ಎನ್ ಆರ್ ರಮೇಶ್ ಆರೋಪ ರಾಜಕೀಯ ಪ್ರೇರಿತ; ಹಗರಣ ನಡೆದಿದ್ದರೆ ತನಿಖೆ ಆಗಲಿ: ಬಿ ಶಿವಣ್ಣ

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಸರ್ಕಾರ ಕಾಂಗ್ರೆಸ್ ಪಕ್ಷವನ್ನ ಟಾರ್ಗೆಟ್ ಮಾಡಿದೆ. ಇದರ ಕುತಂತ್ರದ ಭಾಗವಾಗಿ ಎನ್ ಆರ್ ರಮೇಶ್ ಅವರು ಸುಳ್ಳು ಹಗರಣದ ಆರೋಪ ಮಾಡಿದ್ದಾರೆ ಎಂದು ಆನೇಕಲ್ ಕಾಂಗ್ರೆಸ್ ಶಾಸಕ ಬಿ ಶಿವಣ್ಣ ತಿರುಗೇಟು ನೀಡಿದ್ದಾರೆ.

ಬಿ ಶಿವಣ್ಣ

ಬಿ ಶಿವಣ್ಣ

  • Share this:
ಆನೇಕಲ್:  ಅಭಿವೃದ್ಧಿ ನೆಪದಲ್ಲಿ 838 ಕೋಟಿ ರೂ ಹಗರಣ ನಡೆದಿದೆ ಎಂದು ತಮ್ಮ ವಿರುದ್ಧ ಎನ್ ಆರ್ ರಮೇಶ್ ಮಾಡಿರುವ ಆರೋಪ ರಾಜಕೀಯ ದುರುದ್ಧೇಶದಿಂದ ಕೂಡಿದೆ. ಕಾಂಗ್ರೆಸ್‌ ಶಾಸಕ ಎಂಬ ಕಾರಣಕ್ಕೆ ತನ್ನನ್ನು ಟಾರ್ಗೆಟ್ ಮಾಡುವ ಕುತಂತ್ರದ ಭಾಗವಾಗಿದೆ. ಇದಕ್ಕೆ ತಾನು ಹೆದರುವ ಪ್ರಶ್ನೆಯೇ ಇಲ್ಲ. ಸರ್ಕಾರದ ಯಾವುದೇ ತನಿಖೆಗೂ ಸಿದ್ದ ಎಂದು ಆನೇಕಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ ಶಿವಣ್ಣ ಹೇಳಿದ್ದಾರೆ. ಚಂದಾಪುರ ಸಮೀಪದ ಸೂರ್ಯಸಿಟಿ ಗೃಹಕಚೇರಿಯಲ್ಲಿ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು.

ಇನ್ನೆರಡು ದಿನಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಇದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಹಿನ್ನಡೆಯಾಗಲಿ ಎಂದು ಇಂತಹ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಆನೇಕಲ್ ಯೋಜನಾ ಪ್ರಾಧಿಕಾರದಲ್ಲಿ ತಾಲ್ಲೂಕಿನ 71 ಕೆರೆಗಳ ಅಭಿವೃದ್ಧಿ 570 ಕೋಟಿ ಅನುದಾನ ದುರ್ಬಳಕೆಯಾಗಿದೆ ಎಂದು ಎನ್ ರಮೇಶ್ ಆರೋಪ ಮಾಡಿದ್ದಾರೆ. ಆದರೆ ವಾಸ್ತವವಾಗಿ ಆನೇಕಲ್ ವಿಧಾನಸಭಾ ವ್ಯಾಪ್ತಿಯಲ್ಲಿ ಆನೇಕಲ್ ಯೋಜನಾ ಪ್ರಾಧಿಕಾರದಿಂದ 65 ಕೋಟಿ ಮಾತ್ರ ರಸ್ತೆ ಮತ್ತು ಕೆರೆ ಅಭಿವೃದ್ಧಿಗೆ ಅನುದಾನ ಬಳಕೆ ಮಾಡಲಾಗಿದೆ. ಅದರಲ್ಲಿ 49 ಕೋಟಿ ಅನುದಾನದ ಕಾಮಗಾರಿಗಳು‌ ಮುಗಿದಿದ್ದು, 11 ಕೋಟಿ ಅನುದಾನದ ಕಾಮಗಾರಿಗಳು ಪ್ರಗತಿಯಲ್ಲಿದೆ. ಇಂತಹ ಸ್ಥಿತಿಯಲ್ಲಿ 570 ಕೋಟಿ ಹೇಗೆ ದುರ್ಬಳಕೆ ಮಾಡಲು ಸಾಧ್ಯ. ಬಳಕೆಯಾದ 65 ಕೋಟಿ ಬಿಟ್ಟು 505 ಕೋಟಿ ಬಹುಶ ಬಿಜೆಪಿಯವರು ದುರ್ಬಳಕೆ ಮಾಡಿಕೊಂಡಿರಬಹುದು. ಹಾಗಾಗಿ 505 ಕೋಟಿ ಬಗ್ಗೆ ತನಿಖೆಯಾಗಬೇಕು. ಇಲ್ಲವಾದರೆ ಮಾನನಷ್ಟ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ಎನ್ ಆರ್ ರಮೇಶ್ ಅವರಿಗೆ ಕಾಂಗ್ರೆಸ್ ಶಾಸಕ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಗ್ರಾಪಂ ಚುನಾವಣೆ ಫಲಿತಾಂಶಕ್ಕೂ ಮುನ್ನ ಮೀಸಲಾತಿ ಪ್ರಕಟಿಸುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಒತ್ತಾಯ

ಇನ್ನು, ಆನೇಕಲ್ ಯೋಜನಾ ಪ್ರಾಧಿಕಾರದಿಂದ ಕೇವಲ ಒಂದು ಕೆರೆ ಮಾತ್ರ 1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಅದು ಬಿಜೆಪಿ ಶಾಸಕ ಕೃಷ್ಣಪ್ಪ ಪ್ರತಿನಿಧಿಸುವ ಬೆಂಗಳೂರು ದಕ್ಷಿಣ ತಾಲ್ಲೂಕಿನ ರಾಗಿಹಳ್ಳಿ ಕರೆ. ಹಾಗಾದರೆ ಕೃಷ್ಣಪ್ಪನ ವಿರುದ್ಧ ಯಾಕೆ ದೂರು ನೀಡಿಲ್ಲ ಎಂದು ಬಿ ಶಿವಣ್ಣ ಪ್ರಶ್ನಿಸಿದ್ದಾರೆ‌.

ಚಲ್ಲಘಟ್ಟ ಮತ್ತು ಕೊರಮಂಗಲ ಕಣಿವೆಯಿಂದ ಏತ ನೀರಾವರಿ ಯೋಜನೆ ಅನುಷ್ಠಾನದಲ್ಲಿ 270 ಕೋಟಿ ಅಕ್ರಮ ನಡೆದಿದೆ. ಜೊತೆಗೆ ಕಾಮಗಾರಿ ನಿರ್ದಿಷ್ಟ ಕಾಲದಲ್ಲಿ ಪೂರ್ಣಗೊಂಡಿಲ್ಲ ಎಂಬ ಆರೋಪಕ್ಕೆ ತಿರುಗೇಟು ನೀಡಿರುವ ಶಿವಣ್ಣ, ಏತ ನೀರಾವರಿ ಯೋಜನೆ ತಡವಾಗಲು ಇಂದಿನ ಬಿಜೆಪಿ ಸರ್ಕಾರವೇ ಕಾರಣ. ಏತ ನೀರಾವರಿ ಯೋಜನೆ ತಾಲ್ಲೂಕಿನ 68 ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆ. ಬಿಜೆಪಿ ಸರ್ಕಾರ ಸಕಾಲಕ್ಕೆ ಅನುದಾನ ಬಿಡುಗಡೆ ಮಾಡಿದ್ದರೆ ಇವತ್ತು ತಾಲ್ಲೂಕಿನ ಕೆರೆಗಳು ಹಸಿರಿನಿಂದ ನಳನಳಿಸುತ್ತಿದ್ದವು. ಆದ್ರೆ ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ಶಾಸಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ.  ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಬಿಜೆಪಿಯವರು, ತಾಲ್ಲೂಕು ಪಂಚಾಯತಿ ಅಧ್ಯಕ್ಷರು ಬಿಜೆಪಿಯವರು. ಟೆಂಡರ್ ಕರೆಯುವಾಗ ಕಾಮಗಾರಿ ನಡೆಸುವಾಗ ಅಕ್ರಮ ಕಾಣಲಿಲ್ಲವೇ ಎಂದು ಕೇಳಿದ್ದಾರೆ.

ಇದನ್ನೂ ಓದಿ: ಕೊಡಗು ಜಿಲ್ಲೆಗೆ ಸಾವಿರಾರು ಪ್ರವಾಸಿಗರ ದಾಂಗುಡಿ; ಕೊರೋನಾ ಸೋಂಕು ಹರಡುವ ಭೀತಿ!

1997 ರಿಂದ ಇಲ್ಲಿಯವರೆಗೆ ತಾಲ್ಲೂಕಿನಲ್ಲಿ ನಡೆದಿರುವ ಎಲ್ಲಾ ಕಾಮಗಾರಿಗಳ ಬಗ್ಗೆಯು ತನಿಖೆ ಮಾಡಿಸಲಿ. ಆಗ ದೊಡ್ಡಕೆರೆ ಮಣ್ಣು ಗುಡ್ಡೆಗಳು, ಚಿಕ್ಕ ಕೆರೆ ಕ್ರೀಡಾಂಗಣ, ಆನೇಕಲ್ ಪಟ್ಟಣದ ಕಾರಂಜಿ ಕಾಮಗಾರಿಗಳಲ್ಲಿನ ಆಕ್ರಮಗಳೂ ಹೊರ ಬರಲಿ. ನಿಮ್ಮದೇ ಸರ್ಕಾರ ರಾಜ್ಯದಲ್ಲಿದೆ. ತನಿಖೆ ಮಾಡಿಸಿ. ನಾನು ಹೆದರುವುದಿಲ್ಲ ಎಂದು ಎನ್ ಆರ್ ರಮೇಶ್ ವಿರುದ್ಧ ಶಿವಣ್ಣ ಗುಟುರು ಹಾಕಿದ್ದಾರೆ.

ಒಟ್ನಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಹೊತ್ತಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮತ್ತು ಸ್ಥಳೀಯ ಶಾಸಕ ಬಿ ಶಿವಣ್ಣ ಆರೋಪ ಮತ್ತು ಪ್ರತ್ಯಾರೋಪದಲ್ಲಿ ತೊಡಗಿದ್ದು, ಸದ್ಯ ಮತದಾರ ಪ್ರಭು ಯಾವ ಪಕ್ಷ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಿ ಬಹುಪರಾಕ್ ಎನ್ನಲಿದ್ದಾನೆ ಎನ್ನುವುದನ್ನು ಕಾದುನೋಡಬೇಕಿದೆ.

ವರದಿ: ಆದೂರು ಚಂದ್ರು
Published by:Vijayasarthy SN
First published: