ರಾಮನಗರ: ರಾಮನಗರದ ಸರ್ಕಾರಿ ಬಸ್ ನಿಲ್ಧಾಣದಲ್ಲಿ ಕಾಲೇಜು ಯುವತಿಯರಿಗೆ ರ‍್ಯಾಗಿಂಗ್ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕೊರೋನಾ ಲಾಕ್‌ಡೌನ್ ತೆರವು ಮಾಡಿದ ಬಳಿಕ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಕಾಲೇಜುಗಳು ಪ್ರಾರಂಭವಾಗಿವೆ. ರಾಮನಗರ ಹಾಗೂ ಚನ್ನಪಟ್ಟಣದಿಂದ ನೂರಾರು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದಾರೆ. ಇನ್ನು ಗ್ರಾಮಾಂತರ ಭಾಗದ ಕೆಲವು ಕಡೆಗೆ ಈಗಲೂ ಸಹ ಕೆ.ಎಸ್.ಆರ್.ಟಿ.ಸಿ ಬಸ್‌ಗಳ ಸೌಲಭ್ಯ ಸರಿಯಾಗಿಲ್ಲ. ಹಾಗಾಗಿ ಕಾಲೇಜು ಮುಗಿಸಿದ ನಂತರ ವಿದ್ಯಾರ್ಥಿನಿಯರು ಬಸ್ ನಿಲ್ಧಾಣದಲ್ಲಿಯೇ ಹೆಚ್ಚು ಕಾಲ ಕಳೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ಇದನ್ನೇ ತಮ್ಮ ಬಂಡವಾಳ ಮಾಡಿಕೊಂಡಿರುವ ಕೆಲ ಪುಂಡ ಯುವಕರು ಬಸ್ ನಿಲ್ಧಾಣದಲ್ಲಿ ಬಸ್‌ಗಾಗಿ ಕಾಯುವ ಯುವತಿಯರಿಗೆ ರ‍್ಯಾಗಿಂಗ್ ಮಾಡುವ ಮೂಲಕ ಕಿರುಕುಳ ನೀಡುತ್ತಿದ್ದಾರೆ.
ಇದೇ ವೇಳೆ, ಕಾಲೇಜು ವಿದ್ಯಾರ್ಥಿಗಳ ಮೊಬೈಲ್‌ಗಳು ಸಹ ಕಳ್ಳತನವಾಗುತ್ತಿವೆ. ಮೊಬೈಲ್ ಕಳ್ಳತನದ ಬಗ್ಗೆ ಒಂದೆರಡು ದೂರುಗಳು ಬಂದಿವೆಯಾದರೂ ಸಹ ರ‍್ಯಾಗಿಂಗ್ ಬಗ್ಗೆ ಯಾರು ಸಹ ಪೊಲೀಸರಿಗೆ ದೂರು ಕೊಡಲು ಮುಂದಾಗಿಲ್ಲ. ಹಾಗಾಗಿ ಸಂಬಂಧಪಟ್ಟ ಪೊಲೀಸರು ಈ ಬಗ್ಗೆ ಹೆಚ್ಚಿನ ಕ್ರಮವಹಿಸಿ ರಾಮನಗರ ಬಸ್ ನಿಲ್ಧಾಣದಲ್ಲಿ ಕಾಲೇಜು ಯುವತಿಯರಿಗೆ ಭದ್ರತೆ ನೀಡಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಜೊತೆಗೆ ಗ್ರಾಮಾಂತರ ಭಾಗದ ಕೆಲ ಹಳ್ಳಿಗಳಿಗೆ ಈಗಲೂ ಸಹ ಸರ್ಕಾರಿ ಬಸ್‌ಗಳು ಸೌಲಭ್ಯ ಸರಿಯಾಗಿಲ್ಲದ ಕಾರಣ ಕೆ.ಎಸ್.ಆರ್.ಟಿ.ಸಿ ಇಲಾಖೆಯ ಅಧಿಕಾರಿಗಳು ಸಹ ಈ ಬಗ್ಗೆ ಕ್ರಮವಹಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ಆದರೆ ಈ ಬಗ್ಗೆ ಇಲಾಖೆಯ ಅಧಿಕಾರಿಗಳನ್ನ ಪ್ರಶ್ನೆ ಮಾಡಿದರೆ ಕೆಲವೇ ದಿನಗಳಲ್ಲಿ ಬಸ್‌ಗಳ ಸಮಸ್ಯೆ ಬಗೆಹರಿಯಲಿದೆ, ಎಲ್ಲಾ ಮಾರ್ಗಗಳಿಗೂ ಬಸ್‌ಗಳ ಸಂಚಾರ ಸುಲಲಿತವಾಗಿ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅಮೆರಿಕದ ಟೆಕ್ಸಾಸ್ನಲ್ಲಿ 100ಕ್ಕೂ ಹೆಚ್ಚು ಕಾರುಗಳ ಸರಣಿ ಅಪಘಾತ: 6ಕ್ಕೂ ಹೆಚ್ಚು ಮಂದಿ ಸಾವು
ರಾಮನಗರ ಬಸ್ ನಿಲ್ಧಾಣದಲ್ಲಿ ಪೊಲೀಸ್ ಚೌಕಿ ನಿರ್ಮಾಣಕ್ಕೆ ಒತ್ತಾಯ:
ರಾಮನಗರ ಮತ್ತು ಚನ್ನಪಟ್ಟಣದ ಸರ್ಕಾರಿ ಬಸ್ ನಿಲ್ಧಾಣಗಳಲ್ಲಿ ಅತಿಹೆಚ್ಚು ಮೊಬೈಲ್‌ಗಳು ಕಳ್ಳತನವಾಗಿರುವುದು ಈಗಾಗಲೇ ಗೊತ್ತಿರುವ ವಿಚಾರ. ಕಳೆದ ಎರಡು ವರ್ಷದಲ್ಲಿ ಎರಡೂ ಬಸ್ ನಿಲ್ಧಾಣದಲ್ಲಿ ಸರಿಸುಮಾರು 200 ಕ್ಕೂ ಹೆಚ್ಚು ಮೊಬೈಲ್ ಗಳು ಇಲ್ಲಿ ಕಳ್ಳತನವಾಗಿವೆ. ಕೆಲವರು ಪೊಲೀಸರ ಮೂಲಕ ದೂರು ದಾಖಲಿಸಿ ಕಾನೂನಿನ ಹೋರಾಟ ಮಾಡಿದ್ದರೆ, ಮತ್ತೆ ಕೆಲವರು ಯಾವುದೇ ದೂರು ನೀಡಿಲ್ಲ. ಚನ್ನಪಟ್ಟಣ ಬಸ್ ನಿಲ್ಧಾಣದಲ್ಲಿ ಪೊಲೀಸ್ ಚೌಕಿ ವ್ಯವಸ್ಥೆ ಇದೆ. ಆದರೆ ರಾಮನಗರದಲ್ಲಿ ಆ ವ್ಯವಸ್ಥೆ ಇಲ್ಲ, ಹಾಗಾಗಿ ಪ್ರತ್ಯೇಕವಾಗಿ ರಾಮನಗರದ ಬಸ್ ನಿಲ್ಧಾಣದಲ್ಲಿ ಪೊಲೀಸ್ ಚೌಕಿ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಜೊತೆಗೆ ಸಾರಿಗೆ ಇಲಾಖೆ ಸಹ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಗಳ ವ್ಯವಸ್ಥೆಯನ್ನ ಸರಿಯಾದ ರೀತಿಯಲ್ಲಿ ಮಾಡಬೇಕಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ವರ್ಗ ಸರ್ಕಾರದ ಜೊತೆಗೆ ಮಾತುಕತೆ ನಡೆಸಬೇಕಿದೆ. ಸರಿಯಾದ ಸಮಯಕ್ಕೆ ಬಸ್ ಗಳು ಬಂದರೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂಬ ಅಭಿಪ್ರಾಯವೂ ಕೇಳಿಬಂದಿದೆ.
ವರದಿ: ಎ.ಟಿ.ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ