HOME » NEWS » District » CONGRESS SUPPORTED CANDIDATES HAS WONIN BAGALKOT DCC BANK ELECTION RH

ಬಾಗಲಕೋಟೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ

ಡಿಸಿಎಂ ಗೋವಿಂದ ಕಾರಜೋಳ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್  ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಪ್ರಯತ್ನಿಸಿದರು. ಆದರೆ ನನ್ನ ಗೆಲುವು ನ್ಯಾಯದ ಗೆಲುವು. ಯಾರು ನನ್ನನ್ನು ಏನು ಹರಿದುಕೊಳ್ಳಲಾಗಲಿಲ್ಲ, ನಾನು ಹಿಂದೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇ. ಈ ಬಾರಿ ಇಲ್ಲ ಎಂದು ಫಲಿತಾಂಶ ಘೋಷಣೆ ಬಳಿಕ ವಿಜಯಾನಂದ ಕಾಶಪ್ಪನವರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

news18-kannada
Updated:November 5, 2020, 8:02 PM IST
ಬಾಗಲಕೋಟೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ
ಗೆದ್ದ ಅಭ್ಯರ್ಥಿಗಳು ಹಾಗೂ ಅಭಿಮಾನಿಗಳ ಸಂಭ್ರಮಾಚರಣೆ.
  • Share this:
ಬಾಗಲಕೋಟೆ (ನವೆಂಬರ್ 5); ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ತೀವ್ರ ಕುತೂಹಲ, ಜಿದ್ದಾಜಿದ್ದಿಗೆ ಕಾರಣವಾಗಿದ್ದ  ಬಾಗಲಕೋಟೆ  ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್  ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಬಾಗಲಕೋಟೆ ಡಿಸಿಸಿ ಬ್ಯಾಂಕ್ ಒಟ್ಟು 13 ನಿರ್ದೇಶಕ ಸ್ಥಾನಗಳ ಪೈಕಿ 2 ಸ್ಥಾನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದರು‌. ಕಾಂಗ್ರೆಸ್ ಪಕ್ಷದ ಹಾಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯ್ ಕುಮಾರ್ ಸರನಾಯಕ ಹಾಗೂ ನಂದಕುಮಾರ್ ಪಾಟೀಲ್ ಅವಿರೋಧ ಆಯ್ಕೆಯ ಮೂಲಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಶುಭಾರಂಭಕ್ಕೆ ಮುನ್ನುಡಿ ಬರೆದಿದ್ದರು‌. 13 ಸ್ಥಾನ ನಿರ್ದೇಶಕರ ಪೈಕಿ ಕಾಂಗ್ರೆಸ್ -6 ಬಿಜೆಪಿ ಬೆಂಬಲಿತ, ಬಂಡಾಯ ಸೇರಿ -5, ಕಾಂಗ್ರೆಸ್ ಬಂಡಾಯ, ಪಕ್ಷೇತರ-1, ಬಿಜೆಪಿ ಬಂಡಾಯ ಪಕ್ಷೇತರ -1 ಗೆಲುವು ಸಾಧಿಸಿದ್ದು, ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಇವರಿಬ್ಬರು ನಿರ್ಣಾಯಕರಾಗಲಿದ್ದಾರೆ.

ಇವತ್ತು ನಡೆದ 11 ಸ್ಥಾನಗಳ ನಿರ್ದೇಶಕ ಚುನಾವಣೆ ಮತದಾನ ತೀವ್ರ ಕುತೂಹಲ, ಜಿದ್ದಾಜಿದ್ದಿ, ಪ್ರತಿಷ್ಠೆಗೆ ಕಾರಣವಾಗಿತ್ತು. ನಿರ್ದೇಶಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದವರು ಹಣದ ಹೊಳೆ ಹರಿಸಿದ್ದರು. ಕೆಲ ಸಹಕಾರಿ ಬಂಧುಗಳು ಹಣಕ್ಕೆ ಮಣೆಹಾಕಿದ್ದರೆ ಇನ್ನು ಕೆಲವರು ಪ್ರಭಾವ, ಪ್ರತಿಷ್ಠೆ, ಜಾತಿಗೆ ಮಣೆಹಾಕಿದ್ದಾರೆ. ಬಾಗಲಕೋಟೆ ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯ ಎಸ್ ಬಿ ಪಾಟೀಲ್ ಪದವಿಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ 9ರಿಂದ ಸಾಯಂಕಾಲ 4 ಗಂಟೆಯವರೆಗೆ ಮತದಾನ ನಡೆಯಿತು. ಭಾರೀ ಪೊಲೀಸ್ ಬಿಗಿ ಭದ್ರತೆ ಮಧ್ಯೆ ನಡೆದ  ಮತದಾನ ಪ್ರಕ್ರಿಯೆಯಲ್ಲಿ ಶಾಂತಿಯುತವಾಗಿ ನಡೆದು, ಸಂಜೆ 4 ಗಂಟೆಯಿಂದ ಮತ ಎಣಿಕೆ ನಡೆದು 6 ಗಂಟೆಯೊಳಗೆ ಸಂಪೂರ್ಣ ಫಲಿತಾಂಶ ಹೊರಬಿದ್ದಿದೆ. ಘಟಾನುಘಟಿ ನಾಯಕರ ಸ್ಪರ್ಧೆಯಿಂದ ಬಿಡಿಸಿಸಿ ಬ್ಯಾಂಕ್ ಚುನಾವಣೆ ಪ್ರತಿಷ್ಠೆಯ ಕಣವಾಗಿತ್ತು.

ಬಿಡಿಸಿಸಿ ಚುನಾವಣೆಯಲ್ಲಿ ಗೆದ್ದ ಘಟಾನುಘಟಿ ನಾಯಕರು!

ಬಿಡಿಸಿಸಿ ನಿರ್ದೇಶಕರ ಚುನಾವಣೆಗೆ ಮಾಜಿ ಸಚಿವರು, ಹಾಲಿ, ಮಾಜಿ ಶಾಸಕರ ಸ್ಪರ್ಧೆಯಿಂದ ರಣ ರೋಚಕ ಕಣವಾಗಿ ಪರಿಣಮಿಸಿತ್ತು. ವಿಧಾನಸಭಾ, ಲೋಕಸಭಾ ಚುನಾವಣೆಗೆ ಕಡಿಮೆ ಇಲ್ಲದಂತೆ ಕಾಂಗ್ರೆಸ್ ಬಿಜೆಪಿ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳಿಗೆ ಪ್ರತಿಷ್ಠೆಯಾಗಿತ್ತು. ಬೀಳಗಿ ತಾಲೂಕು ಪಿಕೆಪಿಎಸ್ ಕ್ಷೇತ್ರದಿಂದ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ 25 ಮತ ಪಡೆದು ನಿರ್ದೇಶಕರಾಗಿ ಮರು ಆಯ್ಕೆಯಾದರು. ಕುರಿ ಉಣ್ಣೆ ನೇಕಾರ ಸಹಕಾರಿ ಕ್ಷೇತ್ರದಿಂದ ಮಾಜಿ ಸಚಿವ ಎಚ್ ವೈ ಮೇಟಿ 41 ಮತಗಳ ಪೈಕಿ 34 ಮತ ಪಡೆದು ಜಯಭೇರಿ, ರಬಕವಿ -ಬನಹಟ್ಟಿ ಪಿಕೆಪಿಎಸ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ನೇಕಾರ ನಿಗಮ ಮಂಡಳಿ ಅಧ್ಯಕ್ಷ ಶಾಸಕ ಸಿದ್ದು ಸವದಿ 18ಮತಗಳೊಂದಿಗೆ ಗೆಲುವು ಸಾಧಿಸಿದರು. ಜಮಖಂಡಿ ಪಿಕೆಪಿಎಸ್ ಕ್ಷೇತ್ರದಿಂದ ಶಾಸಕ ಆನಂದ್ ನ್ಯಾಮಗೌಡ -24 ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ. ಪಟ್ಟಣ ಸಹಕಾರಿ ಸಂಘ, ಬಿನ್ ಶೇತ್ಕಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಮುಖಂಡ ಪ್ರಕಾಶ್ ತಪಶೆಟ್ಟಿ ಗೆಲುವು ಸಾಧಿಸಿದ್ದಾರೆ. ಕೊರೋನಾ ಲೆಕ್ಕಿಸದೇ ಗೆಲುವು ಸಾಧಿಸಿದ ಮುಖಂಡರನ್ನು ಹೆಗಲ ಮೇಲೆ ಹೊತ್ತುಕೊಂಡು ಗುಂಪುಗೂಡಿ ಪಟಾಕಿ ಸಿಡಿಸಿ, ಗುಲಾಲ ಎರಚಿ ಸಂಭ್ರಮಪಟ್ಟರು.

ಇದನ್ನು ಓದಿ: ಸರಳ ದೀಪಾವಳಿ, ಪಟಾಕಿ ನಿಷೇಧಿಸಲು ಚಿಂತನೆ, ಸಿಎಂ ಜೊತೆ ಚರ್ಚಿಸಿ ನಿರ್ಧಾರ ಪ್ರಕಟ; ಸಚಿವ ಕೆ.ಸುಧಾಕರ್

ಚೀಟಿ ಎತ್ತುವ ಪ್ರಕ್ರಿಯೆಯಲ್ಲಿ ಕಾಶಪ್ಪನವರ್ ಗೆ ಲಕ್!

ಬಾಗಲಕೋಟೆ ಜಿಲ್ಲೆ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲೇ ತೀವ್ರ ಕುತೂಹಲ, ಜಿದ್ದಾಜಿದ್ದಿಗೆ ಕಾರಣವಾಗಿದ್ದು ಹುನಗುಂದ ತಾಲೂಕು ಪಿಕೆಪಿಎಸ್ ಮತಕ್ಷೇತ್ರದ ನಿರ್ದೇಶಕರ ಸ್ಥಾನದ ಚುನಾವಣೆ. ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ವಿರೇಶ್ ಉಂಡೋಡಿ ಸ್ಪರ್ಧಿಸಿದ್ದರು. ಚುನಾವಣಾ ಪ್ರಕ್ರಿಯೆಯ ಡೆಲಿಗೇಷನ್ ಆಯ್ಕೆಯಿಂದಲೂ ಆರೋಪ ಪ್ರತ್ಯಾರೋಪ ಜೋರಾಗಿತ್ತು. ಡಿಸಿಎಂ ಗೋವಿಂದ ಕಾರಜೋಳ, ಹಾಗೂ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ಪೊಲೀಸರು, ಅಧಿಕಾರಿಗಳ ದುರುಪಯೋಗಪಡಿಸಿಕೊಂಡು, ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ನನಗೆ ಜೀವ ಬೆದರಿಕೆಯಿದೆ ಎಂದು ಆರೋಪಿಸಿದ್ದರು. ನನಗೆ ಜೀವ ಬೆದರಿಕೆ ಕರೆಗಳು ಬಂದಿವೆ, ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೇನೆ ಎಂದಿದ್ದರು. ಹುನಗುಂದ ತಾಲೂಕು ಪಿಕೆಪಿಎಸ್ ಮತಕ್ಷೇತ್ರದ ಒಟ್ಟು 26 ಮತಗಳಲ್ಲಿ ವಿಜಯಾನಂದ ಕಾಶಪ್ಪನವರ್ 13, ವಿರೇಶ್ ಉಂಡೋಡಿ-13 ಸಮ ಬಲದ ಮತಗಳು ಬಿದ್ದಿದ್ದವು. ಈ ವೇಳೆ ಚುನಾವಣಾಧಿಕಾರಿಗಳು ಚೀಟಿ ಎತ್ತುವ ಮೂಲಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ವಿಜಯಾನಂದ ಕಾಶಪ್ಪನವರ್ ರಿಗೆ ಅದೃಷ್ಟ ಕುಲಾಯಿಸಿದೆ. ನನ್ನನ್ನು ಸೋಲಿಸಲು ಡಿಸಿಎಂ ಗೋವಿಂದ ಕಾರಜೋಳ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್  ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಪ್ರಯತ್ನಿಸಿದರು. ಆದರೆ ನನ್ನ ಗೆಲುವು ನ್ಯಾಯದ ಗೆಲುವು. ಯಾರು ನನ್ನನ್ನು ಏನು ಹರಿದುಕೊಳ್ಳಲಾಗಲಿಲ್ಲ, ನಾನು ಹಿಂದೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇ. ಈ ಬಾರಿ ಇಲ್ಲ ಎಂದು ಫಲಿತಾಂಶ ಘೋಷಣೆ ಬಳಿಕ ವಿಜಯಾನಂದ ಕಾಶಪ್ಪನವರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಬಿಡಿಸಿಸಿ ಅಧ್ಯಕ್ಷ ಗದ್ದುಗೆಗೇರುವುದು ಕಷ್ಟ!

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿ ಚುನಾವಣೆಯಲ್ಲಿ ಒಟ್ಟು 13 ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತ-6, ಬಿಜೆಪಿ ಬೆಂಬಲಿತ-5, ಕಾಂಗ್ರೆಸ್, ಬಿಜೆಪಿ ಬಂಡಾಯ, ತಲಾ 1 ಪಕ್ಷೇತರ  ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇನ್ನು ಬಾದಾಮಿ ತಾಲೂಕು ಪಿಕೆಪಿಎಸ್ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿ‌ಸಿದ್ದ ಕುಮಾರ್ ಗೌಡ ಜನಾಲಿ ಗೆಲುವು ಸಾಧಿಸಿದ್ದು ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಅಧಿಕೃತ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹನಮಂತಗೌಡ ಗೌಡ್ರ ಸೋಲಿನಿಂದ ಸಂಸದ ಪಿ ಸಿ ಗದ್ದಿಗೌಡರ, ಬಾದಾಮಿ ಬಿಜೆಪಿ ಮಾಜಿ ಶಾಸಕ ಎಂ ಕೆ ಪಟ್ಟಣಶೆಟ್ಟಿ, ಬಿಜೆಪಿ ಮುಖಂಡ ಮಹಾಂತೇಶ ಮಮದಾಪೂರಗೆ ಮುಖಭಂಗವಾಗಿದೆ. ಇನ್ನು ಕಾಂಗ್ರೆಸ್ ಬಂಡಾಯವಾಗಿ ನೇಕಾರ ಸಹಕಾರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮುರುಗೇಶ್ ಕಡ್ಲಿಮಟ್ಟಿ-39 ಮತಗಳೊಂದಿಗೆ ಜಯ ಸಾಧಿಸಿದ್ದು, ತಲಾ ಒಂದೊಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ, ಬಿಜೆಪಿ ಬಂಡಾಯ ಅಭ್ಯರ್ಥಿಗಳು ಜಯ ಸಾಧಿಸಿದ್ದು, ಇವರು ಯಾವ ಪಕ್ಷದ ಕಡೆಗೆ ಬೆಂಬಲಿಸುತ್ತಾರೆ ಎನ್ನುವುದು ಕುತೂಹಲ ಕೆರಳಿಸಿದೆ. ಆಯಾ ಪಕ್ಷಕ್ಕೆ ಬೆಂಬಲಿಸಿದರೆ, ಕಾಂಗ್ರೆಸ್ ಮೇಲುಗೈ ಸಾಧಿಸಿದ್ದರೂ, ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ, ಸಹಕಾರ ಸಂಘಗಳ ನೋಂದಣಿ ಇಲಾಖೆಯ ಉಪ ನಿಬಂಧಕರು ಮತಚಲಾವಣೆಗೆ ಅವಕಾಶವಿದೆ. ಆಗ ಬಿಜೆಪಿ ಮೇಲುಗೈ ಸಾಧಿಸಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಬಿಜೆಪಿ ಬೆಂಬಲಿತರ ತೆಕ್ಕೆಗೆ ಸಿಗುವ ಲೆಕ್ಕಾಚಾರ, ಚರ್ಚೆ ನಡೆದಿದೆ. ಆದರೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷಗಿರಿ ಪಟ್ಟ ಈವರೆಗೆ ಪಕ್ಷ ಬೆಂಬಲಿತರಿಗೆ ಸಿಕ್ಕಿರುವುದಕ್ಕಿಂತ ಜಾತಿ ಲೆಕ್ಕಾಚಾರದಲ್ಲಿ ಸಿಕ್ಕಿದ್ದೇ ಹೆಚ್ಚು. ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷ ನಿಷ್ಠೆಯೋ ಅಥವಾ ,ಜಾತಿ ವರ್ಕೌಟ್ ಆಗುತ್ತೋ ಕಾದು ನೋಡಬೇಕಿದೆ.
Published by: HR Ramesh
First published: November 5, 2020, 8:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories