ಚಿಕ್ಕಮಗಳೂರಲ್ಲಿ ಹೈಡ್ರಾಮ; ಸಿ.ಟಿ. ರವಿ ವಿರುದ್ಧ ಕೈ ಕಾರ್ಯಕರ್ತರ ಪ್ರತಿಭಟನೆ; ಮನೆ ಮುಂದೆ ಬಿಜೆಪಿ ಬೆಂಬಲಿಗರ ಸರ್ಪಗಾವಲು

ಹಿರಿಯ ಕಾಂಗ್ರೆಸ್ಸಿಗರ ಸಿಟಿ ರವಿ ನೀಡುತ್ತಿರುವ ಹೇಳಿಕೆಗಳಿಂದ ಕೆರಳಿರುವ ಕಾಂಗ್ರೆಸ್ ಕಾರ್ಯಕರ್ತರು ನಿನ್ನೆ ಅವರ ಮನೆಗೆ ನುಗ್ಗಲು ವಿಫಲಯತ್ನ ಮಾಡಿದ್ಧಾರೆ. ಬಿಜೆಪಿ ಕಾರ್ಯಕರ್ತರೂ ಕೂಡ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಸೆಡ್ಡು ಹೊಡೆಯಲು ಪ್ಲಾನ್ ಮಾಡಿತ್ತು.

ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ

ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ

  • Share this:
ಚಿಕ್ಕಮಗಳೂರು: ಕಾಂಗ್ರೆಸ್ ಕಚೇರಿಯಲ್ಲೇ ನೆಹರೂ ಹುಕ್ಕಾ ಬಾರ್ ತೆರೆಯಿರಿ, ಇಂದಿರಾ ಕ್ಯಾಂಟಿನ್ ಬದಲಿಗೆ ಅನ್ನಪೂರ್ಣೇಶ್ವರಿ ಕ್ಯಾಂಟಿನ್ ಅಂತಾ ಮರುನಾಮಕರಣ ಮಾಡಿ ಎಂಬ ಕಾಂಗ್ರೆಸಿಗರನ್ನ ಕೆರಳಿಸುತ್ತಿದ್ದ ಬಿಜೆಪಿ ನಾಯಕ ಸಿ.ಟಿ ರವಿ ವಿರುದ್ಧ ಕೈ ಕಾರ್ಯಕರ್ತರು ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅಕ್ಷರಶಃ  ರೊಚ್ಚಿಗೆದ್ದಿದ್ರು. ನಗರದ ಬಸವನಹಳ್ಳಿಯಲ್ಲಿರುವ ಸಿ.ಟಿ ರವಿ ನಿವಾಸಕ್ಕೆ ಮುತ್ತಿಗೆ ಹಾಕೋ ಸಿದ್ದತೆ ಮಾಡಿಕೊಂಡಿದ್ರು. ಇದಕ್ಕಾಗಿ ರಾಜ್ಯ ಯುವ ಕಾಂಗ್ರೇಸ್ ಅಧ್ಯಕ್ಷ ರಕ್ಷಾ ರಾಮಯ್ಯ ನೇತೃತ್ವದಲ್ಲಿ ಹೋರಾಟ ಆಯೋಜನೆ ಆಗಿತ್ತು. ಆದ್ರೆ ಕೊನೆ ಘಳಿಗೆಯಲ್ಲಿ ರಕ್ಷಾ ರಾಮಯ್ಯ ಪ್ರತಿಭಟನೆಗೆ ಬಾರದೇ ‘ಕೈ’ ಎತ್ತಿದ್ದರಿಂದ ಸ್ಥಳೀಯ ಕಾಂಗ್ರೆಸ್ ನಾಯಕರೇ ಬಿಜೆಪಿ ನಾಯಕ ಸಿ.ಟಿ ರವಿ ನಿವಾಸಕ್ಕೆ ಮುತ್ತಿಗೆ ಹಾಕಲು ಕಾಂಗ್ರೆಸ್ ಕಚೇರಿಯಿಂದ ಕಾಲ್ನಡಿಗೆಯಲ್ಲೇ ಜಾಥಾ ಶುರುಮಾಡಿದ್ರು. ಬಿಜೆಪಿ ನಾಯಕ ಸಿ.ಟಿ ರವಿ ವಿರುದ್ಧ ಘೋಷಣೆ ಕೂಗುತ್ತಲೇ ಪ್ರತಿಭಟನೆ ಆರಂಭಿಸಿದ್ರು. ಆದ್ರೆ ಕಾಂಗ್ರೇಸ್ ಕಚೇರಿಯಿಂದ ಅಣತಿ ದೂರ ಬರುತ್ತಲ್ಲೇ ಐಜಿ ರಸ್ತೆಯಲ್ಲೇ ಪೊಲೀಸರು ಬ್ಯಾರಿಕೇಡ್ ಹಾಕಿ ಕಾರ್ಯಕರ್ತರನ್ನ ತಡೆದ್ರು. ಈ ವೇಳೆ ಪೊಲೀಸರು-ಕೈ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ, ನೂಕಾಟ ಏರ್ಪಟ್ಟು ದೊಡ್ಡ ಹೈಡ್ರಾಮವೇ ನಡೆಯಿತು. ಕೊನೆಗೆ ಬ್ಯಾರಿಕೇಡ್ ನುಗ್ಗಿ ಒಳಬಂದಿದ್ದರಿಂದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಎಂಎಲ್​ಸಿ ಗಾಯತ್ರಿ ಶಾಂತೇಗೌಡ, ಜಿಲ್ಲಾಧ್ಯಕ್ಷ ಅಂಶುಮಂತ್ ಸೇರಿದಂತೆ ಕೈ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ರು.

ಒಂದ್ಕಡೆ ಕಾಂಗ್ರೆಸ್ಸಿಗರು ನಿಗಿ ನಿಗಿ ಕೆಂಡದಂತೆ ಬಿಜೆಪಿ ನಾಯಕ ಸಿ.ಟಿ ರವಿ ಮೇಲೆ ಕೆಂಡಕಾರುತ್ತಾ ಮುತ್ತಿಗೆ ಹಾಕಲು ವಿಫಲ ಪ್ರಯತ್ನ ಮಾಡ್ತಿದ್ರೆ ಮತ್ತೊಂದೆಡೆ ಸಿ.ಟಿ ರವಿ ನಿವಾಸದ ಎದುರು ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ನೆರೆದಿದ್ದರು. ಯಾವ ಕಾಂಗ್ರೆಸ್ ಕಾರ್ಯಕರ್ತರು ಬರ್ತಾರೆ ಬರ್ಲಿ, ನಾವೂ ನೋಡೇ ಬಿಡ್ತೀವಿ ಅಂತಾ ತೊಡೆ ತಟ್ಟಿ ಅಖಾಡಕ್ಕೆ ಎಂಟ್ರಿಕೊಟ್ಟಿದ್ರು. ಕೈ-ಕಮಲ ಕಾರ್ಯಕರ್ತರನ್ನ ತಡೆಯಲು ಪೊಲೀಸರಂತೂ ಹರಸಾಹಸ ಪಡಬೇಕಾಗಿ ಬಂತು. ಇನ್ನು, ಈ ಬಗ್ಗೆ ಸುದ್ದಿಗೋಷ್ಠಿ ಕರೆದು ಮಾತನಾಡಿರೋ ಬಿಜೆಪಿ ನಾಯಕ ಸಿ.ಟಿ ರವಿ, ನಾನು ಇಂದು ಚಿಕ್ಕಮಗಳೂರಿನ ಮನೆಯಲ್ಲಿ ಇರಲಿಲ್ಲ. ಕೈ ಕಾರ್ಯಕರ್ತರು ಹೋಗಿದ್ರೆ ನನ್ನ ಪತ್ನಿ ಪಲ್ಲವಿ ಎಲ್ಲರಿಗೂ ರಾಕಿ ಕಟ್ಟಿ, ಸಿಹಿ ನೀಡಿ ಕಳಿಸುತ್ತಿದ್ರು ಅಂತಾ ತಮ್ಮದೇ ಧಾಟಿಯಲ್ಲಿ ಉತ್ತರ ನೀಡಿದ್ರು.

ಇದನ್ನೂ ಓದಿ: ವೈಟ್ ಕಾಲರ್ ರೌಡಿಗಳ ಮೇಲೆ ಕಣ್ಣಿಟ್ಟಿರುವ ಚನ್ನಪಟ್ಟಣ ಖಾಕಿ ಪಡೆ

ಕಾಫಿನಾಡಿನಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಯಿಂದಾಗಿ ಏನ್ ಆಗಿ ಬಿಡುತ್ತೋ ಏನೋ ಅನ್ನೋ ಸನ್ನಿವೇಶ ಏರ್ಪಟ್ಟಿತ್ತು. ಒಂದುವೇಳೆ ಕೈ ಕಾರ್ಯಕರ್ತರು ನಮ್ಮ ನಾಯಕನ ನಿವಾಸದ ಕಡೆ ಮುಖ ಮಾಡಲಿ, ಕಾಂಗ್ರೇಸ್ ಕಛೇರಿಗೆ ನಾವು ಮುತ್ತಿಗೆ ಹಾಕ್ತೀವಿ ಅಂತಾ ಬಿಜೆಪಿ ಕಾರ್ಯಕರ್ತರು ರೆಡಿಯಾಗಿದ್ರು. ಅಷ್ಟರಾಗಲೇ ಅಲರ್ಟ್ ಆದ ಕಾಫಿನಾಡ ಪೊಲೀಸರು ಕೈ ಕಾರ್ಯಕರ್ತರನ್ನ ಮಾರ್ಗಮಧ್ಯದಲ್ಲೇ ತಡೆದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ರು. ಕೈ ಕಾರ್ಯಕರ್ತರನ್ನ ತಡೆಯುವಾಗ ದೊಡ್ಡ ಹೈಡ್ರಾಮ ಏರ್ಪಟ್ಟಿದ್ದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಎರಡು ಕಡೆಯವರ ನಡೆಸಿದ ಪ್ರತಿಭಟನೆಯಲ್ಲಿ ಕೊರೊನಾ ನಿಯುಮಗಳನಂತೂ ಗಾಳಿಗೆ ತೂರಲಾಗಿತ್ತು. ಅದೇನೆ ಆಗಲಿ, ಬಿಜೆಪಿ ನಾಯಕ ಸಿ.ಟಿ. ರವಿ ಅವರ ಹೇಳಿಕೆಗಳು ಕೈ ನಾಯಕರು ಹಾಗೂ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದು, ಸದ್ಯ ಇಂದು ತಣ್ಣಗಾಗಿರೋ ಹೋರಾಟ ಮುಂದಿನ ದಿನಗಳಲ್ಲಿ ಮತ್ತೆ ಗರಿಗೆದರಿದ್ರೆ ಅಚ್ಚರಿ ಪಡಬೇಕಿಲ್ಲ.

ವರದಿ: ವೀರೇಶ್ ಹೆಚ್ ಜಿ
Published by:Vijayasarthy SN
First published: