ಚಿತ್ರದುರ್ಗ(ಸೆ.15): ಸಾರ್ವಜನಿಕರ ಸಂಚಾರ ಸುಗಮವಾಗಿರಲಿ ಅಂತ ಉತ್ತಮ ರಸ್ತೆ ನಿರ್ಮಾಣಕ್ಕೆ ಸರ್ಕಾರ ಕೋಟಿಗಟ್ಟಲೆ ಹಣ ನೀಡಿದೆ. ಆ ಸರ್ಕಾರದ ಹಣ ಪೋಲಾಗದಂತೆ ತಡೆಯೋದು ಅಧಿಕಾರಿಗಳ ಕರ್ತವ್ಯ. ಆದರೆ ಚಿತ್ರದುರ್ಗ ಜಿಲ್ಲೆಯ PWD ಲಜ್ಜೆಗೆಟ್ಟ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಜನರ ಪ್ರಾಣಕ್ಕೆ ಕುತ್ತು ಬರುವಂತಿದೆ. ಕೋಟಿ ಕೋಟಿ ವೆಚ್ಚದ ರಸ್ತೆಯ ನಟ್ಟ ನಡುವೆ ವಿದ್ಯುತ್ ಕಂಬಗಳನ್ನ(Electric Poles) ಬಿಟ್ಟಿರೋ ಗುತ್ತಿಗೆದಾರ ಸಿಸಿ ರಸ್ತೆ ನಿರ್ಮಿಸಿ ಯಡವಟ್ಟು ಮಾಡಿದ್ದಾನೆ. ಅಧಿಕಾರಿಗಳು, ಗುತ್ತಿಗೆದಾರನ ಅವಿವೇಕಿತನಕ್ಕೆ ಚಿತ್ರದುರ್ಗ(Chitradurga) ಜಿಲ್ಲೆಯ ಜನರು ಹಿಡಿಶಾಪ ಹಾಕಿದ್ದಾರೆ.
ಇದು ಚಿತ್ರದುರ್ಗ ನಗರದ ತುರುವನೂರು ಮಾರ್ಗದ RTO ಕಚೇರಿ ಮುಂಭಾಗದ ಮುಖ್ಯ ರಸ್ತೆ. ಇಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಬರೋಬ್ಬರಿ ಏಳು ಕೋಟಿ ಹಣ ಮಂಜೂರು ಮಾಡಿದೆ ಸರ್ಕಾರ. ಸಾರ್ವಜನಿಕರ ನಿರೀಕ್ಷೆ ಪ್ರಕಾರ ಎಲ್ಲಿಯೂ ಎಡರು ತೊಡರು ಇರದಂತ ರಾಜಪಥದಂತ ರಸ್ತೆ ನಿರ್ಮಾಣ ಆಗಬೇಕಿತ್ತು. ಆದರೆ ಯಾರೂ ನಿರೀಕ್ಷಿಸದ ಅಫಘಾತಕಾರಿ ರಸ್ತೆ ನಿರ್ಮಾಣವಾಗಿದೆ. ಅದೇನಂದ್ರೆ ನಟ್ಟ ನಡುವೆ ವಿದ್ಯುತ್ ಕಂಬಗಳನ್ನ ಬಿಟ್ಟು ಹೊಸದಾಗಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ರಸ್ತೆ ನಡುವೆಯ ವಿದ್ಯುತ್ ಕಂಬಗಳು ವಾಹನ ಸವಾರರ ಜೀವ ಬಲಿ ಪಡೆಯೋಕೆ ಯಮನಂತೆ ಕಾದು ನಿಂತಂತಿವೆ.
ರಸ್ತೆ ಅಗಲೀಕರಣಕ್ಕೆ ಮಧ್ಯದಿಂದ 10.5 ಮೀಟರ್ ಅಗಲ ಅಳತೆ ಮಾಡಿದ್ದ PWD ಅಧಿಕಾರಿಗಳು, ಈ ರಸ್ತೆ ಅಕ್ಕಪಕ್ಕದಲ್ಲಿದ್ದ ದಿನ-ನಿತ್ಯ ಜನರಿಗೆ ನೆರಳು ಕೊಡುವ ಮರಗಳನ್ನ ಕಡಿದು ಬುಡಸಮೇತ ನೆಲಸಮ ಮಾಡಿದ್ದಾರೆ. ಆದರೆ ತಾಂತ್ರಿಕವಾಗಿ ಬಳಕೆಯಲ್ಲಿದ್ದ ವಿದ್ಯುತ್ ಕಂಬಗಳನ್ನ ಪಕ್ಕಕ್ಕೆ ಶಿಫ್ಟ್ ಮಾಡಲು ಮಾತ್ರ ಮನಸು ಮಾಡಿಲ್ಲ. ಇತ್ತ ಒಂದೂವರೆ ವರ್ಷದಿಂದ ಕುಂಠಿತವಾಗಿದ್ದ ರಸ್ತೆ ಕಾಮಗಾರಿ ಮುಗಿದ್ರೆ ಸಾಕು ಅಂತ ಗುತ್ತಿಗೆದಾರ ಕಂಬಗಳನ್ನ ರಸ್ತೆಯಲ್ಲಿಯೇ ಬಿಟ್ಟು ಕಾಂಕ್ರೀಟ್ ಹಾಕಿದ್ದಾರೆ.
ಇದನ್ನೂ ಓದಿ:Gold Price Today: ಮತ್ತೆ ಇಳಿಕೆಯಾದ ಚಿನ್ನದ ಬೆಲೆ; ಬೆಂಗಳೂರಿನಲ್ಲಿ ಇಂದಿನ ರೇಟ್ ಹೀಗಿದೆ
ಈ ಅವೈಜ್ಞಾನಿಕ ಕಾಮಗಾರಿಯನ್ನ ನೋಡಿರೋ ಸಾರ್ವಜನಿಕರು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇವರು ಮಾಡಿರೋ ಗನಂಧಾರಿ ಕೆಲಸಕ್ಕೆ ಅಮಾಯಕ ಜೀವಗಳು ಬಲಿಯಾಗೋ ಮೊದಲು ಜಿಲ್ಲಾಡಳಿತ, ಎಚ್ಚೆತ್ತು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು. ಅನಗತ್ಯವಾಗಿ ಕಡಿದಿರೋ ಮರಗಳ ಬದಲಾಗಿ ಮತ್ತೆ ರಸ್ತೆ ಬದಿ ಸಸಿಗಳನ್ನ ಹಾಕಿ ಬೆಳಸಬೇಕು ಅಂತ ಆಗ್ರಹಿಸಿದ್ದಾರೆ.
ಇನ್ನೂ ಈ ಕುರಿತು ಪ್ರತಿಕ್ರಿಯೆ ನೀಡಿರುವ ಲೋಕೋಪಯೋಗಿ ಇಲಾಖೆ ಇಇ ಸತೀಶ್ ಬಾಬು, ಈ ಕಾಮಗಾರಿ ಕಳೆದ ಒಂದೂವರೆ ವರ್ಷದ ಹಿಂದೆ ಮಂಜೂರಾಗಿ ಕಾಮಗಾರಿ ನಡೆಯುತ್ತಲಿದೆ. ರಸ್ತೆ ಮಧ್ಯೆ ಬರುವ ವಿದ್ಯುತ್ ಕಂಬಗಳ ತೆರವಿಗೆ ವಿದ್ಯತ್ ವಿಭಾಗಕ್ಕೆ ಈಗಾಗಲೇ 62 ಲಕ್ಷ ನೀಡಿದ್ದೇವೆ. ಅವರು ಈಗ ಟೆಂಡರ್ ಕರೆದಿದ್ದು, ಇನ್ನು ಹದಿನೈದು ದಿನಗಳಲ್ಲಿ ಕಂಬಗಳ ತೆರವು ಮಾಡುತ್ತಾರೆ. ಅಲ್ಲಿವರೆಗೂ ನಾವು ಸಾರ್ವಜನಿಕರ ಓಡಾಟಕ್ಕೆ ರಸ್ತೆಯನ್ನ ಬಿಡುವುದಿಲ್ಲ. ಇನ್ನೂ ಮರ ಕಡಿಯೋಕೆ ಪರ್ಮಿಷನ್ ಸಿಕ್ಕಿತ್ತು, ಇದಕ್ಕೆ ಸಿಕ್ಕಿರಲಿಲ್ಲ, ಇನ್ನು ಮುಂದೆ ಈ ರೀತಿ ಆಗದಂತೆ ನಮ್ಮ ಎಇಇ ಗೆ ಸೂಚನೆ ನೀಡಿದ್ದೇವೆ. ಆದರೇ ಅಲ್ಲಿರೋ ಕಂಬಗಳು ಉಪಯೋಗಕ್ಕೆ ಬರುವುದಿಲ್ಲ. ಆದ್ದರಿಂದ ಅವಗಳನ್ನ ಕಟ್ ಮಾಡುತ್ತೇವೆ. ಇದರಿಂದ ಸರ್ಕಾರದ ಯಾವ ಹಣವೂ ಪೋಲಾಗಲ್ಲ ಎನ್ನುತ್ತಲೇ ಹೊಸ ಕಂಬಗಳಿಗೆ ಹಣ ಖರ್ಚಾಗೇ ಆಗುತ್ತದೆ ಎಂದು ಜಾಣ ಕುರುಡು ಪ್ರದರ್ಶನ ಮಾಡಿದ್ದಾರೆ. ಇವರ ಈ ಹೇಳಿಕೆ ಕಾಮಗಾರಿ ಮೇಲಿರುವ ಇವರ ಜವಾಬ್ದಾರಿ ಎಷ್ಟರ ಮಟ್ಟಿಗೆ ಇದೆ ಅನ್ನೋದನ್ನ ತೋರಿಸುತ್ತಿದೆ.
ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
ಒಟ್ಟಾರೆ ಕೋಟಿಗಟ್ಟಲೆ ರಸ್ತೆ ಕಾಮಗಾರಿಯನ್ನ ಟೆಂಡರ್ ಪಡೆದಿರೋ ಗುತ್ತಿಗೆದಾರ ಹೆಂಗಾದ್ರು ಸರಿ ಕಾಮಗಾರಿ ಮುಗಿಸಿ ಬಿಲ್ ಪಡೆಯೋ ಧಾವಂತದಲ್ಲಿದ್ದಾನೆ. ಆದರೆ ಸರ್ಕಾರಕ್ಕೆ ಹೆಸರು ತರುವಂತ ಕೆಲಸ ಮಾಡಬೇಕಿರೋ ಅಧಿಕಾರಿಗಳು ನಮಗೂ ಅದಕ್ಕೂ ಸಂಬಂಧವಿಲ್ಲ, ಆದಂಗಾಗ್ಲಿ ಮಾದಪ್ಪನ ಜಾತ್ರೆ ಅನ್ನೋ ತರ ದಿವ್ಯ ನಿರ್ಲಕ್ಷಕ್ಕೆ ಜಾರಿದ್ದಾರೆ. ಇಷ್ಟೆಲ್ಲಾ ಕಂಡ್ರೂ ಕಾಣದಂತೆ ಜಿಲ್ಲಾಧಿಕಾರಿ, ಜಿಲ್ಲಾಡಳಿತ ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಇವರ ನಡೆಗೆ ಜನರು ತಿರುಗಿ ಬೀಳೋ ಮೊದಲು ಇಡೀ ಚಿತ್ರದುರ್ಗ ಜಿಲ್ಲಾಡಳಿತ ಎಚ್ಚೆತ್ತು ಇಂತಹ ಅಸಡ್ಡೆಕೋರರಿಗೆ ಚಾಟಿ ಬೀಸಿ ಉತ್ತಮ ಕೆಲಸ ಪಡೆದು ಸಾರ್ವಜನಿಕರ ಹಿತ ಕಾಯಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ