HOME » NEWS » District » COMMISSION CHEATING IN GUNDLUPETE APMC MIDDLEMEN HARASSING FARMERS HK

ಗುಂಡ್ಲುಪೇಟೆ ಎಪಿಎಂಸಿಯಲ್ಲಿ ಬಿಳಿಚೀಟಿ ಕಮಿಷನ್ ದಂಧೆ : ಮಧ್ಯವರ್ತಿಗಳಿಂದ ರೈತರ ಶೋಷಣೆ

ಕೇವಲ ಕಮಿಷನ್ ದಂದೆಯಷ್ಟೇ ಅಲ್ಲ, ತೂಕ ಹಾಗು ಬೆಲೆ ನಿಗದಿಯಲ್ಲು ಮೋಸ ಮಾಡಲಾಗುತ್ತದೆ. ಇದನ್ನು ಪ್ರಶ್ನೆ ಮಾಡಿದರೆ ಅಂತಹ ರೈತರ ತರಕಾರಿಯನ್ನೇ ಖರೀದಿ ಮಾಡದೇ ಬ್ಲಾಕ್ ಮೇಲ್ ಮಾಡಲಾಗುತ್ತಿದೆ

news18-kannada
Updated:September 29, 2020, 5:57 PM IST
ಗುಂಡ್ಲುಪೇಟೆ ಎಪಿಎಂಸಿಯಲ್ಲಿ ಬಿಳಿಚೀಟಿ ಕಮಿಷನ್ ದಂಧೆ : ಮಧ್ಯವರ್ತಿಗಳಿಂದ ರೈತರ ಶೋಷಣೆ
ಸಾಂದರ್ಭಿಕ ಚಿತ್ರ
  • Share this:
ಚಾಮರಾಜನಗರ(ಸೆಪ್ಟೆಂಬರ್ 29): ಸರ್ಕಾರ ಯಾವುದೇ ಕಾಯ್ದೆ ತಂದರು ರೈತರನ್ನು ಶೋಷಣೆ ಮಾಡುವುದು ಮಾತ್ರ ತಪ್ಪಿಲ್ಲ. ವಿದ್ಯುತ್ ಸಮಸ್ಯೆ, ಮಳೆಯ ಅಭಾವ, ಅಂತರ್ಜಲ ಕುಸಿತ, ಕಾರ್ಮಿಕರ ಸಮಸ್ಯೆ ಹೀಗೆ ಹತ್ತಾರು ಸಮಸ್ಯೆಗಳನ್ನು ಎದುರಿಸಿ ರೈತರು ಬೆವರು ಸುರಿಸಿ ಬೆಳೆ ಬೆಳೆದರೂ ಸರಿಯಾದ ಬೆಲೆ ಸಿಗುತ್ತಿಲ್ಲ. ಉತ್ತಮವಾಗಿ ಬೆಳೆದರೂ ಸರಿಯಾದ ಮಾರುಕಟ್ಟೆ ಇಲ್ಲದೆ ಅನ್ನದಾತ ಮಧ್ಯವರ್ತಿಗಳ ಶೋಷಣೆಗೆ ಗುರಿಯಾಗುತ್ತಿದ್ದಾನೆ. ತಾನು ಬೆವರು ಸುರಿಸಿ ಬೆಳೆದ ಬೆಳೆ ಮಾರಾಟಕ್ಕು ದಲ್ಲಾಳಿಗಳು ರೈತರಿಂದ ಕಮಿಷನ್ ವಸೂಲಿ ಮಾಡುವ ಮೂಲಕ ಶೋಷಣೆ ಮಾಡುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಎಪಿಎಂಸಿಯಲ್ಲಿ 100 ರೂಪಾಯಿಗೆ 8 ರೂಪಾಯಿ ಕಮಿಷನ್ ವಸೂಲಿ ಮಾಡುವ ಬಿಳಿ ಚೀಟಿ  ದಂಧೆ ನಿರಂತರವಾಗಿ ನಡೆಯುತ್ತಿದ್ದರೂ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಕ್ರಮ ವಹಿಸಿದೆ ನಿರ್ಲಕ್ಷ್ಯ ವಹಿಸಿದ್ದಾರೆ. ನಿಯಮಗಳ ಪ್ರಕಾರ ಖರೀದಿದಾರರಿಂದ ಅಥವಾ ವರ್ತಕರಿಂದ ದಲ್ಲಾಳಿಗಳು ಕಮಿಷನ್ ಪಡೆಯಬೇಕು. ಆದರೆ, ಇಲ್ಲಿ ರೈತರಿಂದಲೇ ಕಮಿಷನ್ ವಸೂಲಿ ಮಾಡಲಾಗುತ್ತಿದೆ.

ರೈತರು ಎಪಿಎಂಸಿ ಮಾರುಕಟ್ಟೆಗೆ ತರುವ ತರಕಾರಿಯನ್ನು ನಿಯಮಗಳ ಪ್ರಕಾರ ಬಿಡ್ ಕೂಗಿ ತೂಕ ಹಾಕಿ ವಿವರ ಬರೆದು ಅಧಿಕೃತ ರಶೀದಿ ನೀಡಬೇಕು. ಆದರೆ, ಇಲ್ಲಿ ಬಿಡ್​ ಕೂಗಿದ ನಂತರ ಒಂದು  ಬಿಳಿ ಚೀಟಿಯಲ್ಲಿ ಲೆಕ್ಕ ಹಾಕಿ ಬರೆದು ಕೊಡಲಾಗುತ್ತದೆ.

ನಂತರ ಈ ಬಿಳಿ ಚೀಟಿ ತರುವ  ರೈತರಿಗೆ ಮಂಡಿಯಲ್ಲಿ  ಶೇ.8 ರಷ್ಟು ಕಮಿಷನ್ ಹಿಡಿದುಕೊಂದು ಹಣ ನೀಡಲಾಗುತ್ತಿದೆ. ಉದಾಹರಣೆಗೆ 1 ಸಾವಿರ ರೂಪಾಯಿ ಬೆಲೆಯ ತರಕಾರಿ ಮಾರಿದ ರೈತರಿಂದ 80 ರೂಪಾಯಿ ಕಮಿಷನ್ ವಸೂಲಿ ಮಾಡಿಕೊಂಡು ಉಳಿಕೆ ಹಣ ನೀಡಲಾಗುತ್ತಿದೆ. ಆದರೆ, ಈ ವ್ಯವಹಾರವೆಲ್ಲಾ ಬಹಿರಂಗವಾಗಿಯೇ ನಡೆಯುತ್ತಿದ್ದರೂ ಎಪಿಎಂಸಿ ಆಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೊಡಸೋಗೆ ಮಧು ಹೇಳುತ್ತಾರೆ.

ಕೇವಲ ಕಮಿಷನ್ ದಂದೆಯಷ್ಟೇ ಅಲ್ಲ, ತೂಕ ಹಾಗು ಬೆಲೆ ನಿಗದಿಯಲ್ಲು ಮೋಸ ಮಾಡಲಾಗುತ್ತದೆ. ಇದನ್ನು ಪ್ರಶ್ನೆ ಮಾಡಿದರೆ ಅಂತಹ ರೈತರ ತರಕಾರಿಯನ್ನೇ ಖರೀದಿ ಮಾಡದೇ ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂದು ರೈತ ಮುಖಂಡ ಮಾಡ್ರಳ್ಳಿ ಮಹದೇವಪ್ಪ ಆರೋಪಿಸಿದ್ದಾರೆ.

ಇದನ್ನೂ ಓದಿ : ಪೊಲೀಸರು ಬರುವ ಮುನ್ನವೇ ಆರೋಪಿಗಳು ಪರಾರಿ ; ಗಾಂಜಾ ಗಿಡ ಠಾಣೆಗೆ ತರಲು ಪೊಲೀಸರ ಹರಸಾಹಸ

ಎಪಿಎಂಸಿ ಯಲ್ಲಿ ನಡೆಯುತ್ತಿರುವ ಬಿಳಿ ಚೀಟಿ ಕಮಿಷನ್ ದಂಧೆ ಬಗ್ಗೆ ಪ್ರತಿಕ್ರಿಯಿಸಿರುವ ಎಪಿಎಂಸಿ ಅಧ್ಯಕ್ಷ ಶಿವಮಾದಪ್ಪ ತಮಗೆ ಇದುವರೆಗೆ ಯಾವುದೇ ರೀತಿಯ ದೂರು ಬಂದಿಲ್ಲ, ರೈತರು ದೂರು ನೀಡಿದಲ್ಲಿ ಅಂತಹ ದಲ್ಲಾಳಿಗಳ ಲೈಸೆನ್ಸ್ ರದ್ದು ಮಾಡುವುದಾಗಿ ಹೇಳುತ್ತಿದ್ದಾರೆ.
ರೈತರು ಯಾರಿಗು ಕಮಿಷನ್ ನೀಡುವಂತಿಲ್ಲ. ಯಾರಾದರು ಕಮಿಷನ್ ಕೇಳಿದರೆ ದೂರು ನೀಡುವಂತೆ ಎಪಿಎಂಸಿ ಆವರಣದಲ್ಲಿ ಎಲ್ಲರಿಗು ಕಾಣವಂತೆ ನಾಮಫಲಕ ಅಳವಡಿಸಬೇಕು. ಆ ಮೂಲಕ ಈ ಕಮಿಷನ್ ದಂಧೆಗೆ ಕಡಿವಾಣ ಹಾಕುವ ಮೂಲಕ ತಮ್ಮ  ಮೇಲೆ ಆಗುತ್ತಿರುವ ಶೋಷಣೆ ತಪ್ಪಿಸಬೇಕು ಎಂಬುದು ರೈತರ ಆಗ್ರಹವಾಗಿದೆ.
Published by: G Hareeshkumar
First published: September 29, 2020, 5:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories