HOME » NEWS » District » COASTAL LIFE GUARD WAS NOT PRESENT TO WORK FOR DEMAND MORE SALARY RHHSN DKK

ಸಮುದ್ರದಲ್ಲಿ ಪ್ರವಾಸಿಗರ ರಕ್ಷಣೆಗೆ ಇಲ್ಲ ಜೀವ ರಕ್ಷಕರು; ಸಂಬಳ ಹೆಚ್ಚಿಸಲು ಆಗ್ರಹಿಸಿ ಗೈರಾದ ರಕ್ಷಣಾ ಸಿಬ್ಬಂದಿ

ಕರಾವಳಿಯ ಕಡಲ ತೀರಗಳತ್ತ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಅರಿವಿಲ್ಲದೆ ಆಳ ಸಮುದ್ರದತ್ತ ತೆರಳಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನೆರವಿಗೆ ಧಾವಿಸುತ್ತಿದ್ದ ಲೈಫ್‌ಗಾರ್ಡ್ ಸಿಬ್ಬಂದಿ ಇಲ್ಲದಿರುವುದು ಅಪಾಯಕಾರಿಯಾಗಿ ಪರಿಣಮಿಸಿದೆ. ಜಿಲ್ಲಾಡಳಿತ ಆದಷ್ಟು ಬೇಗ ಜೀವ ರಕ್ಷಕರನ್ನು ನಿಯೋಜಿಸಬೇಕಾಗಿದೆ.

news18-kannada
Updated:January 12, 2021, 7:28 AM IST
ಸಮುದ್ರದಲ್ಲಿ ಪ್ರವಾಸಿಗರ ರಕ್ಷಣೆಗೆ ಇಲ್ಲ ಜೀವ ರಕ್ಷಕರು; ಸಂಬಳ ಹೆಚ್ಚಿಸಲು ಆಗ್ರಹಿಸಿ ಗೈರಾದ ರಕ್ಷಣಾ ಸಿಬ್ಬಂದಿ
ಸಮುದ್ರದಲ್ಲಿ ಪ್ರವಾಸಿಗರ ಜಲಕ್ರೀಡೆ.
  • Share this:
ಕಾರವಾರ; ಸಮುದ್ರಕ್ಕೆ ಇಳಿದು ಆಯತಪ್ಪಿ ಕಡಲ ಅಲೆಗಳ ಭಾರೀ ಹೊಡೆತಕ್ಕೆ ಸಿಕ್ಕಿ ಅಪಾಯದಲ್ಲಿ ಇದ್ದ ಪ್ರವಾಸಿಗರ ಜೀವ ರಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಕಡಲತೀರದ ಲೈಫ್ ಗಾರ್ಡರ್ ಗಳು ತಮ್ಮ ವಿವಿಧ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಕೆಲಸಕ್ಕೆ ಗೈರಾಗಿದ್ದಾರೆ. ಲೈಫ್ ಗಾರ್ಡರ್ ಇಲ್ಲದ ಕಡಲ ತೀರಗಳು ಈಗ ಅಪಾಯಕ್ಕೆ ಆಹ್ವಾನಿಸುತ್ತಿವೆ.

ಕೊರೋನಾ ಸಂದರ್ಭದಲ್ಲಿ ನಾಲ್ಕೈದು ತಿಂಗಳು ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಕಡಲತೀರಗಳಲ್ಲಿ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿತ್ತು. ಇದೀಗ ಪ್ರವಾಸಿಗರ ಕಲರವ ಶುರುವಾಗಿದೆ. ಮೊದಲಿನಂತೆ ಪ್ರವಾಸಿ ತಾಣಗಳು ರಂಗು ಪಡೆದುಕೊಳ್ಳುತ್ತಿವೆ. ಕಾರವಾರ, ಗೋಕರ್ಣ, ಮುರ್ಡೇಶ್ವರ, ಹೊನ್ನಾವರ ಭಾಗಗಳ ಕಡಲತೀರಗಳಿಗೆ ಇದೀಗ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಪ್ರವಾಸಿಗರ ಮೇಲೆ ಅವಲಂಭಿಸಿದ್ದ ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಜೀವ ಬಂದಂತಾಗಿದೆ. ಈ ಹಿಂದೆ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಕಡಲತೀರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೈಫ್‌ಗಾರ್ಡ್ ಸಿಬ್ಬಂದಿ ಕಳೆದ ಒಂದು ತಿಂಗಳಿಂದ ಕೆಲಸಕ್ಕೆ ಆಗಮಿಸುತ್ತಿಲ್ಲ. ಕಡಲತೀರದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿರುವ ಜೊತೆಗೆ ಅಪಾಯಕ್ಕೆ ಸಿಲುಕುವವರ ಸಂಖ್ಯೆಯೂ ಅಧಿಕವಾಗಿದೆ. ಇದರಿಂದ ಈ ಕೂಡಲೇ ಜೀವ ರಕ್ಷಕರನ್ನು ನಿಯೋಜಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಜಿಲ್ಲಾಡಳಿತದಿಂದ ಸರಿಯಾದ ಸಮಯಕ್ಕೆ ಸಂಬಳ ಮತ್ತು ಕಡಿಮೆ ಸಂಬಳ ಹೀಗೆ ವಿವಿಧ ಕಾರಣವನ್ನಿಟ್ಟುಕೊಂಡು ಲೈಫ್ ಗಾರ್ಡರ್ ಗಳು ಬರುತ್ತಿಲ್ಲ. ಇದರಿಂದ ಪ್ರವಾಸಿಗರಿಗೆ ಕಡಲತೀರದಲ್ಲಿ ಎಚ್ಚರಿಕೆ ನೀಡಲು ಕೂಡಾ ಭದ್ರತಾ ಸಿಬ್ಬಂದಿ ಯಾರೊಬ್ಬರೂ ಇಲ್ಲ. ಜಿಲ್ಲಾಡಳಿತ ತಮ್ಮ ಬೇಡಿಕೆ ಈಡೇರಿಸಿದರೆ ಕೆಲಸಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ ಲೈಫ್ ಗಾರ್ಡರ್​ಗಳು. ಆದರೆ  ಜಿಲ್ಲಾಡಳಿತ ಆರ್ಥಿಕ ಮುಗ್ಗಟ್ಟಿನ ಕಾರಣ ನೀಡಿ ಇವರ ಬೇಡಿಕೆ ಈಡೇರಿಸಲು ಮೂಗು ಮುರಿಯುತ್ತಿದೆ.

ಈ ಮೊದಲು ಜಿಲ್ಲೆಯ ರವೀಂದ್ರನಾಥ ಠಾಗೋರ್ ಕಡಲ ತೀರ, ಗೋಕರ್ಣ ಬೀಚ್, ಓಂ ಬೀಚ್, ಕುಡ್ಲೆ ಬೀಚ್, ಮುರ್ಡೇಶ್ವರ ಹಾಗೂ ಹೊನ್ನಾವರದ ಕಡಲ ತೀರಗಳಲ್ಲಿ ಜಿಲ್ಲಾಡಳಿತ ಲೈಫ್ ‌ಗಾರ್ಡ್‌ಗಳನ್ನು ನಿಯೋಜಿಸಿತ್ತು. ಕಡಲ ತೀರಗಳಲ್ಲಿ ಲೈಫ್‌ಗಾರ್ಡ್‌ಗಳು ನೇಮಕವಾದ ಬಳಿಕ ಪ್ರವಾಸಿಗರು ನೀರಲ್ಲಿ ಮುಳುಗಿ ಸಾವನ್ನಪ್ಪುತ್ತಿದ್ದ ಪ್ರಕರಣಗಳು ಸಂಪೂರ್ಣ ಕಡಿಮೆಯಾಗಿದ್ದವು. ಆದರೆ, ಇದೀಗ ವೇತನ ಹೆಚ್ಚಿಸುವಂತೆ ಪ್ರತಿಭಟನೆ ನಡೆಸಿದ ಲೈಫಗಾರ್ಡ್‌ಗಳು ಸದ್ಯ ಕರ್ತವ್ಯಕ್ಕೆ ಗೈರಾಗುತ್ತಿದ್ದಾರೆ. ಇದರಿಂದ ಕಳೆದ 15 ದಿನಗಳ ಅಂತರದಲ್ಲಿ ನಾಲ್ಕೈದು ಮಂದಿ ಪ್ರವಾಸಿಗರು ಸಾವನ್ನಪ್ಪುವಂತಾಗಿದೆ.

ಇದನ್ನು ಓದಿ: ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ-ಯೋಗೇಶ್ವರ್ ವಾಕ್ಸಮರ; ವಸೂಲಿ ದಂಧೆಯದ್ದೇ ಚರ್ಚೆ!

ವಾರದ ಹಿಂದೆ ಗೋಕರ್ಣದಲ್ಲಿ ಅಪಾಯಕ್ಕೆ ಸಿಲುಕಿದ್ದ ಓರ್ವ ಸಾವನ್ನಪ್ಪಿದ್ದು, ನಾಲ್ವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಹೀಗಾಗಿ, ಆದಷ್ಟು ಬೇಗ ಲೈಫ್‌ಗಾರ್ಡ್ ನೇಮಿಸಿ ಅನ್ನೋದು ಸ್ಥಳೀಯರ ಒತ್ತಾಯ. ಇನ್ನು, ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದರೆ ಲೈಫ್ ಗಾರ್ಡ್ ಹೆಚ್ಚಿನ ಸಂಬಳಕ್ಕಾಗಿ ಆಗ್ರಹಿಸುತ್ತಿದ್ದಾರೆ. ಆದರೆ, ಅವರ ನೇಮಕ ಪ್ರವಾಸಿಗರನ್ನು ಅವಲಂಬಿಸಿತ್ತು. ಕೊರೋನಾ‌ದಿಂದಾಗಿ ಯಾವುದೇ ಜಲಕ್ರೀಡೆಗಳು ನಡೆಯದ ಕಾರಣ ಆದಾಯ ಕೂಡ ಇರಲಿಲ್ಲ. ಆದರೂ ಕೋವಿಡ್ ಸಂದರ್ಭದಲ್ಲಿ ಅವರಿಗೆ ವೇತನ ನೀಡಲಾಗಿದೆ. ಆದರೆ, ಇದೀಗ ಹೆಚ್ಚಿನ‌ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ. ಲೈಫ ಗಾರ್ಡ್​ಗಳು ಬಾರದೆ ಇದ್ದಲ್ಲಿ ಬೇರೆಯವರನ್ನು ನೇಮಕ ಮಾಡುವುದಾಗಿ ತಿಳಿಸಿದ್ದಾರೆ.
ಕರಾವಳಿಯ ಕಡಲ ತೀರಗಳತ್ತ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಅರಿವಿಲ್ಲದೆ ಆಳ ಸಮುದ್ರದತ್ತ ತೆರಳಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನೆರವಿಗೆ ಧಾವಿಸುತ್ತಿದ್ದ ಲೈಫ್‌ಗಾರ್ಡ್ ಸಿಬ್ಬಂದಿ ಇಲ್ಲದಿರುವುದು ಅಪಾಯಕಾರಿಯಾಗಿ ಪರಿಣಮಿಸಿದೆ. ಜಿಲ್ಲಾಡಳಿತ ಆದಷ್ಟು ಬೇಗ ಜೀವ ರಕ್ಷಕರನ್ನು ನಿಯೋಜಿಸಬೇಕಾಗಿದೆ.
Published by: HR Ramesh
First published: January 12, 2021, 7:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories