ಬೀದರ್(ಸೆಪ್ಟೆಂಬರ್. 08): ಬೀದರ್ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ. ಬಿ.ಆರ್. ಅಂಬೇಡ್ಕರ್, ಇಂದಿರಾ ಗಾಂಧಿ, ಏಕಲವ್ಯ ವಸತಿ ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 200ಕ್ಕೂ ಹೆಚ್ಚು ಶಿಕ್ಷಕರು, ಪ್ರಥಮ ದರ್ಜೆ ಸಹಾಯಕರು, ಹಾಗೂ ಶುಶ್ರೂಷಕಿಯರು ಆರು ತಿಂಗಳುಗಳ ಕಾಲ ವೇತನವಿಲ್ಲದೆ ಪರದಾಡುತ್ತಿದ್ದಾರೆ. ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಯಾವುದೇ ಕಂಪನಿ ತನ್ನ ಸಿಬ್ಬಂದಿಗಳ ಸಂಬಳವನ್ನು ಕಡಿತಗೊಳಿಸಬಾರದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಸ್ಪಷ್ಟ ನಿರ್ದೇಶನವನ್ನೇ ಹೊರಡಿಸಿವೆ. ಸರ್ಕಾರ ತಾನು ಮಾಡಿದ ಆದೇಶಗಳಿಗೆ ತಾನೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಇದು ಶಿಕ್ಷಕರನ್ನು, ಡಿ ಗ್ರೂಪ್ ನೌಕರರನ್ನು ಕಂಗೆಡಿಸಿದ್ದು, ಜೀವನ ನಡೆಸಲು ಶಿಕ್ಷಕ ವೃಂದ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಈ ವರ್ಷವಂತೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಶಿಕ್ಷಕರು, ಪ್ರಥಮ ದರ್ಜೆ ಸಹಾಯಕರು, ಹಾಗೂ ಶುಶ್ರೂಷಕಿಯರನ್ನು ಮುಂದುವರೆಸುವ ಯೋಚನೆಯನ್ನೇ ಸರ್ಕಾರ ಮಾಡಿಲ್ಲ. ಒಂದು ವೇಳೆ ಈ ವರ್ಷ ವಿವಿಧ ವಸತಿ ಶಾಲೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳನ್ನು ಕೆಲಸದಲ್ಲಿ ಮುಂದುವರೆಸದೇ ಹೋದರೆ ಇವರ ಕುಟುಂಬಗಳು ಬೀದಿಗೆ ಬೀಳುವ ಆತಂಕ ಎದುರಾಗಿದೆ.
ಕಳೆದ ಹತ್ತಾರು ವರ್ಷದಿಂದ ಕೆಲಸ ಮಾಡಿ ಬಂದ ಸಂಬಳದಿಂದ ಜೀವನ ನಡೆಸುತ್ತಿದ್ದವರು ನಾವು. ಆದರೆ, ಈಗ ಏಕಾ ಏಕಿ ನಮ್ಮನ್ನು ಕೆಲಸದಿಂದ ತೆಗೆಯುವ ಯೋಚನೆ ಮಾಡಿದೆ ಮತ್ತು ಬಾಕಿ ಇರುವ ಆರು ತಿಂಗಳ ಸಂಬಳ ಕೊಡದೆ ಹೋದರೆ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಕುಟುಂಬ ಸಮೇತವಾಗಿ ಬಂದು ಧರಣಿ ಮಾಡುವುದಾಗಿ ಪ್ರತಿಭಟನಾಕಾರರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಾವು ಪ್ರತಿ ತಿಂಗಳು ಬಾಡಿಗೆ ಕಟ್ಟಬೇಕು. ರೇಷನ್ ತರಬೇಕು. ನಮ್ಮ ಬದುಕೇ ಸಂಬಳದ ಮೇಲಿರುತ್ತದೆ. ಆದರೆ, ಇವರು ನೋಡಿದರೆ ಆರು ತಿಂಗಳ ಸಂಬಳ ನೀಡಿಲ್ಲ. ನಾವು ಜೀವನ ನಡೆಸುವುದಾದರೂ ಹೇಗೆ? ಎಂಬ ಪ್ರಶ್ನೆ ಹೊರಗುತ್ತಿಗೆ ನೌಕರರದ್ದು. ಜೊತೆಗೆ ಹತ್ತಾರು ವರ್ಷದಿಂದ ವಸತಿ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ನಾವು ಬೇರೆ ಕೆಲಸಕ್ಕೆ ಹೋಗಿಲ್ಲ. ಈ ಶಾಲೆಗಳಲ್ಲಿ ಕೆಲಸ ಮಾಡುತ್ತಾ ನಮ್ಮ ವಯೋಮಿತಿ ಮೀರಿ ಹೋಗಿದೆ.
ಇತರೆ ಸರ್ಕಾರಿ ನೌಕರಿಗೂ ನಾವು ಅರ್ಹರಲ್ಲ. ಹೀಗಾಗಿ ನಮ್ಮನ್ನು ಈಗಿನ ನೌಕರಿಯಲ್ಲಿ ಮುಂದುವರೆಸಿ ನಮ್ಮ ಬಾಕಿ ಸಂಬಳವನ್ನು ನೀಡಬೇಕು ಎಂದು ಮನವಿ ಮಾಡುತ್ತಿದ್ದಾರೆ. ಆ ಕಾರಣಕ್ಕೆ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹೊರಗುತ್ತಿಗೆ ನೌಕರರು ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮನವಿ ಸಲ್ಲಿಸಿದರು.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ