HOME » NEWS » District » COFFEE PULPING AND GINGER CROP WASHING WASTE INSERT CAUVERY WATER RHHSN RSK

ಕಾವೇರಿ ನದಿಯೊಡಲು ಸೇರುತ್ತಿದೆ ಕಾಫಿ ಪಲ್ಪಿಂಗ್, ಶುಂಠಿ ತ್ಯಾಜ್ಯ!

ನದಿ ದಂಡೆಯಲ್ಲಿ ಸ್ಥಾಪನೆಯಾಗಿರುವ ಶುಂಠಿ ಶುದ್ಧೀಕರಣ ಘಟಕಗಳಿಂದ ಅದರ ತ್ಯಾಜ್ಯದ ನೀರು ಕಾವೇರಿ ಒಡಲು ಸೇರುತ್ತಿರುವುದರಿಂದ ಅವುಗಳನ್ನು ತೆರವು ಮಾಡುವಂತೆ ಜಲ ಮಾಲಿನ್ಯ ನಿಯಂತ್ರಣ ಮಂಡಳಿ 2015 ರಲ್ಲೇ ಆಯಾ ಗ್ರಾಮ ಪಂಚಾಯಿತಿಗಳಿಗೆ ನೋಟಿಸ್ ನೀಡಿ, ಕೈತೊಳೆದುಕೊಂಡಿದೆ.

news18-kannada
Updated:January 23, 2021, 7:18 AM IST
ಕಾವೇರಿ ನದಿಯೊಡಲು ಸೇರುತ್ತಿದೆ ಕಾಫಿ ಪಲ್ಪಿಂಗ್, ಶುಂಠಿ ತ್ಯಾಜ್ಯ!
ಶುಂಠಿ ಶುದ್ಧೀಕರಣ
  • Share this:
ಕೊಡಗು: ಕಾವೇರಿ ನೀರು ಕುಡಿಯುತ್ತಿರುವ ಮೈಸೂರು, ಬೆಂಗಳೂರು ಮಂಡ್ಯ ನಾಗರಿಕರೆ,  ನಿಮ್ಮ ಜೀವಕ್ಕೆ ಕುತ್ತು ಬಂದೀತು ಜೋಪಾನ.! ಯಾಕೆ ಅಂತ ಆಶ್ಚರ್ಯ ಆಗುತ್ತಿದೆಯೇ. ಆಶ್ಚರ್ಯ ಆದರೂ ನೀವು ನಂಬಲೇಬೇಕಾದ ಘನಘೋರ ವಿಷಯ. ಹೌದು ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ನಾಡಿನುದ್ಧಕ್ಕೂ ಹರಿಯುವ ಜೀವನದಿ ಕಾವೇರಿ ವಿಷಯುಕ್ತವಾಗುತ್ತಿದ್ದಾಳೆ. ಕೊಡಗು ಜಿಲ್ಲೆಯ ಮತ್ತು ಕೊಡಗಿನ ಗಡಿಭಾಗದಲ್ಲಿ ಕಾವೇರಿ ನದಿ ಸಂಪೂರ್ಣ ಕಲುಷಿತಗೊಳ್ಳುತ್ತಿದ್ದು, ಪವಿತ್ರ ನೀರೆಂದು ಕುಡಿದಲ್ಲಿ ಜೀವಕ್ಕೆ ಕಂಟಕವಾದರೆ ಅಚ್ಚರಿಯೇನಿಲ್ಲ. ಏಕೆಂದರೆ ತವರು ಜಿಲ್ಲೆ ಕೊಡಗಿನಲ್ಲೇ ಕಾವೇರಿ ಕಾಫಿ ಪಲ್ಪಿಂಗ್, ಶುಂಠಿ ತ್ಯಾಜ್ಯ ಹಾಗೂ ದೊಡ್ಡದೊಡ್ಡ ಹೊಟೇಲ್ ಗಳ ಶೌಚ ನೀರಿನಿಂದ ಸಂಪೂರ್ಣ ಕಲುಷಿತಗೊಳ್ಳುತ್ತಿದ್ದಾಳೆ.

ಕೊಡಗಿನ ಕುಶಾಲನಗರ ಸಮೀಪದ ಹೆಬ್ಬಾಲೆ, ಶಿರಂಗಾಲ ಮತ್ತು ಕೊಡಗಿಗೆ ಹೊಂದಿಕೊಂಡಿರುವ ಮೈಸೂರು ಜಿಲ್ಲೆಯ ಕೊಪ್ಪ ಗ್ರಾಮಗಳಲ್ಲಿ ಕಾವೇರಿ ನದಿ ದಂಡೆಯಲ್ಲೇ ಹಲವು ಶುಂಠಿ ಶುದ್ಧೀಕರಣ ಘಟಕಗಳಿವೆ. ಶುದ್ಧೀ ಮಾಡುತ್ತಿರುವ ಸಾವಿರಾರು ಟನ್ ಶುಂಠಿಯ ತ್ಯಾಜ್ಯವೆಲ್ಲ ನೇರವಾಗಿ ಕಾವೇರಿ ಒಡಲು ಸೇರುತ್ತಿದೆ. ಸಹಜವಾಗಿಯೇ ಶುಂಠಿ ಬೆಳೆಯುವಾಗ ಅತ್ಯಂತ ವಿಷಕಾರಿ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತದೆ. ರೈತರು ಭೂಮಿಯಿಂದ ಕಿತ್ತ ಶುಂಠಿಯನ್ನು ಈ ಶುದ್ಧೀಕರಣ ಘಟಕಗಳಲ್ಲೇ ವ್ಯಾಪಾರಿಗಳು ಕ್ಲೀನ್ ಮಾಡುತ್ತಿರುವುದರಿಂದ ಭಾರೀ ಪ್ರಮಾಣದ ಕಲುಷಿತ ನೀರು ನೇರವಾಗಿ ಕಾವೇರಿ ಸೇರುತ್ತಿದೆ.

ಇದನ್ನು ಓದಿ: ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ನಡೆದ 11ನೇ ಸುತ್ತಿನ ಸಭೆಯೂ ವಿಫಲ

ಅಷ್ಟೇ ಅಲ್ಲ ಕೊಡಗಿನಲ್ಲಿ ಕಾಫಿ ಬೆಳೆಯುವ ಕೆಲವು ರೈತರು ಕಾಫಿ ಹಣ್ಣನ್ನು ಪಲ್ಪಿಂಗ್ ಮಾಡಿದ ನಂತರ ಕೊಳೆತ ತ್ಯಾಜ್ಯದ ನೀರನ್ನು ನೇರವಾಗಿ ನದಿಗಳಿಗೆ ಬಿಡುತ್ತಿದ್ದಾರೆ. ಇದು ಕೂಡ ಅತ್ಯಂತ ಅಪಾಯಕಾರಿ ಕಲುಷಿತ ನೀರಾಗಿದ್ದು, ಈ ನೀರು ಹರಿದಲ್ಲಿ ಗಿಡ, ಮರಗಳೇ ಸುಟ್ಟುಹೋಗುತ್ತವೆ. ಇನ್ನು ಈ ನೀರು ಮನುಷ್ಯರ ದೇಹ ಸೇರಿದರೆ ಏನಾಗಬಹುದು ಎಂದು ಯೋಚಿಸಿದರೆ ಭಯಾನಕ ಕಾಯಿಗಳು ಎದುರಾಗದೆ ಇರಲು ಸಾಧ್ಯವಿಲ್ಲ ಎನ್ನೋದು ಕಾವೇರಿ ನದಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಮೋಹನ್ ಆತಂಕ ವ್ಯಕ್ತಪಡಿಸಿದ್ದಾರೆ.

ನದಿ ದಂಡೆಯಲ್ಲಿ ಸ್ಥಾಪನೆಯಾಗಿರುವ ಶುಂಠಿ ಶುದ್ಧೀಕರಣ ಘಟಕಗಳಿಂದ ಅದರ ತ್ಯಾಜ್ಯದ ನೀರು ಕಾವೇರಿ ಒಡಲು ಸೇರುತ್ತಿರುವುದರಿಂದ ಅವುಗಳನ್ನು ತೆರವು ಮಾಡುವಂತೆ ಜಲ ಮಾಲಿನ್ಯ ನಿಯಂತ್ರಣ ಮಂಡಳಿ 2015 ರಲ್ಲೇ ಆಯಾ ಗ್ರಾಮ ಪಂಚಾಯಿತಿಗಳಿಗೆ ನೋಟಿಸ್ ನೀಡಿ, ಕೈತೊಳೆದುಕೊಂಡಿದೆ. ಈ ಕುರಿತು ಆಯಾ ಪಂಚಾಯಿತಿಗಳ ಪಿಡಿಓಗಳನ್ನು ಕೇಳಿದರೆ, ಕೆಲವು ಶುದ್ಧೀಕರಣ ಘಟಕಗಳು ಪರವಾನಗಿ ಪಡೆದು ಕಾರ್ಯನಿರ್ವಹಿಸುತ್ತಿದ್ದರೆ, ಇನ್ನು ಕೆಲವು ಅಕ್ರಮವಾಗಿ ಕೆಲಸ ಕಾರ್ಯನಿರ್ವಹಿಸುತ್ತಿವೆ. ಇವೆಲ್ಲವುಗಳಿಗೂ ನೋಟಿಸ್ ನೀಡಲಾಗಿದ್ದು, ಜಲ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರವಾನಗಿ ಪಡೆದಿದ್ದರೆ ಅದನ್ನು ನೀಡಿ, ಇಲ್ಲದಿದ್ದರೆ, ಶುದ್ಧೀಕರಣ ಘಟಕಗಳ ಕ್ಲೋಸ್ ಮಾಡಿ ಎಂದು ನೋಟಿಸ್ ನೀಡಿದ್ದೇವೆ. ಇನ್ನು ನಾಲ್ಕು ದಿನಗಳಲ್ಲಿ ಉತ್ತರಿಸದಿದ್ದರೆ ನಾವೇ ಖುದ್ದು ಕ್ಲೋಸ್ ಮಾಡುತ್ತೇವೆ ಎಂದು ಕೊಪ್ಪ ಗ್ರಾಮ ಪಂಚಾಯಿತಿ ಪಿಡಿಓ ಸತೀಶ್ ಹೇಳಿದ್ದಾರೆ. ಇನ್ನು ಜಲ ಮಾಲಿನ್ಯ ನಿಯಂತ್ರಣ ಮಂಡಳಿ ಏನು ಕ್ರಮಕೈಗೊಳ್ಳುತ್ತೋ ಕಾದು ನೋಡಬೇಕಾಗಿದೆ.
Published by: HR Ramesh
First published: January 23, 2021, 7:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories