ಕಲ್ಲು ತೂರಾಟ, ಲಾಠಿ ಚಾರ್ಜ್ ಮಧ್ಯೆ ವಿಜಯಪುರ ಜಿಪಂ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲು; ಬಿಜೆಪಿ ಸಚಿವರಿಗೆ ಶಾಕ್!

ವಿಜಯಪುರ ಜಿಲ್ಲೆಯ ಕಾಂಗ್ರೆಸ್ ತ್ರಿಮೂರ್ತಿ ಶಾಸಕರಾದ ಎಂ.ಬಿ. ಪಾಟೀಲ (ಬಬಲೇಶ್ವರ), ಶಿವಾನಂದ ಎಸ್. ಪಾಟೀಲ (ಬಸವನ ಬಾಗೇವಾಡಿ), ಯಶವಂತರಾಯಗೌಡ ವಿ. ಪಾಟೀಲ (ಇಂಡಿ) ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ತಮ್ಮ ರಾಜಕೀಯ ಕೌಶಲ್ಯವನ್ನು ಸಾಬೀತು ಪಡಿಸಿದರು.

news18-kannada
Updated:June 30, 2020, 8:21 PM IST
ಕಲ್ಲು ತೂರಾಟ, ಲಾಠಿ ಚಾರ್ಜ್ ಮಧ್ಯೆ ವಿಜಯಪುರ ಜಿಪಂ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲು; ಬಿಜೆಪಿ ಸಚಿವರಿಗೆ ಶಾಕ್!
ವಿಜಯಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾದ ಕಾಂಗ್ರೆಸ್​ನ ಸುಜಾತಾ ಸೋಮನಾಥ ಕಳ್ಳಿಮನಿ.
  • Share this:
ವಿಜಯಪುರ (ಜೂ. 30); ಒಂದೆಡೆ ಕಲ್ಲು ತೂರಾಟ, ಪೊಲೀಸರ ಲಾಠಿ ಚಾರ್ಜ್, ಪ್ರತಿಭಟನೆ ಹೈಡ್ರಾಮಾ. ಮತ್ತೊಂದೆಡೆ ಇಬ್ಬರು ಡಿಸಿಎಂ, ಓರ್ವ ಸಂಸದ, ಓರ್ವ ಸಚಿವೆ, ಮೂರು ಜನ ಶಾಸಕರ ಕಾರ್ಯತಂತ್ರವನ್ನು ವಿಫಲಗೊಳಿಸುವ ಮೂಲಕ ಕಾಂಗ್ರೆಸ್ಸಿನ ತ್ರಿಮೂರ್ತಿ ಶಾಸಕರು ವಿಜಯಪುರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಮುಖಭಂಗ ಮಾಡಿದ್ದಾರೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಸುಜಾತಾ ಸೋಮನಾಥ ಕಳ್ಳಿಮನಿ ಆಯ್ಕೆಯಾಗುವ ಮೂಲಕ ಬಿಜೆಪಿಗೆ ಶಾಕ್ ನೀಡಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಮತ್ತು ಪತ್ರಕರ್ತರನ್ನೂ ಜಿಲ್ಲಾ ಪಂಚಾಯಿತಿ ಆವರಣದ ಒಳಗೆ ಬಿಡದ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರ ವಾಹನಗಳನ್ನು ಸಲೀಸಾಗಿ ಒಳಗೆ ಬಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸಾಕಷ್ಟು ಹೈಡ್ರಾಮಾ ಮಧ್ಯೆ ವಿಜಯಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆ ನಡೆದಿದ್ದು, ಕಾಂಗ್ರೆಸ್ಸಿನ ಸುಜಾತಾ ಸೋಮನಾಥ ಕಳ್ಳಿಮನಿ ಬಿಜೆಪಿ ಅಭ್ಯರ್ಥಿ ಭೀಮಾಶಂಕರ ಬಿರಾದಾರ ಅವರನ್ನು ಎರಡು ಮತಗಳ ಅಂತರದಿಂದ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕಳ್ಳಿಮನಿ 22 ಮತಗಳನ್ನು ಪಡೆದರೆ ಬಿಜೆಪಿ ಅಭ್ಯರ್ಥಿ 20 ಮತ ಪಡೆದು ಸೋಲನುಭವಿಸಿದರು. ಒಟ್ಟು 42 ಸದಸ್ಯ ಬಲದ ವಿಜಯಪುರ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ 20, ಕಾಂಗ್ರೆಸ್ 16, ಜೆಡಿಎಸ್ 3 ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಕಡೆ ಕ್ರಾಸ್ ವೋಟಿಂಗ್ ಆಗಿದ್ದು, ಕಾಂಗ್ರೆಸ್ಸಿನ ಮೂರು ಜನ ಸದಸ್ಯರು ಬಿಜೆಪಿ ಪಾಳೆಯ ಸೇರಿದ್ದರೆ, ಬಿಜೆಪಿಯ 4 ಜನ ಸದಸ್ಯರು ಕಾಂಗ್ರೆಸ್ ಪಾಳೆಯ ಸೇರಿ ಮತ ಚಲಾಯಿಸಿದ್ದಾರೆ.  ಜೆಡಿಎಸ್​ನ ಇಬ್ಬರು ಕಾಂಗ್ರೆಸ್ ಬೆಂಬಲಿಸಿದರೆ. ಮತ್ತೊಬ್ಬ ಸದಸ್ಯ ಬಿಜೆಪಿ ಬೆಂಬಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸೋಲು ಖಚಿತವಾಗುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್ಸಿನ 3 ಜನ ಸದಸ್ಯರು ಚುನಾವಣೆ ಪ್ರಕ್ರಿಯೆಯಿಂದ ಅರ್ಧದಲ್ಲಿಯೇ ಹೊರ ಬಂದ ಘಟನೆ ನಡೆಯಿತು. ಈ ಮಧ್ಯೆ ಚುನಾವಣೆಯಲ್ಲಿ ಗೆಲುವಿನ ಕುರಿತು ಪ್ರತಿಕ್ರಿಯೆ ನೀಡಿದ ನೂತನ ಅಧ್ಯಕ್ಷ ಸುಜಾತಾ ಸೋಮನಾಥ ಕಳ್ಳಿಮನಿ, ಕೊರೋನಾ ಅಟ್ಟಹಾಸದ ಈ ಸಂದರ್ಭದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.

ಚುನಾವಣೆ ಮತದಾನಕ್ಕಿಂತ ಮೊದಲು ಜಿಲ್ಲಾ ಪಂಚಾಯಿತಿಯ ಆವರಣದ ಹೊರಗಡೆ ಹೈ ಡ್ರಾಮಾವೇ ನಡೆೆಯಿತು. ಕಾಂಗ್ರೆಸ್ ತನ್ನ ನಾಲ್ಕು ಜನ ಸದಸ್ಯರನ್ನು ಅಪಹರಿಸಿದೆ ಎಂದು ಆರೋಪಿಸಿ ದೇವರ ಹಿಪ್ಪರಗಿ ಬಿಜೆಪಿ ಶಾಸಕ ಸೋಮನಗೌಡ ರಾ. ಪಾಟೀಲ ಸಾಸನೂರ ಮತ್ತು ಸಿಂದಗಿ ಮಾಜಿ ಶಾಸಕ ರಮೇಶ ಭೂಸನೂರ ತಮ್ಮ ಪಕ್ಷದ ಸದಸ್ಯರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು.

ಈ ಮಧ್ಯೆ ಮಾಧ್ಯಮದವರನ್ನೂ ಪೊಲೀಸರು ಒಳಬಿಡದೆ ಹೊರಗಡೆಯೇ ತಡೆದಿದ್ದರು. ಅಲ್ಲದೇ, ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರಿಗೂ ಆವರಣದ ಒಳಗೆ ಪ್ರವೇಶ ನೀಡಿರಲಿಲ್ಲ. ಆದರೆ, ಕಾಂಗ್ರೆಸ್ ಸದಸ್ಯರಿರುವ ಖಾಸಗಿ ಬಸ್ ಒಳಗೆ ಬರುತ್ತಿದ್ದಂತೆ ಪೊಲೀಸರೇ ಆ ಬಸ್ಸು ಒಳಗೆ ತೆರಳಲು ಅವಕಾಶ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಕಾಂಗ್ರೆಸ್ಸ್ ಕಾರ್ಯಕರ್ತರು ಮತ್ತು ಮುಖಂಡರಿಗೆ ಸೇರಿದ ನಾಲ್ಕಾರು ವಾಹನಗಳು ಜಿಲ್ಲಾ ಪಂಚಾಯಿತಿ ಆವರಣದ ಒಳಗೆ ಹೋದವು.

ಈ ಸಂದರ್ಭದಲ್ಲಿ ಶಾಸಕ ಸೋಮನಗೌಡ ಬಿ. ಪಾಟೀಲ ಸಾಸನೂರ ಮತ್ತು ಮಾಜಿ ಶಾಸಕ ರಮೇಶ ಭೂಸನೂರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಬಸ್ಸನ್ನು ತಡೆದರು. ಆಗ ಕಲ್ಲು ತೂರಾಟ ನಡೆಯಿತು. ಕಲ್ಲು ಪೊಲೀಸ್ ಪೇದೆಯೊಬ್ಬರ ಮುಖಕ್ಕೆ ಬಡಿದು ಗಾಯಗೊಂಡರು. ಆಗ ಪೊಲೀಸರು ಲಾಠಿ ಏಟು ಬೀಸಿ ಎಲ್ಲರನ್ನು ಚದುರಿಸಿದರು.

ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಸೋಮನಗೌಡ ಬಿ. ಪಾಟೀಲ ಸಾಸನೂರ, ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದರೂ ಪೊಲೀಸರು ಕಾಂಗ್ರೆಸ್ಸಿನವಂತೆ ವರ್ತಿಸಿದ್ದಾರೆ. ಕಾಂಗ್ರೆಸ್ ಮುಖಂಡರು ಬಿಜೆಪಿಯ ಸದಸ್ಯರನ್ನು ತೆಗೆದುಕೊಂಡು ಹೋಗಿದ್ದಾರೆ. ಸಿಎಂ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಇದನ್ನು ಓದಿ: Video | ಬಳ್ಳಾರಿಯಲ್ಲಿ ಕೊರೋನಾದಿಂದ ಮಡಿದವರ ಮೃತದೇಹಗಳನ್ನು ಬೇಕಾಬಿಟ್ಟಿ ಗುಂಡಿಗೆ ಎಸೆದು ಮುಚ್ಚಿದ ಸಿಬ್ಬಂದಿ; ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ

ಇಬ್ಬರು ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ, ಸೋಮನಗೌಡ ಬಿ.ಪಾಟೀಲ ಸಾಸನೂರ, ಎ.ಎಸ್. ಪಾಟೀಲ ನಡಹಳ್ಳಿ ಕೂಡಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ತಂತ್ರ ರೂಪಿಸಿದ್ದರು. ಆದರೆ, ವಿಜಯಪುರ ಜಿಲ್ಲೆಯ ಕಾಂಗ್ರೆಸ್ ತ್ರಿಮೂರ್ತಿ ಶಾಸಕರಾದ ಎಂ.ಬಿ. ಪಾಟೀಲ (ಬಬಲೇಶ್ವರ), ಶಿವಾನಂದ ಎಸ್. ಪಾಟೀಲ (ಬಸವನ ಬಾಗೇವಾಡಿ), ಯಶವಂತರಾಯಗೌಡ ವಿ. ಪಾಟೀಲ (ಇಂಡಿ) ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ತಮ್ಮ ರಾಜಕೀಯ ಕೌಶಲ್ಯವನ್ನು ಸಾಬೀತು ಪಡಿಸಿದರು.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading