HOME » NEWS » District » CONGRESS IS A UNDISCIPLINED PARTY SAYS MINISTER JAGADEESH SHETTER RHHSN BKTV

ಕಾಂಗ್ರೆಸ್‌ನಲ್ಲಿ ಚಮಚಗಿರಿ ಮಾಡೋರಿಗೆ ಕಿಮ್ಮತ್ತು: ಸಚಿವ ಜಗದೀಶ್ ಶೆಟ್ಟರ್ ಟೀಕೆ

ಗ್ರಾಪಂಗೆ ಸದಸ್ಯರಾಗಿ ಆಯ್ಕೆಯಾದ ಮಹಿಳೆಯರು ಕೈ ಎತ್ತಿ ಎಂದು ಮನವಿ ಮಾಡಿಕೊಂಡಾಗ ಬೆರಳೆಣಿಕೆಯಷ್ಟು ಕೈಗಳು ಮಾತ್ರ ಕಂಡವು. ಇಷ್ಟೇ ಜನನಾ ಎಂದು ಅಚ್ಚರಿಯಿಂದ ಸಚಿವೆ ಜೊಲ್ಲೆ ಕೇಳಿದಾಗ, ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಇರೋದ್ರಿಂದ ಎಲ್ರೂ ಟೂರ್‌ಗೆ ಹೋಗ್ಯಾರ್ರಿ ಮೇಡಂ ಎಂಬ ಕೂಗು ಮಹಿಳಾ ಗ್ಯಾಲರಿಯಿಂದ ಕೇಳಿ ಬಂತು.

news18-kannada
Updated:January 13, 2021, 10:01 PM IST
ಕಾಂಗ್ರೆಸ್‌ನಲ್ಲಿ ಚಮಚಗಿರಿ ಮಾಡೋರಿಗೆ ಕಿಮ್ಮತ್ತು: ಸಚಿವ ಜಗದೀಶ್ ಶೆಟ್ಟರ್ ಟೀಕೆ
ಸಚಿವ ಜಗದೀಶ್ ಶೆಟ್ಟರ್.
  • Share this:
ಕೊಪ್ಪಳ: ಕಾಂಗ್ರೆಸ್​ನಲ್ಲಿ ಚಮಚಗಿರಿ ಮಾಡೋರಿಗೆ ಕಿಮ್ಮತ್ತು ನೀಡೋದು. ಹೊಗಳು ಭಟ್ಟರನ್ನು, ಬಾಲಬಡುಕರನ್ನು ಅಟ್ಟಕೇರಿಸುವ ಚಾಳಿ ಕಾಂಗ್ರೆಸ್‌ನಲ್ಲಿದೆ. ಇದು ಕಾಂಗ್ರೆಸ್‌ನಲ್ಲಿರುವ ಶಿಸ್ತು. ಬಿಜೆಪಿಯಲ್ಲಿ ಇದು ನಡೆಯೋದಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಟೀಕಿಸಿದರು. ಕೊಪ್ಪಳದ ಶಿವಶಾಂತ ಮಂಗಲಭವನದ ಆವರಣದಲ್ಲಿ ಬುಧವಾರ ನಡೆದ ಬಿಜೆಪಿಯ ಜನಸೇವಕ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಜಗಳ ಆರಂಭವಾಗಿದೆ. ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರು ಮಾತನಾಡುತ್ತಿರುವ ವೇಳೆ ಸಿದ್ದರಾಮಯ್ಯ ಗಡದ್ದಾಗಿ ನಿದ್ದೆ ಮಾಡ್ತಾರೆ. ಇದು ಕಾಂಗ್ರೆಸ್‌ನಲ್ಲಿರುವ ಶಿಸ್ತು. ಕಾರ್ಯಕರ್ತರಿಗೆ ಕಿಮ್ಮತ್ತು ಕೊಡದ ಕಾಂಗ್ರೆಸ್ ಅಧೋಗತಿಯಲ್ಲಿದೆ.‌ ಬಿಜೆಪಿ ಆಕಾಶದೆತ್ತರಕ್ಕೆ ಬೆಳೆಯುತ್ತಾ ಹೊರಟಿದ್ದರೆ, ಕಾಂಗ್ರೆಸ್ ಪಾತಾಳದತ್ತ ಕುಸಿಯುತ್ತಿದೆ ಎಂದರು.

ಗೋಮಾತೆಗೆ ಅವಮಾನಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ನಾಚಿಕೆ ಆಗಬೇಕು. ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ ಅವರು ಗೋ ಹತ್ಯೆ ನಿಷೇಧ ಕಾನೂನು ಜಾರಿ ಮಾಡಿ ದೊಡ್ಡ ಕೆಲಸ ಮಾಡಿದ್ದಾರೆ. ಗೋ ಹತ್ಯೆ ಮಾಡಿದರೆ 3 ಲಕ್ಷ ರೂಪಾಯಿ ದಂಡ, 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು.  ಗೋ ಮಾಂಸ ತಿನ್ನುತ್ತೇನೆ ಎಂದು ಹೇಳುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವಂಥವರನ್ನು ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ್ ಮಾತನಾಡಿ, ಕಾಂಗ್ರೆಸ್‌ನವರು ಎಂದಿಗೂ ಭಾರತ್ ಮಾತಾ‌ ಕೀ ಜೈ ಎನ್ನುವುದನ್ನು ಕಲಿಸಲೇ ಇಲ್ಲ. ಅಲ್ಲೇನಿದ್ದರೂ ಇಂದಿರಾ ಗಾಂಧಿ ಕೀ ಜೈ, ಈಗ ಪ್ರಿಯಾಂಕಾ ಗಾಂಧಿ‌ ಕೀ ಜೈ ಎನ್ನುವ ಹೊಗಳು ಭಟ್ಟರ ದಂಡಿದೆ. ಕಾಂಗ್ರೆಸ್ ಬಕೆಟ್ ಹಿಡಿಯೋರಿಗೆ, ಡೋರ್ ತೆಗೆಯೋರಿಗೆ ಮಣೆ ಹಾಕ್ತಾರೆ ಎಂದು ಕಿಡಿಕಾರಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮಾತನಾಡಿ, ಬಿಜೆಪಿ ವಿಭಿನ್ನ ಪಕ್ಷ ಅನ್ನೋದಕ್ಕೆ ಇಲ್ಲಿನ ಕಾರ್ಯಕ್ರಮ ಸಾಕ್ಷಿ. ಬೆಂಗಳೂರಿನಲ್ಲಿ ನೂತನ ಸಚಿವರ ಪ್ರಮಾಣ ವಚನ ನಡೆದಿದೆ. ಇಲ್ಲಿ ಸಮಾವೇಶ ನಡೆದಿದೆ. 11ನೇ ತಾರೀಖಿನಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನಸೇವಕದ ಸಮಾವೇಶ ಆರಂಭವಾಗಿದೆ. ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತ ದೇಶ ಮುಖ್ಯ. ಇದು ಬಿಜೆಪಿ ನಡೆದು ಬಂದಿರುವ ಹಾದಿ. 45 ಸಾವಿರಕ್ಕಿಂತ ಹೆಚ್ಚು ಜನ ಬಿಜೆಪಿ ಬೆಂಬಲಿತರು‌ ಗ್ರಾಪಂ ಸದಸ್ಯರಾಗಿ ಆಯ್ಕೆ ಆಗಿದ್ದಾರೆ. ಪ್ರಧಾನಿಯಂತೆ ಮುಂದಿನ 6 ವರ್ಷಗಳ ಕಾಲ ಕಪ್ಪುಚುಕ್ಕೆ ಇಲ್ಲದಂತೆ ಗ್ರಾಪಂ ನೂತನ ಸದಸ್ಯರು ಕೆಲಸ ಮಾಡಬೇಕಿದೆ. ಮುಂದಿನ ತಾಪಂ, ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿಸಲು ಶಪಥ ಮಾಡಬೇಕು ಎಂದರು.

ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಮಾತನಾಡಿ, ಗೋಹತ್ಯೆ ನಿಷೇಧ ಮಾಡಿದರೆ ಕಾಂಗ್ರೆಸ್‌ನವರಿಗೆ ಸಹಿಸಲು ಆಗುತ್ತಿಲ್ಲ. ಬಿಜೆಪಿಯವರಿಗೆ ಗೋವು ತಾಯಿ ಸಮಾನ. ಕಾಂಗ್ರೆಸ್‌ನವರಿಗೆ ಗೋವಿನ ಹಾಲು, ಮೊಸರು ಬೇಡ ಅನಿಸುತ್ತೆ. ಅದಕ್ಕೆ ಗೋವಧೆಗೆ ಪ್ರಚೋದನೆ ನೀಡ್ತಾರೆ. ಗೋಮಾತೆಯ ರಕ್ಷಣೆ ಆಗಬೇಕು. ಗೋಮಾತೆಯನ್ನು ನಾವೆಲ್ಲ ರಕ್ಷಿಸಬೇಕು. ಎಲ್ಲ ಜಿಲ್ಲೆಗಳಲ್ಲಿ ಕಸಾಯಿಖಾನೆ‌ ಬಂದ್ ಆಗುತ್ತವೆ. ಗೋವಧೆ ಮಾಡಿದ್ರೆ ಸುಮ್ಮನಿರಲ್ಲ ಎಂದ ಅವರು, ದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಶದ ಪ್ರತಿಯೊಬ್ಬ ನಾಗರಿಕನ ಕೊಡುಗೆ ಇರಬೇಕೆಂಬ ಕಾರಣಕ್ಕಾಗಿ ಜನವರಿ 15ರಿಂದ ಹಣ ಸಂಗ್ರಹ ಅಭಿಯಾನ ಶುರುವಾಗುತ್ತೆ. ಸಾರ್ವಜನಿಕರು ಸಹಾಯ ಮಾಡಿ ಸಹಕರಿಸಬೇಕು ಎಂದರು.

ಇದನ್ನು ಓದಿ: ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 7 ಮಂದಿಯ ಬಗ್ಗೆ ಇಲ್ಲಿದೆ ಕಿರುಪರಿಚಯ!

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಮಹಿಳೆಯರು ಸರಕಾರದ ಯೋಜನೆಗಳನ್ನು ಅರಿತುಕೊಳ್ಳಬೇಕು. ಆಡಳಿತ, ಅಧಿಕಾರದಲ್ಲಿ ಗಂಡಂದಿರ ಸಹಾಯ, ಸಹಕಾರ ಪಡೆಯಬೇಕೇ ಹೊರತು ಅವರನ್ನೇ ಅಧಿಕಾರ ನಡೆಸುವಂತೆ ಮಾಡಬಾರದು ಎಂದರು.  ಬಳಿಕ ಗ್ರಾಪಂಗೆ ಸದಸ್ಯರಾಗಿ ಆಯ್ಕೆಯಾದ ಮಹಿಳೆಯರು ಕೈ ಎತ್ತಿ ಎಂದು ಮನವಿ ಮಾಡಿಕೊಂಡಾಗ ಬೆರಳೆಣಿಕೆಯಷ್ಟು ಕೈಗಳು ಮಾತ್ರ ಕಂಡವು. ಇಷ್ಟೇ ಜನನಾ ಎಂದು ಅಚ್ಚರಿಯಿಂದ ಸಚಿವೆ ಜೊಲ್ಲೆ ಕೇಳಿದಾಗ, ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಇರೋದ್ರಿಂದ ಎಲ್ರೂ ಟೂರ್‌ಗೆ ಹೋಗ್ಯಾರ್ರಿ ಮೇಡಂ ಎಂಬ ಕೂಗು ಮಹಿಳಾ ಗ್ಯಾಲರಿಯಿಂದ ಕೇಳಿ ಬಂತು.
Youtube Video

ಸಂಸದ ಕರಡಿ ಸಂಗಣ್ಣ, ಶಾಸಕರಾದ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ ಮತ್ತಿತರರು ಮಾತನಾಡಿದರು. ಸಮಾರಂಭದಲ್ಲಿ ಗ್ರಾಮ ಪಂಚಾಯತಿ ಬಿಜೆಪಿ ಬೆಂಬಲಿತ ನೂತನ ಸದಸ್ಯರಿಗೆ ಗಣ್ಯರಿಂದ ಪುಷ್ಪಮಳೆ ಸುರಿಸುವ ಮೂಲಕ ಅಭಿನಂದಿಸಲಾಯಿತು.
ಈ ವೇಳೆ ಶಾಸಕರಾದ ಬಸವರಾಜ ದಢೇಸೂಗೂರು, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಗಿರಿಗೌಡ, ಅಮರೇಶ ಕರಡಿ,  ಎಂ‌.ಬಿ.ಪಾಟೀಲ, ಮಹಾಂತೇಶ ಮಾಲೀಪಾಟೀಲ್, ಸಿಂಗನಾಳ ವಿರೂಪಾಕ್ಷಪ್ಪ ಮತ್ತಿತರರು ಇದ್ದರು.
Published by: HR Ramesh
First published: January 13, 2021, 10:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories