HOME » NEWS » District » CONGRESS WON IN GANGAVATHI CORPORATION ELECTION MAK

ರಾಜ್ಯದ ಕುತೂಹಲ ಕೆರಳಿಸಿದ್ದ ಗಂಗಾವತಿ ನಗರಸಭೆ ಚುನಾವಣೆ; ಮತ್ತೆ ಕೈ ವಶವಾದ ಪ್ರತಿಷ್ಠಿತ ಕಣ

ಭಾರಿ ಕುತೂಹಲ ಕೆರಳಿಸಿದ್ದ ಗಂಗಾವತಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ನಗರಸಭೆ ಸುತ್ತಮುತ್ತ ಪೊಲೀಸ್ ಬಿಗಿ‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಚುನಾವಣಾ ಸ್ಥಳದ ಸುತ್ತಮುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು.

news18-kannada
Updated:November 2, 2020, 7:20 PM IST
ರಾಜ್ಯದ ಕುತೂಹಲ ಕೆರಳಿಸಿದ್ದ ಗಂಗಾವತಿ ನಗರಸಭೆ ಚುನಾವಣೆ; ಮತ್ತೆ ಕೈ ವಶವಾದ ಪ್ರತಿಷ್ಠಿತ ಕಣ
ಗೆಲುವಿನ ಸಂಭ್ರಮದಲ್ಲಿ ಕಾಂಗ್ರೆಸ್​ ನಾಯಕರು.
  • Share this:
ಕೊಪ್ಪಳ (ಗಂಗಾವತಿ):  ನಗರಸಭೆ ಸದಸ್ಯನ ಅಪಹರಣದಿಂದಾಗಿ ರಾಜ್ಯದ ಕುತೂಹಲ ಕೆರಳಿಸಿದ್ದ ಗಂಗಾವತಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ರೋಚಕವಾಗಿ, ಶಾಂತಿಯುತವಾಗಿ ಮುಗಿದಿದೆ. ಅಧಿಕಾರ‌ ಹಿಡಿಯುವ ಕಮಲದ ಕನಸು ನುಚ್ಚುನೂರಾಗಿದ್ದು, ಗಂಗಾವತಿ ನಗರಸಭೆ ಕೈ ವಶವಾಗಿದೆ. ಕಳೆದ ಒಂದು ವಾರದ ಹಿಂದಿನಿಂದಲೂ ಗಂಗಾವತಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯ ಕಸರತ್ತು ಜೋರಾಗಿತ್ತು. ಬಿಜೆಪಿಯ ಸದಸ್ಯೆಯೊಬ್ಬರು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದರು. ಹಾಗೆಯೇ ಕಾಂಗ್ರೆಸ್ ಸದಸ್ಯನೊಬ್ಬನನ್ನು ಬಿಜೆಪಿ‌ ಕಿಡ್ನ್ಯಾಪ್ ಮಾಡಿದೆ ಎನ್ನಲಾದ‌ ಸುದ್ದಿಯೊಂದು ಭಾರಿ ಸಂಚಲನ ಮೂಡಿಸಿತ್ತು. ನಿಗದಿಯಂತೆ ಸೋಮವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಬೆಳಗ್ಗೆಯೇ ಎರಡು ಪಕ್ಷದ ಸದಸ್ಯರು ಇತರೆ ಬೆಂಬಲಿಗ ಸದಸ್ಯರ ಜೊತೆ ಪ್ರತ್ಯೇಕ ಬಸ್‌ನಲ್ಲಿ ಆಗಮಿಸಿ ಮತದಾನದಲ್ಲಿ ತೊಡಗಿದರು.

ಬಸ್‌ನಲ್ಲಿ‌ ಬಂದು ಪೊಲೀಸ್ ಬಂದೋಬಸ್ತ್‌ನಲ್ಲಿ ಚುನಾವಣಾ ಸ್ಥಳಕ್ಕೆ ತೆರಳಿದರು.

ಗಂಗಾವತಿ ನಗರಸಭೆಯ 35 ಸ್ಥಾನಗಳ ಪೈಕಿ ಕಾಂಗ್ರೆಸ್ 17, ಬಿಜೆಪಿ 14, 2 ಜೆಡಿಎಸ್, 2 ಪಕ್ಷೇತರ ಬಲಾಬಲ‌ ಹೊಂದಿದೆ. ಗದ್ದುಗೆ‌ ಹಿಡಿಯಲು 18 ಮ್ಯಾಜಿಕ್ ನಂಬರ್ ಎಂದು ಪರಿಗಣಿಸಲಾಗಿತ್ತು. ಆದರೆ ಶಾಸಕ ಹಾಗೂ ಸಂಸದರ ಮತ ಸೇರಿಸಿದರೆ 19 ಮ್ಯಾಜಿಕ್ ಸಂಖ್ಯೆಯಾಗಿತ್ತು. ಚುನಾವಣೆಯ ಕೊನೇ ಹಂತದವರೆಗೂ ಈ ನಂಬರ್ ಯಾವ ಕಡೆ ಒಲಿಯುತ್ತದೆ ಎಂಬುದನ್ನು ಹೇಳುವುದೇ ಕಷ್ಟವಾಗಿತ್ತು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಮಾಲಾಶ್ರೀಯವರ ಪರ 19 ಮತಗಳು  ಹಾಗೂ ಬಿಜೆಪಿಯ ಜಯಶ್ರೀಯವರ 17 ಮತಗಳು ಚಲಾವಣೆಯಾಗಿದ್ದು ಒಂದು ಮತ ತಟಸ್ಥವಾಗಿತ್ತು.  ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿಯಿಂದ ಗೆದ್ದು ಕಾಂಗ್ರೆಸ್ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿದ್ದ ಸುಧಾ ಸೋಮನಾಥ ಪರ 20 ಮತಗಳು ಬಿಜೆಪಿಯ ಹೀರಾಬಾಯಿ ಅವರ ಪರ 17 ಮತಗಳು ಚಲಾವಣೆಗೊಂಡವು. ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ್ದ ಮಾಲಾಶ್ರೀ ಅಧ್ಯಕ್ಷರಾಗಿ, ಕಾಂಗ್ರೆಸ್ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಬಿಜೆಪಿಯ ಸುಧಾ ಸೋಮನಾಥ ಉಪಾಧ್ಯಕ್ಷರಾಗಿ ಗದ್ದುಗೆ ಹಿಡಿದರು.

ಬಿಗಿ ಬಂದೋಬಸ್ತ್:

ಭಾರಿ ಕುತೂಹಲ ಕೆರಳಿಸಿದ್ದ ಗಂಗಾವತಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ನಗರಸಭೆ ಸುತ್ತಮುತ್ತ ಪೊಲೀಸ್ ಬಿಗಿ‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಚುನಾವಣಾ ಸ್ಥಳದ ಸುತ್ತಮುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು.

ಪಕ್ಷ ವಿರೋಧಿ ಕೆಲಸ; ತಿಂಗಳೊಳಗೆ ಕ್ರಮ:ಜಿದ್ದಾಜಿದ್ದಿಯಿಂದ ಕೂಡಿದ್ದ ಗಂಗಾವತಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದ ಬಿಜೆಪಿಗೆ ಸೋಲಾಗಿದೆ. ಗೆಲ್ಲಬೇಕಿದ್ದರೂ ಸೋಲುವ ಭೀತಿ ಎದುರಿಸಿದ್ದ ಕಾಂಗ್ರೆಸ್ ಕೊನೆಗೂ ಜಯದ ನಗೆ ಬೀರಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುತ್ತೇವೆ. ಪಕ್ಷ ವಿರೋಧಿ ಕೆಲಸ ಮಾಡಿದ ನಗರಸಭೆ ಸದಸ್ಯೆ ವಿರುದ್ಧ ತಿಂಗಳೊಳಗೆ ಕ್ರಮ ಕೈಗೊಳ್ಳಲು ಪಕ್ಷದ ವರಿಷ್ಠರಿಗೆ ಮನವಿ ಮಾಡಲಾಗುವುದು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ಇದನ್ನೂ ಓದಿ : ಬಿಹಾರ ಚುನಾವಣಾ ಕಾವು; ರಾಷ್ಟ್ರೀಯ ಮಟ್ಟದಲ್ಲಿ ಟ್ರೆಂಡ್​ ಆಗುತ್ತಿದೆ #BiharRejectsModi ಹ್ಯಾಷ್‌ಟ್ಯಾಗ್

ಸಂಸದ ಸಂಗಣ್ಣ ಕರಡಿಗೆ ಮುಖಭಂಗ:

ಶತಾಯಗತಾಯ ಬಿಜೆಪಿಯನ್ನು ಅಧಿಕಾರಕ್ಕೆ‌ ತರಲು ನಡೆಸಿದ ಕಸರತ್ತು ಫಲಿಸಲಿಲ್ಲ. ಸಂಸದ ಸಂಗಣ್ಣ ಕರಡಿ ಬಿಜೆಪಿ ಪರ ಮತ ಚಲಾಯಿಸಿದರೂ ಸೋಲಿನ ಸುಳಿಯಿಂದ ಬಿಜೆಪಿಗೆ ತಪ್ಪಿಸಿಕೊಳ್ಳಲಾಗಲಿಲ್ಲ. ಮತದಾನ ಪ್ರಕ್ರಿಯೆ‌ ಮುಗಿಯುತ್ತಿದ್ದಂತೆ ಫಲಿತಾಂಶದ ಸಾಧ್ಯತೆ ಅರಿತ ಸಂಸದ ಸಂಗಣ್ಣ ಕರಡಿ ಮುಖಭಂಗ ಅನುಭವಿಸಿ ಅಲ್ಲಿಂದ ಕಾಲ್ಕಿತ್ತರು. ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿ ಹೊರಟು ಹೋದರು.

ಹೈರಾಣಾದ ಪತ್ರಕರ್ತರು:

ಚುನಾವಣೆ ಸಂದರ್ಭದಲ್ಲಿ ಸ್ಥಳದಲ್ಲಿ ಇರುತ್ತಿದ್ದ ಪತ್ರಕರ್ತರಿಗೆ ಈ ಚುನಾವಣೆಯಲ್ಲಿ ಪ್ರವೇಶ ನಿರ್ಬಂಧಿಸಲಾಗಿತ್ತು. ಆದೇಶವನ್ನು ಗೌರವಿಸುವ ನಿಟ್ಟಿನಲ್ಲಿ ಸಂಜೆವರೆಗೂ ಸಮಾಧಾನದಿಂದ ಪತ್ರಕರ್ತರು ಹೈರಾಣಾದರು. ಹೊತ್ತು ಸರಿಯುತ್ತಿದ್ದಂತೆ ತಾಳ್ಮೆ ಮೀರಿತ್ತು. ಮನವಿ ಮಾಡಿದರೂ ಪ್ರವೇಶ ನಿರಾಕರಿಸಿದ್ದರಿಂದ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಪೊಲೀಸರು ಪತ್ರಕರ್ತರನ್ನು ಆವರಣದೊಳಗೆ ಬಿಡಲಾಯಿತು.
Published by: MAshok Kumar
First published: November 2, 2020, 7:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories