ಚಿತ್ರದುರ್ಗದಲ್ಲಿ ಬಣ್ಣಬಣ್ಣದ ಕೀಟಗಳು; ಮರುಭೂಮಿಯ ಮಿಡತೆಗಳೆಂದು ಕಂಗೆಟ್ಟ ರೈತರು

ಮರುಭೂಮಿಯಿಂದ ಹಾರಿ ಬಂದು ಉತ್ತರ ಭಾರತದಲ್ಲಿ ಆರ್ಭಟಿಸುತ್ತಿರುವ ಮಿಡತೆಗಳ ಒಂದು ಗುಂಪು ದುರ್ಗದ ನಾಡಿಗೆ ಲಗ್ಗೆ ಇಟ್ಟಿದೆಯಾ ಎಂಬುದು ಗೊತ್ತಿಲ್ಲ. ತುಮಕೂರಿನಲ್ಲೂ ಇಂಥವೇ ಮಿಡತೆಗಳು ಎಕ್ಕದ ಗಿಡಗಳನ್ನ ತಿಂದು ಹಾಕುತ್ತಿರುವ ಸುದ್ದಿ ಇದೆ.

ಚಿತ್ರದುರ್ಗದಲ್ಲಿ ಕಾಣಿಸಿರುವ ಬಣ್ಣಬಣ್ಣದ ಮಿಡತೆಗಳು

ಚಿತ್ರದುರ್ಗದಲ್ಲಿ ಕಾಣಿಸಿರುವ ಬಣ್ಣಬಣ್ಣದ ಮಿಡತೆಗಳು

  • Share this:
ಚಿತ್ರದುರ್ಗ: ದೇಶಾದ್ಯಂತ ಮಹಾಮಾರಿ  ಕೊರೊನಾ ಕಾಟದ ನಡುವೆ ಇದೀಗ ಮಿಡತೆ ಕಾಟ ಶುರುವಾಗಿದೆ. ಕೆಲ ದಿನಗಳ ಹಿಂದಷ್ಟೇ ಆಂಧ್ರಪ್ರದೇಶದ ರಾಯಪುರ ತಾಲೂಕಿನ ಹಲವೆಡೆ ಕಾಣಿಸಿಕೊಂಡಿದ್ದ ಅಪರೂಪದ ವಿವಿಧ ಬಣ್ಣ ಬಣ್ಣದ ಮಿಡತೆಗಳು, ಇದೀಗ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಗಡಿಭಾಗ ಮತ್ತು ಹಿರಿಯೂರು ತಾಲ್ಲೂಕಿಗೂ ಲಗ್ಗೆ ಇಟ್ಟಿವೆ. ನೋಡಲು ವಿಶೇಷವಾಗಿ ಕಾಣುವ ಅಪರೂಪದ ಬಣ್ಣ ಬಣ್ಣದ ಮಿಡತೆಗಳು ಎಕ್ಕದ ಗಿಡದ ಎಲೆಗಳನ್ನು ತಿಂದು ನಾಶಪಡಿಸುತ್ತಿವೆ. ಇಲ್ಲಿಯವರೆಗೆ ಎಕ್ಕದ ಎಲೆಗಳನ್ನು ತಿನ್ನುವ ಯಾವುದೇ ಕೀಟಗಳು ಈ ಭಾಗದ ಜನರು ನೋಡಿಯೇ ಇರಲಿಲ್ಲ. ಆದ್ರೆ ವಿದೇಶದಿಂದ ಬಂದಿರಬಹುದು ಎನ್ನಲಾದ ಮಿಡತೆಗಳು ಎಕ್ಕದ ಗಿಡದ ಒಂದೂ ಎಲೆಯನ್ನು ಬಿಡದೆ ತಿಂದು ಹಾಕುತ್ತಿವೆ.

ಮಿಡತೆಗಳನ್ನು ಕಂಡ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ರೈತರು ಆತಂಕಕ್ಕೀಡಾಗಿದ್ದಾರೆ. ಎಕ್ಕದ ಗಿಡ ಖಾಲಿಯಾದ ನಂತರ ರೈತರ ಬೆಳೆಗಳಿಗೆ ಲಗ್ಗೆ ಇಟ್ಟರೆ ಗತಿ ಏನು ಎಂಬುದು ಆತಂಕಕ್ಕೆ ಕಾರಣವಾಗಿದೆ.

ಕೊರೋನಾ ದೆಸೆಯಿಂದ ಲಾಕ್​ಡೌನ್ ಆಗಿ ರೈತರ ಜೀವನ ಮೂರಾಬಟ್ಟೆಯಾಗಿರುವುದು ಒಂದೆಡೆಯಾದರೆ, ಈಗ ಮಿಡತೆ ಕಾಟ ರೈತರ ನಿದ್ದೆಗೆಡಿಸುತ್ತಿದೆ. ಅದರಲ್ಲೂ ಅವುಗಳು ತಿನ್ನುವ ಅಹಾರ ನೋಡಿ ಜನರೂ ಗಾಬರಿಯೂ ಆಗಿದ್ದಾರೆ. ಪ್ರಕೃತಿಯಲ್ಲಿ ಅದೆಷ್ಟೋ ಕೀಟಗಳು, ಹುಳ, ಹುಪ್ಪಟೆಗಳನ್ನ ನಾವು ನೋಡಿದ್ದೇವೆ. ಆದರೆ ಕೋಟೆ ನಾಡಿನಲ್ಲಿ ವಿಶೇಷ ಬಣ್ಣ ಹೊಂದಿರುವ ಮಿಡತೆ ಆಕಾರದ ಈ ಹುಳುವನ್ನು ಈ ಹಿಂದೆ ಕಂಡವರಿಲ್ಲ. ಕಾಮನ ಬಿಲ್ಲನ್ನು ಹೋಲುವ ಬಣ್ಣ ಹೊಂದಿರುವ ಈ ಮಿಡತೆ ಆಕಾರದ ಕೀಟಗಳು ಎಕ್ಕದ ಗಿಡದ ಎಲೆಗಳನ್ನ ತಿನ್ನಲು ಶುರು ಮಾಡಿದ್ರೆ ಕ್ಷಣಾರ್ಧದಲ್ಲಿ ಇಡೀ ಗಿಡ ಬೋಳಾಗಿಹೋಗುತ್ತದೆ.

ಇದನ್ನೂ ಓದಿ: ಜೆಡಿಎಸ್ ಭದ್ರಕೋಟೆ ಹಾಸನ‌ ಜಿಲ್ಲೆಯ ಉಸ್ತುವಾರಿಯಾಗಿ ಸಚಿವ ಕೆ.ಗೋಪಾಲಯ್ಯ ನೇಮಕ

ಈ ಹುಳುಗಳನ್ನ ನೋಡಿರುವ ಚಿತ್ರದುರ್ಗ ಜಿಲ್ಲೆಯ ಜನರು, ಇವು ಯಾವುದೋ ವಿದೇಶದಿಂದಲೇ ಬಂದಿರುವ ಹುಳುಗಳೇ ಇರಬೇಕು ಎಂದು ಆತಂಕ ಗೊಂಡಿದ್ದಾರೆ. ಅಷ್ಠ ಅಲ್ಲ, ಈಗ ಬಿತ್ತನೆ ಕಾಲವಾದ್ದರಿಂದ ಮುಂಬರುವ ಬೆಳೆಗಳನ್ನ ಇವುಗಳು ಉಳಿಸುತ್ತವೋ ಇಲ್ಲವೋ ಎಂಬ ಭಯದಲ್ಲಿದ್ದಾರೆ. ಈ ಬಣ್ಣ ಬಣ್ಣದ ಅಪರೂಪದ ಅಚ್ಚರಿಯ ಮಿಡತೆಗಳು ನೋಡಲು ಎಷ್ಟು ಮನಮೋಹಕವಾಗಿಯೋ, ಇವು ಸೃಷ್ಟಿಸಿರುವ ಆತಂಕ ಅಷ್ಟೇ ಭಯಾನಕವಾಗಿದೆ.

ಆದರೆ, ಮರುಭೂಮಿಯಿಂದ ಹಾರಿ ಬಂದು ಉತ್ತರ ಭಾರತದಲ್ಲಿ ಆರ್ಭಟಿಸುತ್ತಿರುವ ಮಿಡತೆಗಳ ಒಂದು ಗುಂಪು ದುರ್ಗದ ನಾಡಿಗೆ ಲಗ್ಗೆ ಇಟ್ಟಿದೆಯಾ ಎಂಬುದು ಗೊತ್ತಿಲ್ಲ. ತುಮಕೂರಿನಲ್ಲೂ ಇಂಥವೇ ಮಿಡತೆಗಳು ಎಕ್ಕದ ಗಿಡಗಳನ್ನ ತಿಂದು ಹಾಕುತ್ತಿರುವ ಸುದ್ದಿ ಇದೆ. ಹಾಗೆಯೇ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಮಿಡತೆಗಳು ಕಾಣಿಸಿಕೊಂಡಿವೆ ಎನ್ನಲಾಗಿದೆ. ಆದರೆ, ಕರಾವಳಿ ಭಾಗದಲ್ಲಿ ಕಾಣಿಸಿರುವ ಮಿಡತೆಗಳು ಮರುಭೂಮಿಯಿಂದ ಬಂದವಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ಧಾರೆ. ಈಗ ಕೋಟೆ ನಾಡಿನಲ್ಲಿ ರೈತರ ಆತಂಕಕ್ಕೆ ಕಾರಣವಾಗಿರುವ ಬಣ್ಣ ಬಣ್ಣದ ಮಿಡತೆ ಆಕಾರದ ಕೀಟಗಳು ಯಾವುವು ಎಂದು ಅಧಿಕಾರಿಗಳು ಸ್ಪಷ್ಟಪಡಿಸಬೇಕಿದೆ.

ವರದಿ: ವಿನಾಯಕ ತೊಡರನಾಳ್

First published: