ಬಾಗಲಕೋಟೆ: ವಿಜಯೇಂದ್ರನಿಗೆ ಆಗ ಅಪ್ಪಾಜಿ (ಬಿಎಸ್ವೈ), ಈಗ ಆಂಕಲ್ (ಬೊಮ್ಮಾಯಿ) ಕಡೆಯಿಂದ ಕೆಲಸ ಆಗುತ್ತದೆ. ಈ ಹಿಂದೆ ಅಪ್ಪಾಜಿ ಕೈಯಿಂದ ಕೆಲಸ ಮಾಡಿಸುತ್ತಿದ್ದ ವಿಜಯೇಂದ್ರ, ಈಗ ಆಂಕಲ್ ಕಡೆಯಿಂದ ಮಾಡಿಸ್ತಿದ್ದಾನೆ ಎಂದು ಮಾಜಿ ಸಚಿವ ಹಾಗು ಕಾಂಗ್ರೆಸ್ ಪಕ್ಷದ ಮುಖಂಡರಾದ ಎಚ್ ಎಮ್ ರೇವಣ್ಣ ವ್ಯಂಗ್ಯವಾಡಿದ್ದಾರೆ. ಜಿಲ್ಲೆಯಲ್ಲಿ ಕೊರೋನಾದಿಂದ ಮೃತರಾದವರ ಮನೆಗಳಿಗೆ ಕಾಂಗ್ರೆಸ್ ನಾಯಕರೊಂದಿಗೆ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೆಚ್ ಎಂ ರೇವಣ್ಣ ಈ ಮಾತುಗಳನ್ನಾಡಿದರು. ಈ ಸರ್ಕಾರ ಜನಾದೇಶದಿಂದ ಬಂದ ಸರ್ಕಾರವಲ್ಲ. ಇದು ಚೌ ಚೌ ಬಾತ್ ಸರ್ಕಾರವಾಗಿದೆ. ಬಿಜೆಪಿಯ ಒಂದು ಮನೆಗೆ ಮೂರು ಬಾಗಿಲು ಎಂಬಾಂತಾಗಿದೆ. ಮೊದಲಿನಿಂದ ಇದ್ದ ಬಿಜೆಪಿಗರ ಒಂದು ಗುಂಪು, ದಳದಿಂದ ಸೇರಿಕೊಂಡದ್ದು 2ನೇ ಗುಂಪು, ಬಾಂಬೆ ಬಾಯ್ಸ್ ಗಳಿಂದ 3ನೇ ಗುಂಪು ಇದೆ. ಈ ಮೂವರು ಗುಂಪುಗಳ ಹೊಂದಾಣಿಕೆ ಆಗಬೇಕಲ್ಲ, ಇಲ್ಲಿಯವರೆಗೂ ಹೊಂದಾಣಿಕೆ ಆಗಿಲ್ಲ. ಮುಂದೆಯೂ ಹೊಂದಾಣಿಕೆ ಆಗಬೇಕಲ್ಲ, ಅದು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರೇವಣ್ಣ ಹೇಳಿದರು.
ಇದೇ ಸಮಯದಲ್ಲಿ ಹೆಚ್ ಎಂ ರೇವಣ್ಣ ಅವರು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ವಿಜಯೇಂದ್ರನಿಗೆ ಆಗ ಅಪ್ಪಾಜಿ (ಬಿ ಎಸ್ ವೈ), ಈಗ ಆಂಕಲ್ (ಬಸವರಾಜ ಬೊಮ್ಮಾಯಿ) ಕಡೆಯಿಂದ ಕೆಲಸ ಆಗುತ್ತದೆ. ಈ ಹಿಂದೆ ಅಪ್ಪಾಜಿ ಕೈಯಿಂದ ಕೆಲಸ ಮಾಡಿಸುತ್ತಿದ್ದ ವಿಜಯೇಂದ್ರ, ಈಗ ಆಂಕಲ್ ಕಡೆಯಿಂದ ಮಾಡಿಸುತ್ತಾರೆ ಎಂದು ಲೇವಡಿ ಮಾಡಿದರು. ಯಡಿಯೂರಪ್ಪ ಅವರನ್ನ ಭ್ರಷ್ಟಾಚಾರ, ಸ್ವಜನಪಕ್ಷಪಾತವೆಂಬ ಆರೋಪದ ಮೇಲೆ ಕೇಂದ್ರದವರು ಬದಲಾವಣೆ ಮಾಡಿದರು. ಆದರೆ ಸಿಎಂರನ್ನ ಬದಲಾಯಿಸಿದರೂ ಈಗ ಬೊಮ್ಮಾಯಿ ಸಕಾ೯ರದಲ್ಲಿ ಅದು ಮುಂದುವರೆದಿದೆ ಎಂದು ರೇವಣ್ಣ ಟೀಕಿಸಿದರು.
ಯಡಿಯೂರಪ್ಪ ಹೋದ್ರೂ ಅಷ್ಟೇ. ಎಲ್ಲವೂ ಹಾಗೆ ಇದೆ. ಬೊಮ್ಮಾಯಿ ಸಕಾ೯ರದಲ್ಲಿ ಹಳೇ ಮದ್ಯ ಹೊಸ ಬಾಟಲ್, ಐದಾರು ಜನ ಕ್ಯಾಪ್ ಗಳು. ಇಷ್ಟಾಗಿದೆ ಹೊರತು ಬದಲಾವಣೆ ಇಲ್ಲ. ಜನರನ್ನ ಬದಲಾಯಿಸಿದರೂ, ಈಗ ಅದೇ ಜನ ಬರೋದ್ರಿಂದ ಭ್ರಷ್ಟಾಚಾರ, ಸ್ವಜನಪಕ್ಷಪಾತ ನಿಲ್ಲೋದಿಲ್ಲ ಎಂದು ಎಚ್. ಎಮ್. ರೇವಣ್ಣ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಊರಲ್ಲಿ ಬಾರ್ ಬೇಕು ಎಂದು ಕುಡುಕರ ದೊಡ್ಡ ಪ್ರತಿಭಟನೆ: ಅಬಕಾರಿ ಅಧಿಕಾರಿಗಳು ತಬ್ಬಿಬ್ಬು
ಇದಕ್ಕೆ ಮುನ್ನ ಅವರು ಮುಧೋಳ, ಲೋಕಾಪುರ, ಬೀಳಗಿ ಸೇರಿದಂತೆ ವಿವಿಧ ಪ್ರದೇಶದಲ್ಲಿ ಪ್ರವಾಸ ಹಮ್ಮಿಕೊಂಡು ಕೊರೊನಾದಿಂದ ಮೃತ ಪಟ್ಟಿರುವ ಕಾಂಗ್ರೆಸ್ ಕಾರ್ಯಕರ್ತರ ಕುಟುಂಬದವರ ಮನೆಗೆ ಹೋಗಿ ಸ್ವಾಂತನ ಹೇಳಿದರು. ಮನೆ ಮನೆಗೆ ತೆರಳಿ ಕೊರೊನಾದಿಂದ ಉಂಟಾದ ತೊಂದರೆ ಬಗ್ಗೆ ಹಾಗೂ ಲಾಕ್ ಡೌನ್ ದಿಂದ ಆಗಿರುವ ಸಮಸ್ಯೆ ಗಳ ಬಗ್ಗೆ ಮಾಹಿತಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೊನಾ ಹೆಸರಿನಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರ ಮಾಡಿತೇ ಹೊರತು ಜನ ಸಾಮಾನ್ಯರ ತೊಂದರೆ ಬಗ್ಗೆ ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಲೋಕಾಪುರ, ಕಲಾದಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮೃತ ಕೊರೋನಾ ಪೀಡಿತರ ಮನೆಗೆ ತೆರಳಿ ಸಾಂತ್ವನ ಹೇಳಿ ಸಹಾಯಹಸ್ತ ನೀಡಿದರು. ಈ ವೇಳೆ ಎಚ್. ಎಂ. ರೇವಣ್ಣ ಅವರ ಜೊತೆಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್. ಜಿ. ನಂಜಯ್ಯನಮಠ, ಮಾಜಿ ಶಾಸಕ ಜೆ.ಟಿ.ಪಾಟೀಲ ಸೇರಿದಂತೆ ಅನೇಕರಿದ್ದರು.
ವರದಿ: ಮಂಜುನಾಥ್ ತಳವಾರ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ