Karnataka Politics: ಕೋಲಾರದಿಂದ ಕಣಕ್ಕಿಳೀತಾರಾ ಸಿದ್ದರಾಮಯ್ಯ? ಒಂದೇ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ಎಂದ್ರು ಸಿದ್ದು

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳು ಒಂದೆಡೆಯಾದರೆ, ಉಳಿದ ಕುರುಬ, ಒಕ್ಕಲಿಗ ಮತಗಳನ್ನ ಪಡೆದುಕೊಂಡಲ್ಲಿ ಕಾಂಗ್ರೆಸ್ ಗೆಲುವು ಸುಲಭವಾಗಬಹುದು ಎನ್ನುವ ಲೆಕ್ಕಾಚಾರ ಹಿನ್ನೆಲೆ ಸಿದ್ದರಾಮಯ್ಯಗೆ ಕೈ ನಾಯಕರು ಅಹ್ವಾನ ನೀಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

  • Share this:
2023ರ ವಿಧಾನಸಭೆ ಚುನಾವಣೆಗೆ (Assembly Election) ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು (Congress MLA) ಮೇಲಿಂದ ಮೇಲೆ ಒತ್ತಡ ಹಾಕ್ತಿದ್ದಾರೆ.  ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾದ  ಹಿನ್ನೆಲೆ ಸಿದ್ದರಾಮಯ್ಯ ಅವರನ್ನು ಇಲ್ಲಿಯೇ ಸ್ಪರ್ಧಿಸುವಂತೆ ಒತ್ತಡ ಹಾಕಿದ್ದಾರೆ. ಇದುವರೆಗೂ ಕೋಲಾರ (Kolara) ವಿಧಾನಸಭಾ ಕ್ಷೇತ್ರದಲ್ಲಿ ಯಾವೊಬ್ಬ ಬಿಜೆಪಿ ಅಭ್ಯರ್ಥಿಯು ಗೆಲುವು ಸಾಧಿಸಿಲ್ಲ,

ಕೋಲಾರದಲ್ಲಿ ಕಣಕ್ಕಿಳೀತಾರಾ ಸಿದ್ದರಾಮಯ್ಯ?

ಕಾಂಗ್ರೆಸ್ ಗೆ ಜೆಡಿಎಸ್ ಪ್ರಬಲ ಪೈಪೋಟಿಯಾಗಿದ್ದು, ಹಾಲಿಯಿರೊ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ, ಸ್ವತಃ ಶಾಸಕ ಶ್ರೀನಿವಾಸ್ ಗೌಡ, ಸಿದ್ದರಾಮಯ್ಯ ರನ್ನ ಕೋಲಾರದಿಂದ ಸ್ಪರ್ಧೆ ಮಾಡುವಂತೆ ಕರೆದಿದ್ದು, ಇದಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಹ ಬೆಂಬಲ ಸೂಚಿಸಿ ಆಹ್ವಾನಿಸಿದ್ದಾರೆ, ಇನ್ನುಳಿದ ಬಂಗಾರಪೇಟೆ ಶಾಸಕ‌  ನಾರಾಯಣಸ್ವಾಮಿ, ಮಾಲೂರು ಕಾಂಗ್ರೆಸ್ ಶಾಸಕ ನಂಜೇಗೌಡ, ಕೆಜಿಎಫ್​ ಶಾಸಕಿ ರೂಪಾಶಶಿಧರ್, ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ ಸಹ ಸಿದ್ದರಾಮಯ್ಯ ಅವರ ಸ್ಪರ್ಧೆಗೆ ಬೆಂಬಲ ಸೂಚಿಸಿದ್ದಾರೆ.

ನೀವು ನಾಮಿನೇಷನ್ ಹಾಕಿ ಸಾಕು, ನಾವು ನೋಡ್ಕೋತೀವಿ

ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯರನ್ನ ಸ್ಪರ್ಧೆ ಮಾಡುವಂತೆ ಆಹ್ವಾನಿಸಿರೊ ಕೈ ಶಾಸಕರು, ಚುನಾವಣಾ ಉಸ್ತುವಾರಿಯನ್ನು ಹೊರುವುದಾಗಿ ಮಾತು ಕೊಟ್ಟಿದ್ದಾರೆ, ಸಿದ್ದರಾಮಯ್ಯ ಅವರು ರಾಜ್ಯ ಮಟ್ಟದ ನಾಯಕರಾಗಿರೊ ಕಾರಣ, ಪ್ರಚಾರ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಕಷ್ಟವಾಗುತ್ತದೆ, ಹೀಗಾಗಿ ಚುನಾವಣಾ ಉಸ್ತುವಾರಿಯನ್ನು ನಾವೇ ಹೊರುವುದಾಗಿ ಕೈ ಶಾಸಕರು ಮಾತು ನೀಡಿದ್ದಾರೆ.

ಇದನ್ನೂ ಓದಿ: Siddaramaiah: ಮುಂದಿನ ಚುನಾವಣೆಯೇ ನನ್ನ ಕೊನೇ ಸ್ಪರ್ಧೆ, ನಿವೃತ್ತಿ ಬಗ್ಗೆ ಸಿದ್ದರಾಮಯ್ಯ ಮಾತು

ಹೈಕಮಾಂಡ್ ಜೊತೆಗೆ ಚರ್ಚಿಸಿ ನಿರ್ಧಾರ

ಆದರೆ ಶಾಸಕರ ಆಹ್ವಾನಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಕೋಲಾರ ಸೇರಿ ಹಲವೆಡೆಯಿಂದಲೂ ಆಹ್ವಾನ ಬಂದಿದೆ, ಹೈಕಮಾಂಡ್ ಜೊತೆಗೆ ಚರ್ಚೆ ನಡೆಸಿ ಮುಂದೆ ತೀರ್ಮಾನ ನಡೆಸುವೆ ಎಂದಿದ್ದಾರೆ. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳು ಒಂದೆಡೆಯಾದರೆ, ಉಳಿದ ಕುರುಬ, ಒಕ್ಕಲಿಗ ಮತಗಳನ್ನ ಪಡೆದುಕೊಂಡಲ್ಲಿ ಕಾಂಗ್ರೆಸ್ ಗೆಲುವು ಸುಲಭವಾಗಬಹುದು, ಆದರೆ ಪಕ್ಷದಲ್ಲಿನ ಆಂತರಿಕ ಭಿನ್ನಮತ ಬೀದಿಗೆ ಬಂದಿದ್ದು, ಸದ್ಯ ಕೋಲಾರ ಕಾಂಗ್ರೆಸ್ ಪರಿಸ್ಥಿತಿ ಅಯೋಮಯವಾಗಿದೆ.

ಕಾಂಗ್ರೆಸ್​ ನಾಯಕರ ಮುನಿಸು

ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ ಅವರ ಬಣ ಹಾಗು ರಮೇಶ್ ಕುಮಾರ್ ಬಣಗಳ ನಡುವೆ ಇನ್ನೂ ವೈಮನಸ್ಸು ಬಗೆಹರಿದಿಲ್ಲ, ಇದು ಕಾಂಗ್ರೆಸ್ ಗೆ ಮುಂದಿನ ಚುನಾವಣೆಯಲ್ಲಿ ಮುಳುವಾಗಬಹುದು ಎನ್ನಲಾಗಿದೆ. ಇನ್ನು ಇತ್ತೀಚೆಗೆ ಕೋಲಾರ ನಗರಕ್ಕೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಕೋಲಾರದಲ್ಲಿ ಸ್ಪರ್ಧೆ ಕುರಿತು ಇನ್ನೂ ನಿರ್ಧಾರ ಮಾಡಿಲ್ಲ ಎಂದಿದ್ದರು ಆದರೆ ನಾನು ಎಲ್ಲಿ ಸ್ಪರ್ಧೆ ಮಾಡ್ತೀನಿ ಎನ್ನುವ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್ ಗೆ ಹೆಚ್ಚು ಚಿಂತಿಯಿದೆ, ಕಳೆದ ಚುನಾವಣೆಯಲ್ಲಿ ಬಾದಾಮಿ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನ ಸೋಲಿಸಲು ಪ್ರಯತ್ನ ಮಾಡಿದ್ದರು, ಈ ಬಾರಿ ನಾನು ಒಂದೇ ಕಡೆ ವಿಧಾನಸಭೆಗೆ ನಿಲ್ಲುವೆ ಎಂದು ತಿಳಿಸಿದ್ದಾರೆ.

ಮುಂದಿನ ಚುನಾವಣೆಯೇ ನನ್ನ ಕೊನೆ ಸ್ಪರ್ಧೆ

ಮೈಸೂರು ತಾಲೂಕಿನ ಸಿದ್ದರಾಮನಹುಂಡಿಯಲ್ಲಿ ಮಾತಾಡಿದ್ದ ಸಿದ್ದರಾಮಯ್ಯ, ವರುಣ, ಚಾಮುಂಡೇಶ್ವರಿ, ಹುಣಸೂರು, ಹೆಬ್ಬಾಳ, ಚಾಮರಾಜಪೇಟೆ, ಬಾದಾಮಿ, ಕೋಲಾರ ಇಷ್ಟು ಕ್ಷೇತ್ರದ ಜನ ನಮ್ಮಲ್ಲಿಯೇ ಸ್ಪರ್ಧಿಸುವಂತೆ ಕರೀತಿದ್ದಾರೆ. ನಾನು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ತೀರ್ಮಾನ ಮಾಡಿಲ್ಲ. ಎಲ್ಲಿ ನನಗೆ ರಾಜಕೀಯ ಪುನರ್ ಜನ್ಮ ಸಿಕ್ಕಿತೋ ಅಲ್ಲಿಯೇ ಸೋಲಿಸಿದರು. ಹಾಗಂತ ಬೇಸರ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಬರೋಬ್ಬರಿ ಐದು ಬಾರಿ ಚಾಮುಂಡೇಶ್ವರಿ ಜನ ನನ್ನನ್ನು ಗೆಲ್ಲಿಸಿದ್ದಾರೆ.

ಇದನ್ನೂ ಓದಿ: Controversial Statement: ಮಾಧ್ಯಮಗಳ ಮೇಲೆ ಸಿದ್ದರಾಮಯ್ಯ ಫುಲ್ ಗರಂ, ಸಿದ್ದು ಹೇಳಿಕೆ ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ನಾಯಕರ ಹಿಂದೇಟು

ಅದಕ್ಕಾಗಿ ಚಾಮುಂಡೇಶ್ವರಿಯನ್ನು ನಾನು ಯಾವಾಗಲೂ ಮರೆಯಲ್ಲ. ಮುಂದಿನ ಚುನಾವಣೆಯೇ ಕೊನೆ. ಮತ್ತೆ ಚುನಾವಣಾ ರಾಜಕಾರಣ ಮಾಡಲ್ಲ. ಆದರೆ ಸಕ್ರಿಯ ರಾಜಕೀಯದಲ್ಲಿ ಇರುತ್ತೇನೆ. ಹೀಗಾಗಿ ಹಲವು ಕ್ಷೇತ್ರಗಳ ಜನ ಸ್ಪರ್ಧೆಗೆ ಆಹ್ವಾನಿಸಿದ್ದಾರೆ. ಎಲ್ಲ ಕ್ಷೇತ್ರಗಳಿಗೂ ನಾನು ಆಧ್ಯತೆ ನೀಡುವೆ , ಹೆಚ್ಚು- ಕಮ್ಮಿ ಅಂತ ಇಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಮುಂದೆ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು.
Published by:Pavana HS
First published: