Heavy Rain: ಮಲೆನಾಡಲ್ಲಿ ಬಿಟ್ಟುಬಿಡದೇ ಸುರಿಯುತ್ತಿರುವ ಮಳೆ; ಬೀದಿಗೆ ಬಿದ್ದ ಕಾಫಿ, ಅಡಿಕೆ ಬೆಳೆಗಾರರು!

ಈ ಬಾರಿ ಮಧ್ಯಮ ಹಾಗೂ ಸಣ್ಣ ಬೆಳೆಗಾರರು ಬದುಕು ಅತಂತ್ರವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾಫಿ-ಅಡಿಕೆ ಬೆಳೆಗಾರರ ನೆರವಿಗೆ ನಿಲ್ಲದಿದ್ದರೆ ಬೆಳೆಗಾರರು ಮತ್ತಷ್ಟು ಶೋಚನಿಯ ಸ್ಥಿತಿ ತಲುಪಲಿದೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

ಮಣ್ಣಿಗೆ ಬಿದ್ದು ಹಾಳಾದ ಕಾಫಿ ಹಣ್ಣು

ಮಣ್ಣಿಗೆ ಬಿದ್ದು ಹಾಳಾದ ಕಾಫಿ ಹಣ್ಣು

  • Share this:
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ (Chikkamagaluru) ಸುರಿಯುತ್ತಿರುವ ಮಳೆಯಿಂದ ಮಲೆನಾಡಿಗರು ಬಳಲಿ ಬೆಂಡಾಗಿದ್ದಾರೆ. ಅಡಿಕೆ- ಕಾಫಿ (Areca nut And Coffee Crop) ಕುಯ್ಯೋಕೆ ಆಗದೆ, ಕುಯ್ದ್ರು ಒಣಗಿಸೋಕೆ ಜಾಗವಿಲ್ಲದೆ ಒಂದು ರೀತಿಯಲ್ಲಿ ಅಕ್ಷರಶಃ ನಲುಗಿ ಹೋಗಿದ್ದಾರೆ. ಅಕಾಲಿಕ ಮಳೆಯಿಂದಾಗಿ (Unseasonal Rain) ವರ್ಷದ ಬದುಕು ತೋಟದಲ್ಲೇ ಮಣ್ಣು ಪಾಲಾಗಿದೆ ಎಂದು ಕಣ್ಣೀರಿಡುವಂತಹ ಪರಿಸ್ಥಿತಿ ಮಲೆನಾಡಿಗರದ್ದು.

ಪ್ರಕೃತಿ ಎದುರು ನರಮನುಷ ತೃಣಕ್ಕೆ ಸಮ ಎಂಬಂತೆ ಏನು ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಕೊಯ್ದಿರೋ ಕಾಫಿ- ಅಡಿಕೆ ಮೇಲೆ ಈಗಾಗಲೇ ಹೂ ಬೆಳೆಯುತ್ತಿದೆ. ಸದ್ಯಕ್ಕೆ ತಲೆ ಮೇಲೆ ಕೈ ಹೊತ್ತು ಕೂರುವುದೊಂದೇ ಮಲೆನಾಡಿಗರಿಗೆ ಉಳಿದಿರೋದು. ಇನ್ನು ಅಡಿಕೆ ತೋಟದಲ್ಲಿ ನೀರು ನುಗ್ಗಿ ಅಡಿಕೆ ಬೆಳೆಗಾರರ ಪರಿಸ್ಥಿತಿ ಮೂರಾಬಟ್ಟೆಯಾಗಿದೆ. ಇನ್ನೂ ಕಡೂರು-ಅಜ್ಜಂಪುರ ಭಾಗದಲ್ಲಿ ಈರುಳ್ಳಿ ಪರಿಸ್ಥಿತಿಯನ್ನ ಕೇಳೋದೆ ಬೇಡವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಲೆನಾಡು, ಅರೆಮಲೆನಾಡು, ಬಯಲುಸೀಮೆ ಮೂರು ಹವಾಗುಣ ಹೊಂದಿರೋ ಚಿಕ್ಕಮಗಳೂರಲ್ಲಿ ಮಳೆಯ ರೌದ್ರನರ್ತನಕ್ಕೆ ಬದುಕು ಬರ್ಬಾದ್ ಆಗಿದೆ.

ಜಿಲ್ಲೆಯಲ್ಲಿ ಯಥೇಚ್ಛವಾಗಿ ಅಡಿಕೆ, ಕಾಫಿ, ಮೆಣಸು ಇದೆ. ಈ ಮೂರು ಪ್ರಮುಖ ವಾಣಿಜ್ಯ ಬೆಳೆಗಳ ಮೇಲೆ ಲಕ್ಷಾಂತರ ಕೂಲಿ ಕಾರ್ಮಿಕ ಕುಟುಂಬಗಳು ಅವಲಂಬಿತವಾಗಿವೆ. ಮಳೆಯಿಂದ ಬಹುತೇಕ ಬೆಳೆ ಮಣ್ಣುಪಾಲಾಗಿದೆ. ಶ್ರೀಮಂತ ಬೆಳೆಗಾರರೇನೋ ಹೇಗೋ ಬದುಕ್ತಾರೆ. ಆದರೆ, ನಾಲ್ಕೈದು ಎಕರೆಯ ಸಣ್ಣ ಬೆಳೆಗಾರರು ಹಾಗೂ ಕೂಲಿ ಕಾರ್ಮಿಕರ ಕುಟುಂಬಗಳು ಮಾತ್ರ ಕೂಲಿ ಇಲ್ಲದೆ ಬೀದಿಗೆ ಬಂದು ನಿಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಸದ್ಯ ಮಳೆ ನಿಲ್ಲಲ್ಲಿ ಎಂದು ಮಲೆನಾಡಿಗರು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಬೆಳೆ ಉಳಿಸಿಕೊಳ್ಳಲು ರೈತರ ಹೋರಾಟ 

ವಾಯುಭಾರ ಕುಸಿತದ ಕಾರಣ ಹವಾಮಾನ ವೈಪರಿತ್ಯದಿಂದಾಗಿ ರೈತರು ಅಡಿಕೆಯನ್ನ ಒಣಗಿಸಲು ಆಗದೆ ಮಲೆನಾಡಿಗರು ಮಲಗುವ ಮಂಚದ ಮೇಲೆ ಅಡಿಕೆ ಹಾಕಿ, ಕೆಳಗೆ ಬೆಂಕಿ ಹಾಕಿ ಅಡಿಕೆ ಒಣಗಿಸುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಳಿಗನಾಡು ಗ್ರಾಮದಲ್ಲಿ ವೃದ್ಧ ಗಜೇಂದ್ರ ಹೆಬ್ಬಾರ್ ಪ್ರಕೃತಿ ಎದುರು ಅಸಹಾಯಕರಾಗಿ ಮನೆಯಲ್ಲಿ ಮಲಗುವ ಮಂಚದ ಮೇಲೆ ಅಡಿಕೆ ಒಣಗಿಸುತ್ತಿದ್ದಾರೆ. ಮಲೆನಾಡಲ್ಲಿ ಕಳೆದ ಒಂದೆರಡು ತಿಂಗಳಿಂದಲೂ ಒಂದೆರಡು ದಿನ ಬಿಡುವ ನೀಡುವ ವರುಣದೇವ ಮತ್ತೆ ಧಾರಾಕಾರವಾಗಿ ಸುರಿಯುತ್ತಿದ್ದಾನೆ. ಹೊತ್ತಲ್ಲದ ಹೊತ್ತಲ್ಲಿ ಮಳೆ-ಬಿಸಿಲು-ಮೋಡದ ವಾತಾವರಣ ನಿರ್ಮಾಣವಾಗುತ್ತಿದೆ. ಹಾಗಾಗಿ, ಮಲೆನಾಡಿಗರು ಕೊಯ್ದಿರೋ ಕಾಫಿಯನ್ನ ಒಣಗಿಸಲು ಜಾಗವಿಲ್ಲದೆ ಪರದಾಡುವಂತಾಗಿದೆ.

ಅಡಿಕೆ, ಕಾಫಿ ಮಲೆನಾಡಿಗರ ಜೀವ. ಸಣ್ಣ-ಸಣ್ಣ ಹಿಡುವಳಿ ಮೂಲಕ ಬದುಕು ಕಟ್ಟಿಕೊಂಡಿವರೇ ಹೆಚ್ಚು. ಆದರೆ, ಈಗ ಹವಾಮಾನದ ವೈಪರಿತ್ಯದಿಂದ ಮಲೆನಾಡಿಗರು ಬದುಕು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಪ್ರಕೃತಿ ವಿರುದ್ಧ ಹೋರಾಡಲು ಶಕ್ತಿ ಇಲ್ಲದ ಮನುಷ್ಯರು ಸಿಕ್ಕ-ಸಿಕ್ಕ ದಾರಿಯಲ್ಲಿ ಬೆಳೆಗಳನ್ನ ಉಳಿಸಿಕೊಂಡು ವರ್ಷದ ಬದುಕು ದೂಡಲು ಮುಂದಾಗಿದ್ದಾರೆ. ಈಗಾಗಲೇ ಮಲೆನಾಡಿನಾದ್ಯಂತ ವರುಣ ಅಬ್ಬರಕ್ಕೆ ಮಲೆನಾಡಿಗರ ಬದುಕು ಮೂರಾಬಟ್ಟೆಯಾಗಿದೆ. ಮಲೆನಾಡಲ್ಲಿ ಜನವರಿಯಿಂದಲೂ ನಿರಂತರ ಮಳೆಯಾಗಿದೆ. ಬೆಳೆ ಗಿಡದಲ್ಲಿ ಇರುವುದಕ್ಕಿಂತ ಮಣ್ಣು ಪಾಲಾಗಿದ್ದೆ ಹೆಚ್ಚು. ಮಳೆ ವಿರುದ್ಧ ತೊಡೆತಟ್ಟಿ ನಿಂತು ಬದುಕುಳಿದಿದ್ದ ಬೆಳೆಗೆ ಈಗ ಸೂರ್ಯದೇವನೂ ಮಗ್ಗಲ ಮುಳ್ಳಾಗಿದ್ದಾನೆ. ವಾಯಭಾರ ಕುಸಿತದಿಂದ ಮಲೆನಾಡಿನ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಜನ ಬಿಸಿಲು ನೋಡದೆ ವಾರವೇ ಕಳೆದಿದೆ. ಬರೀ ಮೋಡ. ತಣ್ಣನೆಯ ಗಾಳಿ. ಇದರಿಂದ ಸಣ್ಣ-ಸಣ್ಣ ಕಾಫಿ ಹಾಗೂ ಅಡಿಕೆ ಬೆಳೆಗಾರರು ಬೆಳೆ ಉಳಿಸಿಕೊಳ್ಳಲು ಹೈರಾಣಾಗಿದ್ದಾರೆ. ಬೇರೆ ದಾರಿ ಇಲ್ಲದೆ ಶತಮಾನಗಳಲ್ಲೇ ಮಾಡದ ಹೋರಾಟದ ಮೂಲಕ ಬೆಳೆಯನ್ನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಇದನ್ನು ಓದಿ: Bengaluru Tech Summit 2021: IT-BT, ತಂತ್ರಜ್ಞಾನ, ವಿಜ್ಞಾನ, ಕೃಷಿ, ರಕ್ಷಣೆ, ಮತ್ತೆ ಎಲ್ಲ ವಿಷಯದಲ್ಲಿ ತೆರೆದುಕೊಳ್ಳಲು ಸರ್ಕಾರ ಸಿದ್ಧ; ಸಿಎಂ ಬಸವರಾಜ ಬೊಮ್ಮಾಯಿ

ಬೆಳೆಗಾರರ ಬೆಂಬಲಕ್ಕೆ ನಿಲ್ಲಲು ಸರ್ಕಾರಕ್ಕೆ ಆಗ್ರಹ

ಕಳೆದ ಒಂದೆರಡು ತಿಂಗಳ ನಿರಂತರ ಮಳೆಯಿಂದ ಮಲೆನಾಡಿಗರು ಸುರಿಯೋ ಮಳೆಯಲ್ಲಿ ಕಾಫಿಯನ್ನ ಕಟಾವು ಮಾಡಿದ್ದರು. ನೆಲದಲ್ಲಿ ಬಿದ್ದ ಕಾಫಿ, ಅಡಿಕೆಯನ್ನ ಆಯ್ದು ಮನೆಗೆ ತಂದಿದ್ದರು. ಇಂದು ಆ ಕಾಫಿ-ಅಡಿಕೆಯನ್ನ ಒಣಗಿಸಲು ಜಾಗವಿಲ್ಲದೆ ಬೆಂಕಿ ಹಾಕಿ ಒಣಗಿಸುತ್ತಿದ್ದಾರೆ. ಈ ರೀತಿ ಒಣಗಿಸದಿದ್ದರೆ ಬೆಳೆ ಮೇಲೆ ಹೂ ಬೆಳೆದು ಬೆಳೆ ಸಂಪೂರ್ಣ ನಾಶವಾಗಲಿದೆ. ಕಳೆದ ಎರಡ್ಮೂರು ವರ್ಷಗಳಿಂದ ಬಹುತೇಕ ಬೆಳೆಯನ್ನ ಕಳೆದುಕೊಂಡಿದ್ದ ಮಲೆನಾಡಿಗರು ಈ ವರ್ಷ ಮಳೆ ಪ್ರಮಾಣ ತುಸು ಕಡಿಮೆ ಇದ್ದರೂ ಬೆಳೆಯನ್ನ ಕಳೆದುಕೊಂಡು ಬದುಕಿನ ಬಗ್ಗೆ ಅತಂತ್ರರಾಗಿದ್ದಾರೆ. ಕಟಾವು ಮಾಡಿದ ಬೆಳೆ ಶೀತಕ್ಕೆ ಇಟ್ಟ ಜಾಗದಲ್ಲೇ ಕೊಳೆಯುತ್ತದೆ. ಈ ಬಾರಿ ಮಧ್ಯಮ ಹಾಗೂ ಸಣ್ಣ ಬೆಳೆಗಾರರು ಬದುಕು ಅತಂತ್ರವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾಫಿ-ಅಡಿಕೆ ಬೆಳೆಗಾರರ ನೆರವಿಗೆ ನಿಲ್ಲದಿದ್ದರೆ ಬೆಳೆಗಾರರು ಮತ್ತಷ್ಟು ಶೋಚನಿಯ ಸ್ಥಿತಿ ತಲುಪಲಿದೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.
Published by:HR Ramesh
First published: