ಕೋಲಾರ ಜಿಲ್ಲೆಯ ಮಾಜಿ ಸಂಸದ, ಕೇಂದ್ರದ ಮಾಜಿ ಸಚಿವ ಕೆಎಚ್ ಮುನಿಯಪ್ಪ ರಾಜ್ಯ ಮಟ್ಟದ ಹಿರಿಯ ಕಾಂಗ್ರೆಸ್ ಮುಖಂಡರಲ್ಲಿ ಒಬ್ಬರು. ಆದರೆ ಕಳೆದ ಲೋಕಸಭೆ ಚುನಾವಣೆ ವೇಳೆ ಜಿಲ್ಲೆಯ ಕೆಲವು ಕಾಂಗ್ರೆಸ್ ಶಾಸಕರೇ ಕೆಎಚ್ ಮುನಿಯಪ್ಪ ವಿರುದ್ದ ತಿರುಗಿಬಿದ್ದಿದ್ದರು. ಕೆಎಚ್ ಮುನಿಯಪ್ಪಗೆ ಲೋಕಸಭೆ ಟಿಕೆಟ್ ಕೊಡಲೇಬೇಡಿ ಎಂದು ಕೈ ಹೈ ಕಮಾಂಡ್ಗೆ ದೂರು ಕೊಟ್ಟಿದ್ದು ಎಲ್ಲರಿಗು ತಿಳಿದಿರೊ ವಿಚಾರ. ನಂತರ ನಡೆದ ವಿದ್ಯಮಾನದಲ್ಲಿ ಕೆಎಚ್ ಮುನಿಯಪ್ಪ ಬಿಜೆಪಿ ಅಭ್ಯರ್ಥಿ ಎಸ್ ಮುನಿಸ್ವಾಮಿ ವಿರುದ್ದ ಹೀನಾಯ ಸೋಲು ಕಂಡರು. ಪಕ್ಷ ವಿರೋದಿ ಚಟುವಟಿಕೆ ನಡೆಸಿದ್ದಾರೆಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್, ಎಸ್ ಎನ್ ನಾರಾಯಣಸ್ವಾಮಿ, ನಾಸಿರ್ ಅಹಮದ್ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಮುನಿಯಪ್ಪ ಸೋನಿಯಾ ಗಾಂಧಿ ಅವರಿಗೆ ದೂರು ನೀಡಿದ್ದರು. ಯಾವುದೇ ಕ್ರಮ ಇನ್ನೂ ಜರುಗಿಸಿಲ್ಲ. ಕೆಎಚ್ ಮುನಿಯಪ್ಪ ಸಹ ಇಲ್ಲಿಯವರೆಗೂ ವಿರೋಧಿಗಳಿಂದ ಅಂತರ ಕಾಯ್ದುಕೊಂಡು ಬಂದಿದ್ದಾರೆ. ಈಗ ಕೆಎಚ್ ಮುನಿಯಪ್ಪ ಹೆಸರೇಳದೆ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಮತ್ತೊಮ್ಮೆ ಕಿಡಿಕಾರಿದ್ದಾರೆ.
ಬಂಗಾರಪೇಟೆಯಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ನಡೆದ ಭೂಮಿಪೂಜೆ ಕಾರ್ಯಕ್ರಮದ ವೇಳೆ ನಾರಾಯಣ ಸ್ವಾಮಿ ಅವರು ತಮ್ಮ ಪಕ್ಷದ ಸಹೋದ್ಯೋಗಿ ವಿರುದ್ಧವೇ ತೀವ್ರ ವಾಗ್ದಾಳಿ ನಡೆಸಿದರು.
27 ವರ್ಷಗಳಿಂದ ಕಾಣದ ಅಭಿವೃದ್ಧಿ ಒಂದೇ ವರ್ಷದಲ್ಲಿ ಆಗುತ್ತಿದೆ ಎಂದ ಎಸ್.ಎನ್.:
ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ 2 ಕೋಟಿ ವೆಚ್ಚದ ಇಂಡೋರ್ ಸ್ಟೇಡಿಯಂ ಕಾಮಗಾರಿಗೆ ಉಸ್ತುವಾರಿ ಸಚಿವ ಎಚ್ ನಾಗೇಶ್, ಸಂಸದ ಎಸ್ ಮುನಿಸ್ವಾಮಿ, ಶಾಸಕ ಎಸ್ ಎನ್ ನಾರಾಯಣಸ್ವಾಮಿ ಭೂಮಿ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ್ಯ ಕೆ ಚಂದ್ರಾರೆಡ್ಡಿ, ಹಲವು ಅಧಿಕಾರಿಗಳು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮೊದಲು ಸ್ವಾಗತ ಭಾಷಣ ಮಾಡಿದ ಶಾಸಕ ನಾರಾಯಣಸ್ವಾಮಿ ಅವರು, ಸಂಸದ ಎಸ್ ಮುನಿಸ್ವಾಮಿ ಅವರನ್ನ ಹಾಡಿ ಹೊಗಳಿದರು.
ಇದನ್ನೂ ಓದಿ: ಆನ್ಲೈನ್ ಕ್ಲಾಸ್ನಲ್ಲೇ ಶಿಕ್ಷಕಿಗೆ ಲೈಂಗಿಕ ಕಿರುಕುಳ; ಬೆಂಗಳೂರಿನಲ್ಲಿ ಹೆಚ್ಚಾಗುತ್ತಿವೆ ಸೈಬರ್ ಕ್ರೈಂ ಪ್ರಕರಣಗಳು
ಸಚಿವ ನಾಗೇಶ್ ಮತ್ತು ಮುನಿಸ್ವಾಮಿ ಇಬ್ಬರೂ ಜಿಲ್ಲೆಗೆ ಎರಡು ಕಣ್ಣುಗಳಿದ್ದಂತೆ ಎಂದ ಶಾಸಕ ನಾರಾಯಣಸ್ವಾಮಿ, ಕಳೆದ 27 ವರ್ಷಗಳಲ್ಲಿ ಜಿಲ್ಲೆ ಅಭಿವೃದ್ಧಿಯೇ ಕಂಡಿಲ್ಲ. ಆದರೆ ಕಳೆದ ಒಂದು ವರ್ಷದಿಂದ ಗಮನಾರ್ಹ ಕೆಲಸವನ್ನು ಸಂಸದ ಮುನಿಸ್ವಾಮಿ ಮಾಡಿದ್ದಾರೆಂದು ಹೊಗಳಿಕೆ ಮಾತನ್ನಾಡಿದರು. ಈ ಮೂಲಕ ತಮ್ಮದೇ ಪಕ್ಷದ ಮಾಜಿ ಸಂಸದ ಕೆಎಚ್ ಮುನಿಯಪ್ಪ ಜಿಲ್ಲೆಯನ್ನು ಅಭಿವೃದ್ಧಿ ಮಾಡಿಲ್ಲ ಎಂದು ಪರೋಕ್ಷವಾಗಿ ಮತ್ತೊಮ್ಮೆ ಬೇಸರ ಹೊರಹಾಕಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ 27 ವರ್ಷಗಳಿಂದ ಕೆಎಚ್ ಮುನಿಯಪ್ಪ ಅವರೇ ಸಂಸದರಾಗಿ ಇದ್ದದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೂ ಜಿಲ್ಲೆ ಏನೂ ಅಭಿವೃದ್ಧಿ ಆಗಿಲ್ಲ ಎಂದು ಎಸ್.ಎನ್ ನಾರಾಯಣಸ್ವಾಮಿ ಟೀಕಿಸಿದರು.
ಇದನ್ನೂ ಓದಿ: ಮಾರ್ಗಸೂಚಿ ಪಾಲಿಸಿ; ಉಜ್ವಲ ಭವಿಷ್ಯ ನಿಮ್ಮದಾಗಲಿ: SSLC ಪರೀಕ್ಷಾರ್ಥಿಗಳಿಗೆ ಸಿಎಂ ಶುಭಹಾರೈಕೆ
ಕಾರ್ಯಕ್ರಮದಲ್ಲಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಚಂದ್ರಾರೆಡ್ಡಿ ಸುಮ್ಮನೆ ಕುಳಿತಿದ್ದರು. ಈ ಹಿಂದೆ ಕೆಎಚ್ ಮುನಿಯಪ್ಪ ಏನೂ ಅಭಿವೃದ್ಧಿ ಮಾಡಿಲ್ಲ ಎಂದು ಶಾಸಕರು ಬಹಿರಂಗ ಹೇಳಿಕೆ ನೀಡಿದಾಗ, ಪ್ರತಿಕ್ರಿಯೆ ನೀಡಿದ್ದ ಚಂದ್ರಾರೆಡ್ಡಿ ಅವರು, ಜಿಲ್ಲೆಯಲ್ಲಿ ಹೆದ್ದಾರಿ ರಸ್ತೆ, ಕೈಗಾರಿಕಾ ಪ್ರದೇಶ ಎಲ್ಲವೂ ಕೆಎಚ್ ಮುನಿಯಪ್ಪನವರ ಅಭಿವೃದ್ಧಿ ಕೆಲಸಗಳು ಎಂದು ಹೇಳಿಕೆ ನೀಡುತ್ತಿದ್ದರು. ಆದರೀಗ ಆಪ್ತ ಶಾಸಕರಾದ ಎಸ್ ಎನ್ ನಾರಾಯಣಸ್ವಾಮಿ ಭಾಷಣ ಮಾಡುವಾಗ ಯಾವುದೇ ಪ್ರತಿರೋಧವನ್ನು ಅವರು ವ್ಯಕ್ತಪಡಿಸಿಲ್ಲ.
ಒಟ್ಟಿನಲ್ಲಿ ಕೋಲಾರ ಕಾಂಗ್ರೆಸ್ನಲ್ಲಿ ಎರಡು ಗುಂಪುಗಳಾಗಿದ್ದು ಇಬ್ಬರ ಮಧ್ಯೆಯ ಮನಸ್ತಾಪಗಳು ಸದ್ಯಕ್ಕೆ ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ