ಮಲೆನಾಡಲ್ಲಿ ಮುಂದುವರೆದ ಮಳೆಯ ಆರ್ಭಟ; ಉಕ್ಕಿ ಹರಿಯುತ್ತಿರುವ ತುಂಗಾ-ಭದ್ರಾ, ಭಯದಲ್ಲಿ ಮಲೆನಾಡಿಗರು

ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯಲ್ಲೂ ಗುರುವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಮಳೆಯಿಂದಾಗಿ ಭತ್ತ, ಶುಂಠಿ ಗದ್ದೆಗಳಲ್ಲಿ ಮಳೆ ನೀರು ನಿಂತು ಬೆಳೆ ನಷ್ಟವಾಗಿದೆ. ಭದ್ರಾನದಿ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಲಕ್ಕವಳ್ಳಿ ಡ್ಯಾಂ ನೀರಿನ ಸಂಗ್ರಹ ಏರಿಕೆಯಾಗಿದೆ.

ತುಂಗಾ ಅಣೆಕಟ್ಟು

ತುಂಗಾ ಅಣೆಕಟ್ಟು

  • Share this:
ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಜನ ಭಯದಲ್ಲೇ ಬದುಕುವಂತಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಗುರುವಾರ ರಾತ್ರಿ ಸುರಿದ ಭಾರೀ ಮಳೆಗೆ ಮಲೆನಾಡಿನ ಜನರು ಬೆಚ್ಚಿ ಬಿದ್ದಿದ್ದಾರೆ.

ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಅಡಿಕೆ, ಕಾಫಿ, ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಅಲ್ಲಲ್ಲಿ ಭೂ ಕುಸಿತವಾಗಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಬ್ಬರು ಮೃತಪಟ್ಟಿದ್ದು, 54 ಮನೆಗಳಿಗೆ ಹಾನಿ ಯಾಗಿದೆ. ಐದು ದಿನಗಳಿಂದ ಜಿಲ್ಲಾದ್ಯಂತ ಮಳೆಯಾಗುತ್ತಿದ್ದು, ಬುಧವಾರ ಮತ್ತು ಗುರುವಾರ ರಾತ್ರಿ ಎಡಬಿಡದೆ ಸುರಿದ ಬಾರೀ ಮಳೆಗೆ ಮೂಡಿಗೆರೆ ತಾಲ್ಲೂಕಿನಲ್ಲಿ ಹರಿಯುವ ಭದ್ರಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಹೆಬ್ಬಾಳೆ ಸೇತುವೆ ಪದೇ ಪದೇ ಮುಳುಗಡೆಯಾಗುತ್ತಿದೆ. ಮಂಗಳವಾರ ಮುಳುಗಡೆಯಾಗಿ ಬುಧವಾರ ಸಂಜೆ ಸಮಯದಲ್ಲಿ ಕಳಸ ಹೊರನಾಡು ಸಂಚಾರಕ್ಕೆ ಮುಕ್ತವಾಗಿದ್ದ ಸೇತುವೆ. ಗುರುವಾರ ರಾತ್ರಿ ಸುರಿದ ಬಾರೀ ಮಳೆಗೆ ಶುಕ್ರವಾರದ ಮಧ್ಯಾಹ್ನದ ವರೆಗೂ ಮುಳುಗಡೆ ಯಾಗಿತ್ತು. ಶುಕ್ರವಾರ ರಾತ್ರಿ ಮತ್ತೇ ಮಳೆಯಾದರೆ ಸೇತುವೆ ಮುಳುಗಡೆಯಾಗುವ ಸಂಭವವಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಮೂಡಿಗೆರೆ ತಾಲ್ಲೂಕಿನಾದ್ಯಂತ ಸುರಿದ ಬಾರೀ ಮಳೆಗೆ ನೂರಾರು ಮರಗಳು, ವಿಧ್ಯುತ್ ಕಂಬಗಳು ಧರೆಗುರುಳಿವೆ. ಉದುಸೆ ಗ್ರಾಮದ ಚಂದ್ರಮ್ಮ ಎಂಬುವರ ಮನೆ ಛಾವಣಿ, ಗೋಡೆ ಕುಸಿದು ಬಿದ್ದಿದೆ. ಛತ್ರಮೈದಾನದಲ್ಲಿ ಹಿಂದಿನ ವರ್ಷ ನಿರ್ಮಿಸಿದ್ದ ನಾಗಮ್ಮ ಎಂಬುವರ ಮನೆಯ ಅಡಿಪಾಯವೇ ಕೊಚ್ಚಿ ಹೋಗಿ ಮನೆ ಕುಸಿಯುವ ಹಂತದಲ್ಲಿದೆ.

ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಕಿರುಗುಂದ ಗ್ರಾಮದಲ್ಲಿ ಹೇಮಾವತಿ ನದಿ ನೀರು ಶುಂಠಿಗದ್ದೆಗೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ಶುಂಠಿಬೆಳೆ ನಾಶವಾಗಿದೆ. ಕಳಸ ಹೋಬಳಿ ಹೊರನಾಡು ಗ್ರಾಮದಿಂದ ಬಲಿಗೆ ಸಮೀಪ ರಸ್ತೆ ಮೇಲೆ ಗುಡ್ಡ ಕುಸಿದು ಬೃಹತ್ ಗಾತ್ರದ ಕಲ್ಲು ಮತ್ತು ಮಣ್ಣು ರಸ್ತೆಮೇಲೆ ಬಿದಿದ್ದು, ಮೆಣಸಿನಹಾಡ್ಯ, ಕೊಗ್ರೆ, ಜಯಪುರ, ಶೃಂಗೇರಿ ಸಂಪರ್ಕ ಕಡಿತಗೊಂಡಿತ್ತು. ಹೊರನಾಡು ಗ್ರಾಮ ಪಂಚಾಯತ್ ಪಿಡಿಓ ಸ್ಥಳಪರಿಶೀಲನೆ ನಡೆಸಿದರು. ಜಿಲ್ಲಾಡಳಿತ ರಸ್ತೆ ತೆರವಿಗೆ ಮುಂದಾಗಿದೆ.

ನರಸಿಂಹರಾಜಪುರ ತಾಲ್ಲೂಕು ಬಾಳೆಹೊನ್ನೂರು ಪಟ್ಟಣದಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಭದ್ರಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿಪಾತ್ರದ ಅಡಿಕೆತೋಟ, ಭತ್ತದಗದ್ದೆ ಜಲಾವೃತಗೊಂಡಿವೆ. ಪಟ್ಟಣದ ಸಂತೇಮೈದಾನಕ್ಕೆ ನೀರು ನುಗ್ಗಿದ್ದು, ನದಿಪಾತ್ರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಭದ್ರಾನದಿನೀರು ಉಕ್ಕಿ ಹರಿದ ಪರಿಣಾಮ ಬಾಳೆಹೊನ್ನೂರು-ಕಳಸ ರಸ್ತೆ ಕೆಲಕಾಲ ಬಂದ್ ಆಗಿತ್ತು.

ಶೃಂಗೇರಿ ತಾಲ್ಲೂಕಿನಲ್ಲಿ ಹಾದುಹೋಗುವ ತುಂಗಾನದಿ ಅಪಾಯದ ಮಟ್ಟ ಮೀರಿ ಹರಿದಿದ್ದು, ಶಾರದಾಂಭೆ ದೇವಾಲದ ಸಮೀಪದಲ್ಲಿರುವ ವಾಹನ ನಿಲುಗಡೆ ಸ್ಥಳ ಗಾಂಧಿ ಮೈದಾನ, ಭೋಜನಾ ಶಾಲೆ, ಕಪ್ಪೆಶಂಕರ ದೇವಸ್ಥಾನ ಗುರುಭವನ ರಸ್ತೆ ಬಂದ್ ಆಗಿತ್ತು. ಪಟ್ಟಣದ ಮುಖ್ಯ ರಸ್ತೆಯ ಮನೆಗಳಿಗೆ ನೀರು ನುಗ್ಗಿದ್ದು, ಮನೆಗಳಲ್ಲಿ ಸಿಲುಕಿಕೊಂಡಿದ್ದ 15ಕ್ಕೂ ಜನರನ್ನು ಅಗ್ನಿಶಾಮಕದಳದ ಸಿಬ್ಬಂದಿ ಎರಡು ಗಂಟೆಗಳ ಸತತ ಕಾರ್ಯಚರಣೆ ನಡೆಸಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ. ಮನೆ ಮುಂದೇ ನಿಲ್ಲಿಸಿದ್ದ ವಾಹನಗಳು ಜಲಾವೃತಗೊಂಡಿವೆ. ಕೆರೆಕಟ್ಟೆ-ಎಸ್.ಕೆ.ಬಾರ್ಡರ್ ಮೂಲಕ ಮಂಗಳೂರು ಸಂಪರ್ಕ ಕಲ್ಪಿಸುವ ಹೆದ್ದಾರಿ ತುಂಗಾನದಿ ಪ್ರವಾಹದ ನೀರಿನಿಂದ ಮುಳುಗಿದ್ದು ಕೆಲಸಮಯ ಸಂಚಾರ ಕಡಿತಗೊಂಡಿತ್ತು.

ಕೊಪ್ಪ ತಾಲ್ಲೂಕಿನಲ್ಲಿ ತುಂಗಾನದಿ ಪ್ರವಾಹದಿಂದ ಜಯಪುರ-ಕೊಪ್ಪ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ನೀರು ನಿಂತ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಶೃಂಗೇರಿ-ಚಿಕ್ಕಮಗಳೂರು ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿ ರಸ್ತೆಗೆ ಹಾನಿಯಾಗಿದ್ದು ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ನದಿಪಾತ್ರದ ಅಡಿಕೆ, ಭತ್ತದ ಗದ್ದೆ ಜಲಾವೃತಗೊಂಡಿದೆ. ಕೊಪ್ಪ ತಾಲ್ಲೂಕಿನ ಭಂಡಿಗಡಿ ಸಮೀಪದ ಹರಕ್ಕನಮಕ್ಕಿ ಗ್ರಾಮದಲ್ಲಿ ತುಂಗಾನದಿ ಉಕ್ಕಿ ಹರಿದಿದ್ದು, ಸುಮಾರು ಎಂಟು ಮನೆಗಳಿಗೆ ನೀರು ನುಗ್ಗಿದೆ. ಗ್ರಾಮವನ್ನು ತೊರೆದಿರುವ ಜನರು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ತಮ್ಮೊಂದಿಗೆ ದನಕರಗಳನ್ನು ಕರೆದೊಯ್ದಿದ್ದಾರೆ.

ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯಲ್ಲೂ ಗುರುವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಮಳೆಯಿಂದಾಗಿ ಭತ್ತ, ಶುಂಠಿ ಗದ್ದೆಗಳಲ್ಲಿ ಮಳೆ ನೀರು ನಿಂತು ಬೆಳೆ ನಷ್ಟವಾಗಿದೆ. ಭದ್ರಾನದಿ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಲಕ್ಕವಳ್ಳಿ ಡ್ಯಾಂ ನೀರಿನ ಸಂಗ್ರಹ ಏರಿಕೆಯಾಗಿದೆ. ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ಜಿಲ್ಲಾಧಿಕಾರಿ ಡಾ|ಬಗಾದಿ ಗೌತಮ್ ಮತ್ತು ಅಧಿಕಾರಿಗಳ ತಂಡ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

 ಚಾರ್ಮಾಡಿಘಾಟಿ ಸಂಚಾರ ಬಂದ್ :

ಗುರುವಾರ ರಾತ್ರಿಯಿಂದ ಸುರಿದ ಬಾರೀ ಮಳೆಗೆ ಚಿಕ್ಕಮಗಳೂರು ಮಂಗಳೂರು ಸಂಪರ್ಕ ಕಲ್ಪಿಸುವ ಚಾರ್ಮಾಡಿಘಾಟ್ ರಸ್ತೆಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿದು ರಸ್ತೆ ಮೇಲೆ ಬಿದ್ದ ಪರಿಣಾಮ ವಾಹನ ಸಂಚಾರವನ್ನ ಸಂಪೂರ್ಣ ಬಂದ್ ಮಾಡಲಾಗಿದೆ. ಇಂದಿನಿಂದ ಆಗಸ್ಟ್ 11 ರವರೆಗೆ ಸಂಪೂರ್ಣ ಸಂಚಾರ ಬಂದ್ ಮಾಡಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಮಾಡಿದ್ದಾರೆ. ಇನ್ನು ಘಾಟಿಯ ರಸ್ತೆಯ ಮಧ್ಯಭಾಗದಲ್ಲಿ ಬಿರುಕು ಬಿಟ್ಟಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ : Air India Express Crash: ಕೇರಳ ವಿಮಾನ ಅಪಘಾತ ಪ್ರಕರಣ; ತನಿಖೆಗೆ ಆದೇಶಿಸಿದ ನಾಗರೀಕ ವಿಮಾನಯಾನ ಸಚಿವಾಲಯ

ಇಂಜಿನಿಯರ್ ಅರ್ಚನಾ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದು, ಮುಂಜಾಗೃತ ಕ್ರಮಕೈಗೊಳ್ಳಲಾಗಿದೆ. ಚಾರ್ಮಾಡಿಘಾಟಿ ರಸ್ತೆ ಸಂಚಾರ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಸುರಿಯುತ್ತಿದ್ದ ಮಳೆಯಲ್ಲೇ ಕೊಟ್ಟಿಗೆಹಾರ ಪಟ್ಟಣದಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಮಹಾಮಳೆಗೆ ಮತ್ತೋಂದು ಬಲಿ:ಭದ್ರಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನರಸಿಂಹರಾಜಪುರ ತಾಲ್ಲೂಕು ಅಂಡವಾನೆ ಗ್ರಾಮದ ಗದ್ದೆಗಳು ಜಲಾವೃತಗೊಂಡಿದ್ದು ಗುರುವಾರ ರಾತ್ರಿ ಗದ್ದೆ ಏರಿಯ ಮೇಲೆ ನಡೆದು ಹೋಗುತ್ತಿದ್ದ ಶಂಕರ್(40) ಎಂಬುವರು ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ಕಡೂರು ತಾಲ್ಲೂಕು ಯಗಟಿ ಗ್ರಾಮದಲ್ಲಿ ತುಂಡಾಗಿ ಬಿದಿದ್ದ ವಿಧ್ಯುತ್ ತಂತಿ ತುಳಿದು ರೈತರೊಬ್ಬರು ಮೃತಪಟ್ಟಿದ್ದರು.
Published by:MAshok Kumar
First published: