ಜೆಡಿಎಸ್-ಕಾಂಗ್ರೆಸ್ ನಡುವೆ ಮುಂದುವರೆದ ಜಟಾಪಟಿ; ಜಿಪಂ ಅಧ್ಯಕ್ಷೆ, ಎಚ್.ಡಿ.ರೇವಣ್ಣ ಆರೋಪ-ಪ್ರತ್ಯಾರೋಪ

120 ಕೋಟಿ ಅನುದಾನ ವಾಪಸ್ ಸರ್ಕಾರಕ್ಕೆ ಹೋಗುತ್ತೆ ಅಂತಾ ಎಂಎಲ್ ಸಿ ಗೋಪಾಲಸ್ವಾಮಿ ಮತ್ತು ಜಿಪಂ ಅಧ್ಯಕ್ಷೆ ಆರೋಪಿಸಿದ್ದಾರೆ. ಇಬ್ಬರ ವಿರುದ್ದವೂ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ರೇವಣ್ಣ ಎಚ್ಚರಿಕೆ ನೀಡಿದರು. ಕೆಲವು ಪ್ರದೇಶಗಳಿಗೆ ಆಯಮ್ಮ ಭೇಟಿ ನೀಡದೇ ಟಿಎ, ಡಿಎ ಕ್ಲೈಮ್ ಮಾಡಿದ್ದಾರೆ ಎಂದು ಇದೇ ವೇಳೆ ಮತ್ತೆ ಆರೋಪ ಮಾಡಿದರು.

ಶ್ವೇತಾ ದೇವರಾಜ್​

ಶ್ವೇತಾ ದೇವರಾಜ್​

  • Share this:
ಹಾಸನ; ಹಾಸನ ಜಿಲ್ಲಾ ಪಂಚಾಯಿತಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಸದಸ್ಯರ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಇದೀಗ ಬೀದಿಗೆ ಬಂದಿದೆ. ಜಿಲ್ಲೆಯ ಅಭಿವೃದ್ಧಿಗೆ ಕಾಯಕಲ್ಪ ನೀಡಬೇಕಾದವರೇ ಒಬ್ಬರ ಮೇಲೊಬ್ಬರು ಆರೋಪ- ಪ್ರತ್ಯಾರೋಪ ಮಾಡುವ ಮೂಲಕ ಕಾಲಹರಣ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜಿ.ಪಂ. ಅಧ್ಯಕ್ಷೆ ಶ್ವೇತಾ ದೇವರಾಜ್ ಅವರು, ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತು ಜಿಪಂ ಉಪಾಧ್ಯಕ್ಷ ಹಾಗೂ ಜೆ.ಡಿ.ಎಸ್.ನ ಸದಸ್ಯರು ನನ್ನ ಮೇಲೆ ವಿನಾಕಾರಣ ಭ್ರಷ್ಟಾಚಾರದ ಆರೋಪ ಹೊರಿಸುತ್ತಿದ್ದು, ಅದನ್ನು ಸಾಬೀತುಪಡಿಸಿದ ದಿನವೇ ಜಿಪಂ ಸದಸ್ಯತ್ವ ಸ್ಥಾನಕ್ಕೆ ಮತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸವಾಲು ಹಾಕಿದರು.

ನನ್ನ ಅಧಿಕಾರಾವಧಿಯ 4 ವರ್ಷಗಳಲ್ಲಿ ಒಂದೇ ಒಂದು ದಿನ ನಾನು ಯಾರ ಕೈಗೊಂಬೆ ಅಲ್ಲ. ಜೆ.ಡಿ.ಎಸ್.ನವರು ನಾನು ಪ್ರಭಾವಿ ರಾಜಕಾರಣಿ ನಾನು ಹೇಳಿದಂತೆ ಎಲ್ಲಾ ನಡೆಯಬೇಕು ಎಂದು ವರ್ತಿಸುತ್ತಾರೆ. ಆದರೆ ನಾನು ಯಾರ ಕೈಗೊಂಬೆಯಲ್ಲ ಎಂದು ಕಿಡಿಕಾರಿದರು. ಪ್ರತಿದಿನ ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆ. ನನ್ನನ್ನು ಹೆದರಿಸಿ ಬ್ಲಾಕ್‍ಮೇಲ್ ಮಾಡಬೇಕು ಎಂದುಕೊಂಡಿದ್ದರೆ ಅದು ಅವರಿಂದ ಸಾಧ್ಯವಿಲ್ಲ. ನಾನು ಎಂದೂ ಕೂಡ ತಪ್ಪು ಮಾಡಿಲ್ಲ ಎಂದು ಹೇಳಿದರು.

ನಾನು ತಪ್ಪು ಮಾಡಿಲ್ಲ. ಮುಂದೆಯೂ ಕೂಡ ತಪ್ಪು ಮಾಡುವುದಿಲ್ಲ. ಆದ್ದರಿಂದ ನಾನು ಯಾರ ಕೈಗೊಂಬೆಯಾಗಿಯೂ ಕೆಲಸ ಮಾಡಲು ತಯಾರಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು. ರೇವಣ್ಣನ ಸಂಸ್ಕಾರ ಜನರಿಗೆ ಗೊತ್ತು. ನಾನೊಬ್ಬ ಮಹಿಳಾ ಅಧ್ಯಕ್ಷೆ ಎಂಬುದನ್ನು ಮರೆತು ಏಕವಚನದಲ್ಲಿ ನನ್ನನ್ನು ಹೀಯಾಳಿಸುತ್ತಾರೆ. ಅವರ ಪಕ್ಷದಲ್ಲಿಯೂ ಕೂಡ ಮಹಿಳೆಯರಿದ್ದಾರೆ ಎಂಬುದನ್ನು ಮರೆತ್ತಿದ್ದಾರೆ ಎಂದು ಎಚ್.ಡಿ.ರೇವಣ್ಣ ವಿರುದ್ದ ವಾಗ್ದಾಳಿ ನಡೆಸಿದರು.

ಜಿಪಂ ಉಪಾಧ್ಯಕ್ಷರು ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ನಾನು ಯಾವುದೇ ತಪ್ಪು ಮಾಡಿಲ್ಲ. ಕ್ಷಮೆ ಕೇಳುವ ಅಗತ್ಯವೂ ಇಲ್ಲ.ಆದರೆ ಉಪಾಧ್ಯಕ್ಷರು ಕುಡಿಯುವ ನೀರಿಗಾಗಿ 1ಕೋಟಿ ಹಣ ಬಂದಿದ್ದ ಸಂದರ್ಭದಲ್ಲಿ 23 ಸದಸ್ಯರಿಗೂ ಯೋಜನಾ ಪಟ್ಟಿಯನ್ನು ಕಳುಹಿಸಿಕೊಡಬೇಡಿ ಎಂದು ಅವರ ಕಚೇರಿಯಿಂದ ಮೊಬೈಲ್‍ನಲ್ಲಿ ಸಂದೇಶ ರವಾನೆಯಾಗಿದೆ. ಈ ರೀತಿ ಮಾಡುವುದರಿಂದ ಜಿಲ್ಲೆಯ ಜನರಿಗೆ ಉಪಾಧ್ಯಕ್ಷರಾದವರು ಅನ್ಯಾಯ ಮಾಡಿದ್ದಾರೆ. ಅವರು ಕ್ಷಮೆ ಕೇಳಬೇಕೋ, ಅವರೇ ಕ್ಷಮೆ ಕೇಳಬೇಕೋ ಎಂಬುದನ್ನು ಜನರೇ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ಉಪಾಧ್ಯಕ್ಷರು ಮಾಜಿ ಶಾಸಕರ ಮಗನಾಗಿದ್ದುಕೊಂಡು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಅವರಿಗೆ ಮುಂದಿನ ದಿನಗಳಲ್ಲಿರಾಜಕೀಯ ಭವಿಷ್ಯ ಇರುವುದರಿಂದ ಸುಳ್ಳು ಆರೋಪಗಳನ್ನು ಮಾಡುವುದು ಅವರಿಗೆ ಶೋಭೆ ತರುವುದಿಲ್ಲ. ಭ್ರಷ್ಟಾಚಾರ ಎಸಗಿಲ್ಲ. ಸುಳ್ಳು ಬಿಲ್ಲುಗಳನ್ನು ಕೂಡ ಮಾಡಿಸಿಲ್ಲ. ಇದಕ್ಕೆ ಯಾವುದೇ ತನಿಖೆ ಬೇಕಾದರೂ ಮಾಡಿಸಲಿ. ಅದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ. ನಾನು ಕೂಡ ತನಿಖೆಗೆ ಸಿದ್ಧನಿದ್ದೇನೆ ಎಂದು ಶ್ವೇತಾ ಅವರು ತಿರುಗೇಟು ನೀಡಿದರು.

ಜೆ.ಡಿ.ಎಸ್. ಸದಸ್ಯರು ಒಂದೇ ಒಂದು ಸಭೆಗೂ ಕೂಡ ಸರಿಯಾಗಿ ಹಾಜರಾಗುವುದಿಲ್ಲ. ಸಭೆಯ ದಿನ ಜಿಲ್ಲಾ ಪಂಚಾಯಿತಿಗೆ ಬರುತ್ತಾರೆ. ಆದರೆ ಸಭೆಗೆ ಆಗಮಿಸುವುದಿಲ್ಲ. ಜೆ.ಡಿ.ಎಸ್. ನವರು ನಾನು ಅಧಿಕಾರ ವಹಿಸಿಕೊಂಡ ದಿನದಿಂದಲೂ ಮಾನಸಿಕವಾಗಿ ಕಿರುಕುಳ ನೀಡುತ್ತಲೇ ಬಂದಿದ್ದಾರೆ ಎಂದು ಶ್ವೇತಾ ದೇವರಾಜ್ ಅವರು ಆರೋಪ ಮಾಡಿದರು.

ಇದನ್ನು ಓದಿ:ಬಿಎಸ್​ವೈಗೆ ಆಪ್ತರಾಗಿದ್ದ ಯತ್ನಾಳ ಈಗ ಸಿಎಂ ವಿರುದ್ಧ ಸಿಟ್ಟಾಗಲು ಕಾರಣವೇನು ಗೊತ್ತಾ?

ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಎಚ್.ಡಿ.ರೇವಣ್ಣ ಅವರು, ನಾವು ಯಾವ ಕಿರುಕುಳ ಕೊಟ್ಟಿದ್ದೇವೆ ಎಂಬುದನ್ನು ಸಾಬೀತುಪಡಿಸಲಿ. ಬಡ್ಡಿ ಹಣ ತಂದು ಕಾಮಗಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಒಂದು ವೇಳೆ ನಮ್ಮ ಜೆಡಿಎಸ್ ಜಿಪಂ ಸದಸ್ಯರು ಭ್ರಷ್ಟಾಚಾರ ಮಾಡಿದರೆ, ಅದನ್ನು ಸಾಬೀತುಪಡಿಸಲಿ. ಭ್ರಷ್ಟಾಚಾರ ಸಾಬೀತು ಪಡಿಸಿದರೆ ನಮ್ಮ ಸದಸ್ಯರನ್ನು ರಾಜೀನಾಮೆ ಕೊಡಿಸುತ್ತೇನೆ ಎಂದು ಸವಾಲು ಹಾಕಿದರು.

ಜಿಪಂ ಅಧ್ಯಕ್ಷೆಯ ಆರೋಪ ಸುಳ್ಳಾದರೆ ಕ್ಷಮೆ ಕೇಳಲಿ. ಜಿಪಂ ಅಧ್ಯಕ್ಷೆ ಮತ್ತು ಎಂಎಲ್ ಸಿ 120 ಕೋಟಿ ಅನುದಾನ ತಂದಿದ್ದರೆ ಅವರಿಗೆ ಸನ್ಮಾನ ಮಾಡುತ್ತೇನೆ. 120 ಕೋಟಿ ಅನುದಾನ ವಾಪಸ್ ಸರ್ಕಾರಕ್ಕೆ ಹೋಗುತ್ತೆ ಅಂತಾ ಎಂಎಲ್ ಸಿ ಗೋಪಾಲಸ್ವಾಮಿ ಮತ್ತು ಜಿಪಂ ಅಧ್ಯಕ್ಷೆ ಆರೋಪಿಸಿದ್ದಾರೆ. ಇಬ್ಬರ ವಿರುದ್ದವೂ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ರೇವಣ್ಣ ಎಚ್ಚರಿಕೆ ನೀಡಿದರು. ಕೆಲವು ಪ್ರದೇಶಗಳಿಗೆ ಆಯಮ್ಮ ಭೇಟಿ ನೀಡದೇ ಟಿಎ, ಡಿಎ ಕ್ಲೈಮ್ ಮಾಡಿದ್ದಾರೆ ಎಂದು ಇದೇ ವೇಳೆ ಮತ್ತೆ ಆರೋಪ ಮಾಡಿದರು.
First published: