ಆಗಿಂದಾಗ್ಗೆ ಸುರಿಯುತ್ತಿರುವ ಮಳೆಗೆ ಕರಗಿ ಹೋಗುತ್ತಿರುವ ಕಾಫಿ, ಭತ್ತ ಬೆಳೆ

ಕಳೆದ ಮೂರು ವರ್ಷಗಳಿಂದ ಪ್ರಾಕೃತಿಕ ತೊಂದರೆಗೆ ಸಿಲುಕಿ ನಷ್ಟ ಅನುಭವಿಸಿದ್ದ ರೈತರು, ಈ ಬಾರಿ ಜನವರಿ ತಿಂಗಳಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಗೆ ಕಾಫಿ ಮತ್ತು ಭತ್ತದ ಬೆಳೆ ನಷ್ಟ ಅನುಭವಿಸುವಂತೆ ಆಗಿದೆ.

ಕಾಫಿ ಬೀಜ.

ಕಾಫಿ ಬೀಜ.

  • Share this:
ಕೊಡಗು: ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಎದುರಾದ ಪ್ರವಾಹ ಮತ್ತು ಭೂಕುಸಿತ ಕೊಡಗಿನ ರೈತರನ್ನು ಹೈರಾಣಾಗಿಸಿದೆ. ಅದರ ನಡುವೆಯೂ ಕಷ್ಟಪಟ್ಟು ಬೆಳೆಯುತ್ತಿದ್ದ ಕಾಫಿ ಬೆಳೆಗಾರರು ಮತ್ತು ಭತ್ತ ಬೆಳೆಗಾರರು ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಆಗಿಂದಾಗ್ಗೆ ಸುರಿಯುತ್ತಿರುವ ಅಕಾಲಿಕ ಮಳೆ ಕಂಗಾಲಾಗುವಂತೆ ಮಾಡಿದೆ.

ಹೌದು, ಕಳೆದ ಮೂರು ದಿನಗಳಿಂದ ಕೊಡಗು ಜಿಲ್ಲೆಯ ಹಲವೆಡೆ ಮಳೆ ಸುರಿಯುತ್ತಿದ್ದು, ಕೊಯ್ಲಿಗೆ ಬಂದಿರುವ ಕಾಫಿ ಮತ್ತು ಕಟಾವು ಮಾಡಿ ಗದ್ದೆಯಲ್ಲೇ ಬಿಟ್ಟಿದ್ದ ಸಾವಿರಾರು ಎಕರೆ ಭತ್ತದ ಬೆಳೆ ಮಣ್ಣು ಪಾಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಅರೇಬಿಕಾ ಕಾಫಿ ಫಸಲು ಹಣ್ಣಾಗುತ್ತಿದ್ದು, ಬೆಳೆಗಾರರು ಕಾಫಿ ಹಣ್ಣು ಕಟಾವು ಮಾಡುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಮೂರು ದಿನಗಳಿಂದ ಆಗಿಂದಾಗ್ಗೆ ಸುರಿಯುತ್ತಿರುವ ಮಳೆಯಿಂದ ಕಾಫಿ ಹಣ್ಣು ಬಿಡಿಸಲು ಸಾಧ್ಯವಾಗುತ್ತಿಲ್ಲ. ಆದರೆ ಮಳೆಯೆಂದು ಬಿಡಿಸದೆ ಬಿಟ್ಟರೆ ಹಣ್ಣು ನೆಲಕ್ಕೆ ಬಿದ್ದು ಮಣ್ಣುಪಾಲಾಗುತ್ತಿವೆ. ಮಳೆಯಲ್ಲೇ ಹಣ್ಣು ಬಿಡಿಸಿದರೆ, ಅದನ್ನು ಒಣಗಿಸಲು ಸಂಪೂರ್ಣ ಮೋಡ ಕವಿದಿರುವ ವಾತಾವರಣವಿದ್ದು, ಬಿಸಿಲೂ ಇಲ್ಲದೆ, ಕಾಫಿ ಹಣ್ಣು ಕರಗಿಹೋಗುತ್ತಿದೆ. ಮೂರು ದಿನಗಳಿಂದ ಆಗಿಂದಾಗ್ಗೆ ಸುರಿಯುತ್ತಿರುವ ಮಳೆಗೆ ಈಗಾಗಲೇ ಬಿಡಿಸಿರುವ ಹಣ್ಣನ್ನು ಒಣಗಿಸಲು ಬಿಸಿಲಿಲ್ಲದೆ ಕಣದಲ್ಲಿರುವ ಕಾಫಿಯೂ ಕರಗುತ್ತಿದೆ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತ ಸ್ಥಿತಿ ನಿರ್ಮಾಣವಾಗಿದ್ದು ಕೊಡಗಿನ ರೈತರು ಕಂಗಾಲಾಗಿದ್ದಾರೆ.


ನೆಲಕ್ಕೆ ಉದುರಿ ಹಾಳಾಗಬಾರದೆಂದು ಹಣ್ಣು ಬಿಡಿಸಿದರೆ ಅಂತಹ ಹಣ್ಣು ಬಿಸಿಲಿಲ್ಲದೆ ಕರಗುವುದು. ಹೀಗೆ ಕರಗಿದ್ದೇ ಆದಲ್ಲಿ ಅದನ್ನು ಮಾರಾಟ ಮಾಡುವ ಸಂದರ್ಭ ಗುಣಮಟ್ಟ ಕಡಿಮೆಯಾಗಿದೆ ಎಂದು ಬೆಲೆ ಇಲ್ಲದಂತಾಗಿ. ನಷ್ಟ ಅನುಭವಿಸಬೇಕಾಗಬಹುದು. ಕಾಫಿಗೆ ತನ್ನದೇಯಾದ ಒಂದು ಮಾರುಕಟ್ಟೆ ಇಲ್ಲ. ಮಧ್ಯವರ್ತಿಗಳ ಮೂಲಕವೇ ಮಾರಾಟ ಮಾಡಬೇಕಾಗಿರುವುದರಿಂದ ಭಾರೀ ನಷ್ಟ ಅನುಭವಿಸಬೇಕಾಗಿದೆ ಎನ್ನೋದು ಕಾಫಿ ಬೆಳೆಗಾರ ಬೆಳ್ಯಪ್ಪ ಅವರ ಅಳಲು.


ಇದನ್ನು ಓದಿ: ರಾಯಚೂರಿನಲ್ಲಿ ಎಸ್​ಟಿ ಸಮಾವೇಶ; ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ

ಇನ್ನು ಮಳೆ ಮತ್ತು ಮಂಜಿನ ವಾತಾವರಣ ಇರುವುದರಿಂದ ಗಿಡದಲ್ಲಿ ಕಾಫಿ ಹಣ್ಣು ಇರುವಾಗಲೇ ಗಿಡಗಳಲ್ಲಿ ಮತ್ತೆ ಹೂವು ಅರಳಿದೆ. ಜನವರಿ ತಿಂಗಳಲ್ಲೇ ಗಿಡದಲ್ಲಿ ಹೂ ಅರಳಿರುವುದರಿಂದ ಮಳೆ ನಿರಂತರವಾಗಿರುವುದಿಲ್ಲ. ಇದರಿಂದ ಅಕಾಲಿಕ ಮಳೆಗೆ ಅರಳಿರುವ ಹೂವು ಒಣಗಿ ಹೋದಲ್ಲಿ ಒಮ್ಮೆ ಹೂವು ಬಿಡುವ ಕಾಫಿ ಮತ್ತೆ ಇಡೀ ಒಂದು ವರ್ಷ ಹೂವು ಬಿಡುವುದೇ ಇಲ್ಲ. ಇದರಿಂದಾಗಿ ಮುಂದಿನ ವರ್ಷದ ಕಾಫಿ ಬೆಳೆಗೂ ತೀವ್ರ ತೊಂದರೆಯಾಗಲಿದೆ ಎನ್ನೋದು ರೈತರ ಅಳಲು. ಜೊತೆಗೆ ಇರುವ ಹಣ್ಣು ಬಿಡಿಸುವ ಸಂದರ್ಭ ಅಕಾಲಿಕ ಮಳೆಗೆ ಅರಳಿರುವ ಹೂವು ಕೂಡ ಉದುರಿ ಹೋಗುತ್ತದೆ ಇದರಿಂದಲೂ ಮುಂದಿನ ಬೆಳೆಗೂ ನಷ್ಟವಾಗುತ್ತದೆ.
ಒಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಾಕೃತಿಕ ತೊಂದರೆಗೆ ಸಿಲುಕಿ ನಷ್ಟ ಅನುಭವಿಸಿದ್ದ ರೈತರು, ಈ ಬಾರಿ ಜನವರಿ ತಿಂಗಳಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಗೆ ಕಾಫಿ ಮತ್ತು ಭತ್ತದ ಬೆಳೆ ನಷ್ಟ ಅನುಭವಿಸುವಂತೆ ಆಗಿದೆ.


ವರದಿ; ರವಿ.ಎಸ್ ಹಳ್ಳಿ 

Published by:HR Ramesh
First published: