ಬಂಗಾರಪೇಟೆ ತಹಶೀಲ್ದಾರ್ ಹತ್ಯೆ ಖಂಡಿಸಿ ಇಂದು ಸರ್ಕಾರಿ ನೌಕರರ ಪ್ರತಿಭಟನೆ; ಆರೋಪಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಆಗ್ರಹ

ಗಲಾಟೆ ನಂತರ ವಾಪಾಸ್ ಹೊರಡುವಾಗ ಮಾತನಾಡುವ ಸೋಗಿನಲ್ಲಿ ಬಂದ ಆರೋಪಿ, ಏಕಾಏಕಿ ತಾನು ತಂದಿದ್ದ ಚಾಕುವಿನಿಂದ ತಹಶೀಲ್ದಾರ್ ಎದೆ ಭಾಗದ ಮಧ್ಯಕ್ಕೆ ಚುಚ್ಚಿ ಪರಾರಿಯಾಗಿದ್ದಾನೆ. ಘಟನೆ ನಂತರ ಪರಾರಿಯಾಗಿದ್ದ ಆರೋಪಿ ವೆಂಕಟಪ್ಪನನ್ನು ಕಾಮಸಮುದ್ರ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಾಗಿದೆ.

news18-kannada
Updated:July 10, 2020, 7:36 AM IST
ಬಂಗಾರಪೇಟೆ ತಹಶೀಲ್ದಾರ್ ಹತ್ಯೆ ಖಂಡಿಸಿ ಇಂದು ಸರ್ಕಾರಿ ನೌಕರರ ಪ್ರತಿಭಟನೆ; ಆರೋಪಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಆಗ್ರಹ
ಚಾಕು ಇರಿತದಿಂದ ಸಾವನ್ನಪ್ಪಿರುವ ಅಧಿಕಾರಿ ಚಂದ್ರಮೌಳೇಶ್ವರ್‌.
  • Share this:
ಕೋಲಾರ(ಜು.10): ಸದಾ ನಗುಮುಖದಿಂದಲೇ ಇರುತ್ತಿದ್ದ ಕೋಲಾರ ಜಿಲ್ಲೆಯ ಬಂಗಾರಪೇಟೆಯ ತಹಶೀಲ್ದಾರ್  ಚಂದ್ರಮೌಳೇಶ್ವರ ಅವರು ಇನ್ನು ನೆನಪು ಮಾತ್ರ. ಸರಳ, ಸಜ್ಜನಿಕೆಯ, ಸ್ನೇಹಜೀವಿಯಾಗಿದ್ದ ದಕ್ಷ ಅಧಿಕಾರಿ ಕಿರಾತಕನ ಜಮೀನು ದಾಹಕ್ಕೆ ಬಲಿಯಾಗಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ತಹಶಿಲ್ದಾರ್ ಆಗಿ ಕಳೆದ 3 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ಅವರು ಗುರುವಾರ ಬೆಳಗ್ಗೆ, ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್  ಸಭೆಗಳಲ್ಲಿ ಭಾಗಿಯಾಗಿ,  ಸಂಜೆಯೊಳಗೆ ಬಾರದ ಲೋಕಕ್ಕೆ ತೆರಳಿದ್ದಾರೆ.

ಬಂಗಾರಪೇಟೆ ತಾಲೂಕಿನ ಕಳವಂಚಿ ಗ್ರಾಮದಲ್ಲಿ ನಿವೃತ್ತ ಶಿಕ್ಷಕ ಆರೋಪಿ ವೆಂಕಟಪತಿ ಸಹನೆ ಕಳೆದುಕೊಂಡು, ಸರ್ವೇ ಕಾರ್ಯದ ಮಾತುಕತೆ ನಂತರ ತಹಶೀಲ್ದಾರ್ ತೆರಳುವಾಗ, ಚಾಕು ಇರಿದು ಸ್ಥಳದಿಂದ ಪರಾರಿಯಾಗಿದ್ದ. ಎದೆಭಾಗಕ್ಕೆ ಚಾಕು ಚುಚ್ಚಿದ್ದರಿಂದ ತೀವ್ರ ರಕ್ತಸ್ರಾವದಿಂದ ಚಂದ್ರಮೌಳೀಶ್ವರ ಅವರು ಸ್ಥಳದಲ್ಲೆ ಕುಸಿದು ಬಿದ್ದಿದ್ದರು. ಕೂಡಲೇ ಚಾಲಕ ಹಾಗೂ ಪೊಲೀಸರು ಅವರನ್ನು ಸರ್ಕಾರಿ ವಾಹನದಲ್ಲೇ ಬಂಗಾರಪೇಟೆ ಆಸ್ಪತ್ರೆಗೆ ರವಾನಿಸಿದ್ದರು. ಬಳಿಕ ಪ್ರಥಮ ಚಿಕಿತ್ಸೆ ನೀಡಿ ಗಂಭೀರ ಸ್ಥಿತಿಯಲ್ಲಿದ್ದ ಕಾರಣ ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ಸಾಗಿಸಿದರು.

ಆದರೆ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ತಹಶೀಲ್ದಾರ್ ಅವರು ಸಾವನ್ನಪ್ಪಿದ್ದಾರೆ. ವಿಚಾರ ತಿಳಿದ ಕೂಡಲೇ ಜಿಲ್ಲಾಧಿಕಾರಿ ಸಿ ಸತ್ಯಭಾಮ, ಎಸ್ಪಿಗಳಾದ ಕಾರ್ತಿಕ್ ರೆಡ್ಡಿ, ಮೊಹಮ್ಮದ್ ಸುಜೀತಾ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಜಾಲಪ್ಪ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಧಿಕಾರಿಯ ದುರ್ಮರಣ ಕುರಿತು ಜಿಲ್ಲಾಧಿಕಾರಿ ಸತ್ಯಭಾಮ ವಿಷಾದ ವ್ಯಕ್ತಪಡಿಸಿದ್ದು, ಸೌಮ್ಯ ಸ್ವಭಾವದ ವ್ಯಕ್ತಿ ಅಗಲಿಕೆ ದುರಂತ ಎಂದಿದ್ದಾರೆ. ರಾಜ್ಯ ಸರ್ಕಾರ 25 ಲಕ್ಷ ರೂ. ‌ಪರಿಹಾರ ಘೋಷಿಸಿದ್ದು, ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸುವುದು ಹಾಗೂ ಆರೋಪಿ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ, ಸಿಎಂ ಯಡಿಯೂರಪ್ಪ ಪತ್ರಿಕಾ ಹೇಳಿಕೆ  ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ.

ಕೋಲಾರದಲ್ಲಿ ತಹಶೀಲ್ದಾರ್‌ ಕೊಲೆ; ಜಮೀನು ವ್ಯಾಜ್ಯಕ್ಕೆ ಬಿತ್ತು ಸರ್ಕಾರಿ ಅಧಿಕಾರಿಯ ಹೆಣ

ಜಮೀನು ವಿವಾದ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿದಾಗ ಆಗಿದ್ದೇನು?

ಬಂಗಾರಪೇಟೆಯ ಕಳವಂಚಿ ಗ್ರಾಮದಲ್ಲಿ ಆರೋಪಿ  ವೆಂಕಟಪತಿ ಹಾಗೂ ಮತ್ತೊಬ್ಬ ದೂರುದಾರ ರಾಮಮೂರ್ತಿ ಮಧ್ಯೆ ಜಮೀನು ವಿವಾದವಿತ್ತು. ಈ ಪ್ರಕರಣ ಸಿವಿಲ್ ಕೋರ್ಟ್ ಮೆಟ್ಟಿಲೇರಿ ಇತ್ತೀಚೆಗೆ ರಾಮಮೂರ್ತಿ ಪರವಾಗಿ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗಿತ್ತು. ಪ್ರಕರಣ ಇತ್ಯರ್ಥವಾದರೂ ಜಮೀನು ಬಿಡದೆ ಇದ್ದುದ್ದಕ್ಕೆ, ಕಾಮಸಮುದ್ರ ಪೊಲೀಸ್ ಠಾಣೆಗೆ ರಾಮಮೂರ್ತಿ ದೂರು‌ ನೀಡಿದ್ದರು. ಆಗಾಗ್ಗೆ ವೆಂಕಟಪತಿ ಗಲಾಟೆಗೆ ಬರುತ್ತಿದ್ದರು, ಗುರುವಾರ ಜಾಗದಲ್ಲಿ ಗುರ್ತಿಗಾಗಿ ಕಲ್ಲು ನೆಡುತ್ತಿರುವಾಗ ಆರೋಪಿ ವೆಂಕಟಪತಿ ಅಡ್ಡಿಪಡಿಸಿದ್ದು ಗಲಾಟೆಗೆ ಬಂದಿದ್ದಾನೆ.

ಹೀಗಾಗಿ ತಹಶೀಲ್ದಾರ್ ರಿಗೆ ರಾಮಮೂರ್ತಿ ದೂರು ನೀಡಿ ಸ್ಥಳಕ್ಕೆ ಬರುವಂತೆ ಆಗ್ರಹ ಮಾಡಿದ್ದಾರೆ. ಮದ್ಯಾಹ್ನ 1.30 ಕ್ಕೆ ಕೋಲಾರ ಡಿಸಿ ಕಚೇರಿ ಬಿಟ್ಟು 2.30  ಕ್ಕೆ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಅಲ್ಲಿ ಪರಿಶೀಲನೆ ನಡೆಸಿ ನ್ಯಾಯಾಲಯ ಆದೇಶದಂತೆ ಜಮೀನು ಬಿಡಲು ವೆಂಕಟಪತಿಗೆ ಸೂಚಿಸಿದ್ದಾರೆ.  ಈ ವೇಳೆ ಇದಕ್ಕೆ ನಿರಾಕರಿಸಿರುವ ಆರೋಪಿ ಜೋರಾಗಿ ಕೂಗಾಡಿ ಗಲಾಟೆಯು ಮಾಡಿದ್ದಾನೆ. ಈ ವೇಳೆ ಸ್ಥಳದಲ್ಲಿ ಇಬ್ಬರು ಪೇದೆಗಳು ಹಾಗೂ ಸಬ್ ಇನ್ಸ್‌ಪೆಕ್ಟರ್ ದಯಾನಂದ್ ಇದ್ದರೂ ಯಾವುದೇ ಪ್ರಯೋಜನ ಆಗಿಲ್ಲ.ಗಲಾಟೆ ನಂತರ ವಾಪಾಸ್ ಹೊರಡುವಾಗ ಮಾತನಾಡುವ ಸೋಗಿನಲ್ಲಿ ಬಂದ ಆರೋಪಿ, ಏಕಾಏಕಿ ತಾನು ತಂದಿದ್ದ ಚಾಕುವಿನಿಂದ ತಹಶೀಲ್ದಾರ್ ಎದೆ ಭಾಗದ ಮಧ್ಯಕ್ಕೆ ಚುಚ್ಚಿ ಪರಾರಿಯಾಗಿದ್ದಾನೆ. ಘಟನೆ ನಂತರ ಪರಾರಿಯಾಗಿದ್ದ ಆರೋಪಿ ವೆಂಕಟಪ್ಪನನ್ನು ಕಾಮಸಮುದ್ರ ಪೊಲೀಸರು ಬಂಧಿಸಿದ್ದು,  ಪ್ರಕರಣ ದಾಖಲಾಗಿದೆ. ಘಟನೆ ನಂತರ  ಆಸ್ಪತ್ರೆಗೆ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಭೇಟಿ ನೀಡಿ ಮಾತನಾಡಿದ ಅವರು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿ ಕ್ರಮ ಜರುಗಿಸುವ ಭರವಸೆ ನೀಡಿದರು. ಈ ಕುರಿತು ಕಿಡಿಕಾರಿರುವ ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅಧಿಕಾರಿ ಸಾವಿಗೆ 1 ಕೋಟಿ ರೂಪಾಯಿ ಪರಿಹಾರ ನೀಡಲು ಆಗ್ರಹಿಸಿದ್ದಾರೆ.

ಅಧಿಕಾರಿಯ ಹತ್ಯೆ ಖಂಡಿಸಿ ಇಂದು ಸರ್ಕಾರಿ ನೌಕರರ  ಪ್ರತಿಭಟನೆ: ಆರೋಪಿಗೆ ಮರಣ ದಂಡನೆ ವಿಧಿಸಲು‌ ಆಗ್ರಹ

ಅಧಿಕಾರಿಯ ದುರ್ಮರಣದ ನಂತರ ಆಸ್ಪತ್ರೆಗೆ ಬಂದ ಸಂಬಂಧಿಕರ ರೋಧನೆ ಮುಗಿಲು ಮುಟ್ಟಿತ್ತು. ಎಂದೂ, ಯಾರಿಗೂ, ನೋವು ಕೊಡದಂತಹ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದವರ ವಿರುದ್ದ ಕ್ರಮಕ್ಕೆ ಸಂಬಂಧಿಕರು ಆಗ್ರಹಿಸಿದರು. ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಎಸ್. ಮುನಿಸ್ವಾಮಿ ಸಂಬಂಧಿಕರಿಗೆ ಸಾಂತ್ವನ ಹೇಳಿ, ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು, ನಾಳೆ ಕಂದಾಯ ಸಚಿವ ಆರ್ ಅಶೋಕ್ ಅವರು ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.  ಘಟನೆ ಕುರಿತು ದಿಗ್ಬ್ರಮೆ ವ್ಯಕ್ತಪಡಿಸಿರುವ ತಹಶೀಲ್ದಾರ್ ಕಾರು ಚಾಲಕ ನಾರಾಯಣಸ್ವಾಮಿ, ಸರ್ವೇ ಕಾರ್ಯ, ವಾದ ವಿವಾದ ನಂತರ ಸಾಹೇಬರು ಕಾರು ವಾಪಸ್ ತರುವಂತೆ ಹೇಳಿದ್ದರು, ಕಾರು ವಾಪಾಸ್ ತರುವಷ್ಟರಲ್ಲಿ ಹೀಗಾಗಿದೆ. ನಾನು ಚಾಲಕನಾದರೂ ಸ್ವಂತ ಕುಟುಂಬದ ವ್ಯಕ್ತಿಯಂತೆ ನನ್ನನ್ನ ನೋಡಿಕೊಳ್ಳಿತ್ತಿದ್ದರು ಎಂದು ತೀವ್ರ ಸಂತಾಪ ಸೂಚಿಸಿದ್ದಾರೆ.

ಹಾಡಹಗಲೇ, ಪೊಲೀಸರು ಇರುವ ವೇಳೆಯಲ್ಲಿ ಇಂತಹ ಕೃತ್ಯ ನಡೆದಿದ್ದು ಇದಕ್ಕೆ ಯಾರು ಹೊಣೆ ಎಂಬುದು ತನಿಖೆಯ ನಂತರ ತಿಳಿಯಬೇಕಿದೆ, ಅಧಿಕಾರಿಯ ಸಾವಿಗೆ ಆಕ್ರೊಶ ವ್ಯಕ್ತಪಡಿಸಿರುವ ಸರ್ಕಾರಿ ನೌಕರರ ಸಂಘ ಶುಕ್ರವಾರ ಕೆಲಸಕ್ಕೆ ಗೈರಾಗುವ ಹೇಳಿಕೆ ನೀಡಿದ್ದು, ಆರೋಪಿಗೆ ಮರಣ ದಂಡನೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಸರಳ, ಸ್ನೇಹಜೀವಿಯಾಗಿದ್ದ ಅಧಿಕಾರಿ ಚಂದ್ರಮೌಳೇಶ್ವರ ದುರ್ಮರಣಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ಈ ಸಾವು ನ್ಯಾಯವೇ ಎನ್ನುವ ಪ್ರಶ್ನೆ ಹುಟ್ಟುಹಾಕಿದ್ದು, ಕೆಲಸ ಮಾಡುವ ಅಧಿಕಾರಿಗಳಿಗೆ ಭದ್ರತೆಯೆಲ್ಲಿದೆ ಎಂದು ತೋರಿಸಿದಂತಿದೆ.
Published by: Latha CG
First published: July 10, 2020, 7:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading