ಅವರ ನಂತರ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸಿದ್ದರಾಮಯ್ಯ ಹೆಚ್ಚಿನ ಕಾಂಗ್ರೆಸ್ ಶಾಸಕರ ಒಲವು ಹೊಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿರುದ್ಧ ತಂತ್ರಗಾರಿಕೆ ರೂಪಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಇದಕ್ಕೆ ಪುಷ್ಠಿ ನೀಡುವ ರೀತಿ ಮೈಸೂರು ಮೇಯರ್ ಆಯ್ಕೆಯಲ್ಲಿ ಕಾಂಗ್ರೆಸ್ ಗೆ ಆದ ಹಿನ್ನಡೆ ಹಾಗೂ ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಕಾರ್ಯತಂತ್ರ ರೂಪಿಸಿ, ಅವರ ವಿರೋಧಿಗಳನ್ನೇ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿರುವುದು ಒಂದು ಹಂತಕ್ಕೆ ಸಿದ್ದರಾಮಯ್ಯರನ್ನು ತೀವ್ರ ಮುಜುಗರಕ್ಕೆ ಹಾಗೂ ಬೇಸರಕ್ಕೆ ಈಡು ಮಾಡಿತ್ತು. ಆಕ್ರೋಶಗೊಂಡಿದ್ದ ಅವರು ಪಕ್ಷದ ಯಾವುದೇ ಕಾರ್ಯಕ್ರಮ ಹಾಗೂ ಚಟುವಟಿಕೆಯಿಂದ ದೂರವಿರುವುದು ಆಗಿ ಆಪ್ತರಲ್ಲಿ ಹೇಳಿಕೊಂಡು ಆಚರಣೆಗೂ ತಂದಿದ್ದರು.
ಇದರಿಂದ ಎಚ್ಚರಗೊಂಡ ಕಾಂಗ್ರೆಸ್ ಹೈಕಮಾಂಡ್ ರಾಜ್ಯದಲ್ಲಿ ಎರಡು ಬಣಗಳು ಸೃಷ್ಟಿಯಾಗಿವೆ ಎಂಬ ಸಂದೇಶ ಜನರಿಗೆ ತಲುಪಿದರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗಲಿದೆ ಹಾಗೂ ಬಿಜೆಪಿಗೆ ಮುಂಬರುವ ದಿನಗಳಲ್ಲಿ ಬೆಳವಣಿಗೆ ಸಾಧಿಸಲು ಅನುಕೂಲವಾಗಲಿದೆ ಎಂಬ ವಿಚಾರವನ್ನು ಅರಿತು ಮಧ್ಯಸ್ಥಿಕೆ ವಹಿಸಲು ಮುಂದಾಗಿದೆ.
ಈ ನಿಟ್ಟಿನಲ್ಲಿ ಒಂದೆಡೆ ಡಿಕೆ ಶಿವಕುಮಾರ್ ಗೆ ಸೂಚನೆ ನೀಡಿ ಮಾತುಕತೆ ನಡೆಸುವಂತೆ ತಿಳಿಸಿದ್ದು ನಿನ್ನೆ ಸಿದ್ದರಾಮಯ್ಯ ನಿವಾಸಕ್ಕೆ ಡಿಕೆಶಿ ಆಗಮಿಸಿ ಮನವೊಲಿಸುವಲ್ಲಿ ಸಫಲರಾಗಿದ್ದಾರೆ. ಮಾತುಕತೆ ಸಫಲವಾದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಇಂದು ಕಾಂಗ್ರೆಸ್ ಜಾಥಾದಲ್ಲಿ ಪಾಲ್ಗೊಂಡಿದ್ದಾರೆ. ಮತ್ತೊಂದೆಡೆ ಹೈಕಮಾಂಡ್ ಪರವಾಗಿ ಸಿದ್ದರಾಮಯ್ಯ ಬಳಿ ಎಐಸಿಸಿ ಕಾರ್ಯದರ್ಶಿ ಮಧು ಯಕ್ಷಿ ಗೌಡ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಕಳೆದ ಒಂದೆರಡು ವಾರಗಳಿಂದ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದ ಕಾಂಗ್ರೆಸ್ ನಾಯಕರ ನಡುವಿನ ಆಂತರಿಕ ಸಮರ ಬಹುತೇಕ ಕೊನೆಗೊಂಡಿದೆ.
ಇದೀಗ ಮೈಸೂರು ಮೇಯರ್ ಆಯ್ಕೆಯಲ್ಲಿ ಕಾಂಗ್ರೆಸ್ಸಿಗೆ ಇನ್ನೆರಡೆ ಹಾಗಿರುವಲ್ಲಿ ಸಿದ್ದರಾಮಯ್ಯ ವರ್ಚಸ್ಸು ಕಡಿಮೆ ಮಾಡುವ ಉದ್ದೇಶವೇ ಇದೆ ಎಂಬ ಅಂಶ ಮನಗಂಡಿರುವ ಹೈಕಮಾಂಡ್ ಉಸ್ತುವಾರಿ ವಹಿಸಿಕೊಂಡಿದ್ದ ತನ್ವೀರ್ ಸೇಠ್ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ತನ್ವೀರ್ ವಿರುದ್ಧ ಕ್ರಮ ಆಗುವವರೆಗೂ ತಾವು ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದ ಹಿನ್ನೆಲೆ ತರಾತುರಿಯಲ್ಲಿ ಹೈಕಮಾಂಡ್ ಮಧುಯಸ್ಕಿ ಗೌಡರನ್ನ ರಾಜ್ಯಕ್ಕೆ ಕಳಿಸಿ ತನಿಖೆ ನಡೆಸುವ ಕಾರ್ಯ ಮಾಡಿದೆ.
ನಿನ್ನೆ ಬೆಂಗಳೂರಿಗೆ ಆಗಮಿಸಿದ್ದ ಮಧು ಯಕ್ಷಿ ಗೌಡ ಸಿದ್ದರಾಮಯ್ಯ ಹಾಗೂ ಡಿಕೆಶಿ ಜೊತೆ ಚರ್ಚೆ ನಡೆಸಿದ ನಂತರ ಮೈಸೂರಿಗೆ ತೆರಳಿ ಅಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಪಾಲಿಕೆ ಸದಸ್ಯರ ಜೊತೆ ಚರ್ಚಿಸಿ ವಸ್ತು ಸ್ಥಿತಿ ಅರಿಯುವ ಪ್ರಯತ್ನ ಮಾಡಿದ್ದಾರೆ. ಇಂದು ಬೆಳಗ್ಗೆ ನೇರವಾಗಿ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ಕೊಟ್ಟವರು ಅಲ್ಲಿ ಸಮಾಲೋಚಿಸಿದ ವಿಚಾರಗಳ ಕುರಿತು ಮಾಹಿತಿ ಒದಗಿಸಿದ್ದಾರೆ.
ಈ ಸಂದರ್ಭ ಕೂಡ ತನ್ವೀರ್ ಸೈಟ್ ವಿರುದ್ಧ ಕ್ರಮದ ಭರವಸೆಯನ್ನು ಅವರು ನೀಡಿದ್ದು ಒಂದು ಹಂತಕ್ಕೆ ಸಮಾಧಾನಚಿತ್ತರಾಗಿ ಸಿದ್ದರಾಮಯ್ಯ ಕಾಂಗ್ರೆಸ್ ಜಾಥದಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: OPINION| ಭಾರತದ ರಾಜಕೀಯ ವರ್ಗಕ್ಕೆ ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ ನೀಡಿದ ಪ್ರಮುಖ ಪಾಠಗಳು
ಇತ್ತೀಚಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ಸಿದ್ದರಾಮಯ್ಯ ಬೇಸರಗೊಂಡಿದ್ದು, ಯಾವುದೇ ಕಾರಣಕ್ಕೂ ಇದು ಮುಂದುವರಿಯದಂತೆ ನೋಡಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್ ಪ್ರಕರಣವನ್ನು ತೀರಾ ಗಂಭಿರವಾಗಿ ಪರಿಗಣಿಸಿದೆ. ಒಂದು ವೇಳೆ ಸಿದ್ದರಾಮಯ್ಯ ಅವರೇನಾದರೂ ಮುನಿಸಿಕೊಂಡು ಪಕ್ಷದಿಂದ ದೂರವಾದರೇ ಅಥವಾ ತಟಸ್ಥರಾದರೇ ಅದರಿಂದ ಆಗುವ ನಷ್ಟದ ಅಂದಾಜಿರುವ ಹೈಕಮಾಂಡ್ ತುರ್ತು ಕ್ರಮಕ್ಕೆ ಮುಂದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ