ಬೆಂಗಳೂರು (ಮಾ. 13): ಭದ್ರಾವತಿ ಶಾಸಕ ಬಿಕೆ ಸಂಗಮೇಶ್ ಮೇಲೆ ದಾಖಲಿಸಿರುವ ಕ್ರಿಮಿನಲ್ ಪ್ರಕರಣ ಖಂಡಿಸಿ ಕಾಂಗ್ರೆಸ್ ನಾಯಕರು ಇಂದು ಶಿವಮೊಗ್ಗ ಚಲೋ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಬಿಜೆಪಿ ಸರ್ಕಾರ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ. ನಮ್ಮ ಅನೇಕ ಕ್ಷೇತ್ರಗಳಲ್ಲಿನ ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿ ಕಿರುಕುಳ ನೀಡುತ್ತಿದೆ. ಭದ್ರಾವತಿ ಶಾಸಕರ ಮೇಲೆ ಕ್ಷುಲಕ ಪ್ರಕರಣ ದಾಖಲಿಸಿ ಬಂಧನ ಮಾಡುವ ಪ್ರಯತ್ನ ನಡೆಸಿದ್ದಾರೆ. ಈ ವಿಚಾರ ಕುರಿತು ಸಭಾಧ್ಯಕ್ಷರ ಗಮನ ಸೆಳೆಯಲು ಮುಂದಾದ ಶಾಸಕರನ್ನು ಸದನದಿಂದ ಅಮಾನತು ಮಾಡುವಂತಹ ಕಾರ್ಯ ನಡೆಸಲಾಗಿದೆ. ಈ ಹಿನ್ನಲೆ ರಾಜ್ಯದಲ್ಲಿನ ನಮ್ಮ ಕಾರ್ಯಕರ್ತರಿಗೆ ರಕ್ಷಣೆಕೊಡುವ ನಿಟ್ಟಿನಲ್ಲಿ ಈ ಶಿವಮೊಗ್ಗ ಚಲೋ ಪ್ರತಿಭಟನೆ ನಡೆಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಸಿಎಂ ತವರು ಕ್ಷೇತ್ರದಲ್ಲಿ ನಡೆಯುವ ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಹಿರಿಯ ನಾಯಕ ಎಸ್ ಆರ್ ಪಾಟೀಲ್ ಸೇರಿದಂತೆ ರಾಜ್ಯದ ಎಲ್ಲಾ ಕಾಂಗ್ರೆಸ್ ನಾಯಕರು, ಶಾಸಕರು ಹಾಗೂ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಮಧ್ಯಾಹ್ನ 1. 30ಕ್ಕೆ ಈ ಪ್ರತಿಭಟನೆ ನಡೆಯಲಿದ್ದು, ಈಗಾಗಲೇ ಜಿಲ್ಲೆಯಲ್ಲಿ ಬಿಗಿ ಬಂದೋಬಸ್ತ್ ನಡೆಸಲಾಗಿದೆ.
'@BJP4Karnataka ಸರ್ಕಾರ ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದೆ.
ಭದ್ರಾವತಿ ಶಾಸಕ ಸಂಗಮೇಶ್ ಸೇರಿ ಎಲ್ಲ ನಾಯಕರು, ಕಾರ್ಯಕರ್ತರ ರಕ್ಷಣೆಗೆ ನಿಲ್ಲಲು ಇದೇ 13ರಂದು ಮಧ್ಯಾಹ್ನ1 ಗಂಟೆಗೆ 'ಶಿವಮೊಗ್ಗ ಚಲೋ' ಹಮ್ಮಿಕೊಳ್ಳಲಾಗಿದೆ.
ಎಲ್ಲರೂ ಈ ಹೋರಾಟದಲ್ಲಿ ಭಾಗವಹಿಸಿ.
- @DKShivakumar pic.twitter.com/6Z9udxygTP
— D K Shivakumar, President, KPCC (@KPCCPresident) March 12, 2021
ಏನಿದು ಗಲಾಟೆ?
ಭದ್ರಾವತಿಯಲ್ಲಿ ನಡೆದ ಕಬ್ಬಡ್ಡಿ ಪಂದ್ಯಾವಳಿಯ ಅಂತಿಮ ಪಂದ್ಯದ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಹಲ್ಲೆ ಪ್ರಕರಣ ದಾಖಲಾಗಿದೆ. ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಕೂಗಿದ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಬಿಗುವಿನ ವಾತವಾರಣ ನಿರ್ಮಾಣವಾಗಿ ಎರಡು ದಿನಗಳ ಕಾಲ ನಗರದಲ್ಲಿ ನಿಷೇಧಾಜ್ಞೆಯನ್ನು ಪೊಲೀಸರು ಹೇರಿದ್ದರು. ಈ ಘಟನೆ ಬಳಿಕ ಸಂಗಮೇಶ್ ಮಗ ಸೇರಿದಂತೆ ಏಳು ಜನರ ವಿರುದ್ಧ ಹಾಗೂ ಕಾಂಗ್ರೆಸ್ನ 20 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು.
ಇದನ್ನು ಓದಿ: ಕೊರೋನಾ ಸೋಂಕು ಹೆಚ್ಚಳ: ಮತ್ತೆ ಕಠಿಣ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ
ತಮ್ಮ ವಿರುದ್ಧ ಕೇಸ್ ದಾಖಲಿಸಿದ್ದನ್ನು ಖಂಡಿಸಿ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ವಿಧಾನಸಭಾ ಬಜೆಟ್ ಅಧಿವೇಶನದಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದರು. ಇದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಆಕ್ರೋಶಕ್ಕೂ ಕಾರಣವಾಯಿತು. ಸದನದಲ್ಲಿ ಶರ್ಟ್ ಬಿಚ್ಚಿದ್ದ ಸಂಗಮೇಶ್ ಅವರಿಗೆ ಶಿಕ್ಷೆ ನೀಡಿದ ಸ್ಪೀಕರ್ ಕಾಗೇರಿ ಸಂಗಮೇಶ್ ಅವರನ್ನು ಒಂದು ವಾರ ಸದನದಿಂದ ಅಮಾನತು ಮಾಡಿದರು.
ಈ ಪ್ರಕರಣದಲ್ಲಿ ಈಗಾಗಲೇ ಬಿಕೆ ಸಂಗಮೇಶ್ ಅವರ ಮಗ ಬಸವೇಶ್ ಅವರನ್ನು ಮಾರ್ಚ್ 6ರಂದು ಭದ್ರಾವತಿ ಪೊಲೀಸರು ಚಿತ್ರದುರ್ಗದಲ್ಲಿ ವಶಕ್ಕೆ ಪಡೆದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ