• Home
  • »
  • News
  • »
  • district
  • »
  • ಗದಗ ಜಿಲ್ಲೆಯಲ್ಲಿ ನಾಳೆಯಿಂದ ಜೂನ್ 1ರವರೆಗೆ ಸಂಪೂರ್ಣ ಲಾಕ್​ಡೌನ್; ಸಚಿವ ಸಿ.ಸಿ.ಪಾಟೀಲ್

ಗದಗ ಜಿಲ್ಲೆಯಲ್ಲಿ ನಾಳೆಯಿಂದ ಜೂನ್ 1ರವರೆಗೆ ಸಂಪೂರ್ಣ ಲಾಕ್​ಡೌನ್; ಸಚಿವ ಸಿ.ಸಿ.ಪಾಟೀಲ್

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಕೊಡಗು, ಹಾಸನ, ಬಳ್ಳಾರಿ, ಚಿಕ್ಕಮಗಳೂರು, ಕಲಬುರಗಿ ಸೇರಿದಂತೆ ಇದೀಗ ಕೋವಿಡ್ ಪ್ರಕರಣಗಳು ಹೆಚ್ಚಿರುವ ಗದಗ ಜಿಲ್ಲೆಯಲ್ಲೂ ಐದು ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್ ಜಾರಿ ಮಾಡಲಾಗಿದೆ.

  • Share this:

ಗದಗ: ಗದಗ ಜಿಲ್ಲೆಯಲ್ಲಿ ಕೊರೋನಾ ಸೋಂಕು ತಡೆಯಲು ಮೇ 27 ರ ಬೆಳಿಗ್ಗೆ 10 ಗಂಟೆಯಿಂದ ಜೂನ 1 ರ ಬೆಳಿಗ್ಗೆ 6 ಗಂಟೆಯವರೆಗೆ ಕೆಲವು ಅಗತ್ಯ ಸೇವೆಗೆ ಅವಕಾಶ ನೀಡಿ, ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗುವುದು. ಸಾರ್ವಜನಿಕರು ನಿಯಮಗಳನ್ನು ಪಾಲಿಸುವ ಮೂಲಕ ಸೋಂಕು ಹರಡುವಿಕೆ ಸರಪಳಿ ತುಂಡರಿಸಲು ಸಹಕರಿಸಬೇಕು ಎಂದು ಸಣ್ಣ ಕೈಗಾರಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.


ಗದಗ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸಿಸಿ ಪಾಟೀಲ್, ಗದಗ ಜಿಲ್ಲೆಯಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಒಮ್ಮತದ ಅಭಿಪ್ರಾಯದ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಸೋಂಕಿನಿಂದ ಜೀವಹಾನಿ ತಡೆಯಲು ಕಠಿಣ ಕ್ರಮ ಅನಿವಾರ್ಯವಾಗಿದೆ. ಇದಕ್ಕೆ ಸಾರ್ವಜನಿಕರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.


ಜಿಲ್ಲೆಯಲ್ಲಿ ಸೋಂಕು ಸಂಪೂರ್ಣ ನಿಯಂತ್ರಣ ಮಾಡುವ ಅಗತ್ಯವಿದ್ದು, ಕಠಿಣ ಮಾರ್ಗಸೂಚಿಗಳನ್ನು ಸಾರ್ವಜನಿಕರು ಪಾಲಿಸಬೇಕು. ಈ ಕೆಳಗಿನಂತೆ ಕೆಲವು ಅಗತ್ಯ ಸೇವೆಗಳಿಗೆ ಅವಕಾಶ ನೀಡಿ, ಇನ್ನುಳಿದಂತೆ ಎಲ್ಲ ವ್ಯಾಪಾರ-ವಹಿವಾಟು ನಿರ್ಬಂಧಿಸಲಾಗಿದೆ. ಹೂ-ಹಣ್ಣು-ತರಕಾರಿಗಳ ವ್ಯಾಪಾರವನ್ನು ತಳ್ಳುವ ಗಾಡಿ ಅಥವಾ ಆಟೋ ರಿಕ್ಷಾಗಳ ಮೂಲಕ ಖರೀದಿದಾರರ ಮನೆಗಳ ಓಣಿಗಳಲ್ಲಿ ಕೋವಿಡ್-19 ಮುನ್ನೆಚ್ಚರಿಕಾ ಕ್ರಮವಹಿಸಿ ಮಾರಾಟ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ಎಲ್ಲ ದಿನಸಿ ಅಂಗಡಿಗಳ ವ್ಯಾಪಾರವನ್ನು ಮನೆಗೆ ಸರಬರಾಜು (ಹೊಂ ಡಿಲೇವರಿ) ಮುಖಾಂತರ ಮಾಡಲು ಅನುಮತಿಸಿದೆ. ಹಾಲಿನ ಅಂಗಡಿಗಳನ್ನು ಬೆಳಿಗ್ಗೆ 6  ರಿಂದ ಬೆಳಿಗ್ಗೆ 8 ಗಂಟೆಯವರೆಗೆ ವ್ಯವಹರಿಸಲು ಅವಕಾಶ. ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಪರಿಕರಗಳು, ಯಂತ್ರೋಪಕರಣಗಳು, ಬೀಜ ಮತ್ತು ರಸಗೊಬ್ಬರ ಮಾರಾಟಕ್ಕೆ ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10  ಗಂಟೆಯವರೆಗೆ ಅನುಮತಿ. ಜಿಲ್ಲೆಯ ಎಲ್ಲ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲ ರೀತಿಯ ಹೋಟೆಲ್‌ಗಳನ್ನು ಬಂದ್ ಮಾಡಬೇಕು. ವೈನ್ ಶಾಪ್, ಬಾರ್-ರೆಸ್ಟೋರೆಂಟ್‌ಗಳನ್ನು ಸಂಪೂರ್ಣ ನಿರ್ಬಂಧ. ಮಾಂಸದ ಅಂಗಡಿಗಳನ್ನು ತೆರೆಯಲು ಅವಕಾಶ ಇಲ್ಲ. ಬ್ಯಾಂಕ್ ಮತ್ತು ಅಂಚೆ ಕಚೇರಿಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಸೇರದಂತೆ ಕನಿಷ್ಠ ಸಿಬ್ಬಂದಿಗಳೊಂದಿಗೆ ಸೇವೆಗಳನ್ನು ಕೈಗೊಳ್ಳಲು ಅನುಮತಿ. ಈ ಮೊದಲೇ ಅನುಮತಿ ಪಡೆದ ಮದುವೆ ಕಾರ್ಯಕ್ರಮಕ್ಕೆ ಅವಕಾಶ. ಈ ಅವಧಿಯಲ್ಲಿ ಕೋವಿಡ್ ಮಾರ್ಗಸೂಚಿಯನ್ವಯ 05 ಜನಕ್ಕೆ ಮೀರದಂತೆ ಅಂತ್ಯ ಸಂಸ್ಕಾರ ನಡೆಸಲು ಅನುಮತಿ ನೀಡಲಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ ತಿಳಿಸಿದರು.


ಗದಗ ಜಿಲ್ಲೆಯ ಸೊಂಕಿತರಿಗೆ ನೀಡುವ ಆಕ್ಸಿಜನ್ ಪ್ರಮಾಣ ಪೂರೈಕೆ ಸರಿಯಾಗಿ ನಡೆದಿದೆ. ಆಕ್ಸಿಜನ್ ಹಂಚಿಕೆ ಕಾರ್ಯ ಸುಗಮವಾಗಿ ಸಾಗಿದೆ. ಸಾರ್ವಜನಿಕರು ತಪ್ಪದೆ ಮಾಸ್ಕ್ ಧರಿಸುವುದರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.


ಇದನ್ನು ಓದಿ: ಕೊರೋನಾ ನಿಯಂತ್ರಣಕ್ಕೆ ಕಲಬುರ್ಗಿಯಲ್ಲಿ ಮೂರು ದಿನ ಸಂಪೂರ್ಣ ಲಾಕ್​ಡೌನ್: ಜಿಲ್ಲಾಧಿಕಾರಿ


ಕರ್ನಾಟಕದಲ್ಲಿ ಕೊರೋನಾ ಹಾವಳಿ ಮೇ ತಿಂಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಹರಡಲು ಆರಂಭಿಸಿದ ಬಳಿಕ ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರ ಈ ಮೊದಲು 14 ದಿನಗಳ ಕಾಲ ಲಾಕ್​ಡೌನ್​ ಘೋಷಿಸಿತು. ಲಾಕ್​ಡೌನ್​ ಹೇರಿಕೆ ಬಳಿಕ ಕೊರೋನಾ ಸೋಂಕಿತರ ಪ್ರಕರಣ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತಾ ಬರುತ್ತಿರುವ ಕಾರಣಕ್ಕೆ ಮತ್ತೆ 14 ದಿನಗಳ ಕಾಲ ಕರ್ನಾಟಕದಲ್ಲಿ ಲಾಕ್​ಡೌನ್ ವಿಸ್ತರಣೆ ಮಾಡಲಾಗಿದೆ. ಅದರಂತೆ ಮುಂದಿನ ತಿಂಗಳು 7ರವರೆಗೆ ರಾಜ್ಯದಲ್ಲಿ ಲಾಕ್​ಡೌನ್​ ಮುಂದುವರೆಯಲಿದೆ.


ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವಾರದಲ್ಲಿ ಮೂರು ದಿನ ಸಂಪೂರ್ಣ ಲಾಕ್​ಡೌನ್ ಘೋಷಣೆ ಮಾಡಲಾಗಿದೆ. ಮೂರು ದಿನಗಳು ಸಂಪೂರ್ಣ ಲಾಕ್​ಡೌನ್ ಇರಲಿದ್ದು, ಉಳಿದ ದಿನ 10 ಗಂಟೆ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಕೊಡಗು, ಹಾಸನ, ಬಳ್ಳಾರಿ, ಚಿಕ್ಕಮಗಳೂರು, ಕಲಬುರಗಿ ಸೇರಿದಂತೆ ಇದೀಗ ಕೋವಿಡ್ ಪ್ರಕರಣಗಳು ಹೆಚ್ಚಿರುವ ಗದಗ ಜಿಲ್ಲೆಯಲ್ಲೂ ಐದು ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್ ಜಾರಿ ಮಾಡಲಾಗಿದೆ.


ವರದಿ: ಸಂತೋಷ ಕೊಣ್ಣೂರ

Published by:HR Ramesh
First published: