ಹಾಸನ; ರಾಷ್ಟ್ರದಲ್ಲಿ, ರಾಜ್ಯದಲ್ಲಿ ಪರಿವರ್ತನೆ ಗಾಳಿ ಬೀಸುತ್ತಿದೆ. ಇಡೀ ದೇಶದಲ್ಲಿ ಜನತಾ ಪಾರ್ಟಿಯ ಗಾಳಿ ಬೀಸುತ್ತಿದೆ. ರಾಜ್ಯದಲ್ಲಿ, ರಾಷ್ಟ್ರದಲ್ಲಿ ಕಾಂಗ್ರೆಸ್ ಗೆ ಸ್ಥಾನಮಾನ ಇಲ್ಲ. ಇದಕ್ಕೆ ಮೂರು ಶಾಪಗಳು ಕಾರಣ. ಮೊದಲನೇ ಶಾಪ ಮಹಾತ್ಮ ಗಾಂಧೀಜಿಯದು, ಎರಡನೇ ಶಾಪ ಅಂಬೇಡ್ಕರ್ ಅವರದು ಹಾಗೂ ಮೂರನೇ ಶಾಪ ಗೋ ಮಾತೆಯದು ಎಂದು ಹಾಸನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಹಾಸನದಲ್ಲಿ ನಡೆದ ಜನ ಸೇವಕ್ ಸಮಾವೇಶದಲ್ಲಿ ಮಾತನಾಡಿದ ಕಟೀಲ್, ಗಾಂಧೀಜಿ ಅವರ ಚಿಂತನೆ, ಪರಿಕಲ್ಪನೆಗಳನ್ನು ಕಾಂಗ್ರೆಸ್ ಜಾರಿಗೆ ತರಲಿಲ್ಲ. ಗಾಂಧೀಜಿ ಕನಸು ಗ್ರಾಮ ಸ್ವರಾಜ್ ಯೋಜನೆ ಜಾರಿ ಮಾಡಲಿಲ್ಲ. ಗಾಂಧೀಜಿಯ ಕಲ್ಪನೆಗಳನ್ನು ಜಾರಿಗೆ ತಂದವರು ನರೇಂದ್ರ ಮೋದಿ. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಎರಡು ಬಾರಿ ಸೋಲಿಸಿತು. ಅಂಬೇಡ್ಕರ್ ಶವಸಂಸ್ಕಾರಕ್ಕೂ ಕಾಂಗ್ರೆಸ್ ಅವಕಾಶ ಕೊಡಲಿಲ್ಲ. ಕೇವಲ ಮತಕ್ಕಾಗಿ ಅಂಬೇಡ್ಕರ್ ಹೆಸರು ಬಳಸುತ್ತಿದ್ದಾರೆ. ಮೊದಲು ಕಾಂಗ್ರೆಸ್ ನ ಚಿಹ್ನೆ ಆಕಳು, ಹಸು ಮತ್ತು ಜೋಡೆತ್ತಿನ ಚಿಹ್ನೆಯಿತ್ತು. ನಂತರದ ದಿನಗಳಲ್ಲಿ ಆ ಚಿಹ್ನೆಯನ್ನು ತೆಗೆದು ಹಾಕಿದರು. ಗೋಮಾತೆ ರಕ್ಷಣೆ ಮಾಡಬೇಕಾದವರು ಅದನ್ನು ಮಾಡಲಿಲ್ಲ. ಗೋಮಾತೆಯನ್ನು ಅವರು ಪೂಜೆ ಮಾಡಲಿಲ್ಲ. ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿತು. ಈ ಮೂರು ಶಾಪಗಳಿಂದ ಕಾಂಗ್ರೆಸ್ ಎಲ್ಲೆಡೆ ಸೋತಿದೆ ಎಂದು ವಿಶ್ಲೇಷಿಸಿದರು. ಕಾಂಗ್ರೆಸ್ ನಲ್ಲಿ ಇಂದಿರಾಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಜೈ ಅಂತಾರೆ. ನಾವು ಅಧಿಕಾರ ನಡೆಸುವವರಲ್ಲ, ನಾವು ಜನ ಸೇವಕರು ಎಂದರು.
ಇದನ್ನು ಓದಿ: ಮೂವರು ಸಚಿವರಿಗೆ ಕೊಕ್? ರಾಜ್ಯಪಾಲರಿಗೆ ನೂತನ ಮಂತ್ರಿಗಳ ಪಟ್ಟಿ ಕೊಟ್ಟ ಬಿಎಸ್ವೈ; ನಾಳೆ ಪದಗ್ರಹಣ
ಎಲ್ಲೆ ಹೋಗಲಿ, ಎಲ್ಲೆ ಬರಲಿ ಹಾಸನದ ಗೌಡರು ಕಣ್ಣೀರು ಹಾಕುವುದು ನಿಲ್ಲಲಿಲ್ಲ. ಇನ್ಮುಂದೆ ಕಣ್ಣೀರು ನಡೆಯುದಿಲ್ಲ. ಮುಂದಿನ ತಾ.ಪಂ., ಜಿ.ಪಂ. ಚುನಾವಣೆಯಲ್ಲಿ ಹಾಸನ ಜಿಲ್ಲೆಯಲ್ಲಿ ಹೆಚ್ಚು ಬಿಜೆಪಿ ಸದಸ್ಯರು ಗೆಲ್ಲಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಏಳಕ್ಕೆ ಏಳು ಕ್ಷೇತ್ರದಲ್ಲೂ ಬಿಜೆಪಿ ಶಾಸಕರನ್ನು ಆಯ್ಕೆ ಮಾಡಿ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ